
ಮಂಡ್ಯ, ಜನವರಿ 27: ಬೆಂಗಳೂರಿನ (Bangalore) ಕೋಗಿಲು ಲೇಔಟ್ (Kogilu Layout) ರೀತಿಯಲ್ಲೇ ಮಂಡ್ಯ (Mandya) ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿ ಭಾರೀ ಭೂಮಿ ಅಕ್ರ ನಡೆದಿರುವ ಶಂಕೆ ವ್ಯಕ್ತವಾಗಿದೆ. ವಲಸಿಗರಿಗೆ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಸಾಮಾಜಿಕ ಕಾರ್ಯಕರ್ತ ರವೀಂದ್ರ ಅವರು ಈ ಕುರಿತು ಗಂಭೀರ ಆರೋಪಗಳನ್ನು ಮಾಡಿದ್ದು, ಬಗರ್ ಹುಕುಂ ಯೋಜನೆಯಡಿ ಗರಿಷ್ಠ 4 ಎಕರೆ 38 ಗುಂಟೆ ಮಾತ್ರ ಸಕ್ರಮಗೊಳಿಸಲು ಅವಕಾಶವಿದೆ. ಆದಾಗ್ಯೂ ನಿಯಮಗಳನ್ನು ಉಲ್ಲಂಘಿಸಿ ಕೆಲವರಿಗೆ ಮನಬಂದಂತೆ ಹೆಚ್ಚಿನ ಭೂಮಿ ಮಂಜೂರು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ನಸೀಮ್ ಎಂಬ ವ್ಯಕ್ತಿಗೆ ಸುಮಾರು 9 ಎಕರೆ 27 ಗುಂಟೆ ಜಮೀನು ಹಾಗೂ ಕಲೀಮ್ ಉಲ್ಲಾ ಹೆಸರಿಗೆ ಸುಮಾರು 11 ಎಕರೆ 23 ಗುಂಟೆ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ, ಆಂಧ್ರ ಪ್ರದೇಶ, ಬೆಂಗಳೂರು ಹಾಗೂ ಕೇರಳ ಮೂಲದವರಿಗೆ ಸಹ ಭೂಮಿ ಹಂಚಿಕೆ ಮಾಡಿರುವ ಆರೋಪವೂ ಕೇಳಿಬಂದಿದೆ.
ಈ ಅಕ್ರಮವು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕಿಂತಲೂ ದೊಡ್ಡದಾಗುವ ಸಾಧ್ಯತೆ ಇದೆ ಎಂದು ರವೀಂದ್ರ ಹೇಳಿದ್ದಾರೆ. ಈ ಪ್ರಕರಣದಲ್ಲಿ ಹಲವು ತಹಶೀಲ್ದಾರ್‌ಗಳು, ಉಪವಿಭಾಗಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಭಾಗವಹಿಸಿರುವ ಶಂಕೆ ಇದೆ ಎಂದು ಅವರು ಆರೋಪಿಸಿದ್ದಾರೆ.
ಇನ್ನು ಪ್ರಕರಣವನ್ನು ಮುಚ್ಚಿ ಹಾಕಲು ಸ್ಥಳೀಯ ಅಧಿಕಾರಿಗಳಿಂದಲೇ ತನಿಖೆ ನಡೆಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆ, ಸಂಪೂರ್ಣ ಹಾಗೂ ನಿಷ್ಪಕ್ಷಪಾತ ತನಿಖೆಗಾಗಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಸಾಮಾಜಿಕ ಕಾರ್ಯಕರ್ತ ರವೀಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕೋಗಿಲು ನಿವಾಸಿಗಳು ನಿರಾಶ್ರಿತರಲ್ಲ, ಲಕ್ಷಾಧಿಪತಿಗಳು! ಆರೋಪಿಗಳ ಖಾತೆಯಲ್ಲಿ ನಡೆದಿತ್ತು ಕೋಟಿ-ಕೋಟಿ ವ್ಯವಹಾರ
ಈ ಭೂಮಿ ಹಗರಣದ ಆರೋಪಗಳು ಮಂಡ್ಯ ಜಿಲ್ಲೆ ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.