ಮಂಡ್ಯ, (ಏಪ್ರಿಲ್.26): ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರು ಮಂಡ್ಯ(Mandya) ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಕ್ಕು ಚಲಾಯಿಸಿದರು. ಮತಗಟ್ಟೆ ಸಂಖ್ಯೆ 164ರಲ್ಲಿ ಮತದಾನ ಮಾಡಿದ ಸಂಸದೆ ಬಳಿಕ ಮಂಡ್ಯ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ(HD Kumaraswamy) ಮತ್ತು ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ (HD Devegowda)ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇವೇಗೌಡರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ಅವರು ದೊಡ್ಡವರು, ಅವರಿಗೆ ಸರಿಯಾದ ಮಾಹಿತಿ ಇಲ್ಲದೆ ಆ ರೀತಿ ಹೇಳಿದ್ದಾರೆ. ಅವರಿಂದ ಅಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸ್ವತಂತ್ರ ಸಂಸದೆಯಾಗಿ ನನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. ಮೋದಿಯವರು ಪ್ರಧಾನಿಯಾಗಬೇಕೆಂಬ ಉದ್ದೇಶದಿಂದ ನಾನು ಗೆದ್ದಂತಹ ಸೀಟ್ ತ್ಯಾಗ ಮಾಡಿದ್ದೇನೆ. ಈ ಹಂತದಲ್ಲಿ ಅಂಬರೀಶ್ ಅವರ ಪಡೆಯ ಶಕ್ತಿಯನ್ನ ಎನ್‌ಡಿಎ ಗೆ ಕೊಟ್ಟಿದ್ದೇವೆ. ಮೈತ್ರಿ ಪರ ನಮ್ಮ ಬೆಂಬಲಿಗರು ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಆದರೆ ಜೆಡಿಎಸ್ ನಾಯಕರು ಯಾವುದೇ ಸಭೆ, ಪ್ರಚಾರಕ್ಕೆ ಆಹ್ವಾನಿಸಿಲ್ಲ. ಅವರು ಕರೆದು ನಾನು ಬರದೇ ಇದ್ದರೆ ತಪ್ಪಾಗುತ್ತೆ. ಆದ್ರೆ ಅವರು ನನ್ನ ಕರೆದೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ದೇವೇಗೌಡ್ರ ಆರೋಪಕ್ಕೆ ತಿರುಗೇಟು ನೀಡಿದರು.
ಇದನ್ನೂ ಓದಿ: ಹಾಸನದಲ್ಲಿ ಬಿಜೆಪಿಯ ಕೆಲವರ ಸಹಕಾರವಿಲ್ಲ, ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ: ದೇವೇಗೌಡ
ನಾನಿಲ್ಲದೆ ಅವರು ಚುನಾವಣೆ ಮಾಡಿಕೊಳ್ಳುತ್ತೇವೆ ಎಂಬ ಭಾವನೆ ಇರಬಹುದು. ಅವರು ಹೇಳಿಕೆ ನೀಡಿದ ನಂತರ ನಿನ್ನೆಯಿಂದ ನನಗೆ ಒಂದಷ್ಟು ಕರೆ ಬಂದವು. ನನ್ನ ಯಾವುದೇ ಪ್ರಚಾರಕ್ಕೆ ಕರೆದಿಲ್ಲ. ಕುಮಾರಸ್ವಾಮಿ ನಮ್ಮ ಮನೆಗೆ ಬಂದು ಹೋದ ನಂತರ ನನಗೆ ಒಂದು ಪೋನ್ ಸಹ ಕರೆ ಮಾಡಿ ಪ್ರಚಾರಕ್ಕೆ ಬನ್ನಿ ಎಂದು ಕೇಳಿಲ್ಲ. ಇಷ್ಟು ತ್ಯಾಗ ಮಾಡಿಯೂ ನನ್ನ ಕರೆಯಲಿಲ್ಲ ಅನ್ನೋದು ನನಗೆ ಬೇಸರವಾಯ್ತು. ಹಾಗಿದ್ರೆ ನಾನು ಮಾಡಿದ್ದು ತಪ್ಪಾ? ನನ್ನ ಅಭಿಮಾನಿಗಳು ಒಂದಷ್ಟು ಜನ ವಿರೋಧ ವ್ಯಕ್ತಪಡಿಸಿದರು ಎಂದು ಹೇಳಿದರು.
ಸೋತ ಸೀಟನ್ನೇ ಬಿಡಲ್ಲ ಅಂತಹುದರಲ್ಲಿ ನಾನು ಗೆದ್ದ ಸೀಟು ಬಿಟ್ಟು ಕೊಟ್ಟಿದ್ದೇನೆ. ಅವರ ಮನಸ್ಸಿನಲ್ಲಿ ಏನಿದೆ ಎಂಬುದು ನನಗೆ ಗೊತ್ತಿಲ್ಲ. ಆದ್ರೆ ಅವರು ನನ್ನ ಪ್ರಚಾರಕ್ಕೆ ಕರೆದಿಲ್ಲ. ಪಕ್ಷ ಸೂಚನೆ ನೀಡಿದ ಕಡೆ ಹೋಗಿ ನಾನು ಪ್ರಚಾರಕ್ಕೆ ಹೋಗಿದ್ದೇನೆ. ಮಂಗಳೂರುವರೆಗೂ ಹೋಗಿದ್ದೇನೆ, ಮಂಡ್ಯಕ್ಕೆ ಬರ್ತಿರಲಿಲ್ವಾ? ಆ ದಿನ ನನ್ನ ಸೀಟನ್ನು ಬಿಟ್ಟಾಗಲೂ ಬೇಸರವಾಗಿರಲಿಲ್ಲ. ಆದ್ರೆ ದೇವೇಗೌಡರ ಹೇಳಿಕೆ ನನಗೆ ಬೇಸರ ತರಿಸಿದೆ ಎಂದರು.
ಲೋಕಸಭೆ ಚುನಾವಣೆ ಕುರಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ