
ಮಂಡ್ಯ, ಏಪ್ರಿಲ್ 05: 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ (87th Akhil Bharath Kannada Sahitya Sammelana) 2.53 ಕೋಟಿ ಹಣ ಉಳಿತಾಯವಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರದಿಂದ ಬಿಡುಗಡೆಯಾದ 30 ಕೋಟಿ ರೂ. ಹಣದಲ್ಲಿ 29,65,07,226ರೂ. ವೆಚ್ಚವಾಗಿದ್ದು, 34,92,774 ರೂ. ಸರ್ಕಾರಕ್ಕೆ ಆದ್ಯಾರ್ಪಿಸಲಾಗುವುದು ಎಂದರು.
ವಾಣಿಜ್ಯ ಮಳಿಗೆಗಳ ಬಾಡಿಗೆ- 17,52,000 ರೂ., ಪುಸ್ತಕ ಮಳಿಗೆಯ ಬಾಡಿಗೆ- 16,04,000 ರೂ., ನೊಂದಣಿ ಶುಲ್ಕ- 39,95,400 ರೂ., ಹೆಚ್.ಆರ್ ಎಂ.ಎಸ್ ವ್ಯಾಪ್ತಿಗೆ ಬಾರದ ಸರ್ಕಾರಿ ನೌಕರರ ಒಂದು ದಿನದ ಸಂಬಳದ ದೇಣಿಗೆ- 23,11,944 ರೂ., ಹೆಚ್.ಆರ್ ಎಂ.ಎಸ್ ವ್ಯಾಪ್ತಿಗೆ ಬರುವ ಸರ್ಕಾರಿ ನೌಕರರ ಒಂದು ದಿನದ ಸಂಬಳದ ದೇಣಿಗೆ- 1,08,05,048 ರೂ., ಎಂ.ಡಿಸಿ.ಸಿ ಬ್ಯಾಂಕ್- 10 ಲಕ್ಷ ರೂ., ಎಂ.ಆರ್.ಎನ್ ನಿರಾಣಿ ಫೌಂಡೇಷನ್- 5 ಲಕ್ಷ ರೂ. ಸೇರಿ ಒಟ್ಟು 2,53,61,166 ರೂ. ಉಳಿತಾಯವಾಗಿದೆ ಎಂದರು.
ಕನ್ನಡ ಭವನ ನಿರ್ಮಾಣ87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯ ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಂಘಟಿಸಿದ ನೆನಪಿಗಾಗಿ ಕನ್ನಡ ಭವನ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದು, ದೇಣಿಗೆ ರೂಪದಲ್ಲಿ ಸಮಗ್ರಹವಾಗಿ ಉಳಿತಾಯವಾಗಿರುವ 2.5 ಕೋಟಿ ರೂ. ಹಣವನ್ನು ವೆಚ್ಚ ಮಾಡಲು ಯೋಜಿಸಲಾಗಿದೆ. ಕನ್ನಡ ಭವನ ನಿರ್ಮಾಣಕ್ಕೆ ಬೇಕಿರುವ ಹೆಚ್ವುವರಿ ಅನುದಾನವನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ. ಕುಮಾರ ಮಾತನಾಡಿ, 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮ ಆಯೋಜನೆ ಹಾಗೂ ಹಣದ ವೆಚ್ಚ ಪಾರದರ್ಶಕವಾಗಿ ನಡೆಸಲು 28 ವಿವಿಧ ಸಮಿತಿ, ಕ್ರಿಯಾಯೋಜನೆ ತಯಾರಿಕೆ, ದರಪಟ್ಟಿ ಅನುಮೋದನೆ ಸಮಿತಿ, ಚೆಕ್ ಮೆಜರ್ ಮೆಂಟ್ ಸಮಿತಿ, ಹಣಕಾಸು ಮತ್ತು ಲೆಕ್ಕ ಪರಿಶೋಧನಾ ಸಮಿತಿ ರಚಿಸಲಾಗಿತ್ತು ಎಂದು ತಿಳಿಸಿದರು.
ಸರ್ಕಾರದಿಂದ ಬಿಡುಗಡೆಯಾದ 30 ಕೋಟಿ ರೂ. ಅನುದಾನದಲ್ಲಿ 3,17,68,199 ರೂ. ಜಿ.ಎಸ್.ಟಿ, 1,08,39,022 ರೂ. ಕೆ.ಎಸ್.ಎಂ.ಸಿ.ಎ ಸೇವಾ ಶುಲ್ಕ ಪಾವತಿಸಿದ ನಂತರ 25,39,00,005 ರೂ. ಸಮ್ಮೇಳನಕ್ಕೆ ವೆಚ್ಚವಾಗಿದೆ ಎಂದು ಮಾಹಿತಿ ನೀಡಿದರು.
ಇದಲ್ಲದೇ ಕೆಲವು ಸಂಸ್ಥೆಗಳು ನುಡಿ ಜಾತ್ರೆಯ ಸ್ವರ ಯಾತ್ರೆ ಕಾರ್ಯಕ್ರಮಗಳಿಗೆ, ಸ್ವಾಗತ ಕಾಮಾನುಗಳಿಗೆ ಪ್ರಯೋಜಕತ್ವ ವಹಿಸಿಕೊಂಡು ಸಮ್ಮೇಳನಕ್ಕೆ ಸಹಕಾರ ನೀಡಿದ್ದಾರೆ ಎಂದರು.
87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಜಿಲ್ಲಾ ಸಂಚಾಲಕಿ ಡಾ. ಮೀರಾ ಶಿವಲಿಂಗಯ್ಯ ಮಾತನಾಡಿ, ಸಮ್ಮೇಳನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜನಪ್ರತಿನಿಧಿಗಳು, ಜಿಲ್ಲಾಡಳಿತ, ಸಾರ್ವಜನಿಕರು ಯಶಸ್ವಿಯಾಗಿ ಸಂಘಟಿಸಲು ನೀಡಿದ ಸಹಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಇದನ್ನೂ ಓದಿ: ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿನಿ ಕೆ.ಆರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಉಪಸ್ಥಿತರಿದ್ದರು.