ಮಂಡ್ಯ ಜೈಲಿನಲ್ಲಿದ್ದ ಮಗನಿಗೆ ಬಟ್ಟೆ ಕೊಡಲು ಹೋದ ತಂದೆಯೂ ಅರೆಸ್ಟ್
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ನಿವಾಸಿಯಾಗಿರುವ ಶಿವಣ್ಣ ಎಂಬುವರು ಜೈಲಿನಲ್ಲಿದ್ದ ಮಗನಿಗೆ ಬಟ್ಟೆ ಕೊಡಲು ಹೋಗಿದ್ದಾರೆ. ಮಂಡ್ಯ ಕಾರಾಗೃಹದ ಸಿಬ್ಬಂದಿ ಬಟ್ಟೆ ಇದ್ದ ಬ್ಯಾಗ್ ಅನ್ನು ಪರಿಶೀಲಿಸಿದ್ದಾರೆ. ಆಗ, ಬ್ಯಾಗ್ನಲ್ಲಿ 20 ಗ್ರಾಂ ಗಾಂಜಾ ಪತ್ತೆಯಾಗಿದೆ. ಮುಂದೇನಾಯ್ತು? ಈ ಸ್ಟೋರಿ ಓದಿ.
ಮಂಡ್ಯ, ಡಿಸೆಂಬರ್ 13: ಜೈಲಿನಲ್ಲಿದ್ದ ಮಗನಿಗೆ ಬಟ್ಟೆ ಕೊಡಲು ಹೋಗಿ ಅಪ್ಪ ಕೂಡ ಅರೆಸ್ಟ್ ಆಗಿದ್ದಾರೆ. ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ (Malavalli) ತಾಲೂಕಿನ ಹಲಗೂರು ನಿವಾಸಿ ಶಿವಣ್ಣ ಎಂಬುವರ ಪುತ್ರ ಮಧುಸೂದನ್ ಜೈಲು ಸೇರಿದ್ದಾನೆ. ಜೈಲಿನಲ್ಲಿದ್ದ ಮಧುಸೂದನ್ ತಂದೆ ಶಿವಣ್ಣ ಅವರಿಗೆ ಕರೆ ಮಾಡಿ “ನನ್ನ ಪರಿಚಿತರೊಬ್ಬರು ಮಳವಳ್ಳಿಯಲ್ಲಿ ಬಟ್ಟೆ ಇದ್ದ ಬ್ಯಾಗ್ ಕೊಡುತ್ತಾರೆ, ತೆಗೆದುಕೊಂಡು ಬಾ” ಎಂದು ಹೇಳಿದ್ದಾನೆ.
ಮಗನ ಮಾತಿನಂತೆ ಶಿವಣ್ಣ ಅವರು ಮಳ್ಳವಳ್ಳಿಯಲ್ಲಿ ಅಪರಿಚಿತನಿಂದ ಬಟ್ಟೆ ಇದ್ದ ಬ್ಯಾಗ್ ಪಡೆದು, ಮಂಡ್ಯದ ಕಾರಾಗೃಹಕ್ಕೆ ಬರುತ್ತಾರೆ. ಕಾರಾಗೃಹದಲ್ಲಿನ ಜೈಲು ಸಿಬ್ಬಂದಿ ಬ್ಯಾಗ್ ಅನ್ನು ಪರಿಶೀಲನೆ ನಡೆಸಿದಾಗ 20 ಗ್ರಾಂ ಗಾಂಜಾ ಪತ್ತೆಯಾಗಿದೆ.
ತಕ್ಷಣ ಸಿಬ್ಬಂದಿ ಶಿವಣ್ಣ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಗನ ಸೂಚನೆಯಂತೆ ಬ್ಯಾಗ್ ತಂದಿರುವುದಾಗಿ ಶಿವಣ್ಣ ಹೇಳಿದ್ದಾರೆ. ಬಳಿಕ, ಪೊಲೀಸರು ಎನ್ಡಿಪಿಎಸ್ ಕಾಯ್ದೆಯಡಿ ಶಿವಣ್ಣ ಅವರನ್ನು ಬಂಧಿಸಿದ್ದಾರೆ. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:10 am, Fri, 13 December 24