ಮಂಡ್ಯ, ನವೆಂಬರ್ 29: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣವನ್ನು (Foetus Gender Detection, Murder Case) ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬೇಧಿಸಿ 9 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇದೀಗ ಲೋಕಾಯುಕ್ತ ಅಧಿಕಾರಿಗಳು ಕೂಡ ಮಧ್ಯ ಪ್ರವೇಶಿಸಿದ್ದು, ಕೃತ್ಯದಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರೆಯೇ ಎಂಬ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ. ಮತ್ತೊಂದೆಡೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರೋ ಆರೋಗ್ಯ ಇಲಾಖೆ ಸಮಗ್ರ ಮಾಹಿತಿ ಪಡೆಯಲು ಮುಂದಾಗಿದೆ.
ಕರಾಳ ದಂಧೆ ಬಗ್ಗೆ ಎರಡು ವರ್ಷಗಳ ಕೆಳಗೆ ಪುರಸಭೆ ಸದಸ್ಯ ಗಮನ ಸೆಳೆದಿದ್ದರು. ಆದರೂ ಆರೋಗ್ಯ ಇಲಾಖೆ ದಿವ್ಯ ನಿರ್ಲಕ್ಷ್ಯವಹಿಸಿತ್ತು. ಇದೀಗ ಜಿಲ್ಲೆಯಲ್ಲಿ ಈ ದಂಧೆ ಹೊರಬಂದ ಹಿನ್ನೆಲೆಯಲ್ಲಿ ಸಮಗ್ರ ಮಾಹಿತಿ ಕಲೆ ಹಾಕಲು ಲೋಕಾಯುಕ್ತ ಅಧಿಕಾರಿಗಳು ಮುಂದಾಗಿದ್ದಾರೆ.
ಮಂಡ್ಯ ಲೋಕಾಯುಕ್ತ ಡಿವೈಎಸ್ಪಿ ಸುನೀಲ್ ಕುಮಾರ್ ನೇತೃತ್ವದಲ್ಲಿ ನೆನ್ನೆಯಿಂದಲೇ ಸಮಗ್ರ ಮಾಹಿತಿ ಕಲೆ ಹಾಕಿ ಲೋಕಾಯುಕ್ತಕ್ಕೆ ವರದಿ ನೀಡಲು ಮುಂದಾಗಿದ್ದಾರೆ. ಒಂದು ವೇಳೆ ಈ ದಂಧೆಯಲ್ಲಿ ಯಾರಾದರೂ ಅಧಿಕಾರಿಗಳು ಭಾಗಿಯಾಗಿದ್ರೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.
ಇನ್ನು ಮಂಡ್ಯದಲ್ಲಿ ಇಷ್ಟು ದೊಡ್ಡ ಮಟ್ಟಿಗೆ ಹೇಯಕೃತ್ಯ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಇದ್ದರೂ ಆರೋಗ್ಯ ಇಲಾಖೆ ದಿವ್ಯ ನಿರ್ಲಕ್ಷ್ಯ ವಹಿಸಿತ್ತು. ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡ ನಂತರ ಘಟನಾ ಸ್ಥಳಕ್ಕೂ ಬೇಟಿ ಕೊಟ್ಟಿರಲಿಲ್ಲ. ‘ಟಿವಿ9’ ನಲ್ಲಿ ನಿರಂತರ ವರದಿ ಬಿತ್ತರಗೊಂಡ ನಂತರ ಮಂಗಳವಾರ ಆರೋಗ್ಯ ಇಲಾಖೆ ಅಧಿಕಾರಿಗಳು, ಎಸಿ, ತಹಶೀಲ್ದರ್ ಭೇಟಿ ನೀಡಿದ್ರು. ಸಮಗ್ರ ಮಾಹಿತಿ ಕಲೆ ಹಾಕಿ, ಆಲೆಮನೆಯನ್ನ ಕೂಡ ಸೀಜ್ ಮಾಡಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡುತ್ತೇವೆ ಎಂದಿದ್ದರು. ಆದರೆ ಇದುವರೆಗೂ ಕೂಡ ಆಲೆಮನೆ ಸೀಜ್ ಆಗಿಲ್ಲ. ನೆಪಮಾತ್ರೆಕ್ಕೆ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟರೇ ಎಂಬ ಅನುಮಾನ ಮೂಡಿದೆ.
ಇದನ್ನೂ ಓದಿ: ಮಂಡ್ಯ ಭ್ರೂಣಲಿಂಗ ಪತ್ತೆ, ಹತ್ಯೆ ಪ್ರಕರಣ: ಮಾಹಿತಿ ಇದ್ದರೂ ನಿರ್ಲಕ್ಷ್ಯ ಮಾಡಿದರೇ ಅಧಿಕಾರಿಗಳು?
ಕರಾಳದಂಧೆ ಬಗ್ಗೆ ಸಿಎಂ ಸೇರಿದಂತೆ ಆರೋಗ್ಯ ಇಲಾಖೆ ಕೂಡ ಗಂಭೀರವಾಗಿ ಪರಿಗಣಿಸಿದೆ. ಘಟನೆಯ ಬಗ್ಗೆ ಸಮಗ್ರ ವರದಿ ನೀಡುವಂತೆ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ಮೈಸೂರು ಸೇರಿದಂತೆ ಇವತ್ತು ಮಂಡ್ಯದಲ್ಲಿ ಮಾಹಿತಿ ಪಡೆಯಲು ಮುಂದಾಗಿದ್ರು. ಸಕ್ಷಮ ಪ್ರಾಧಿಕಾರದ ನಿರ್ದೇಶಕ ಶ್ರೀನಿವಾಸ್ ನೇತೃತ್ವದ ತಂಡ ಇಂದು ಮಂಡ್ಯದ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ಡಿಹೆಚ್ ಒ ಹಾಗೂ ಟಿಹೆಚ್ ಒ ಗಳ ಜೊತೆ ಸಭೆ ನಡೆಸಿ, ಘಟನೆಯ ಬಗ್ಗೆ ಕೂಡ ಮಾಹಿತಿ ಪಡೆದರು.
ಒಟ್ಟಾರೆ ಕರಾಳ ದಂಧೆಯ ಆರೋಪಿಗಳನ್ನ ಪೊಲೀಸರು ಬಂಧಿಸಿದ್ರೆ, ಮತ್ತೊಂದು ಕಡೆ ಲೋಕಾಯುಕ್ತ ಪೊಲೀಸರು ಕೂಡ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಜೊತೆಗೆ ಸಕ್ಷಮ ಪ್ರಾಧಿಕಾರ ಕೂಡ ಮಾಹಿತಿ ಸಂಗ್ರಹಿಸಿ ಘಟನೆಯ ಬಗ್ಗೆ ಆರೋಗ್ಯ ಇಲಾಖೆಗೆ ಸಮಗ್ರ ಮಾಹಿತಿ ನೀಡಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ