ಹೈಕೋರ್ಟ್ ಆದೇಶದಂತೆ ಮಂಡ್ಯದ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟಿಂಗ್: ಚಲುವರಾಯಸ್ವಾಮಿ ಸಮರ್ಥನೆ

| Updated By: ಗಣಪತಿ ಶರ್ಮ

Updated on: Feb 22, 2024 | 1:00 PM

ಕೆಆರ್​ಎಸ್ ಅಣೆಕಟ್ಟೆಯಿಂದ ಕೇವಲ ಐದಾರು ಕಿಲೋಮೀಟರ್ ದೂರದಲ್ಲಿರುವ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟಿಂಗ್​​ಗೆ ಸರ್ಕಾರ ಸದ್ದಿಲ್ಲದೆ ತಯಾರಿ ನಡೆಸಿರುವುದು ಇತ್ತೀಚೆಗೆ ತಿಳಿದುಬಂದಿತ್ತು. ಇದಕ್ಕೆ ಸ್ಥಳೀಯರು, ರೈತರಿಂದ ವಿರೋಧವೂ ವ್ಯಕ್ತವಾಗಿತ್ತು. ಇದೀಗ ಟ್ರಯಲ್ ಬ್ಲಾಸ್ಟಿಂಗ್ ವಿಚಾರವಾಗಿ ಮಂಸಡ್ಯ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಸಮರ್ಥನೆ ಮಾಡಿದ್ದಾರೆ.

ಹೈಕೋರ್ಟ್ ಆದೇಶದಂತೆ ಮಂಡ್ಯದ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟಿಂಗ್: ಚಲುವರಾಯಸ್ವಾಮಿ ಸಮರ್ಥನೆ
ಚಲುವರಾಯಸ್ವಾಮಿ
Follow us on

ಮಂಡ್ಯ, ಫೆಬ್ರವರಿ 22: ಮಂಡ್ಯದ ಬೇಬಿ ಬೆಟ್ಟದಲ್ಲಿ (Babybetta) ಟ್ರಯಲ್ ಬ್ಲಾಸ್ಟಿಂಗ್​ಗೆ ಕರ್ನಾಟಕ ಹೈಕೋರ್ಟ್ (Karnataka High Court) ಆದೇಶ ಮಾಡಿದೆ ಎಂದು ಸಚಿವ ಎನ್ ಚಲುವರಾಯಸ್ವಾಮಿ (N Chaluvaraya Swamy) ಹೇಳಿದರು. ಮಂಡ್ಯದಲ್ಲಿ ಮಾತನಾಡಿದ ಅವರು, ಟ್ರಯಲ್ ಬ್ಲಾಸ್ಟಿಂಗ್​ಗೆ ವಿರೋಧ ವ್ಯಕ್ತವಾಗಿರುವ ಬಗ್ಗೆ ಪ್ರತಿಕ್ರಿಯಿಸಿದರು. 6 ತಿಂಗಳ ಒಳಗೆ ಟ್ರಯಲ್ ಬ್ಲಾಸ್ಟ್ ಮಾಡಬೇಕು ಎಂದು ಹೈಕೋರ್ಟ್ ಸೂಚಿಸಿದೆ. ಟ್ರಯಲ್ ಬ್ಲಾಸ್ಟ್ ಮಾಡಿಸಿ ನಂತರ ಕಲ್ಲು ಗಣಿಗಾರಿಕೆಗೆ ಅನುಮತಿ ಕೊಡುತ್ತಾರೆ ಎಂಬ ಆತಂಕ ಕೆಲವರಲ್ಲಿ ಇದೆ. ರೈತರು ಹೈಕೋರ್ಟ್ ಆದೇಶವನ್ನು ಮನ್ನಿಸಬೇಕು ಎಂಬುದಾಗಿ ಮನವಿ ಮಾಡುತ್ತಿದ್ದೇನೆ ಎಂದು ಚಲುವರಾಯಸ್ವಾಮಿ ಹೇಳಿದರು.

ರೈತರನ್ನು ವಿಶ್ವಾಸಕ್ಕೆ ತೆಗದುಕೊಂಡು ಟ್ರಯಲ್ ಬ್ಲಾಸ್ಟ್ ಮಾಡಲಿದ್ದೇವೆ. ಯಾವುದಕ್ಕೂ, ಯಾರಿಗೂ ತೊಂದರೆ ಆಗದಂತೆ ನಾವು ನೋಡಿಕೊಳ್ಳುತ್ತೇವೆ. ರೈತರನ್ನು ಕರೆದು ಈ‌ ಬಗ್ಗೆ ಮಾತಾಡುತ್ತೇವೆ ಎಂದು ಅವರು ತಿಳಿಸಿದರು.

ಕೆಆರ್‌ಎಸ್ ನೀರಿನ ಪರಿಸ್ಥಿತಿ ಆತಂಕಕಾರಿಯಾಗಿದೆ: ಚಲುವರಾಯಸ್ವಾಮಿ

ಕೆಆರ್‌ಎಸ್‌ನಿಂದ ನಾಲೆಗಳಿಗೆ ಇನ್ನೊಂದು ಕಟ್ಟು ನೀಡಬೇಕೆಂಬ ರೈತರ ಬೇಡಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಳೆದ ಬೆಳೆಗೆ ಆಗಲ್ಲ ಎಂದಿದ್ದರೂ ನೀರು ಬಿಟ್ಟು ರಕ್ಷಣೆ ಮಾಡಿದ್ದೇವೆ. ಸಂಕ್ರಾಂತಿ ವೇಳೆ ಅವಕಾಶವಿಲ್ಲದಿದ್ದರೂ 10 ದಿನ ನೀರು ಬಿಟ್ಟಿದ್ದೇವೆ. ಕುಡಿಯೋ ನೀರಿಗೆ ಇರುವುದನ್ನು ಬಿಟ್ಟು ಮಿಕ್ಕ ಒಂದು ಟಿಎಂಸಿ ನೀರನ್ನು ರೈತರಿಗೆ ಕೊಡುತ್ತೇವೆ ಎಂದು ಸಚಿವರು ಹೇಳಿದರು.

ರೈತರ ಪರಿಸ್ಥಿತಿ ನಮಗೆ ಅರಿವಿದೆ. ರೈತರು ನೀರು ಬಿಡಿ ಎಂದು ಮನವಿ ಮಾಡುತ್ತಾ ಇದ್ದಾರೆ. ಈ ಬಗ್ಗೆ ಅಧಿಕಾರಿಗಳ‌ ಜೊತೆ ಮಾತನಾಡುತ್ತೇನೆ. ಸದ್ಯ ಕೆಆರ್‌ಎಸ್ ನೀರಿನ ಪರಿಸ್ಥಿತಿ ಬಹಳ ಕೆಟ್ಟ ಪರಿಸ್ಥಿತಿಯಲ್ಲಿದೆ. ಮಳೆಗಾಲ ಬರುವವರೆಗೆ ಇನ್ನೂ 2 ಟಿಎಂಸಿ ಕೊರತೆ ಆಗಬಹುದು ಎಂದು ಹೇಳಲಾಗುತ್ತಿದೆ. ಬೆಳೆಗಳಿಗೆ ನೀರು ಬಿಡುವ ಅವಕಾಶ ಇದೆಯೇ ಎಂಬುದಾಗಿ ಪರಿಶೀಲಿಸುತ್ತೇನೆ ಎಂದು ಅವರು ತಿಳಿಸಿದರು.

ಸುಮಲತಾರಷ್ಟು ಬುದ್ಧಿವಂತ ನಾನಲ್ಲ: ಚಲುವರಾಯಸ್ವಾಮಿ ವ್ಯಂಗ್ಯ

ನಾಟಿ ಎಲ್ಲ ಅಡುಗೆ ಮನೆಗೆ ಸೀಮಿತವಾಗಿರಬೇಕು ಎಂಬ ಮಂಡ್ಯ ಸಂಸದೆ ಸುಮಲತಾ ತಿರುಗೇಟಿಗೆ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ಅವರು ಹೇಳಿರುವುದನ್ನು ಕೇಳಿದ್ದೇನೆ. ಯಾರ ಜತೆಗೂ ಜಗಳ ಮಾಡುವ ಅವಶ್ಯಕತೆ ನನಗೆ ಇಲ್ಲ. ಸುಮಲತಾರಷ್ಟು ಬುದ್ಧಿವಂತ ನಾನಲ್ಲ, ಅವರು ಬುದ್ಧಿವಂತರು ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಮತ್ತೆ ಸದ್ದು ಮಾಡಲಿದೆಯಾ ಬೇಬಿ ಬೆಟ್ಟದ ಕಲ್ಲು ಗಣಿಗಾರಿಕೆ? ಟ್ರಯಲ್ ಬ್ಲಾಸ್ಟಿಂಗ್​ಗೆ ಸದ್ದಿಲ್ಲದೆ ಸರ್ಕಾರದ ತಯಾರಿ

ನಮ್ಮ ಜಿಲ್ಲೆಯ ಮಣ್ಣಿನ ಒಬ್ಬರನ್ನು ಅಭ್ಯರ್ಥಿ ಮಾಡುತ್ತೇವೆ ಎಂದಿದ್ದೆ. ಸುಮಲತಾ ಅಂಬರೀಶ್​ ಅದಕ್ಕೆ ಏನು ವಿವರಣೆ ಕೊಡುತ್ತಾರೆಯೋ ಕೊಡಲಿ. ಅವರು ರಾಷ್ಟ್ರೀಯ ಪಕ್ಷದಲ್ಲಿ ಟಿಕೆಟ್‌ಗೆ ಫೈಟ್ ಮಾಡುತ್ತಿದ್ದಾರೆ, ಒಳ್ಳೆಯದಾಗಲಿ. ಯಾರು ಯಾವಾಗ ಸೂಟ್ ಹಾಕ್ತಾರೆ ಎಂದು ನಿರ್ಧರಿಸುವುದು ಜನ. ಸಂಸತ್​ಗೆ ಯಾರು ಹೋಗಬೇಕೆಂದು ಜನರು ತೀರ್ಮಾನ ಮಾಡುತ್ತಾರೆ. ಜನರು ತೀರ್ಮಾನ ಮಾಡುವವರೆಗೆ ತಡೆದುಕೊಂಡು‌ ಇರಬೇಕು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ