ಮಂಡ್ಯದಲ್ಲಿ ರಂಗೇರಿದ ಲೋಕ ಅಖಾಡ; ಒಂದೇ ವೇದಿಕೆಯಲ್ಲಿ ಕಾಣಿಸ್ಕೊಂಡ ಮೂರು ಪಕ್ಷಗಳ ಸಂಭಾವ್ಯ ಅಭ್ಯರ್ಥಿಗಳು
ಲೋಕಸಭಾ ಚುನಾವಣೆಗೆ ಇನ್ನೇನೂ ಕೆಲವು ದಿನಗಳು ಬಾಕಿ ಇವೆ. ಈ ಮಧ್ಯೆ ಸಕ್ಕರೆ ನಗರಿ ಮಂಡ್ಯದಲ್ಲಿ ಲೋಕಸಭಾ ಸಮರ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇನ್ನು ಇವತ್ತು ಕಾರ್ಯಕ್ರಮವೊಂದರಲ್ಲಿ ಮೂರು ಪಕ್ಷಗಳ ಸಂಭಾವ್ಯ ಅಭ್ಯರ್ಥಿಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ರೆ, ಮತ್ತೊಂದು ಕಡೆ ಪರೋಕ್ಷವಾಗಿ ಮಂಡ್ಯದಿಂದಲೇ ಸ್ವರ್ಧೆ ಮಾಡುವುದಾಗಿ ರೇಬಲ್ ಲೇಡಿ ತಿಳಿಸಿದ್ದಾರೆ.
ಮಂಡ್ಯ, ಫೆ.21: ಲೋಕಸಭಾ ಚುನಾವಣೆಗೆ ಇನ್ನೇನೂ ಕೆಲವು ದಿನಗಳು ಬಾಕಿ ಇವೆ. ಈ ನಡುವೆ ಸಕ್ಕರೆ ನಗರಿ ಮಂಡ್ಯದಲ್ಲಿ ಲೋಸಕಭಾ ಚುನಾವಣೆ (Mandya Lok Sabha) ಕಾವು ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದೆ. ಒಂದೇಡೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಎಂದೇ ಹೇಳಲಾಗುತ್ತಿರೋ ಸ್ಟಾರ್ ಚಂದ್ರು, ಅಲ್ಲಿಲ್ಲಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆ ಬಿಜೆಪಿ ಟಿಕೆಟ್ಗಾಗಿ ದೆಹೆಲಿ ಮಟ್ಟದಲ್ಲಿ ದಾಳ ಉರುಳಿಸುತ್ತಿರುವ ರೆಬಲ್ ಲೇಡಿ ಸುಮಲತಾ ಅಂಬರೀಶ್, ಮಂಡ್ಯ ಬಿಜೆಪಿ ಟಿಕೆಟ್ಗಾಗಿ ಶತಾಯ-ಗತಾಯ ಪ್ರಯತ್ನ ಪಡೆಯುತ್ತಿದ್ದಾರೆ. ಈ ಮಧ್ಯೆ ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿ ಯಾರು ಎಂಬ ಕೂತುಹಲದ ಮಧ್ಯೆ ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ. ಸಿ.ಎನ್ ಮಂಜುನಾಥ್ ಅವರ ಹೆಸರು ಕೂಡ ಕೇಳಿ ಬರುತ್ತಿದೆ. ಮಂಜುನಾಥ್ ಅವರೇ ಸ್ವರ್ಧೆ ಮಾಡಬೇಕು ಎಂದು ದಳಪತಿಗಳು ಕೂಡ ಒತ್ತಾಯ ಮಾಡುತ್ತಿದ್ದಾರೆ. ಈ ಎಲ್ಲ ಬೆಳವಣಿಗೆ ಗಳ ನಡುವೆ ಇವತ್ತು ಕಾರ್ಯಕ್ರಮವೊಂದರಲ್ಲಿ ಮೂವರು ಸಂಭಾವ್ಯ ಅಭ್ಯರ್ಥಿಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಮೂರು ಪಕ್ಷಗಳ ಸಂಭಾವ್ಯ ಅಭ್ಯರ್ಥಿಗಳು
ಇವತ್ತು ಮಂಡ್ಯದ ರೈತ ಸಭಾಂಗಣ ಆವರಣದಲ್ಲಿ ಒಕ್ಕಲಿಗರ ಸಂಘ ಆಯೋಜನೆ ಮಾಡಿದ್ದ ಬಾಲಗಂಗಾಧರನಾಥ ಸ್ವಾಮೀಜಿ ಅವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ, ಸಂಸದೆ ಸುಮಲತಾ ಅಂಬರೀಶ್, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸ್ಟಾರ್ ಚಂದ್ರು ಹಾಗೂ ಜೆಡಿಎಸ್ ಅಭ್ಯರ್ಥಿ ಎಂದು ಹೇಳಲಾಗುತ್ತಿರುವ ಡಾ.ಸಿ ಎನ್ ಮಂಜುನಾಥ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ತಮ್ಮ ಸ್ವರ್ಧೆ ಬಗ್ಗೆ ಮಾತನಾಡಿರುವ ಸಂಸದೆ ಸುಮಲತಾ ಅಂಬರೀಶ್, ಮಂಡ್ಯದಲ್ಲಿ ಬಿಜೆಪಿ ಸಂಘಟನೆ ಚೆನ್ನಾಗಿದೆ. ಈ ಬಾರಿ ವಿಧಾನಸಭೆ ಅಲ್ಲಿ ಉತ್ತಮ ಮತಗಳು ಬಂದಿವೆ. ಬಿಜೆಪಿಗೆ ಮಂಡ್ಯ ಉಳಿಸಿಕೊಂಡರೇ, ಪಕ್ಷ ಕಟ್ಟಲು ಸಹಕಾರಿ ಆಗಲಿದೆ. ನಾನು ಯಾವತ್ತು ಟಿಕೆಟ್ಗಾಗಿ ಲಾಭಿ ಮಾಡಿಲ್ಲ. ಮಂಡ್ಯವನ್ನು ಬಿಜೆಪಿ ಉಳಿಸಿಕೊಳ್ಳಬೇಕು. ಬಿಜೆಪಿ ಮಂಡ್ಯ ಟಿಕೆಟ್ ಉಳಿಸಿಕೊಳ್ಳುತ್ತದೆ ಎಂಬ ವಿಶ್ವಾಸ ಇದೆ ಎಂದರು.
ಇದನ್ನೂ ಓದಿ:ಮಂಡ್ಯ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತಯಾರಿ; ಅಭ್ಯರ್ಥಿ ಆಯ್ಕೆ ಸಂಬಂಧ ಮಂಡ್ಯದಲ್ಲಿ ಪೂರ್ವಭಾವಿ ಸಭೆ
ಇನ್ನು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್, ಮೈತ್ರಿ ಆಗಿದೆ. ಕ್ಷೇತ್ರ ಹಂಚಿಕೆ ಸಂಬಂಧ ದಳಪತಿಗಳು ಬಿಜೆಪಿ ಹೈಕಮಾಂಡ್ ಜೊತೆ ಸಾಕಷ್ಟು ಚರ್ಚೆ ಕೂಡ ನಡೆಸುತ್ತಿದ್ದಾರೆ. ಈ ಮಧ್ಯೆ ಮಂಡ್ಯದಿಂದ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ವರ್ಧೆಗೆ ಸಾಕಷ್ಟು ಒತ್ತಡ ಹೇರಿದ್ರು, ನಿಖಿಲ್ ಸ್ವರ್ಧೆ ಮಾಡಲ್ಲ ಎಂದು ಸ್ವಷ್ಟಪಡಿಸಿದ್ದಾರೆ. ಇನ್ನು ಜಿಲ್ಲೆಯ ದಳಪತಿಗಳು ಕುಮಾರಸ್ವಾಮಿ ಕೂಡ ಸ್ವರ್ಧೆ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಆದರೆ, ಕುಮಾರಸ್ವಾಮಿ ಅವರು ತಮ್ಮ ನಿಲುವು ತಿಳಿಸಿಲ್ಲ.
ಇವೆಲ್ಲದರ ನಡುವೆ ಜಯದೇವ ಆಸ್ಪತ್ರೆ ಮಾಜಿ ನಿರ್ದೇಶಕ, ದೇವೇಗೌಡರ ಅಳಿಯ ಡಾ.ಸಿ ಎನ್ ಮಂಜುನಾಥ್ ಅವರನ್ನ ಕಣಕ್ಕೆ ಇಳಿಸುವಂತೆ ದೇವೇಗೌಡರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಅಲ್ಲದೆ ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ಕೂಡ ಸ್ವರ್ಧೆ ಮಾಡಬೇಕು ಎನ್ನುತ್ತಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರೋ ಡಾ ಮಂಜುನಾಥ್, ನಾನು ಇನ್ನು ಅದರ ಬಗ್ಗೆ ತೀರ್ಮಾನ ಮಾಡಿಲ್ಲ. ಹಲವು ಕಡೆ ಜನರು ಒತ್ತಡ ಹಾಕುತ್ತಾ ಇದ್ದಾರೆ. ಮುಂದೆ ಸ್ವರ್ಧೆ ಬಗ್ಗೆ ತೀರ್ಮಾನ ಮಾಡಿದ್ರೆ ಹೇಳುತ್ತೀನಿ ಎನ್ನುತ್ತಿದ್ದಾರೆ. ಒಟ್ಟಾರೆ ಮಂಡ್ಯ ಲೋಕ ಅಖಾಡ ರಂಗೇರಿದ್ದು, ಕಾಂಗ್ರೆಸ್ ನಿಂದ ಏನೊ ಅಭ್ಯರ್ಥಿ ಹೆಸರು ಫಿಕ್ಸ್ ಆಗಿದ್ದು, ಮೈತ್ರಿ ಅಭ್ಯರ್ಥಿ ಯಾರು ಆಗುತ್ತಾರೆ ಎಂಬ ಕೂತುಹಲ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ