Keragodu flag row: ಕೆರೆಗೋಡು ಪ್ರಕರಣ, ಮನೆಗಳ ಮೇಲೆ ಹನುಮಧ್ವಜ ಹಾರಿಸಿದ ಬಿಜೆಪಿ ಕಾರ್ಯಕರ್ತರು

| Updated By: ಗಣಪತಿ ಶರ್ಮ

Updated on: Feb 03, 2024 | 5:20 PM

ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದ ಧ್ವಜ ವಿವಾದ ರಾಜಕೀಯ ಸ್ವರೂಪ ಪಡೆದುಕೊಂಡು ತುಸು ತಣ್ಣಗಾಗುತ್ತಿದೆ ಎನ್ನುವಷ್ಟರಲ್ಲೇ ಶನಿವಾರ ಬಿಜೆಪಿ ಕಾರ್ಯಕರ್ತರು ಗ್ರಾಮದ ಮನೆ ಮನೆಗಳಲ್ಲಿ ಹನುಮ ಧ್ವಜ ಹಾರಿಸುವ ಅಭಿಯಾನ ಆರಂಭಿಸಿದ್ದಾರೆ. ಫೆಬ್ರವರಿ 7 ಮತ್ತು 8ಕ್ಕೆ ಬಂದ್​ಗೆ ಸಹ ಕರೆ ನೀಡಲಾಗಿದೆ.

Keragodu flag row: ಕೆರೆಗೋಡು ಪ್ರಕರಣ, ಮನೆಗಳ ಮೇಲೆ ಹನುಮಧ್ವಜ ಹಾರಿಸಿದ ಬಿಜೆಪಿ ಕಾರ್ಯಕರ್ತರು
ಮನೆಗಳ ಮೇಲೆ ಹನುಮಧ್ವಜ ಹಾರಿಸಿದ ಬಿಜೆಪಿ ಕಾರ್ಯಕರ್ತರು
Follow us on

ಮಂಡ್ಯ, ಫೆಬ್ರವರಿ 3: ಕೆರೆಗೋಡು ಹನುಮಧ್ವಜ ತೆರವು ವಿವಾದ (Keragodu flag row) ಸದ್ಯಕ್ಕೆ ಪೂರ್ಣವಾಗಿ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಈ ಒಂದು ವಿವಾದ ಈಗಾಗಲೇ ರಾಜಕೀಯ ತಿರುವು ಪಡೆದುಕೊಂಡಿದೆ. ಹಿಂದೂಪರ ಸಂಘಟನೆ ಕಾರ್ಯಕರ್ತರು ಮತ್ತೆ ಹನುಮಧ್ವಜವನ್ನ ಹಾರಿಸುತ್ತೇವೆ ಎಂಬ ಪಟ್ಟು ಹಿಡಿದಿದ್ದಾರೆ. ಅಷ್ಟೇ ಅಲ್ಲದೆ, ಶನಿವಾರ ಕೆರಗೋಡು ಗ್ರಾಮದಲ್ಲಿ ಮನೆ ಮನೆಗಳ ಮೇಲೆ ಬಿಜೆಪಿ ಕಾರ್ಯಕರ್ತರು (BJP Workers) ಹನುಮಧ್ವಜವನ್ನ (Hanuman flag) ಹಾರಿಸಿದ್ದಾರೆ. ಈ ಮೂಲಕ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಸವಾಲು ಒಡ್ಡಿದ್ದಾರೆ.

ಜನವರಿ 28ರಂದು ಕೆರೆಗೋಡು ಗ್ರಾಮದ ಅರ್ಜುನ ಸ್ತಂಭದ ಮೇಲಿದ್ದ ಹನುಮಧ್ವಜವನ್ನ ಕೆಳಗೆ ಇಳಿಸಿ, ತಿರಂಗವನ್ನ ಜಿಲ್ಲಾಡಳಿತ ಸ್ತಂಬದ ಮೇಲೆ ಹಾರಿಸಿತ್ತು. ಅಂದು ಹೊತ್ತಿಕೊಂಡ ಕಿಚ್ಚು ಗ್ರಾಮದಲ್ಲಿ ಇಲ್ಲಿಯವರೆಗೂ ಕೂಡ ಮುಂದುವರೆದುಕೊಂಡು ಬಂದಿದೆ. ಮತ್ತೆ ಅರ್ಜುನ ಸ್ತಂಬದ ಮೇಲೆ ಹನುಮ ಧ್ವಜವನ್ನ ಹಾರಿಸಿಯೇ ಹಾರಿಸುತ್ತೇವೆ ಎಂದು ಹಿಂದೂಪರ ಸಂಘಟನೆ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ಸವಾಲು ಹಾಕಿದ್ದಾರೆ. ಈ ಮಧ್ಯೆ ಬಿಜೆಪಿ ನೂತನ ಅಭಿಯಾನ ಆರಂಭಿಸಿದ್ದು, ಮನೆ ಮನೆಗಳ ಮೇಲೆ ಹನುಮಧ್ವಜ ಹಾರಿಸುವ ಅಭಿಯಾನ ಹಮ್ಮಿಕೊಂಡಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ನೇತೃತ್ವದಲ್ಲಿ ಇವತ್ತು ಹನುಮಧ್ವಜ ಅಭಿಯಾನ ಹಮ್ಮಿಕೊಂಡಿದ್ದು, ಕೆರೆಗೋಡು ಗ್ರಾಮದಲ್ಲಿ ಆಂಜನೇಯಸ್ವಾಮಿ ಪೂಜೆ ಸಲ್ಲಿಸಿ ನಂತರ ಗ್ರಾಮದಲ್ಲಿ ಮನೆಗಳ ಮೇಲೆ ಹನುಮಧ್ವಜವನ್ನ ಕಟ್ಟಲಾಯಿತು. ಈ ವೇಳೆ ಮಾತನಾಡಿ, ಈ ಅಭಿಯಾನವನ್ನ ಇಡೀ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳುತ್ತೇವೆ ಎಂದರು.

ಹನುಮಧ್ವಜ ತೆರವು ವಿವಾದದ ಪರ ಹಾಗೂ ವಿರೋಧವಾಗಿ ಫೆಬ್ರವರಿ 7 ಹಾಗೂ 9 ರಂದು ಮಂಡ್ಯ ನಗರ ಬಂದ್ ಗೆ ಕರೆ ನೀಡಲಾಗಿದೆ. ಫೆಬ್ರವರಿ 7ರಂದು ಸಮಾನ ಮನಸ್ಕ ವೇದಿಕೆ ಜಿಲ್ಲೆಯಲ್ಲಿ ಅಶಾಂತಿ ಮೂಡುತ್ತಿದೆ ಎಂದು ಬಂದ್ ಗೆ ಕರೆ ನೀಡಿದ್ರೆ, ಮತ್ತೊಂದು ಕಡೆ ಹನುಮಧ್ವಜವನ್ನ ಇಳಿಸಿರುವುದನ್ನ ಖಂಡಿಸಿ ಫೆಬ್ರವರಿ 9ರಂದು ಬಂದ್ ಗೆ ಭಜರಂಗದಳ ಕರೆಕೊಟ್ಟಿದೆ. ಆದರೆ ಈ ಎರಡು ಬಂದ್ ಗಳಿಗೆ ಯಾವುದೇ ಬೆಂಬಲ ನೀಡಲ್ಲ ಎಂದು ಆಟೋ ಚಾಲಕರು ಹಾಗೂ ವಾಣಿಜ್ಯ ಮಂಡಳಿ ವರ್ತಕರು ಹೇಳಿದ್ದಾರೆ. ಇದು ರಾಜಕೀಯ ಪ್ರೇರಿತ ಬಂದ್ ಆಗಿದೆ. ಹಾಗಾಗಿ ನಾವು ಯಾವುದೇ ಬೆಂಬಲ ನೀಡಲ್ಲ. ಎಂದಿನಂತೆ ಆಟೋಗಳ ಸಂಚಾರ, ವ್ಯಾಪಾರ ವಹಿವಾಟು ಇರುತ್ತೆ ಅಂತಾ ತಿಳಿಸಿದ್ದಾರೆ.

ಇದನ್ನೂ ಓದಿ: ನಾನು ಕೇಸರಿ ಶಾಲು ಹಾಕುವುದಿಲ್ಲ, ಕುಮಾರಸ್ವಾಮಿ ಹಾಕಿದ್ದನ್ನು ಪರೋಕ್ಷವಾಗಿ ಖಂಡಿಸಿದ ದೇವೇಗೌಡ

ಒಟ್ಟಾರೆ ಕೆರೆಗೋಡು ಧ್ವಜದಂಗಲ್ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಪ್ರಕರಣ ತಾರಕಕ್ಕೇರುತ್ತಿದೆ. ಇದು ಮತ್ತೆ ಯಾವ ಸ್ವರೂಪ ಪಡೆಯುತ್ತದೆ ಕಾದು ನೋಡಬೇಕು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ