ಮಂಡ್ಯ, ಮಾರ್ಚ 25: ಶ್ರೀರಂಗಪಟ್ಟಣ (Srirangapatna) ತಾಲೂಕಿನ ಕೃಷ್ಣರಾಜ ಸಾಗರ (KRS) ಜಲಾಶಯದ +80 ಗೇಟ್ ಭಾನುವಾರ (ಮಾರ್ಚ್ 23) ರಾತ್ರಿ ಏಕಾಏಕಿ ತೆರೆದಿದ್ದು, ಸೋಮವಾರ (ಮಾ.24) ರಾತ್ರಿವರೆಗೂ ಗೇಟ್ ತೆರದೇ ಇತ್ತು. 24 ಗಂಟೆಯಲ್ಲಿ ಬರೋಬ್ಬರಿ ಎರಡು ಸಾವಿರ ಕ್ಯೂಸೆಕ್ ನೀರು ನದಿ ಪಾಲಾಗಿದೆ. ಸೋಮವರಾರ ರಾತ್ರಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಗೇಟ್ ಬಂದ್ ಮಾಡಿದ್ದಾರೆ. ಈ ವೇಳೆ, ಹೆಚ್ಚಿನ ಪ್ರಮಾಣದ ನೀರು ಇದ್ದಿದ್ದರಿಂದ ಗೇಟ್ ಮುಚ್ಚಲು ಅಧಿಕಾರಿಗಳು ಹರಸಾಹಸ ಪಟ್ಟರು.
ಜಲಾಶಯದ ಗೇಟ್ ಏಕಾಏಕಿ ತೆರೆಯುವುದು ವಿರಾಳಾತಿ ವಿರಳ. ಆದರೆ, ಇಲ್ಲಿ ಕೆಆರ್ಎಸ್ ಡ್ಯಾಂನ ಗೇಟ್ ಏಕಾಏಕಿ ತೆರೆದಿದ್ದು, ಅನುಮಾನವನ್ನು ಹುಟ್ಟು ಹಾಕಿದೆ. ಎರಡು ಕಾರಣಗಳಿಂದ ಡ್ಯಾಂn ಗೇಟ್ ತೆರೆದಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಡ್ಯಾಂನ ಗೇಟ್ನ ಮೋಟಾರ್ ರಿವರ್ಸ್ ಆಗಿದ್ದರಿಂದ ಗೇಟ್ ತೆರೆದಿರಬಹುದು, ಅಥವಾ ನಮ್ಮದೇ ಸಿಬ್ಬಂದಿ ಗೇಟ್ ತೆರೆದಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಗೇಟ್ ಯಾವ ಕಾರಣಕ್ಕೆ ತೆರೆದಿದೆ ಎಂಬುವುದು ತನಿಖೆ ಬಳಿಕವಷ್ಟೇ ತಿಳಿಯಲಿದೆ.
ಡ್ಯಾಂನ ಗೇಟ್ ಏಕಾಏಕಿ ತೆರೆದ ವಿಚಾರ ತಿಳಿದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸುತ್ತಿದ್ದು, ಪರಿಶೀಲನೆ ನಡೆಸಲಿದ್ದಾರೆ. ಗೇಟ್ ಏಕಾಏಕಿ ಹೇಗೆ ತೆರೆಯಿತು ಅಂತ ತನಿಖೆ ನಡೆಸಲು ಪೂರಕವಾದ ಸಾಕ್ಷ್ಯಾಧಾರಗಳು ಅತ್ಯಗತ್ಯ. ಆದರೆ, ಡ್ಯಾಂನ ಸುತ್ತಮುತ್ತ ಯಾವುದೇ ಸಿಸಿ ಕ್ಯಾಮೆರಾಗಳು ಇಲ್ಲ. ಇದರಿಂದ ತನಿಖೆ ನಿಧಾನವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಮೇಕೆದಾಟು: ಕರ್ನಾಟಕದ ವಿರುದ್ಧ ಕಾನೂನು ಹೋರಾಟದ ಎಚ್ಚರಿಕೆ ನೀಡಿದ ತಮಿಳುನಾಡು
ಇನ್ನು, ಕಳೆದ ವರ್ಷ ತುಂಗಭದ್ರಾ ಜಲಾಶಯದ ಕ್ರೆಸ್ಟರ್ಗೇಟ್ ತುಂಡಾಗಿ ಕೊಚ್ಚಿಕೊಂಡು ಹೋಗಿತ್ತು. ಇದರಿಂದ ಸಾವಿರಾರು ಕ್ಯೂಸೆಕ್ ನೀರು ನದಿ ಪಾಲಾಗಿತ್ತು. ಗೇಟ್ ತುಂಡಾಗುತ್ತಿದ್ದಂತೆ ಕಾರ್ಯಪ್ರವೃತ್ತವಾಗಿದ್ದ ಸರ್ಕಾರ ಮತ್ತು ಡ್ಯಾಂ ನಿರ್ವಹಣಾ ಅಧಿಕಾರಿಗಳು ಒಂದು ವಾರದಲ್ಲಿ ಹೊಸ ಸ್ಟಾಫ್ ಗೇಟ್ ಅಳವಡಿಸಿದ್ದರು. ಇದು ಸಹಜವಾಗಿ ಡ್ಯಾಂ ನಿರ್ವಹಣಾ ಅಧಿಕಾರಿಗಳ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆ ಬಳಿಕವಾದರೂ ರಾಜ್ಯದ ಪ್ರಮುಖ ಜಲಾಶಯಗಳ ತಪಾಸಣೆ ಸರ್ಕಾರ ನಡೆಸಬೇಕಿತ್ತು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Published On - 9:11 am, Tue, 25 March 25