ಮಂಡ್ಯ, ಏ.1: ಹೆಚ್.ಡಿ. ಕುಮಾರಸ್ವಾಮಿ (H.D.Kumaraswamy) ಅವರು ಕಮಲದ ಧ್ವಜ ಹಾಕಿದ್ದಾರೆ, ಬದುಕಿದ್ದು ಸತ್ತಂತೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K.Shivakumar) ವಾಗ್ದಾಳಿ ನಡೆಸಿದ್ದಾರೆ. ಮಂಡ್ಯ (Mandya) ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು (Star Chandru) ಅವರು ಬೃಹತ್ ರೋಡ್ ಶೋ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ರಾಜ್ಯದ ಜನರಿಗೆ ನಾವು ಹೇಳಿದಂತೆ ಮಾತು ಉಳಿಸಿಕೊಂಡಿದ್ದೇವೆ. ಮಂಡ್ಯದ ಜನತೆ ಸ್ವಾಭಿಮಾನಕ್ಕೆ ಮತಕೊಡಿ ಎಂದು ಮನವಿ ಮಾಡಿದರು.
ಈ ರಾಜಕಾರಣ ನೋಡಿದರೆ ನಾಚಿಗೆ ಆಗುತ್ತೆ. ಪುಟ್ಟರಾಜು ಅವರು ಟಿಕೆಟ್ಗಾಗಿ ಕಾದು ಕುಳಿತಿದ್ದ, ಇದೀಗ ಗೋವಿಂದ. ಕುಮಾರಸ್ವಾಮಿ ಕಮಲದ ಧ್ವಜ ಹಾಕಿಕೊಂಡಿದ್ದಾರೆ. ಬದುಕಿದ್ದು ಸತ್ತಂತೆ ಎಂದರು. ಅಲ್ಲದೆ, ಸ್ಥಳೀಯರನ್ನು ಆಯ್ಕೆ ಮಂಡ್ಯ ಗೌಡಿಕೆಯನ್ನು ಬೇರೆಯವರಿಗೆ ಕೊಟ್ಟಿಲ್ಲ. ಕಳೆದ ಬಾರಿ ಮೈತ್ರಿಯಂತೆ ಕುಮಾರಸ್ವಾಮಿ ಅವರಿಗೆ ಸಹಾಯ ಮಾಡಲು ಬಂದಿದ್ದೆ. ಆದರೆ ಅವರಿಗೆ ಅಧಿಕಾರ ಉಳಿಸಿಕೊಳ್ಳಲು ಆಗಿಲ್ಲ. ಆದರೆ ಈಗ ತಮ್ಮ ಅಧಿಕಾರ ತೆಗೆದವರ ಜೊತೆಯೇ ಕುಮಾರಸ್ವಾಮಿ ಹೋಗಿದ್ದಾರೆ ಎಂದರು.
ಇದನ್ನೂ ಓದಿ: ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ ಖಚಿತ, ನಾಮಪತ್ರ ಸಲ್ಲಿಕೆಗೆ ಮುಹೂರ್ತ ಫಿಕ್ಸ್
ಹೆಚ್.ಡಿ.ಕುಮಾರಸ್ವಾಮಿ ಹಾಸನದಿಂದ ರಾಮನಗರಕ್ಕೆ ಬಂದಿದ್ದರು. ಇದೀಗ ಮಂಡ್ಯಕ್ಕೆ ಬಂದಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು, ಮಾಡಲಿ. ಬೆಂಗಳೂರು ಗ್ರಾಮಾಂತರದಲ್ಲಿ ಭಾವನನ್ನು ಬಿಜೆಪಿಯಿಂದ ನಿಲ್ಲಿಸಿದ್ದಾರೆ. ಎಲ್ಲಾ ಕಡೆ ನೀವೇ ನಿಂತರೆ ಕಾರ್ಯಕರ್ತರು ಏನು ಮಾಡುತ್ತಾರೆ ಎಂದು ಡಿಕೆ ಶಿವಕುಮಾರ್ ಅವರು ಪ್ರಶ್ನಿಸಿದರು.
ಈ ಬಾರಿ ಎಂಟು ಮಂದಿ ಒಕ್ಕಲಿಗರಿಗೆ ನಾವು ಟಿಕೆಟ್ ನೀಡಿದ್ದೇವೆ. ನನ್ನನ್ನು ನೋಡಿ ಮಂಡ್ಯ ಜಿಲ್ಲೆಯಲ್ಲಿ ಅಧಿಕ ಸೀಟ್ ಕೊಟ್ಟಿದ್ದೀರಿ. ನಿಮ್ಮ ನಂಬಿಕೆ ಸುಳ್ಳು ಆಗಿಲ್ಲ. ನಾನು ಮಂಡ್ಯ ಸ್ವಾಭಿಮಾನದ ಜೊತೆ ಇರುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಇದೊಂದು ಐತಿಹಾಸಿಕ ನಾಮಪತ್ರ. ಮಂಡ್ಯ ಜನರ ಸ್ವಾಭಿಮಾನ ನಾಮಪತ್ರ. ಸ್ಥಳೀಯರನ್ನು ಆಯ್ಕೆ ಮಾಡಿ ಮಂಡ್ಯ ಗೌಡಿಕೆಯನ್ನು ಬೇರೆಯವರ ಕೈಗೆ ಕೊಟ್ಟಿಲ್ಲ. ಸ್ಟಾರ್ ಚಂದ್ರು ಮಂಡ್ಯ ಜಿಲ್ಲೆಯ ರೈತ ಮಗ. ಇದು ಟೂರಿಂಗ್ ಟಾಕೀಸ್, ಸಿನಿಮಾ ರಾಜಕಾರಣ ಅಲ್ಲ. ಇದು ಬದುಕಿನ ರಾಜಕಾರಣ. ಮಂಡ್ಯ ಕ್ಷೇತ್ರದ ಜನರು ಮಂಡ್ಯದವರಿಗೆ ಮತ ಹಾಕುತ್ತಾರೆ. ಚಂದ್ರು ಅವರು ಎರಡು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ. ಹಾಸನದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಡಿ