ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ ಖಚಿತ, ನಾಮಪತ್ರ ಸಲ್ಲಿಕೆಗೆ ಮುಹೂರ್ತ ಫಿಕ್ಸ್

ಅವರನ್ನ ಬಿಟ್ಟು ಇವರನ್ನ ಬಿಟ್ಟು ಮತ್ಯಾರು ಎನ್ನುವ ಗೊಂದಲಗಳ ಮಧ್ಯೆ ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಪುಟ್ಟರಾಜು, ನಿಖಿಲ್ ಕುಮಾರಸ್ವಾಮಿ ಹೆಸರುಗಳು ಹೇಳಿಬಂದಿದ್ದವು. ಅಂತಿಮವಾಗಿ ಎಚ್​ಡಿಕೆ ಸ್ಪರ್ಧೆ ನಿಶ್ಚಿತವಾಗಿದ್ದು, ನಾಮಪತ್ರ ಸಲ್ಲಿಕೆಗೂ ಸಹ ಮುಹೂರ್ತ ಫಿಕ್ಸ್ ಆಗಿದೆ.

ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ ಖಚಿತ, ನಾಮಪತ್ರ ಸಲ್ಲಿಕೆಗೆ ಮುಹೂರ್ತ ಫಿಕ್ಸ್
Follow us
| Updated By: ರಮೇಶ್ ಬಿ. ಜವಳಗೇರಾ

Updated on: Mar 28, 2024 | 10:10 PM

ಬೆಂಗಳೂರು.ಮಂಡ್ಯ, (ಮಾರ್ಚ್ 28): ಈ ಬಾರಿ ಮಂಡ್ಯ ಲೋಕಸಭಾ (Mandya Loksabha) ಕ್ಷೇತ್ರದಿಂದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ(HD Kumaraswamy ) ಸ್ಪರ್ಧೆ ಮಾಡುವುದು ಖಚಿತವಾಗಿದೆ. ಇನ್ನೂ ಅಧಿಕೃತವಾಗಿ ಮಂಡ್ಯ ಸೇರಿದಂತೆ ಕೋಲಾರ, ಹಾಸನ ಲೋಕಸಭಾ ಕ್ಷೇತ್ರಗಳಿಗೆ ಜೆಡಿಎಸ್​ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಆದರೂ ಯಾರ್ಯಾರು ಸ್ಪರ್ಧಿಸುತ್ತಾರೆ ಎನ್ನುವುದು ಅಂತಿಮವಾಗಿದೆ. ಅದರಂತೆ ಮಂಡ್ಯದಿಂದ ಕುಮಾರಸ್ವಾಮಿ ಕಣಕ್ಕಿಳಿಯಲಿದ್ದು, ಏಪ್ರಿಲ್.4ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿಯೂ ಸಹ ಮಂಡ್ಯ ಲೋಕಸಭಾ ಚುನಾವಣೆ ರಂಗೇರಲಿದೆ.

ಕರ್ನಾಟಕದಲ್ಲಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧಿಸಲಿದೆ. ಹಾಸನ, ಕೋಲಾರ ಮತ್ತು ಮಂಡ್ಯ ಕ್ಷೇತ್ರಗಳಲ್ಲಿ ಜೆಡಿಎಸ್​ ಸ್ಪರ್ಧಿಸಲಿದೆ. ಇದೀಗ ಮಂಡ್ಯ ಜೆಡಿಎಸ್ ಅಭ್ಯರ್ಥಿಯಾಗಿ ಎಚ್​ಡಿ ಕುಮಾರಸ್ವಾಮಿ ಅವರು ಏಪ್ರಿಲ್ 4ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಅದೇ ರೀತಿಯಾಗಿ ಉಳಿದ ಎರಡು ಕ್ಷೇತ್ರಗಳಾದ ಹಾಸನದಲ್ಲಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಕೋಲಾರ ಕ್ಷೇತ್ರದಿಂದ ಮಲ್ಲೇಶ್ ಬಾಬು ಸ್ಪರ್ಧಿಸಲಿದ್ದಾರೆ. ಕಳೆದ ಚುನಾವಣೆಯಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲುಕಂಡಿದ್ದರು. ಆದ್ರೆ, ಈ ಬಾರಿ ಸ್ವತಃ ಕುಮಾರಸ್ವಾಮಿ ಕಣಕ್ಕಿಳಿಯುತ್ತಿರುವುದು ಈ ಬಾರಿ ಮತ್ತೆ ಮಂಡ್ಯ ಲೋಕಸಭಾ ಕ್ಷೇತ್ರ ಭಾರೀ ಸದ್ದು ಮಾಡುವುದಂತೂ ಸತ್ಯ. ಆದ್ರೆ, ಹಾಲಿ ಸಂಸದೆ ಸುಮಲತಾ ಅಂಬರೀಶ್ ನಡೆ ಏನು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಕೋಲಾರ ಕಾಂಗ್ರೆಸ್​ ಶಾಸಕರ ಸಂಧಾನ ಸಭೆ ಯಶಸ್ವಿ: ಹಾಗಾದ್ರೆ ಲೋಕಸಭೆ ಟಿಕೆಟ್ ಯಾರಿಗೆ..?

ಯಾಕಂದ್ರೆ, ಕಳೆದ ಬಾರಿ ನಿಖಿಲ್ ವಿರುದ್ಧ ಗೆಲುವು ಸಾಧಿಸಿರುವ ಸುಮಲತಾ ಅಂಬರೀಶ್ ಬಳಿಕ ಬಿಜೆಪಿಗೆ ಬೆಂಬಲ ಘೋಷಿಸಿದ್ದರು. ಇದೀಗ ರಾಜಕೀಯ ಎದುರಾಳಿಯಾದ ಜೆಡಿಎಸ್​ ಸಹ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಈ ಬಾರಿ ಸುಮಲತಾ ಅಂಬರೀಶ್​ಗೆ ಟಿಕೆಟ್ ಕೈತಪ್ಪಿದ್ದು, ರಾಜಕೀಯ ಬದ್ಧ ವೈರಿಗೆ ಟಿಕೆಟ್​ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಸುಮಲತಾ ಅಂಬರೀಶ್ ಅವರು ಜೆಡಿಎಸ್​ಗೆ ಬೆಂಬಲಿಸುವುದರೊಂದಿಗೆ ಮೈತ್ರಿ ಪಾಲನೆ ಮಾಡುತ್ತಾರಾ? ಅಥವಾ ಮತ್ತೆ ಪಕ್ಷೇತರವಾಗಿ ಕಣಕ್ಕಿಳಿಯುತ್ತಾರಾ? ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಇನ್ನು ಕಾಂಗ್ರೆಸ್​​ನಿಂದ ಸ್ಟಾರ್ ಚಂದ್ರ ಅವರು ಕಣದಲ್ಲಿದ್ದು, ಈಗಾಗಲೇ ಮಂಡ್ಯದಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಇನ್ನು ಸಚಿವ ಚಲುವರಾಯಸ್ವಾಮಿ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಸೇರಿಕೊಂಡು ಈ ಬಾರಿ ಕುಮಾರಸ್ವಾಮಿಯನ್ನು ಸೋಲಿಸಲು ಇನ್ನಿಲ್ಲದ ರಣತಂತ್ರ ಹೆಣೆಯುತ್ತಿದ್ದಾರೆ.

ಇತ್ತ ಜಿಲ್ಲೆಯ ಜೆಡಿಎಸ್​ ನಾಯಕರು ಸಹ ಕಳೆದ ಬಾರಿ ಚುನಾವಣೆಯಲ್ಲಾದ ಯಡವಟ್ಟು ಮತ್ತೆ ಮಾಡದಂತೆ ಬಹಳ ಎಚ್ಚರಿಕೆ ಚುನಾವಣೆ ಹೋರಾಡಲು ತೀರ್ಮಾನಿಸಿದ್ದು, ಕುಮಾರಸ್ವಾಮಿಯನ್ನು ಗೆಲ್ಲಿಸಲೇಬೇಕೆಂದು ಪಣತೊಟ್ಟಿದ್ದಾರೆ. ಆದ್ರೆ, ಕೆಲ ಬಿಜೆಪಿ ನಾಯಕರು ಕುಮಾರಸ್ವಾಮಿಗೆ ಬೆಂಬಲಿಸುತ್ತಾರಾ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಎಲ್​ಆರ್ ಶಿವರಾಮೇಗೌಡ, ನಾರಾಯಣಗೌಡ, ಸುಮಲತಾ ಸೇರಿದಂತೆ ಇನ್ನೂ ಕೆಲ ಬಿಜೆಪಿ ನಾಯಕರು ಕುಮಾರಸ್ವಾಮಿ ಅಂದ್ರೆ ಸಾಕು ಉರಿದು ಬೀಳುತ್ತಾರೆ. ಹೀಗಾಗಿ ಅವರ ನಡೆ ಎನ್ನುವುದು ಕಾದುನೋಡಬೇಕಿದೆ.   ​

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ