ಮಂಡ್ಯ, ಆಗಸ್ಟ್ 28: ಲೋಕಸಭೆ ಚುನಾವಣೆ ಬಳಿಕ ಮಂಡ್ಯ ನಗರಸಭೆ (Mandya Municipal Council) ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಪ್ರತಿಷ್ಠೆಯ ಕಣವಾಯ್ತು. ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ (JDS) ಗೆಲವು ಸಾಧಿಸಿದೆ. ನಗರಸಭೆ ಆವರಣದ ಮುಂಭಾಗ ಜೆಡಿಎಸ್ ಕಾರ್ಯಕರ್ತರು ಸಂಭ್ರಮಾಚರಿಸಿದರು. ನಗರಸಭೆ ಅಧ್ಯಕ್ಷರಾಗಿ ಜೆಡಿಎಸ್ನ ನಾಗೇಶ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಬಿಜೆಪಿಯ ಅರುಣ್ ಕುಮಾರ್ ಆಯ್ಕೆಯಾಗಿದ್ದಾರೆ.
ಮಂಡ್ಯ ನಗರಸಭೆಗೆ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಇಂದು (ಆ.28) ನಡೆಯಿತು. ಜೆಡಿಎಸ್ನ 15 ಸದಸ್ಯರ, ಬಿಜೆಪಿಯ ಇಬ್ಬರು, ಕಾಂಗ್ರೆಸ್ನ ಒಬ್ಬ ಮತ್ತು ಸಂಸದ ಹೆಚ್ಡಿ ಕುಮಾರಸ್ವಾಮಿ ಅವರ ಮತ ಸೇರಿ 19 ಮತಗಳು ಜೆಡಿಎಸ್ಗೆ ಬಂದಿವೆ. 35 ಸದಸ್ಯರ ಬಲ ಹೊಂದಿರುವ ಮಂಡ್ಯ ನಗರಸಭೆಯಲ್ಲಿ ಒಟ್ಟು 18 ಜನ ಜೆಡಿಎಸ್ ಸದಸ್ಯರಿದ್ದಾರೆ. ಬಿಜೆಪಿಯ ಇಬ್ಬರು, ಕಾಂಗ್ರೆಸ್ನ 10 ಮತ್ತು ಪಕ್ಷೇತರ 5 ಸದಸ್ಯರಿದ್ದಾರೆ. ಕಾಂಗ್ರೆಸ್ನ 9 ಸದಸ್ಯರ, ಪಕ್ಷೇತರ 5, ಜೆಡಿಎಸ್ನ 3 ಮತ್ತು ಶಾಸಕ ಗಣಿಗ ರವಿಯ ಮತ ಸೇರಿ ಕಾಂಗ್ರೆಸ್ಗೆ ಒಟ್ಟು 18 ಮತಗಳು ಬಂದಿವೆ.
ಜೆಡಿಎಸ್ ರಾಜ್ಯ ಯುವ ಘಟಕ ನಾಯಕ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಮಂಡ್ಯದ ನಗರಸಭೆ ಗದ್ದುಗೆಯನ್ನು ಜೆಡಿಎಸ್-ಬಿಜೆಪಿ ಹಿಡಿದಿದೆ. 37 ಮತದಾರಲ್ಲಿ 19 ಮಂದಿ ನಮಗೆ ಮತ ಹಾಕಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ನಾವು ಆ ಸವಾಲು ಸ್ವೀಕಾರ ಮಾಡಿದ್ವಿ. ನಮ್ಮ ಸದಸ್ಯರು ಆಮಿಷಕ್ಕೆ ಒಳಗಾಗಲಿಲ್ಲ. ರಾಜಕೀಯ ಅಂದರೆ ಆಮಿಷ ಎಲ್ಲ ಸಹಜ. ಅಂತಿಮವಾಗಿ ನಂಬರ್ ಮುಖ್ಯ. ನಾವು ಆ ನಂಬರ್ನ್ನು ಮುಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಇತರೆ ಚುನಾವಣೆಗಳಲ್ಲಿ ಎನ್ಡಿಎ ಗೆಲ್ಲುತ್ತೆ ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರ ಗಲಾಟೆ, ನಗರಸಭೆ ಕಚೇರಿ ಎದುರು ಹೈಡ್ರಾಮಾ
ವಾಮಮಾರ್ಗದಲ್ಲಿ ಅಧಿಕಾರ ಹಿಡಿದರು ಎಂಬ ಶಾಸಕ ಗಣಿಗ ರವಿ ಹೇಳಿಕೆಗೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಶಾಸಕರ ಪ್ರಕಾರ ವಾಮಮಾರ್ಗದ ಅರ್ಥವೇನು? ಮತದಾನದ ವೇಳೆಯೂ ಕಣ್ಣು, ಕೈ ಸನ್ನೇ ಮೂಲಕ ಹಣದ ಆಮೀಷ ಒಡ್ಡಿದ್ದಾರೆ. ನನ್ನ ಜೀವನದಲ್ಲಿ ಮೊದಲ ಬಾರಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಮತಹಾಕಲು ಬಂದಿದ್ದೇನೆ. ಕಳೆದ 20 ದಿನಗಳಿಂದ ನಡೆದ ರಾಜಕೀಯ ಬೆಳವಣಿಗೆ ಗಮನಿಸಿ ನಾನು ಬರಬೇಕಾಯ್ತು. ಕ್ಯಾಬಿನೆಟ್ ಸಭೆ ಬಿಟ್ಟು ಪ್ರಧಾನಿಮಂತ್ರಿ ಅವರ ಅನುಮತಿ ಪಡೆದು ಮತದಾನದಲ್ಲಿ ಭಾಗವಹಿಸಿದೆ. ಚುನಾವಣೆ ಸೋಲಿನ ಭಯದಲ್ಲಿ ಚುನಾವಣೆ ಮುಂದೂಡುವುದರಲ್ಲಿ ಕಾಂಗ್ರೆಸ್ ನಿಸ್ಸೀಮವಾಗಿದೆ ಎಂದು ವಾಗ್ದಾಳಿ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:27 pm, Wed, 28 August 24