ಮಂಡ್ಯ, ಜುಲೈ 26: ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದ ನವೀನ್ ಎಂಬುವವರ ಎರಡೂ ವರ್ಷದ ಹಳ್ಳಿಕಾರ್ ತಳಿಯ ಎತ್ತ (Hallikar bull) ನ್ನು ಬುಧವಾರ 9.26 ಲಕ್ಷ ರೂ. ದಾಖಲೆಯ ಬೆಲೆಗೆ ತಮಿಳುನಾಡು ಮೂಲದ ಸಿರಿವಾಯ್ ತಂಬಿ ಎನ್ನುವವರು ಖರೀದಿಸಿದ್ದಾರೆ. ಈಗಾಗಲೇ ರಾಜ್ಯ ಸೇರಿದಂತೆ ತಮಿಳುನಾಡಿನಲ್ಲಿ ಹಲವು ಪ್ರಶಸ್ತಿಗಳನ್ನ ಈ ಜಾಗ್ವಾರ್ ಹೆಸರಿನ ಎತ್ತು ಗೆದ್ದಿದೆ. ತಮಿಳುನಾಡಿನಲ್ಲಿ ಹಳ್ಳಿಕಾರು ಎತ್ತು ಸಾಕಷ್ಟು ಹೆಸರು ಗಳಿಸಿದೆ. ಹಾಗಾಗಿ ತಮಿಳುನಾಡಿನಲ್ಲಿ ನಡೆಯುವ ರೇಸ್ನಲ್ಲಿ ಬಳಸಿಕೊಳ್ಳಲು ಜಾಗ್ವಾರ್ ಎತ್ತು ಖರೀದಿ ಮಾಡಲಾಗಿದೆ.
ಹಳ್ಳೀಕಾರ್ ಎತ್ತು ರಾಜ್ಯದಲ್ಲೇ ಅಪರೂಪದ ತಳಿ. ಎರಡು ವರ್ಷ ವಯಸ್ಸಿನ ಎತ್ತನ್ನು ಒಂದು ವರ್ಷದ ಹಿಂದೆ ಒಂದು ಲಕ್ಷ ರೂ. ಕೊಟ್ಟು ಖರೀದಿಸಲಾಗಿತ್ತು. ಕರುವನ್ನ ಪಳಗಿಸಿ ಮನೆ ಮಗನಂತೆ ಪ್ರೀತಿಯಿಂದ ಸಾಕಿ ಬೆಳೆಸಿದ್ದರು. ಮೊದಲಿಂದಲೂ ಎತ್ತಿನ ಗಾಡಿ ರೇಸ್ನಲ್ಲಿ ಆಸಕ್ತಿ ಹೊಂದಿದ್ದ ರೈತ ನವೀನ್ ತನ್ನ
ಹಳ್ಳೀಕಾರ್ ತಳಿಯ ಕರುವನ್ನೂ ರೇಸ್ಗೆ ಪಳಗಿಸಿ ಅದಕ್ಕೆ ಜಾಗ್ವಾರ್ ಎಂದು ನಾಮಕರಣ ಮಾಡಿದ್ದ.
ರೈತ ನವೀನ್ನ ಅದೃಷ್ಟವೋ ಏನೋ ಎಂಬಂತೆ ಅದು ಭಾಗವಹಿಸಿದ ಬಹತೇಕ ಸ್ವರ್ಧೆಗಳಲ್ಲಿ ಬಹುಮಾನ ಗಳಿಸಿತ್ತು. ರಾಜ್ಯದಲ್ಲಿ ಮಾತ್ರವಲ್ಲದೆ ತಮಿಳುನಾಡಿನ ರೇಸ್ಗಳಲ್ಲೂ ಭಾಗವಹಿಸಿ ಗೆದ್ದು ಹೆಸರುಗಳಿಸಿದ್ದ ಆ ಎತ್ತನ್ನ ತಮಿಳುನಾಡಿನ ರೈತರೊಬ್ಬರು ಬರೋಬರಿ 9 ಲಕ್ಷ ರೂಗಳನ್ನ ನೀಡಿ ಖರೀಸಿದ್ದಾರೆ.
ಕಳೆದ ಹಲವು ವರ್ಷಗಳಿಂದಲೂ ಹಳ್ಳಿಕಾರ್ ತಳಿಯ ಎತ್ತುಗಳನ್ನ ಸಾಕಿ, ಎತ್ತಿನ ಗಾಡಿ ರೇಸ್ ಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸುತ್ತಿದ್ದ ರೈತ ನವೀನ್ ಎಂಬುವವರು ಈ ಹಿಂದೆ ಎರಡು ಎತ್ತುಗಳನ್ನ ಸಾಕಿದ್ದರು. ಆ ಎರಡು ಎತ್ತುಗಳ ಪೈಕಿ ಒಂದು ಎತ್ತನ್ನ ಮಾರಾಟ ಮಾಡಿದರೆ ಇನ್ನೊಂದು ಎತ್ತು
ಅನಾರೋಗ್ಯಕ್ಕೆ ತುತ್ತಾಗಿ ಸಾವಿಗೀಡಾಗಿತ್ತು. ಹೀಗಿರುವಾಗಲೇ ಒಂದು ವರ್ಷದ ಹಿಂದೆ ಮಂಡ್ಯದ ಇಂಡುವಾಳು ಗ್ರಾಮದ ರೈತರೊಬ್ಬರಿಂದ 1 ಲಕ್ಷದ 26 ಸಾವಿರ ರೂಗಳನ್ನ ನೀಡಿ, ಒಂದು ವರ್ಷ ಕರುವಾಗಿದ್ದಾಗಲೇ ಈ ಎತ್ತನ್ನ ತಂದಿದ್ದ ನವೀನ್, ಅದನ್ನ ಮಗುವಿನಂತೆ ಸಾಕಿ ಪ್ರೀತಿಯಿಂದ ಹಾರೈಕೆ ಮಾಡಿದ್ದರು.
ಇದನ್ನೂ ಓದಿ: ಕಲ್ಪವೃಕ್ಷಕ್ಕೆ ಕಪ್ಪುತಲೆ ಹುಳುವಿನ ಕಾಟ-ಆತಂಕದಲ್ಲಿ ಮಂಡ್ಯ ಜಿಲ್ಲೆಯ ತೆಂಗು ಬೆಳೆಗಾರರು
ಎತ್ತಿನ ಗಾಡಿ ರೇಸ್ಗೆ ಪಳಗಿಸಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೇರೆ ಎತ್ತಿನ ಸಹಾಯದಿಂದ ರೇಸ್ನಲ್ಲಿ ಭಾಗವಹಿಸ್ತಿದ್ದ ಈ ಜಾಗ್ವಾರ್ ಹಲವು ಬಹುಮಾನ ಪಡೆದಿತ್ತು. ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ ಪಕ್ಕದ ತಮಿಳುನಾಡಿನಲ್ಲೂ ಜಾಗ್ವಾರ್ ಪರಾಕ್ರಮ ಮೆರೆದಿತ್ತು.
ಅಂದಹಾಗೆ ನಮ್ಮ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆದ ರಾಜ್ಯಮಟ್ಟದ ಎತ್ತಿನ ಗಾಡಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದ ಜಾಗ್ವಾರ್ ಹೆಸರಿನ ಈ ಎತ್ತು ನವೀನ್ ಮತ್ತು ಅವರ ಸ್ನೇಹಿತರ ಆಸಕ್ತಿಯಿಂದ ಪಕ್ಕದ ರಾಜ್ಯದ ತಮಿಳುನಾಡಿನಲ್ಲಿ ನಡೆಯುವ ಎತ್ತಿನ ಗಾಡಿ ರೇಸ್ನಲ್ಲೂ ಭಾಗವಹಿಸಿ ಅಲ್ಲಿನ 200, 300 ಎತ್ತಿನ ಗಾಡಿಗಳ ನಡುವೆ ಸತತ ಮೂರು ಬಾರಿ ಹ್ಯಾಟ್ರಿಕ್ ಜಯ ದಾಖಲಿಸಿದ್ದ.
ಆಗಲೇ ತಮಿಳುನಾಡಿನಲ್ಲೂ ಜಾಗ್ವಾರ್ನ ಹವಾ ಶುರುವಾಗಿತ್ತು. ಇಲ್ಲಿಯಂತೆಯೇ ಅಲ್ಲಿನ ಜನರೂ ಸಹ ಈತನ ಸಾಧನೆಯ ಬಗೆಗೆ ಮಾತನಾಡಲು ಆರಂಭಿಸಿದ್ದರು. ಎತ್ತಿನ ಗಾಡಿ ರೇಸ್ನಲ್ಲಿ ನವೀನ್ಗಿಂತಲೂ ಆಸಕ್ತಿ ಹೊಂದಿದ್ದ ತಮಿಳುನಾಡಿನ ಸಿರಿವಾಯ್ ತಂಬಿ ಎಂಬುವವರು ಜಾಗ್ವಾರ್ ನನ್ನ ಖರೀದಿಸಲು
ಮುಂದಾಗಿದ್ದರು.
ಇದನ್ನೂ ಓದಿ: ಬತ್ತಿದ ಕಾವೇರಿ: ಧಾರ್ಮಿಕ ವಿಧಿ ವಿಧಾನ ನೆರವೇರಿಸಿ ನದಿಯಲ್ಲಿ ಮುಳುಗಲಾಗದೆ ತಲೆ ಮೇಲೆ ಚಂಬು ನೀರು ಹಾಕಿಕೊಳ್ಳುತ್ತಿರುವ ಜನ
ತಮಗೆ ಪರಿಚಯವಿದ್ದವರ ಕಡೆಯಿಂದ ನವೀನ್ಗೆ ಜಾಗ್ವಾರ್ ನನ್ನ ತಮಗೆ ಕೊಡುವಂತೆ ಕೇಳಿಕೊಂಡಿದ್ದರು. ಆರಂಭದಲ್ಲಿ ಮಾರಾಟ ಮಾಡುವುದಿಲ್ಲ ಎನ್ನುತ್ತಿದ್ದ ನವೀನ್ 9 ಲಕ್ಷ ರೂ ನೀಡಿದ್ದರಿಂದ ಅದನ್ನ ಸಿರುವಯ್ ತಂಬಿಗೆ ಮಾರಾಟ ಮಾಡಲು ನಿರ್ಧರಿಸಿದ್ದರು. ಇಂದು ಹಣದೊಂದಿಗೆ ಗ್ರಾಮಕ್ಕೆ ಬಂದ ಸಿರಿವಾಯ್ಗೆ ಗ್ರಾಮಸ್ಥರ ಸಮ್ಮುಖದಲ್ಲಿ ವ್ಯಾಪಾರ ನಡೆಸಲಾಗಿದ್ದ ಪೂರ್ತಿ ಹಣವನ್ನ ನೀಡಿದರು.
ಈ ಸಂದರ್ಭದಲ್ಲಿ ನವೀನ್ ಮತ್ತು ಸಂಗಡಿಗರು ಸಿರಿವಾಯ್ ತಂಬಿಯನ್ನ ಸನ್ಮಾನಿಸಿ ಗೌರವಿಸಿದರು. ಈಗಾಗಲೇ ಈ ರೀತಿಯ 50 ಎತ್ತುಗಳನ್ನ ಸಾಕಿರುವ ಸಿರಿವಾಯ್ ತಂಬಿ, ಜಾಗ್ವಾರ್ ನನ್ನೂ ಪ್ರೀತಿಯಿಂದ ಸಾಕುವುದಾಗಿ ಹೇಳಿ ತೆಗೆದುಕೊಂಡು ಹೋದರು.
ಇಷ್ಟು ದಿನ ಪ್ರೀತಿಯಿಂದ ಸಾಕಿ ಬೆಳೆಸಿದ್ದ ಜಾಗ್ವಾರ್ಗೆ ಒಳ್ಳೆ ಬೆಲೆ ಬರುತ್ತಿದ್ದಂತೆ ಮಾರಾಟ ಮಾಡಿದ ನವೀನ್ ಅದನ್ನ ಪಟಾಕಿ ಸಿಡಿಸಿ, ಸಿಹಿಹಂಚುವ ಮೂಲಕ ಸ್ನೇಹಿತರ ಜೊತೆ ಸಂಭ್ರಮದಿಂದ ತಮಿಳುನಾಡಿಗೆ ಬೀಳ್ಕೊಟ್ಟಿದ್ದು ಜಾಗ್ವಾರ್ ಮೇಲಿನ ಪ್ರೀತಿಯನ್ನ ಸಾರುವಂತಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:24 pm, Wed, 26 July 23