ಮೇಲುಕೋಟೆಯಲ್ಲಿಯೂ ಸಲಾಂ ಆರತಿ ಹೆಸರು ತೆಗೆಯಲು ಸ್ಥಾನಿಕರಿಂದ ಮನವಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 31, 2022 | 9:48 AM

ಮುಸ್ಲಿಂ ದಾಳಿಕೋರರಿಂದ ದಾಳಿಯಾದ ಸಂದರ್ಭದಲ್ಲಿ ಅಥವಾ ಟಿಪ್ಪುವಿನ ಕಾಲದಲ್ಲಿ ಸಂಧ್ಯಾರತಿಗೆ ಸಲಾಂ ಪದ ಸೇರಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮೇಲುಕೋಟೆಯಲ್ಲಿಯೂ ಸಲಾಂ ಆರತಿ ಹೆಸರು ತೆಗೆಯಲು ಸ್ಥಾನಿಕರಿಂದ ಮನವಿ
ಮೇಲುಕೋಟೆ ವೈರಮುಡಿ ಉತ್ಸವ
Follow us on

ಮಂಡ್ಯ: ಪ್ರಸಿದ್ಧ ಯಾತ್ರಾಸ್ಥಳ ಮೇಲುಕೋಟೆಯಲ್ಲಿ ಚಾಲ್ತಿಯಲ್ಲಿರುವ ಆರತಿಯನ್ನು ಸಲಾಂ ಆರತಿ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಇದರ ಹೆಸರು ಬದಲಿಸಬೇಕು ಎಂದು ಮೇಲುಕೋಟೆ ಸ್ಥಾನಿಕರಾದ ಶ್ರೀನಿವಾಸ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸಂಧ್ಯಾರತಿ ಹೆಸರು ಉಳಿಸಿಕೊಂಡು, ಸಲಾಂ ಪದವನ್ನು ಕೈ ಬಿಡಬೇಕು ಎಂದು ಅವರು ಕೋರಿದ್ದಾರೆ. ತ್ರಿಕಾಲದಲ್ಲಿಯೂ ದೇವರಿಗೆ ಆರತಿ ಮಾಡುವ ಪದ್ಧತಿ ಎಲ್ಲ ದೇವಾಲಯಗಳಲ್ಲಿಯೂ ಇದೆ. ಸಂಜೆ ವೇಳೆ ಮೇಲುಕೋಟೆ ದೇವಾಲಯದಲ್ಲಿ ನಡೆಯುವ ಸಂಧ್ಯಾರತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮುಸ್ಲಿಂ ದಾಳಿಕೋರರಿಂದ ದಾಳಿಯಾದ ಸಂದರ್ಭದಲ್ಲಿ ಅಥವಾ ಟಿಪ್ಪುವಿನ ಕಾಲದಲ್ಲಿ ಸಂಧ್ಯಾರತಿಗೆ ಸಲಾಂ ಪದ ಸೇರಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮೂಲ ಮೂರ್ತಿಗೆ ಆರತಿಯಾಗುವ ಸಂಧರ್ಭದಲ್ಲಿ ದೇವಾಲಯದ ಹೊರಗಡೆ ದೀವಟಿಗೆ ಸಲಾಂ ಮಾಡಲಾಗುತ್ತೆ. ಬಳಿಕ ದೇವಾಲಯ ಗರ್ಭಗುಡಿಯ ಬಳಿಯು ದೀವಟಿಗೆ ಸಲಾಂ ಮಾಡಲಾಗುತ್ತೆ. ಚಲುವನಾರಾಯಣ ಸ್ವಾಮಿ ಎಲ್ಲಾ ಉತ್ಸವ ಮುಗಿಸಿ ಆಸ್ಥಾನಕ್ಕೆ ಬರುವ ವೇಳೆ ಈ ದೀವಟಿಗೆ ಸಲಾಂ ಮಾಡಲಾಗುತ್ತೆ. ಸಂಧ್ಯಾರತಿಗೆ ಯಾರ ಆಕ್ಷೇಪಣೆಯೂ ಇಲ್ಲ. ಆದ್ರೆ ಇಲ್ಲಿ ಹೇಳಲಾಗುವ ಸಲಾಂ ಪದಕ್ಕೆ ಎಲ್ಲರ ಆಕ್ಷೇಪಣೆ ಇದೆ. ಸಲಾಂ ಪದ ರದ್ದು ಮಾಡಬೇಕು ಎಂದು ಹಲವು ವರ್ಷಗಳಿಂದ ಒತ್ತಾಯಿಸಲಾಗುತ್ತಿದೆ. ಈ ವಿಚಾರವಾಗಿ ಸರ್ಕಾರ ಪರಿಶೀಲನೆ ಮಾಡಬೇಕು ಎಂದು ಕೋಇದರು.

ಟಿಪ್ಪು ನೆರವು ಪಡೆದ ಎಲ್ಲಾ ಕ್ಷೇತ್ರಗಳಲ್ಲೂ ಸಲಾಂ ಮಂಗಳಾರತಿ: ಇತಿಹಾಸಜ್ಞರ ಅಭಿಮತ

ಟಿಪ್ಪುವಿನಿಂದ (Tipu Sultan) ಸಹಾಯ ಪಡೆದ ಎಲ್ಲಾ ಕ್ಷೇತ್ರಗಳಲ್ಲೂ ಆ ಕಾಲದಿಂದಲೂ ಸಲಾಂ ಪೂಜೆ ನಡೆಯುತ್ತಾ ಬಂದಿದೆ ಎಂದು ಹೇಳಿದ್ದಾರೆ. ಇದನ್ನು ಪುಷ್ಟೀಕರಿಸುತ್ತಾ ಇತಿಹಾದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಇತಿಹಾಸ ತಜ್ಞ ಪ್ರೊ. ಮುರುಗೇಶಿ ಇದರ ಬಗ್ಗೆ ಮಾಹಿತಿ ನೀಡಿದ್ದಾರೆ. ಕೊಲ್ಲೂರಿನಲ್ಲಿ ಪ್ರತಿನಿತ್ಯ ಸಂಜೆ ಸಲಾಂ ಪೂಜೆ (Salam Mangalarathi) ಮಾಡುತ್ತಾರೆ. ಟಿಪ್ಪು ಸುಲ್ತಾನನ ಕಾಲದಲ್ಲಿ ಸಲಾಂ ಪೂಜೆ ಆರಂಭವಾಯಿತು. ಇದಕ್ಕೆ ಐತಿಹಾಸಿಕ ಕಾರಣವಿದೆ ಎಂದು ಹೇಳಿದ್ದಾರೆ.

ಟಿಪ್ಪು ಆಡಳಿತ ಕಾಲದಲ್ಲಿ ಮರಾಠರು ಕರಾವಳಿ ಮಲೆನಾಡಿಗೆ ದಾಳಿ ಮಾಡಿದ್ದರು. ಶೃಂಗೇರಿ ಕ್ಷೇತ್ರದ ಮೇಲೆಯೂ ಮರಾಠರು ದಾಳಿ ಮಾಡಿದ್ದರು. ಬಸ್ರೂರಿನ ಮೇಲೂ ಮರಾಠರು ದಾಳಿ ಮಾಡಿದ್ದರು. ತನ್ನ ವ್ಯಾಪ್ತಿಯ ಧಾರ್ಮಿಕ ಕ್ಷೇತ್ರಗಳಿಗೆ ಟಿಪ್ಪು ಈ ವೇಳೆ ಸಹಾಯ ಮಾಡಿದ್ದಾನೆ. ಅನ್ಯಾಯವನ್ನು ಗಮನಿಸಿ ಸಹಾಯ ಮಾಡಿದ್ದಾನೆ. ಶೃಂಗೇರಿ ಪೀಠಾಧಿಪತಿಗಳಿಗೆ ಪತ್ರ ಬರೆದಿದ್ದಾನೆ. ಶೃಂಗೇರಿಗೆ ಅನೇಕ ದಾನ ಧರ್ಮ ನೀಡಿದ್ದಾನೆ. ಶೃಂಗೇರಿಯಲ್ಲೂ ಸಲಾಂ ಪೂಜೆ ನಡೆಯುತ್ತದೆ ಎಂದು ಇತಿಹಾಸದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಬಸ್ರೂರು ಭಾಗದಲ್ಲೇ ಕೊಲ್ಲೂರು ಕ್ಷೇತ್ರ ಬರುತ್ತಿತ್ತು. ಕೊಲ್ಲೂರು ಕ್ಷೇತ್ರಕ್ಕೂ ಟಿಪ್ಪು ಸಂಪೂರ್ಣ ಬೆಂಬಲ ನೀಡಿದ್ದಾನೆ. ಅದಕ್ಕೋಸ್ಕರ ಕೊಲ್ಲೂರಿನಲ್ಲಿ ಸಲಾಂ ಪೂಜೆ ನಡೆಸಲಾಗುತ್ತದೆ. ಟಿಪ್ಪು ಸುಲ್ತಾನ್ ಹಿಂದೂ ವಿರೋಧಿ ಎಂದು ಬಿಂಬಿಸಲ್ಪಟ್ಟಿದ್ದಕ್ಕೂ ಚಾರಿತ್ರಿಕ ದಾಖಲೆಗಳಿಗೂ ತಾಳೆ ಆಗುವುದಿಲ್ಲ. ಮುಸ್ಲಿಂ ಆಡಳಿತಗಾರರಾಗಿದ್ದರೂ ಸಹ ತನ್ನ ಪ್ರಜೆಗಳನ್ನು ಸಮಾನವಾಗಿ ನೋಡುತ್ತಿದ್ದರು. ಇದೆಲ್ಲಾ ಶೃಂಗೇರಿ ಕ್ಷೇತ್ರಕ್ಕೆ ಬರೆದಿರುವ ಪತ್ರಗಳಲ್ಲಿ ಲಭ್ಯವಿದೆ. ತನ್ನ ಆಡಳಿತದಿಂದ ನಿಮಗೆ ಸಹಾಯ ಮಾಡುವುದಾಗಿ ಆತ ಪತ್ರದಲ್ಲಿ ಬರೆದಿದ್ದ, ಬಸ್ರೂರು ಆಗ ಪ್ರಮುಖ ಆಡಳಿತ ಕೇಂದ್ರವಾಗಿತ್ತು. ಟಿಪ್ಪುವಿನಿಂದ ಸಹಾಯ ಪಡೆದ ಎಲ್ಲಾ ಕ್ಷೇತ್ರಗಳಲ್ಲೂ ಸಲಾಂ ಪೂಜೆ ನಡೆಯುತ್ತಾ ಬಂದಿದೆ ಎನ್ನುತ್ತಾರೆ ಪ್ರೊ. ಮುರುಗೇಶಿ.

ಇದನ್ನೂ ಓದಿ: ನಮ್ಮ ಔದಾರ್ಯದಿಂದಾಗಿ ಇದುವರೆಗೆ ದೇವಸ್ಥಾನಗಳಲ್ಲಿ ಸಲಾಂ ಮಂಗಳಾರತಿ ನಡೆಯಿತು, ಇನ್ನು ಮುಂದೆ ಇಲ್ಲ: ಕಲ್ಲಡ್ಕ ಪ್ರಭಾಕರ್ ಭಟ್

ಇದನ್ನೂ ಓದಿ: ಕೊಲ್ಲೂರು ದೇಗುಲದಲ್ಲಿ ಟಿಪ್ಪು ನೆನಪಿಗೆ ನಡೆಯುವ ಸಲಾಂ ಮಂಗಳಾರತಿ ಹೆಸರು ಬದಲಿಸಲು ವಿಶ್ವ ಹಿಂದೂ ಪರಿಷತ್ ಮನವಿ