ಮಂಡ್ಯ, ಜನವರಿ 20: ಪದೇ ಪದೇ ಅಮೇರಿಕಾಕ್ಕೆ ಹೋಗಿ ತಪ್ಪು ಮಾಡುತ್ತಿದ್ದೇನೆ ಎಂದು ಮೇಲುಕೋಟೆ (Melukote MLA) ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ (Dharshan Puttannaiah) ಒಪ್ಪಿಕೊಂಡರು. ಮಂಡ್ಯದಲ್ಲಿ ಮಾತನಾಡಿದ ಅವರು, ಶಾಸಕರಾಗಿ ಆಯ್ಕೆಯಾದ ಏಳು ತಿಂಗಳಲ್ಲಿ ನಾಲ್ಕು ಬಾರಿ ಅಮೇರಿಕಾಗೆ ಹೋಗಿರುವುದು ನಿಜ. ಹೀಗೆ ಮಾಡುವುದು ತಪ್ಪೆಂದು ಗೊತ್ತಿದೆ. ನನ್ನ ಕೆಲವು ವೈಯಕ್ತಿಕ ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸಿಕೊಳ್ಳಲು ಹೋಗುತ್ತಿದ್ದೇನೆ ಅಷ್ಟೆ ಎಂದು ಸ್ಪಷ್ಟನೆ ನೀಡಿದರು.
ಪದೇ ಪದೇ ಅಮೇರಿಕಾಗೆ ತೆರಳಿದ್ದ ಶಾಸಕರ ಮೇಲೆ ಮತದಾರರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಕ್ಷೇತ್ರದಲ್ಲಿ ಅವರ ವಿರುದ್ಧ ಅಸಮಾಧಾನ ವ್ಯಕ್ತವಾಗಿತ್ತು. ಶಾಸಕರು ಜನರ ಕೈಗೆ ಸಿಗುತ್ತಿಲ್ಲ ಎಂಬ ಆರೋಪಗಳೂ ಕೇಳಿಬಂದಿದ್ದವು.
ಪದೇ ಪದೇ ಅಮೆರಿಕಕ್ಕೆ ಭೇಟಿ ನೀಡುತ್ತಿರುವುದು ತಪ್ಪೆಂದು ಗೊತ್ತಿದೆ. ಆದರೆ, ಕೆಲವು ವೈಯಕ್ತಿಕ ಸಮಸ್ಯೆಗಳ ಕಾರಣ ಅನಿವಾರ್ಯವಾಗಿದೆ. ನನ್ನ ಹೆಂಡತಿ-ಮಕ್ಕಳು ಇದ್ದು ಅಲ್ಲಿಗೆ ತೆರಳಬೇಕಾಗಿ ಬಂದಿದೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಿಕೊಳ್ಳುತ್ತೇನೆ. ನಾನು ಹೋಗುತ್ತಿರುವುದನ್ನು ಸಮರ್ಥಿಸಿಕೊಳ್ಳುತ್ತಿಲ್ಲ ಎಂದು ಅವರು ಹೇಳಿದರು.
ನಾನು ಅಮೆರಿಕಕ್ಕೆ ತೆರಳಿದ್ದರೂ ಇಲ್ಲಿ ಕೆಲಸ ಮಾಡಲು ತಂಡವನ್ನು ಇಟ್ಟಿದ್ದೇನೆ. ಇಲ್ಲಿ ನನ್ನ ತಂಡದವರು ಆಗಬೇಕಾದ ಕೆಲಸ ಮಾಡುತ್ತಿದ್ದಾರೆ. ನಾವು ಇಲ್ಲಿಯವರೆಗೆ ಬ್ಯಾಂಡೆಡ್ ಹಾಕೋಂಡು ಬರ್ತಿದ್ದೇವೆ. ಕ್ಷೇತ್ರದಲ್ಲಿ ಫೋನ್ ಮಾಡಿ ಹೇಳಿದ್ರೆ ಮಾತ್ರ ಯಾವುದಾದರು ಕೆಲಸ ಆಗೋದು. ನಮ್ಮ ಕ್ಷೇತ್ರದಲ್ಲಿ 5 ರಿಂದ 10 ಸಾವಿರ ಜನಕ್ಕೆ ಕೆಲಸ ಮಾಡಿಕೊಡಲು ಅಷ್ಟೇ ಸಾಧ್ಯ. ಜನರು ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ನಾನು ಅದನ್ನು ಅಧಿಕಾರಿಗೆ ಹೇಳಿ ಮಾಡಿಸುತ್ತೇನೆ ಅಷ್ಟೆ. ಜನರ ಸಮಸ್ಯೆಗಳು ಬೇಗ ಪರಿಹಾರ ಆಗಬೇಕು. ಶಾಸಕನ ಬಳಿ ಬರುವುದಕ್ಕಿಂತ ಸರ್ಕಾರಿ ಕಚೇರಿ ಬಳಿಗೆ ಹೋಗಬೇಕು. ವ್ಯವಸ್ಥೆ ಬದಲಾವಣೆಯಾಗಬೇಕು ಎಂದು ಅವರು ಹೇಳಿದರು.
ಇದನ್ನೂ ಓದಿ: ಗೆದ್ದ 5 ತಿಂಗಳಲ್ಲಿ ಮೂರನೇ ಬಾರಿ ಅಮೆರಿಕಕ್ಕೆ ಹಾರಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ: ಆಕ್ರೋಶ ವ್ಯಕ್ತಪಡಿಸಿದ ಕ್ಷೇತ್ರದ ಜನರು
ನಾನು ಈಗಾಗಲೇ ನನ್ನ ಕಂಪನಿಗಳನ್ನು ಮಾರಾಟ ಮಾಡಿದ್ದೇನೆ. 2021 ರ ಮೇ 21 ರಲ್ಲಿ ಕಂಪನಿಗಳು ಮಾರಾಟವಾಗಿವೆ. ಗೂಗಲ್ನಲ್ಲಿ ಚೆಕ್ ಮಾಡಿ ನೋಡಿ. ಈಗ ಆ ಕಂಪನಿಗಳಿಗೂ ನನಗೂ ಸಂಬಂಧ ಇಲ್ಲ. ಮೈಸೂರಿನಲ್ಲೂ ಸಹ ನನ್ನ ಆಫಿಸ್ ಇತ್ತು. ಅದರ ಮಾಲೀಕರ ಹೆಸರು ಕೂಡ ಬೇರೆ ಇದೆ. ಸಣ್ಣಪುಟ್ಟ ವ್ಯತ್ಯಾಸಗಳನ್ನು ಸರಿಪಡಿಸಿಕೊಳ್ತೇನೆ ಎಂದು ದರ್ಶನ ಪುಟ್ಟಣ್ಣಯ್ಯ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ