ಮಂಡ್ಯದಲ್ಲಿ ಮತ್ತೆ ಶಾಸಕ ಸಂಸದೆ ಜಟಾಪಟಿ: ಸುಮಲತಾ ವಿರುದ್ಧ ಸುರೇಶ್ ಗೌಡ ವಾಗ್ದಾಳಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 27, 2022 | 1:07 PM

ಕರ್ನಾಟಕ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದಾಗ ಸಂಸದೆ ಸುಮಲತಾ ದಿಶಾ ಸಭೆ ನಡೆಸಿದರು. ಅಧಿವೇಶನದಲ್ಲಿದ್ದ ಕಾರಣ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎನ್ನುವುದು ಶಾಸಕ ಸುರೇಶ್ ಗೌಡ ಅವರ ಆರೋಪವಾಗಿದೆ.

ಮಂಡ್ಯದಲ್ಲಿ ಮತ್ತೆ ಶಾಸಕ ಸಂಸದೆ ಜಟಾಪಟಿ: ಸುಮಲತಾ ವಿರುದ್ಧ ಸುರೇಶ್ ಗೌಡ ವಾಗ್ದಾಳಿ
ಮಂಡ್ಯ ಸಂಸದೆ ಸುಮಲತಾ ಮತ್ತು ಸುರೇಶ್​ಗೌಡ
Follow us on

ಮಂಡ್ಯ: ಹಲವು ದಿನಗಳಲ್ಲಿ ಒಂದಲ್ಲಾ ಕಾರಣದಿಂದ ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಮತ್ತು ವಿವಿಧ ಶಾಸಕರ ನಡುವೆ ಜಟಾಪಟಿ ನಡೆಯುತ್ತಲೇ ಇದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ನಡುವೆ ಸಮನ್ವಯಕ್ಕಾಗಿ ಜಿಲ್ಲಾ ಮಟ್ಟದಲ್ಲಿ ನಡೆಸುವ ‘ದಿಶಾ’ (District Development Coordination and Monitoring Committee – DISHA) ಸಭೆ ಇದೀಗ ಶಾಸಕರು ಮತ್ತು ಸಂಸದರ ನಡುವಣ ವಿವಾದಕ್ಕೆ ನೆಪವಾಗಿ ಒದಗಿಬಂದಿದೆ. ಕರ್ನಾಟಕ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದಾಗ ಸಂಸದೆ ಸುಮಲತಾ ದಿಶಾ ಸಭೆ ನಡೆಸಿದರು. ಅಧಿವೇಶನದಲ್ಲಿದ್ದ ಕಾರಣ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎನ್ನುವುದು ಶಾಸಕ ಸುರೇಶ್ ಗೌಡ ಅವರ ಆರೋಪವಾಗಿದೆ.

‘ಸಂಸದೆ ಸುಮಲತಾ ಹೇಗೆ ಯೋಚಿಸುತ್ತಾರೆ ಎನ್ನುವುದು ನಮಗೆ ಅರ್ಥವಾಗಿದೆ. ನಾವು ಏನು ಮಾತನಾಡಿದರೂ ಅದನ್ನೇ ಅವರು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಕ್ಷೇತ್ರಕ್ಕೆ ಜಗಳ ಮಾಡುವುದಕ್ಕೆಂದೇ ಅವರು ಬರುತ್ತಾರೆ ಎಂದು ಮಂಡ್ಯದಲ್ಲಿ ನಾಗಮಂಗಲ ಶಾಸಕ ಸುರೇಶ್ ಗೌಡ ಹೇಳಿದರು. ನಾವ್ಯಾರೂ ಕ್ಷೇತ್ರಗಳಲ್ಲಿ ಇರುವುದಿಲ್ಲ. ನಾವೆಲ್ಲರೂ ನಿಷ್ಪ್ರಯೋಜಕರು. ಕ್ಷೇತ್ರಕ್ಕೆ ಅನುದಾನ ತರಲೂ ನಮ್ಮಿಂದ ಸಾಧ್ಯವಾಗಿಲ್ಲ ಎಂದು ಸುಮಲತಾ ಭಾವಿಸಿರುವಂತಿದೆ. ಇನ್ನೊಂದು ವರ್ಷದ ನಂತರ ಜನರೇ ಈ ಬಗ್ಗೆ ತೀರ್ಪು ಕೊಡಲಿದ್ದಾರೆ ಎಂದು ವ್ಯಂಗ್ಯವಾಡಿದರು.

ನಮ್ಮನ್ನ ಹೊರಗಿಟ್ಟು ದಿಶಾ ಸಭೆ ಮಾಡಿದಾಗಲೇ ಇವರ ಬುದ್ಧಿ ನಮಗೆ ಅರ್ಥವಾಗಿದೆ. ವಿಧಾನಸಭೆ ನಡೆಯುವಾಗ ದರ್ಖಾಸ್ತು ಸಭೆಯನ್ನೂ ಕರೆಯುವಂತಿಲ್ಲ. ಅಂಥದ್ದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ವಿಮರ್ಶಿಸುವ ‘ದಿಶಾ’ ಸಭೆ ನಡೆಸಿದ್ದಾರೆ. ನಾವು ವಿಧಾನಸಭೆಯಲ್ಲಿ ಇರಬೇಕಾ ಅಥವಾ ದಿಶಾ ಸಭೆಗೆ ಹೋಗಬೇಕಾ ಎಂದು ಅವರು ಪ್ರಶ್ನಿಸಿದರು.

ಸ್ಪೀಕರ್ ಸೂಚನೆ ಮನ್ನಿಸಿ ನಾವು ಅಧಿವೇಶನದಲ್ಲಿ ಪಾಲ್ಗೊಂಡಿದ್ದೆವು. ನಾವು ಸಭೆಗೆ ಬಂದರೆ ಸಮಸ್ಯೆ ಬಗ್ಗೆ ನೇರವಾಗಿ ಮಾತನಾಡುತ್ತೇವೆ. ಯಾವುದೇ ಕಾರಣದಿಂದ ನಾವು ಸಭೆಗೆ ಗೈರು ಹಾಜರಾದರೆ ಅವರೊಬ್ಬರೇ ಅಧಿಕಾರಿಗಳನ್ನು ಏನು ಬೇಕಾದರೂ ಹೆದರಿಸಿಕೊಳ್ಳಬಹುದು ಎಂದು ಅವರು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಸುಮಲತಾ ವಿರುದ್ಧ ಜೆಡಿಎಸ್ ಶಾಸಕರ ಟಾಕ್ ವಾರ್; ಬಹಿರಂಗ ಚರ್ಚೆಗೆ ಆಹ್ವಾನಿಸಿದ ಡಿಸಿ ತಮ್ಮಣ್ಣ

ಇದನ್ನೂ ಓದಿ: ಮಂತ್ರಿಗಳಿಗೆ ಲೆಟರ್ ಕೊಟ್ಟು ಫೋಟೊ ಹಾಕಿದ್ರೆ ಪ್ರಯೋಜನವಿಲ್ಲ, ಮಂಡ್ಯಕ್ಕೆ ಏನು ಅನುದಾನ ತಂದಿದ್ದೀರಿ?: ಸುಮಲತಾಗೆ ರವೀಂದ್ರ ಶ್ರೀಕಂಠಯ್ಯ ಪ್ರಶ್ನೆ