ಪಾಳು ಬಿದ್ದ ಬಾವಿಯಲ್ಲಿ ನವಜಾತ ಗಂಡು ಮಗು ಪತ್ತೆ; ತಾಯಿಯ ಕೃತ್ಯಕ್ಕೆ ಗ್ರಾಮಸ್ಥರ ಹಿಡಿಶಾಪ
ಪಾಂಡವಪುರ ತಾಲೂಕಿನ ಚಂದ್ರೆ ಗ್ರಾಮದ ಪಾಳು ಬಾವಿಯಲ್ಲಿ ನವಜಾತ ಗಂಡು ಶಿಶು ಪತ್ತೆಯಾಗಿದೆ. ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ನವಜಾತ ಶಿಶು ರಕ್ಷಣೆ ಮಾಡಿದ್ದಾರೆ.
ಮಂಡ್ಯ: ಪಾಂಡವಪುರ ತಾಲೂಕಿನ ಚಂದ್ರೆ ಗ್ರಾಮದ ಪಾಳು ಬಾವಿಯಲ್ಲಿ ನವಜಾತ ಗಂಡು ಶಿಶು(New Born Baby) ಪತ್ತೆಯಾಗಿದೆ. ದುಷ್ಕರ್ಮಿಗಳು ರಸ್ತೆ ಬದಿಯ 30 ಅಡಿ ಆಳದ ಪಾಳು ಬಾವಿಗೆ ಶಿಶು ಎಸೆದು ಹೋಗಿದ್ದಾರೆ. ತೋಟಕ್ಕೆ ರೈತ ಮಹಿಳೆ ಹೋಗುವಾಗ ಶಿಶು ಆಕ್ರಂದನದ ಸದ್ದು ಕಿವಿಗೆ ಬಿದ್ದಿದೆ. ಅಳುತ್ತಿದ್ದ ಮಗುವಿನ್ನ ಕಂಡ ಮಹಿಳೆ ನಂತರ ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದ್ದಾರೆ. ಈ ವೇಳೆ ಮಗುವಿನ ಪಕ್ಕ ಹಾವು ಇರುವ ದೃಶ್ಯ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು ತಕ್ಷಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸ್ಥಳೀಯರ ಮಾಹಿತಿ ಮೇರೆಗೆ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು ಗ್ರಾಮದ ವ್ಯಕ್ತಿಯೋರ್ವ ಬಾವಿಗೆ ಇಳಿದು ಮಗುವಿನ ರಕ್ಷಣೆ ಮಾಡಿದ್ದಾರೆ. ಬಳಿಕ ಮಗುವಿಗೆ ಎದೆ ಹಾಲುಣಿಸಿ ಗ್ರಾಮದ ಮಹಿಳೆ ಮಾನವೀಯತೆ ಮೆರೆದಿದ್ದಾರೆ. ನಂತರ ಮಗುವನ್ನು ಆರೈಕೆ ಮಾಡಿದ್ದಾರೆ. ಈ ಬಗ್ಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಮಾಹಿತಿ ನೀಡಿದ ನಂತರ ಪಾಂಡವಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿದೆ. ಕಸ ಕಡ್ಡಿಯೇ ತುಂಬಿದ್ದ ಹಾಗೂ ಪಕ್ಕದಲ್ಲೇ ಹಾವಿದ್ದರೂ ಪವಾಡ ಸದೃಶ್ಯ ರೀತಿಯಲ್ಲಿ ನವಜಾತ ಶಿಶು ಬದುಕುಳಿದಿದೆ. ಆಗ ತಾನೇ ಜನಿಸಿರುವ ಗಂಡು ಮಗವನ್ನು ಪಾಳು ಬಾವಿಗೆ ಎಸೆದಿದ್ದು ತಾಯಿ ಕೃತ್ಯಕ್ಕೆ ಗ್ರಾಮಸ್ಥರು ಹಿಡಿಶಾಪ ಹಾಕಿದ್ದಾರೆ. ಶಿಶುವಿನ ಮುಖ ಮತ್ತು ದೇಹದ ಕೆಲವು ಭಾಗಗಳಲ್ಲಿ ಇರುವೆ ತುಂಬಿದ್ದು, ಇರುವೆ ಕಚ್ಚಿರುವ ಗುರುತುಗಳಾಗಿವೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗು ಆರೋಗ್ಯಕರವಾಗಿ ಇದೆ ಯಾವುದೇ ಆಪಾಯವಿಲ್ಲ ಎಂದು ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದಾರೆ. ಬಾವಿ ಮೇಲಿಂದ ಎಸೆದಿರುವ ಕಾರಣ ಮಗು ಬೆನ್ನ ಹಿಂದೆ ಸಣ್ಣ ಪುಟ್ಟ ಗಾಯವಾಗಿದೆ. ಇನ್ನೂ 10, 15 ದಿನ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತೆ. ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೀಡಲಾಗುವುದು ಎಂದು ಮಂಡ್ಯ ಮಿಮ್ಸ್ ವೈದ್ಯಕೀಯ ಅಧಿಕಾರಿಗಳು ಮಾಹಿತಿ ನೀಡಿದರು.
ಕೆಂಪೇಗೌಡ ಏರ್ಪೋರ್ಟ್ನಲ್ಲಿ 5 ಲಕ್ಷ ಮೌಲ್ಯದ ಚಿನ್ನ ಜಪ್ತಿ
ಅಕ್ರಮವಾಗಿ ಒಳ ಉಡುಪಿನಲ್ಲಿ ಚಿನ್ನ ಸಾಗಿಸುತ್ತಿದ್ದ ಮಹಿಳೆಯನ್ನು ಬೆಂಗಳೂರು ಕೆಂಪೇಗೌಡ ಏರ್ಪೋರ್ಟ್ನಲ್ಲಿ ವಶಕ್ಕೆ ಪಡೆಯಲಾಗಿದೆ. ಹಾಗೂ ಆಕೆಯ ಬಳಿ ಇದ್ದ 15,42,750 ರೂಪಾಯಿ ಮೌಲ್ಯದ 302 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ಕೆಂಪೇಗೌಡ ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳಿಂದ ವಿಚಾರಣೆ ನಡೆಯುತ್ತಿದೆ. ಬ್ಯಾಂಕಾಕ್ನಿಂದ ವಿಮಾನದಲ್ಲಿ ಅಕ್ರಮವಾಗಿ ಚಿನ್ನ ತಂದಿದ್ದ ಮಹಿಳೆ ಚಿನ್ನವನ್ನು 5 ಪೀಸ್ಗಳಾಗಿ ಮಾಡಿ ಉಳ ಉಡುಪಿನಲ್ಲಿಟ್ಟಿದ್ದಳು.
ಸ್ಕಿಡ್ ಆಗಿ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಸಾವು
ಕೋಲಾರ: ನಗರದ ಎಪಿಎಂಸಿ ಮಾರ್ಕೆಟ್ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತನ ಶವವನ್ನು ಶವಾಗಾರಕ್ಕೆ ಸ್ಥಳಾಂತರ ಮಾಡಲಾಗಿದ್ದು ಮೃತನ ಹೆಸರು ತಿಳಿದು ಬಂದಿಲ್ಲ. ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:15 am, Sat, 17 September 22