NHAI ಅಧಿಕಾರಿಗಳ ನಿರ್ಲಕ್ಷ್ಯ, ಬೆಂಗಳೂರು-ಮೈಸೂರು ಹೆದ್ದಾರಿಗೆ ಅವಳಡಿಸಿದ್ದ ಎಎನ್​ಪಿಆರ್ ಕ್ಯಾಮರಾಗಳು ಮೂರೇ ದಿನಕ್ಕೆ ಬಂದ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 03, 2023 | 3:05 PM

ಸಾವಿನ ಹೆದ್ದಾರಿ ಎಂತಲೇ ಅಪಖ್ಯಾತಿ ಪಡೆದಿರುವ ನೂತನ ಬೆಂಗಳೂರು-ಮೈಸೂರು ದಶಪಥ ರಸ್ತೆಯಲ್ಲಿ ಅಪಘಾತಗಳನ್ನ ಕಡಿಮೆ ಮಾಡಲು ಈಗಾಗಲೇ NHAIಅಧಿಕಾರಿಗಳು ಹಲವು ಕ್ರಮಗಳನ್ನ ತೆಗೆದುಕೊಂಡಿದ್ದಾರೆ. ಈ ಹಿನ್ನಲೆ ವೇಗದ ಮಿತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮೂರು ದಿನಗಳ ಕೆಳಗೆ ಅಳವಡಿಸಿದ್ದ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಎಎನ್​ಆರ್​ಪಿ(ANRP) ಕ್ಯಾಮರಾಗಳು ಮೂರೇ ದಿನಕ್ಕೆ ಬಂದ್ ಆಗಿವೆ.

NHAI ಅಧಿಕಾರಿಗಳ ನಿರ್ಲಕ್ಷ್ಯ, ಬೆಂಗಳೂರು-ಮೈಸೂರು ಹೆದ್ದಾರಿಗೆ ಅವಳಡಿಸಿದ್ದ ಎಎನ್​ಪಿಆರ್ ಕ್ಯಾಮರಾಗಳು ಮೂರೇ ದಿನಕ್ಕೆ ಬಂದ್
ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್​​ ವೇ
Follow us on

ಮಂಡ್ಯ, ಆ.3: ಸದಾ ಒಂದಿಲ್ಲೊಂದು ವಿವಾದಗಳಿಂದ ಸಾವಿನ ಹೆದ್ದಾರಿಯಂತಲೇ ಅಪಖ್ಯಾತಿ ಪಡೆದಿರುವ ನೂತನ ಬೆಂಗಳೂರು-ಮೈಸೂರು ದಶಪಥ ರಸ್ತೆಯಲ್ಲಿ ಇತ್ತೀಚೆಗೆ ಅಪಘಾತಗಳ(Accidents) ಸಂಖ್ಯೆ ಹೆಚ್ಚಳವಾಗಿ ಸಾವು ನೋವುಗಳ ಸಂಖ್ಯೆ ಕೂಡ ಹೆಚ್ಚಳವಾಗಿದೆ. ಈ ನಿಟ್ಟಿನಲ್ಲಿ ಅಪಘಾತಗಳನ್ನ ತಡೆಗಟ್ಟಲು ಎನ್​ಹೆಚ್​ಎಐ ಹಾಗೂ ಪೊಲೀಸ್ ಇಲಾಖೆ ಹಲವು ಸುರಕ್ಷತಾ ಕ್ರಮಗಳನ್ನ ವಹಿಸಿದೆ. ಈ ನಿಟ್ಟಿನಲ್ಲಿ ಒಂದೆಡೆ ಆಗಸ್ಟ್ 1ರಿಂದ ಹೆದ್ದಾರಿಯಲ್ಲಿ ಬೈಕ್, ಆಟೋ, ಟ್ಯಾಕ್ಟರ್​ಗಳ ಸಂಚಾರಕ್ಕೆ ಬ್ರೇಕ್ ಹಾಕಿ, ಸರ್ವಿಸ್ ರಸ್ತೆಯಲ್ಲಿ ಸಂಚರಿಸುವಂತೆ ಆದೇಶ ಮಾಡಿದೆ. ಮತ್ತೊಂದೆಡೆ ವೇಗದ ಮಿತಿಗೆ ಕಡಿವಾಣ ಹಾಕಲು ಹೆದ್ದಾರಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ANRP(Automatic Number Plate Recognition Camera) ಕ್ಯಾಮರಾವನ್ನ ಎರಡು ಕಡೆಗಳಲ್ಲಿ ಅವಳಡಿಕೆ ಮಾಡಲಾಗಿದೆ. ಆದರೆ, ಇದು ಅಳವಡಿಸಿದ ಮೂರೇ ದಿನಕ್ಕೆ ಬಂದ್​ ಆಗಿದೆ.

ಈ ಎಎನ್​ಆರ್​ಪಿ ಕ್ಯಾಮರಾಗಳು ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತವೆ. ಅಲ್ಲದೆ ವಾಹನಗಳ ನಂಬರ್ ಪ್ಲೇಟ್​ಗಳನ್ನ ರೀಡ್ ಮಾಡಿ, 100 ಕಿಲೋ ಮೀಟರ್​ಗಿಂತಲೂ ವೇಗವಾಗಿ ಸಂಚಾರ ಮಾಡಿದ್ರೆ, ಅಂತಹ ವಾಹನಗಳ ಮಾಹಿತಿಯನ್ನು ಎನ್​ಹೆಚ್​ಎಐ ಕಂಟ್ರೋಲ್ ರೂಮ್ ಹಾಗೂ ಪೊಲೀಸ್ ಇಲಾಖೆಗೂ ಕೂಡ ಮಾಹಿತಿ ಕೊಡುತ್ತದೆ. ಅದರ ಆಧಾರದ ಮೇಲೆ ಪೊಲೀಸರು ವಾಹನ ಸವಾರಿಗೆ ದಂಡ ವಿಧಿಸಬಹುದಾಗಿದೆ. ಆದರೆ, ಕ್ಯಾಮರಾಗಳು ಅಳವಡಿಕೆ ಮಾಡಿ ಮೂರೇ ದಿನದಲ್ಲಿ ಬಂದ್ ಆಗಿದ್ದು, ಎನ್​ಹೆಚ್​ಎಐ ನಿರ್ಲಕ್ಷ್ಯ ತೋರಿದೆ.

ಇದನ್ನೂ ಓದಿ:CM Reviews Expressway: ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ವೀಕ್ಷಣೆಗೆ ದುಂದುವೆಚ್ಚ ಯಾಕೆ ಮುಖ್ಯಮಂತ್ರಿಯವರೇ?

ಅಂದಹಾಗೆ ಮಂಡ್ಯ ತಾಲೂಕಿನ ಉಮ್ಮಡಹಳ್ಳಿ ಗೇಟ್ ಹಾಗೂ ರಾಮನಗರ ತಾಲೂಕಿನ ಬಿಡದಿ ಬಳಿ ಈ ಎಎನ್​ ಪಿಆರ್ ಕ್ಯಾಮರಾಗಳನ್ನು ಅವಳಡಿಕೆ ಮಾಡಲಾಗಿದೆ. ಇನ್ನು ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಳವಾದ ಹಿನ್ನೆಲೆಯಲ್ಲಿ ಜುಲೈ 29ರಂದು ಉಮ್ಮಡಹಳ್ಳಿ ಗೇಟ್ ಬಳಿ ಸಿಎಂ ದಶಪಥ ರಸ್ತೆ ವೀಕ್ಷಣೆ ಮಾಡಿ ಅಧಿಕಾರಿಗಳ ಜೊತೆ ಚರ್ಚೆ ಕೂಡ ನಡೆಸಿದ್ದರು. ಸಿಎಂ ಅವರು ಬರುತ್ತಾರೆ ಎಂದೇ ಜುಲೈ 29 ರಂದು ಕ್ಯಾಮರಾಗಳನ್ನ ಅಳವಡಿಕೆ ಮಾಡಿ ಅನೇಕ ಕ್ರಮಗಳನ್ನ ತೆಗೆದುಕೊಂಡಿದ್ದೇವೆ ಎಂದು ಎನ್​ಹೆಚ್​ಎಐ ಅಧಿಕಾರಿಗಳು ಬಡಾಯಿ ಕೊಚ್ಚಿಕೊಂಡಿದ್ದರು. ಆದರೆ, ಬಂದು ಹೋದ ಮೂರೇ ದಿನಕ್ಕೆ ಕ್ಯಾಮರಾಗಳು ಬಂದ್ ಆಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿವೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ NHAI ಅಧಿಕಾರಿಗಳು

ಇನ್ನು ಇದಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಲು ಎನ್​ಹೆಚ್​ಎಐ ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ. ಒಟ್ಟಾರೆ ಅಪಘಾತಗಳನ್ನ ತಡೆಗಟ್ಟುವ ಸಲುವಾಗ ಅಳವಡಿಕೆ ಮಾಡಲಾಗಿದ್ದ ಕ್ಯಾಮರಾಗಳು ಮೂರೇ ದಿನಕ್ಕೆ ಬಂದ್ ಆಗಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಂತೆ ಆಗಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:35 pm, Thu, 3 August 23