ಮಂಡ್ಯದಲ್ಲಿ ಎಗ್ಗಿಲ್ಲದೆ ಸಾಗಿದೆ ಪುಡಿ ರೌಡಿಗಳ ಅಟ್ಟಹಾಸ: ರೌಡಿ ಶೀಟರ್ಗಳ ಮನೆಗೆ ನುಗ್ಗಿ ಪೊಲೀಸರ ಖಡಕ್ ವಾರ್ನಿಂಗ್
ದಂತಗಳನ್ನು ಮಾರಾಟ ಮಾಡಲು ಯತ್ನಿಸಿದ ನಾಲ್ವರನ್ನ ಬಂಧಿಸಿರುವಂತಹ ಘಟನೆ ಹುಣಸೂರಿನಲ್ಲಿ ನಡೆದಿದೆ. ಕೃತ್ಯಕ್ಕೆ ಬಳಸಿದ್ದ ವಾಹನ ವಶಕ್ಕೆ ಪಡೆಯಲಾಗಿದೆ.
ಮಂಡ್ಯ: ನಗರದಲ್ಲಿ ಎಗ್ಗಿಲ್ಲದೆ ಪುಡಿ ರೌಡಿ (Rowdies) ಗಳ ಅಟ್ಟಹಾಸ ಮುಂದುವರೆದಿದ್ದು, ಕಳೆದೆರೆಡು ತಿಂಗಳಿಂದ ಮಂಡ್ಯ ಜಿಲ್ಲಾದ್ಯಂತ ಅಪರಾಧ ಪ್ರಕರಣಗಳು ಗಣನೀಯ ಏರಿಕೆಯಾಗಿದೆ. ಕೊಲೆ, ಕೊಲೆಯತ್ನ ದಂತ ಗಂಭೀರ ಅಪರಾಧ ಪ್ರಕರಣಗಳಿಗೆ ಮಂಡ್ಯ ಜಿಲ್ಲೆ ಸಾಕ್ಷಿಯಾಗಿದೆ. ನಿನ್ನೆ ನಡೆದ ಕೆ.ಡಿ.ಪಿ ಸಭೆಯಲ್ಲೂ ಈ ಕುರಿತು ಶಾಸಕರು ಚರ್ಚಿಸಿದ್ದು, ಸಭೆಯಲ್ಲಿ ಪೊಲೀಸರಿಗೆ ಶಾಸಕರು ಚುರುಕು ಮುಟ್ಟಿಸಿದರು. ಈ ಹಿನ್ನಲೆ ರಾತ್ರೊ ರಾತ್ರಿ ಮಂಡ್ಯ ಪೊಲೀಸರಿಂದ ಸ್ಪೆಷಲ್ ಡ್ರೈವ್ ಸಿದ್ಧ ಪಡಿಸಿದ್ದು, ಮಂಡ್ಯ ಎಸ್.ಪಿ ಯತೀಶ್ ಹಾಗೂ ಎ.ಎಸ್.ಪಿ. ವೇಣುಗೋಪಾಲ್ರಿಂದ ನೈಟ್ ರೌಂಡ್ಸ್ ಹಾಕಿದರು. ರೌಡಿ ಶೀಟರ್ ಮನೆಗೆ ನುಗ್ಗಿ ಪೊಲೀಸರು ಖಡಕ್ ವಾರ್ನಿಂಗ್ ನೀಡಿದ್ದು, ರೌಡಿ ಶೀಟರ್ಗಳ ಮನೆಗಳಿಗೆ ಹೋಗಿ ಎಚ್ಚರಿಕೆಯ ಸಂದೇಶ ನೀಡುವುದರೊಂದಿಗೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದಂತೆ ವಾರ್ನಿಂಗ್ ನೀಡಲಾಗಿದೆ. ರೌಡಿ ಶೀಟರ್ಗಳಾದ ಪೈ, ದಿಲ್ ಮಂಜ ಸೇರಿದಂತೆ ಹತ್ತಾರು ರೌಡಿಗಳ ಮನೆಗೆ ಪೊಲೀಸರು ವಿಸಿಟ್ ನೀಡಿದರು.
ದಂತಗಳನ್ನು ಮಾರಾಟ ಮಾಡಲು ಯತ್ನಿಸಿದ ನಾಲ್ವರ ಬಂಧನ
ಮೈಸೂರು: ದಂತಗಳನ್ನು ಮಾರಾಟ ಮಾಡಲು ಯತ್ನಿಸಿದ ನಾಲ್ವರನ್ನ ಬಂಧಿಸಿರುವಂತಹ ಘಟನೆ ಹುಣಸೂರಿನಲ್ಲಿ ನಡೆದಿದೆ. ಕೃತ್ಯಕ್ಕೆ ಬಳಸಿದ್ದ ವಾಹನ ವಶಕ್ಕೆ ಪಡೆಯಲಾಗಿದೆ. ವೀರನಹೊಸಹಳ್ಳಿ ವನ್ಯಜೀವಿ ವಲಯದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಹುಣಸೂರಿನಲ್ಲಿ ಆನೆ ದಂತ ಮಾರಾಟ ಮಾಡಲು ಯತ್ನಿಸಿದ್ದು, ಖಚಿತ ಮಾಹಿತಿ ಆಧಾರಿಸಿ ಕಾರ್ಯಾಚರಣೆ ಮಾಡಲಾಗಿದೆ. ಆರೋಪಿಗಳ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ.
ಬೆಳಂ ಬೆಳಗ್ಗೆ ರೌಡಿಗಳಿಗೆ ಶಾಕ್ ನೀಡಿದ ಖಾಕಿ
ಬೆಳಗಾವಿ: ನಗರದಲ್ಲಿ ಬೆಳಂ ಬೆಳಗ್ಗೆ ರೌಡಿಗಳಿಗೆ ಖಾಕಿ ಶಾಕ್ ನೀಡಿದ್ದು, ನಗರದ 26 ರೌಡಿಗಳ ಮನೆಗಳ ಮೇಲೆ ದಿಢೀರ್ ದಾಳಿ ಮಾಡಿದರು. ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ 150ಕ್ಕೂ ಹೆಚ್ಚು ಪೊಲೀಸರಿಂದ ರೇಡ್ ಮಾಡಿದ್ದು, ನಗರದಲ್ಲಿ ಜನರನ್ನ ಹೆದರಿಸುತ್ತಾ ರೌಡಿಸಂ ಮಾಡುತ್ತಿದ್ದರವರಿಗೆ ಖಾಕಿ ಶಾಕ್ ಕೊಟ್ಟಿದೆ. ದಾಳಿ ವೇಳೆ ತಲ್ವಾರ್, ಜಂಬೆ, ಚಾಕು ಸೇರಿದಂತೆ ಮಾರಕಾಸ್ತ್ರಗಳು ಪತ್ತೆಯಾಗಿವೆ. ಮಾರಕಾಸ್ತ್ರಗಳನ್ನ ಜಪ್ತಿ ಮಾಡಿ ಮೂವರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರುಕ್ಮೀಣಿ ನಗರದ ಶ್ರೀಧರ್ ತಳವಾರ(29), ಮಹಾಧ್ವಾಚಾರ್ಯ ರೋಡ್ ವಿನಯ್ ಪ್ರಧಾನ್(45), ಖಂಜರ ಗಲ್ಲಿಯ ಅಲ್ತಾಫ್ ಸುಬೇದಾರ(36) ಬಂಧನವಾಗಿದೆ. ಇಂದು ಬೆಳಗ್ಗೆ 5ಗಂಟೆಗೆ ದಾಳಿ ನಡೆಸಿ ಮೂವರನ್ನ ಬಂಧಿಸಿ ಉಳಿದ ರೌಡಿಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಇದನ್ನೂ ಓದಿ: ಇಂಧನ ಇಲಾಖೆಗೆ ಆಯ್ಕೆಗೊಂಡ 1,385 ಅಭ್ಯರ್ಥಿಗಳಿಗೆ ಇಂದು (ಜೂನ್ 30) ನೇಮಕಾತಿ ಆದೇಶ ಪತ್ರ ಹಸ್ತಾಂತರ