ಫ್ಯಾಮಿಲಿ ಪ್ರೇಕ್ಷಕರು ಮೆಚ್ಚಿದ ‘ತ್ರಿವಿಕ್ರಮ’ ಸಿನಿಮಾ; ಹೌಸ್ಫುಲ್ ಆಗಿದ್ದಕ್ಕೆ ಚಿತ್ರತಂಡ ಹ್ಯಾಪಿ
Vikram Ravichandran | Trivikrama: ಮೊದಲ ಚಿತ್ರಕ್ಕೆ ಪ್ರೇಕ್ಷಕರಿಂದ ಸಿಕ್ಕ ಉತ್ತಮ ಸ್ಪಂದನೆ ಕಂಡು ವಿಕ್ರಮ್ ರವಿಚಂದ್ರನ್ ಖುಷಿ ಆಗಿದ್ದಾರೆ. ಗೆಲುವಿನ ಬಗ್ಗೆ ನಿರ್ದೇಶಕ ಸಹನಮೂರ್ತಿ, ನಿರ್ಮಾಪಕ ಸೋಮಣ್ಣ ಮಾತನಾಡಿದ್ದಾರೆ.
ನಟ ರವಿಚಂದ್ರನ್ (Ravichandran) ಅವರು ಹಲವಾರು ಸಿನಿಮಾಗಳಲ್ಲಿ ಕೌಟುಂಬಿಕ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದುಂಟು. ಈಗ ಅದೇ ಹಾದಿಯಲ್ಲಿ ಅವರ ಪುತ್ರ ವಿಕ್ರಮ್ ರವಿಚಂದ್ರನ್ ಕೂಡ ಸಾಗುತ್ತಿದ್ದಾರೆ. ಹೌದು, ವಿಕ್ರಮ್ ನಟನೆಯ ‘ತ್ರಿವಿಕ್ರಮ’ ಸಿನಿಮಾ ನೋಡಿದ ಫ್ಯಾಮಿಲಿ ಆಡಿಯನ್ಸ್ ಮೆಚ್ಚಿಕೊಂಡಿದ್ದಾರೆ. ಇದು ಚಿತ್ರತಂಡದ ಖುಷಿಗೆ ಕಾರಣ ಆಗಿದೆ. ವಿಕ್ರಮ್ ರವಿಚಂದ್ರನ್ (Vikram Ravichandran) ನಟನೆಯ ಮೊದಲ ಸಿನಿಮಾ ಇದು. ಚೊಚ್ಚಲ ಚಿತ್ರದಲ್ಲೇ ಅವರು ಪ್ರೇಕ್ಷಕರ ಮನೆಮಗನಾಗಲು ಪ್ರಯತ್ನಿಸಿದ್ದಾರೆ. ಜೂನ್ 24ರಂದು ‘ತ್ರಿವಿಕ್ರಮ’ ಬಿಡುಗಡೆ ಆಯಿತು. ಹಲವು ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಂಡಿರುವುದು ಚಿತ್ರತಂಡದ ಖುಷಿಗೆ ಕಾರಣ ಆಗಿದೆ. ಕಾಲೇಜು ವಿದ್ಯಾರ್ಥಿಗಳು ಮಾತ್ರವಲ್ಲದೇ ಮಹಿಳೆಯರು, ಮಕ್ಕಳು ಹಾಗೂ ವಯಸ್ಸಾದವರು ಕೂಡ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಿರುವುದರಿಂದ ‘ತ್ರಿವಿಕ್ರಮ’ (Trivikrama) ಬಳಗದವರ ಮುಖದಲ್ಲಿ ನಗು ಮೂಡಿದೆ.
ಈ ಸಿನಿಮಾಗೆ ‘ಸೋಮಣ್ಣ ಟಾಕೀಸ್’ ಮೂಲಕ ರಾಮ್ಕೋ ಸೋಮಣ್ಣ ಅವರು ಬಂಡವಾಳ ಹೂಡಿದ್ದಾರೆ. ಸಹನಮೂರ್ತಿ ನಿರ್ದೇಶನ ಮಾಡಿದ್ದಾರೆ. ಹಲವು ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಬಗ್ಗೆ ಸೋಮಣ್ಣ ಮಾಹಿತಿ ನೀಡಿದ್ದಾರೆ. ‘ಜನರು ನಮ್ಮ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಮೊದಲ ಮೂರು ದಿನ ನಾವು ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿ ಕಲೆಕ್ಷನ್ ಆಗಿದೆ. ಶೋಗಳ ಸಂಖ್ಯೆ ಹೆಚ್ಚಿದೆ. ಮುಂದಿನ ದಿನಗಳಲ್ಲಿ ವಿಕ್ರಮ್ ಜೊತೆ ಮತ್ತೊಂದು ಸಿನಿಮಾ ಮಾಡುತ್ತೇನೆ’ ಎಂದು ಅವರು ಹೇಳಿದ್ದಾರೆ.
ನಿರ್ದೇಶಕ ಸಹನಮೂರ್ತಿ ಅವರ ಕಾರ್ಯಕ್ಕೂ ಮೆಚ್ಚುಗೆ ವ್ಯಕ್ತವಾಗಿದೆ. ‘ಸಿನಿಮಾ ನೋಡಿದ ಪ್ರೇಕ್ಷಕರಿಂದ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರದಲ್ಲಿ ಎಲ್ಲ ಎಮೋಷನ್ಸ್ ಇರುವುದಕ್ಕೆ ಜನರು ಎಂಜಾಯ್ ಮಾಡುತ್ತಿದ್ದಾರೆ. ಪ್ರೀತಿಗಾಗಿ ಹಂಬಲಿಸುವ ಎಲ್ಲ ಮನಸ್ಸುಗಳಿಗೆ ನಮ್ಮ ಸಿನಿಮಾ ಇಷ್ಟ ಆಗಿದೆ’ ಎಂದು ಸಹನಮೂರ್ತಿ ಹೇಳಿದ್ದಾರೆ.
ಆಕಾಂಕ್ಷಾ ಶರ್ಮಾ ಮತ್ತು ವಿಕ್ರಮ್ ರವಿಚಂದ್ರನ್ ಅವರು ಜೋಡಿಯಾಗಿ ನಟಿಸಿದ ಈ ಚಿತ್ರದಲ್ಲಿ ಹಲವು ಕಲಾವಿದರು ಅಭಿನಯಿಸಿದ್ದಾರೆ. ಮೊದಲ ಚಿತ್ರಕ್ಕೆ ಪ್ರೇಕ್ಷಕರಿಂದ ಸಿಕ್ಕ ಉತ್ತಮ ಸ್ಪಂದನೆ ಕಂಡು ವಿಕ್ರಮ್ ಅವರು ಖುಷಿ ಆಗಿದ್ದಾರೆ. ‘ನಿರ್ದೇಶಕರು ಹೇಳಿದ ರೀತಿಯಲ್ಲಿ ಪಾತ್ರ ಮಾಡಿದ್ದೇನೆ ಎಂಬ ತೃಪ್ತಿ ಇದೆ. ಸುದೀಪ್ ಅವರು ಟ್ವೀಟ್ ಮಾಡಿ ಬೆಂಬಲ ನೀಡಿದ್ದಾರೆ. ಅದರಿಂದ ತುಂಬ ಖುಷಿ ಆಗಿದೆ. ಹಲವು ಸೆಲೆಬ್ರಿಟಿಗಳು ಸಿನಿಮಾ ನೋಡುತ್ತೇನೆ ಅಂತ ಹೇಳಿದ್ದಾರೆ. ನಮಗೆಲ್ಲ ಇದು ಹೊಸದು. ಯಾವುದನ್ನೂ ತಲೆಗೆ ತೆಗೆದುಕೊಳ್ಳಲು ನನಗೆ ಇಷ್ಟ ಇಲ್ಲ. ಮಾಡುವಂತಹ ಕೆಲಸ ಇನ್ನೂ ಇದೆ’ ಎಂದು ವಿಕ್ರಮ್ ರವಿಚಂದ್ರನ್ ಹೇಳಿದ್ದಾರೆ.
ಇದನ್ನೂ ಓದಿ: ‘ಹುಡುಗಿಯರನ್ನು ಮುಟ್ಟದೇ ನಿಂಗೆ ಸಿನಿಮಾ ಮಾಡೋಕೆ ಬರಲ್ವಾ?’: ರವಿಚಂದ್ರನ್ಗೆ ನೇರ ಪ್ರಶ್ನೆ ಕೇಳಿದ್ದ ಪತ್ನಿ
ರವಿಚಂದ್ರನ್ ಮಗನ ಮದುವೆ ಆಹ್ವಾನ ಪತ್ರಿಕೆಯಲ್ಲಿ ಹೊಸ ನಟಿಯ ಹೆಸರು? ವೈರಲ್ ಫೋಟೋದ ಅಸಲಿಯತ್ತು ಇಲ್ಲಿದೆ