ಕ್ರೇಜಿಸ್ಟಾರ್ ರವಿಚಂದ್ರನ್ಗೆ ಡಾಕ್ಟರೇಟ್ ಘೋಷಣೆ ಮಾಡಿದ ಬೆಂಗಳೂರು ನಗರ ವಿವಿ
ಕಳೆದ ವರ್ಷಾಂತ್ಯಕ್ಕೆ ತೆರೆಗೆ ಬಂದ ಅವರ ಅಭಿನಯದ ‘ದೃಶ್ಯ 2’ ಸಿನಿಮಾ ಗಮನ ಸೆಳೆಯಿತು. ಈಗ ರವಿಚಂದ್ರನ್ ಅಭಿಮಾನಿಗಳು ಖುಷಿ ಪಡುವಂತಹ ಘೋಷಣೆ ಆಗಿದೆ.
ನಟ ರವಿಚಂದ್ರನ್ ಅವರು (Ravichandran) ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ತುಂಬಾನೇ ದೊಡ್ಡದು. ಬಾಲ ನಟನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು, ನಂತರ ಹೀರೋ ಆದರು. ಕ್ರೇಜಿ ಸ್ಟಾರ್ ಎಂದೇ ಫೇಮಸ್ ಆದರು. ಸ್ಯಾಂಡಲ್ವುಡ್ನಲ್ಲಿ (Sandalwood) ಪ್ರೇಮ ಲೋಕವನ್ನೇ ಸೃಷ್ಟಿ ಮಾಡಿದರು. ಅಷ್ಟೇ ಅಲ್ಲ, ಹೀರೋ ಆಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಅವರು ಸೈ ಎನಿಸಿಕೊಂಡರು. ಕನ್ನಡ ಚಿತ್ರರಂಗಕ್ಕೆ ರವಿಚಂದ್ರನ್ ನೀಡಿದ ಕೊಡುಗೆಯನ್ನು ಪರಿಗಣಿಸಿ ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್ ನೀಡುವ ಘೋಷಣೆ ಮಾಡಿದೆ.
ರವಿಚಂದ್ರನ್ ಅವರು ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಲು ಆರಂಭಿಸಿ 4 ದಶಕ ಕಳೆದಿದೆ. ಈ ಅವಧಿಯಲ್ಲಿ ಅವರು ಹಲವು ಉತ್ತಮ ಸಿನಿಮಾಗಳನ್ನು ನೀಡಿದ್ದಾರೆ. ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ನಟನೆಯ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಕಳೆದ ವರ್ಷಾಂತ್ಯಕ್ಕೆ ತೆರೆಗೆ ಬಂದ ಅವರ ಅಭಿನಯದ ‘ದೃಶ್ಯ 2’ ಸಿನಿಮಾ ಗಮನ ಸೆಳೆಯಿತು. ಈಗ ರವಿಚಂದ್ರನ್ ಅಭಿಮಾನಿಗಳು ಖುಷಿ ಪಡುವಂತಹ ಘೋಷಣೆ ಆಗಿದೆ.
ಬೆಂಗಳೂರು ನಗರ ವಿವಿ ವಾರ್ಷಿಕ ಘಟಿಕೋತ್ಸವದಲ್ಲಿ ವಿ. ರವಿಚಂದ್ರನ್ಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಏಪ್ರಿಲ್ 11ರಂದು ಘಟಿಕೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸೆಂಟ್ರಲ್ ಕಾಲೇಜ್ನ ಜ್ಞಾನಜ್ಯೋತಿ ಆಡಿಟೋರಿಯಂನಲ್ಲಿ ಘಟಿಕೋತ್ಸವ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರವಿಚಂದ್ರನ್ ಸೇರಿ ಮೂರು ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.
ಪುನೀತ್ಗೆ ದೊರೆತಿತ್ತು ಗೌರವ ಡಾಕ್ಟರೇಟ್:
ದೇಶದ ಪ್ರತಿಷ್ಠಿತ ವಿಶ್ವ ವಿದ್ಯಾನಿಲಯಗಳಲ್ಲಿ ಒಂದಾಗಿರುವ ಮೈಸೂರು ವಿಶ್ವವಿದ್ಯಾನಿಲಯವು ಪುನೀತ್ ರಾಜ್ಕುಮಾರ್ಗೆ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ನೀಡಿತ್ತು. ಪುನೀತ್ ಪರವಾಗಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಈ ಗೌರವವನ್ನು ಸ್ವೀಕರಿಸಿದ್ದರು. ವಿಶೇಷ ಎಂದರೆ 46 ವರ್ಷದ ಹಿಂದೆ ಡಾ.ರಾಜ್ಕುಮಾರ್ ಅವರಿಗೂ ಮೈಸೂರು ವಿವಿ ಗೌರವ ಡಾಕ್ಟರೇಟ್ ನೀಡಿತ್ತು. ಸಿನಿಮಾ ಕ್ಷೇತ್ರ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಪುನೀತ್ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿತ್ತು. ಮಾರ್ಚ್ 22ರಂದು ಮೈಸೂರು ವಿವಿಯ 102ನೇ ಘಟಿಕೋತ್ಸವ ನಡೆದಿದೆ. ಈ ಸಂದರ್ಭದಲ್ಲಿ ಅಶ್ವಿನಿ ಅವರಿಗೆ ಪುನೀತ್ ಪರವಾಗಿ ಗೌರವ ಸಲ್ಲಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪುನೀತ್ ಕುಟುಂಬ ಭಾಗಿಯಾಗಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: ಬೆಂಗಳೂರಲ್ಲಿ ರವಿಚಂದ್ರನ್ ತಾಯಿ ಅಂತ್ಯಕ್ರಿಯೆ; ಭಾವುಕರಾದ ‘ಕ್ರೇಜಿಸ್ಟಾರ್’
ರವಿಚಂದ್ರನ್ ಬಳಿಕ ರಚಿತಾ ರಾಮ್ ಕಿಡ್ನಾಪ್; ಈ ಡ್ರಾಮಾದ ಹೊಣೆ ಹೊತ್ತುಕೊಂಡ ಹಿರಿಯ ನಟಿ ಲಕ್ಷ್ಮೀ