ರವಿಚಂದ್ರನ್ ಅವರ ಇಡೀ ಕುಟುಂಬವೇ ಚಿತ್ರರಂಗದಲ್ಲಿ ತೊಡಗಿಕೊಂಡಿದೆ. ತಂದೆ ವೀರಾಸ್ವಾಮಿ ಕಾಲದಿಂದಲೂ ಅವರ ಫ್ಯಾಮಿಲಿ ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡುತ್ತ ಬಂದಿದೆ. ರವಿಚಂದ್ರನ್ (Ravichandran) ಅವರ ಪುತ್ರರಾದ ಮನೋರಂಜನ್ ಮತ್ತು ವಿಕ್ರಮ್ ಅವರು ಕೂಡ ಈಗ ಬಣ್ಣದ ಲೋಕದಲ್ಲಿ ತೊಡಗಿಕೊಂಡಿದ್ದಾರೆ. ಮನೋರಂಜನ್ ರವಿಚಂದ್ರನ್ (Manoranjan Ravichandran) ಅವರು 2017ರಿಂದ ನಟನೆ ಆರಂಭಿಸಿದರು. ‘ಸಾಹೇಬ’, ‘ಬೃಹಸ್ಪತಿ’, ‘ಮುಗಿಲ್ ಪೇಟೆ’ ಸಿನಿಮಾ ಮೂಲಕ ಅವರು ಜನರನ್ನು ರಂಜಿಸುವ ಪ್ರಯತ್ನ ಮಾಡಿದ್ದಾರೆ. ಈಗ ಅವರ ಇನ್ನೊಂದು ಸಿನಿಮಾ ‘ಪ್ರಾರಂಭ’ (Prarambha Movie) ಕೂಡ ಬಿಡುಗಡೆಗೆ ಸಜ್ಜಾಗಿದೆ. ಕೊವಿಡ್ ಕಾರಣದಿಂದ ಈ ಸಿನಿಮಾದ ಕೆಲಸಗಳು ತಡವಾಗಿದ್ದವು. ಲೇಟ್ ಆದ್ರೂ ಲೇಟೆಸ್ಟ್ ಆಗಿ ಬರ್ತೀವಿ ಎನ್ನುವಂತೆ ಈ ಚಿತ್ರತಂಡ ಸದ್ದು ಮಾಡುತ್ತಿದೆ. ಈಗ ಈ ಸಿನಿಮಾದ ಒಂದು ಪೋಸ್ಟರ್ ಸಖತ್ ವೈರಲ್ ಆಗಿದೆ. ಇದು ವಿವಾಹ ಆಮಂತ್ರಣ ಪತ್ರಿಕೆಯ ರೀತಿಯಲ್ಲಿ ಇದೆ. ಒಮ್ಮೆಲೆ ನೋಡಿದರೆ ರವಿಚಂದ್ರನ್ ಪುತ್ರ ಮನೋರಂಜನ್ ಮದುವೆ ಫಿಕ್ಸ್ ಆಗಿದೆ ಎನಿಸುವುದು ಗ್ಯಾರಂಟಿ. ಆದರೆ ಅಸಲಿ ವಿಷಯ ಬೇರೆಯೇ ಇದೆ.
2020ರ ಡಿಸೆಂಬರ್ನಲ್ಲಿಯೇ ಟ್ರೇಲರ್ ಮೂಲಕ ‘ಪ್ರಾರಂಭ’ ಸಿನಿಮಾ ಗಮನ ಸೆಳೆದಿತ್ತು. ಒಂದೂವರೆ ಮಿಲಿಯನ್ಗಿಂತಲೂ ಹೆಚ್ಚು ವೀವ್ಸ್ ಪಡೆದುಕೊಂಡು ನಿರೀಕ್ಷೆ ಮೂಡಿಸಿತ್ತು. ಅಂತೂ ಈ ಚಿತ್ರದ ಬಿಡುಗಡೆಗೆ ಈಗ ಸಮಯ ಕೂಡಿಬಂದಿದೆ. ಮೇ 13ರಂದು ‘ಪ್ರಾರಂಭ’ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಮನೋರಂಜನ್ ರವಿಚಂದ್ರನ್ ಅವರಿಗೆ ಜೋಡಿಯಾಗಿ ಹೊಸ ನಟಿ ಕೀರ್ತಿ ಕಲ್ಕೇರಿ ಅಭಿನಯಿಸಿದ್ದಾರೆ. ಈಗ ಇವರಿಬ್ಬರ ಮದುವೆ ಆಮಂತ್ರಣ ಪತ್ರಿಕೆ ಶೈಲಿಯಲ್ಲಿ ಚಿತ್ರತಂಡ ಒಂದು ಪೋಸ್ಟರ್ ಸಿದ್ಧಗೊಳಿಸಿದೆ.
ಡಾ. ರವಿಚಂದ್ರನ್ ಅವರ ಆಶೀರ್ವಾದದೊಂದಿಗೆ ಎಂಬ ಬರಹದೊಂದಿಗೆ ಈ ಆಹ್ವಾನ ಪತ್ರಿಕೆ ಆರಂಭ ಆಗಿದೆ. ಇದರಲ್ಲಿ ಬರೆದಿರುವುದು ಪಕ್ಕಾ ಸಿನಿಮಾ ವಿಚಾರ. ಆದರೆ ವಿನ್ಯಾಸ ಮಾತ್ರ ವೆಡ್ಡಿಂಗ್ ಕಾರ್ಡ್ ರೀತಿಯಲ್ಲಿದೆ. ‘ಶ್ರೀ ದೇವರ ಅನುಗ್ರಹದಿಂದ ಹಾಗೂ ಗುರುಹಿರಿಯ ಕೃಪಡೆಯಿಂದ ನಮ್ಮ ಸಿನಿಮಾ ಸ್ವಸ್ತಿಶ್ರೀ ವಿಜಯಾಭ್ಯುದಯ ಶ್ರೀ ಶಾಲಿವಾಹನ ಶಕ ವರ್ಷಗಳು 1994ನೇ ಶ್ರೀ ಶುಭಕೃತ ನಾಮ ಸಂವತ್ಸರದ ವೈಶಾಖ ಮಾಸ, ಶುಕ್ಲ ಪಕ್ಷ ದಿನಾಂಕ 13-5-2022ನೇ ಶುಕ್ರವಾರ ನಮ್ಮ ಪ್ರಾರಂಭ ಚಿತ್ರ ಬಿಡುಗಡೆ ಆಗಲಿದೆ’ ಎಂದು ಬರೆಯಲಾಗಿದೆ.
ನವಜೋಡಿಯ ರೀತಿಯಲ್ಲಿ ಹೀರೋ-ಹೀರೋಯಿನ್ ಹೆಸರು ಮುದ್ರಿಸಲಾಗಿದೆ. ಚಿ|ರಾ|ಮನೋರಂಜನ್ ರವಿಚಂದ್ರನ್ (ಶ್ರೀಮತಿ ಸುಮತಿ ಮತ್ತು ಶ್ರೀ ಡಾ. ಕ್ರೇಜಿಸ್ಟಾರ್ ರವಿಚಂದ್ರನ್ ಇವರ ಜೇಷ್ಠ ಪುತ್ರ) ಮತ್ತು ಚಿ|ಸೌ|ಕು| ಕೀರ್ತಿ ಕಲ್ಕೇರಿ (ಶ್ರೀಮತಿ ಅಶ್ವಿನಿ ಮತ್ತು ರಮೇಶ್ ಕಲ್ಕೇರಿ ಅವರ ಜೇಷ್ಠ ಪುತ್ರಿ) ಎಂದು ಬರೆಯಲಾಗಿದೆ. ಈ ಪೋಸ್ಟರ್ ಅನ್ನು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಸಖತ್ ವೈರಲ್ ಆಗುತ್ತಿದೆ.
View this post on Instagram
ಚಿತ್ರತಂಡದ ಈ ಕ್ರಿಯೇಟಿವಿಟಿ ಕಂಡು ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ಸಿನಿಮಾಗೆ ಮನು ಕಲ್ಯಾಡಿ ನಿರ್ದೇಶನ ಮಾಡಿದ್ದು, ಜಗದೀಶ್ ಕಲ್ಯಾಡಿ ಬಂಡವಾಳ ಹೂಡಿದ್ದಾರೆ. ಪ್ರಜ್ವಲ್ ಪೈ ಸಂಗೀತ ನಿರ್ದೇಶನ, ವಿಜಯ್ ಎಂ. ಕುಮಾರ್ ಸಂಕಲನ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ:
ರವಿಚಂದ್ರನ್ ಪುತ್ರ ಕನ್ನಡ ಸರಿಯಾಗಿ ಕಲಿತಿದ್ದು ಹೇಗೆ? ಮನುರಂಜನ್ ನೀಡಿದ ವಿವರಣೆ ಇಲ್ಲಿದೆ..
ರವಿಚಂದ್ರನ್ ಪುತ್ರರ ಬಗ್ಗೆ ಕಾಕ್ರೋಚ್ ಸುಧಿ ವಿಶೇಷ ಮಾತು; ‘ಕನಸುಗಾರ’ ನೆನಪಿಸಿದ ಮನು-ವಿಕ್ರಮ್