ಮಂಡ್ಯ: ಹಿಜಾಬ್ ವಿವಾದ (Hijab Row) ರಾಜ್ಯದಲ್ಲಿ ಮತ್ತಷ್ಟು ಕಾವೇರುತ್ತಿದೆ. ಇದಕ್ಕೆ ರಾಜಕೀಯ ನಾಯಕರೂ ಎಂಟ್ರಿ ಕೊಡುತ್ತಿದ್ದು, ವಿದ್ಯಾರ್ಥಿಗಳ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇತ್ತೀಚೆಗೆ ಮಂಡ್ಯದಲ್ಲಿ ‘ಅಲ್ಲಾಹು ಅಕ್ಬರ್’ ಘೋಷಣೆ ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್ಗೆ (Muskan Khan) ಮಹಾರಾಷ್ಟ್ರದ ಶಾಸಕರೊಬ್ಬರು ಸನ್ಮಾನ ಮಾಡಿದ್ದರು. ಅಲ್ಲದೇ ಉಡುಗೊರೆಗಳನ್ನು ನೀಡಿದ್ದರು. ಇದೀಗ ರಾಜ್ಯ ಕಾಂಗ್ರೆಸ್ನ ಅಲ್ಪ ಸಂಖ್ಯಾತ ನಾಯಕರು ಮುಸ್ಕಾನ್ಗೆ ಸನ್ಮಾನ ಮಾಡಲು ಮುಂದಾಗಿದ್ದಾರೆ. ಆದರೆ ಇದಕ್ಕೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ನಿಂದ ವಿರೋಧ ವ್ಯಕ್ತವಾಗಿದೆ. ‘ಅಲ್ಲಾಹು ಅಕ್ಬರ್’ ಘೋಷಣೆ ಕೂಗಿದ ವಿದ್ಯಾರ್ಥಿನಿಗೆ ಸನ್ಮಾನ ಮಾಡಲು ಕೆಲ ಕಾಂಗ್ರೆಸ್ ಅಲ್ಪ ಸಂಖ್ಯಾತ ನಾಯಕರ ನಿರ್ಧಾರ ಮಾಡಿದ್ದರು. ಆದರೆ ಕೈ ನಾಯಕರು ಪಕ್ಷದ ವೇದಿಕೆಯನ್ನ ಸನ್ಮಾನಕ್ಕೆ ಬಳಸಿಕೊಳ್ಳದಂತೆ ಸೂಚನೆ ನೀಡಿದ್ದಾರೆ. ಆದ್ದರಿಂದ ಸನ್ಮಾನದ ಕುರಿತು ಕೈ ಪಡೆಯಲ್ಲಿ ಒಮ್ಮತ ಮೂಡಿಲ್ಲ.
ಕಾಂಗ್ರೆಸ್ ನಾಯಕರು ಅಗತ್ಯವಿದ್ದರೆ ಖಾಸಗಿಯಾಗಿ ಸನ್ಮಾನ ಕಾರ್ಯಕ್ರಮ ಮಾಡುವಂತೆ ಸೂಚನೆ ನೀಡಿದ್ದಾರೆ. ಕಾರಣ, ಬಹಿರಂಗ ಸನ್ಮಾನ ಮಾಡುವುದರಿಂದ ಹಿಂದೂ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಲಿದೆ. ಬಿಜೆಪಿಗೆ ಕೂಡ ರಾಜಕೀಯ ಅಸ್ತ್ರ ಸಿಕ್ಕಂತಾಗುತ್ತದೆ ಎಂಬುದು ಕೈ ಹಿರಿಯ ನಾಯಕರ ಅಭಿಪ್ರಾಯವಾಗಿದೆ.
ಆದರೂ ಕೆಲ ಅಲ್ಪ ಸಂಖ್ಯಾತ ನಾಯಕರು ಪಟ್ಟು ಬಿಟ್ಟಿಲ್ಲ. ನಮ್ಮ ಸಮಾಜದ ಪರ ನಿಲ್ಲಬೇಕಿದೆ. ಇಲ್ಲವಾದಲ್ಲಿ ಮತ್ತೆ ಆರೋಪಕ್ಕೆ ಗುರಿ ಆಗುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಏನೇ ಆದರೂ ಪಕ್ಷದ ವೇದಿಕೆ ಮೂಲಕ ಯಾವುದೇ ಕಾರ್ಯಕ್ರಮ ಮಾಡದಂತೆ ಹೈಕಮಾಂಡ್ ಖಡಕ್ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಮುಸ್ಕಾನ್ ಯಾರು?
ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್ ಕೇಸರಿ ಶಾಲು ಗಲಾಟೆ ಇತ್ತೀಚೆಗೆ ತಾರಕಕ್ಕೇರಿತ್ತು. ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಬುರ್ಖಾ ಧರಿಸಿದ ಯುವತಿಯ (ವಿದ್ಯಾರ್ಥಿನಿ ಮುಸ್ಕಾನ್) ಎದುರು ಯುವಕರ ಗುಂಪೊಂದು ಜೈ ಶ್ರೀರಾಮ್ ಘೋಷಣೆ ಕೂಗಿತ್ತು. ತನ್ನೆದುರು ಕೇಸರಿ ಶಾಲು ಧರಿಸಿ, ಜೈ ಶ್ರೀರಾಮ್ ಘೋಷಣೆ ಕೂಗಿದ ಯುವಕರ ವರ್ತನೆಗೆ ಪ್ರತಿಯಾಗಿ ವಿದ್ಯಾರ್ಥಿನಿ ಅಲ್ಲಾ ಹು ಅಕ್ಬರ್ ಎಂದು ಕೈಗಳನ್ನು ಮೇಲೆತ್ತಿ ಘೋಷಣೆ ಕೂಗಿದ್ದರು. ಆ ವಿಡಿಯೋ ವೈರಲ್ ಆಗಿತ್ತು.
ಮುಸ್ಕಾನ್ಗೆ ಹಲವರು ಬಹುಮಾನಗಳನ್ನು ಘೋಷಿಸಿ, ಸನ್ಮಾನ ಮಾಡಿದ್ದಾರೆ. ಇತ್ತೀಚೆಗೆ ಮುಂಬೈನ ಬಾಂದ್ರಾ ಪೂರ್ವ ಕ್ಷೇತ್ರದ ಶಾಸಕ ಜಿಶಾನ್ ಸಿದ್ದಿಕ್ ಭೇಟಿ ನೀಡಿದ್ದರು. ಭೇಟಿ ವೇಳೆ ಮಹಾರಾಷ್ಟ್ರದ ಶಾಸಕ ಜಿಶಾನ್ ಸಿದ್ದಿಕ್ ಮುಸ್ಕಾನ್ಗೆ ಐ ಫೋನ್ ಮತ್ತು ಸ್ಮಾರ್ಟ್ವಾಚ್ ಉಡುಗೊರೆ ನೀಡಿ, ಸನ್ಮಾನಿಸಿದ್ದರು. ದೇಶದ ಪ್ರಮುಖ ಇಸ್ಲಾಮಿಕ್ ಸಂಘಟನೆಗಳಲ್ಲಿ ಒಂದಾದ ಜಮಿಯತ್ ಉಲಾಮಾ-ಇ-ಹಿಂದ್ ವತಿಯಿಂದ 5 ಲಕ್ಷ ರೂ. ಬಹುಮಾನ ಘೋಷಿಸಿತ್ತು.
ಇದನ್ನೂ ಓದಿ:
ಕರುನಾಡಿನ ಸಂಸ್ಕೃತಿ ಎತ್ತಿಹಿಡಿದಿದ್ದಾಳೆ: ಮುಸ್ಕಾನ್ ಧೈರ್ಯ, ದಾನಪ್ರಜ್ಞೆಗೆ ಸಿಎಂ ಇಬ್ರಾಹಿಂ ಶ್ಲಾಘನೆ
Hijab Row: ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ನಿವಾಸಕ್ಕೆ ಶಾಸಕ ಭೇಟಿ – ಐ ಫೋನ್, ಸ್ಮಾರ್ಟ್ವಾಚ್ ಗಿಫ್ಟ್