AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ ಎನ್​.ಚಲುವರಾಯಸ್ವಾಮಿ? ವಿಡಿಯೋ ವೈರಲ್

ಮಂಡ್ಯದಲ್ಲಿ ಹೆಚ್​ಡಿ ಕುಮಾರಸ್ವಾಮಿ ಗೆಲುವು ಸಾಧಿಸಿದ್ದು ಜೆಡಿಎಸ್ ಕಾರ್ಯಕರ್ತರು ಸಚಿವ ಚಲುವರಾಯಸ್ವಾಮಿ ಅವರು ಭಾಷಣದ ವೇಳೆ ರಾಜೀನಾಮೆ ಬಗ್ಗೆ ಮಾತನಾಡಿದ್ದ ವಿಡಿಯೋ ವೈರಲ್ ಮಾಡ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಚಲುವರಾಯಸ್ವಾಮಿ ರಾಜೀನಾಮೆ ಬಗ್ಗೆ ಚರ್ಚೆ ಜೋರಾಗಿದೆ.

ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ ಎನ್​.ಚಲುವರಾಯಸ್ವಾಮಿ? ವಿಡಿಯೋ ವೈರಲ್
ಎನ್​.ಚಲುವರಾಯಸ್ವಾಮಿ
ಪ್ರಶಾಂತ್​ ಬಿ.
| Updated By: ಆಯೇಷಾ ಬಾನು|

Updated on:Jun 06, 2024 | 11:47 AM

Share

ಮಂಡ್ಯ, ಜೂನ್.06: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ಗೆ (Congress) ಸೋಲು ಹಿನ್ನೆಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ ಎನ್​.ಚಲುವರಾಯಸ್ವಾಮಿ? (N Chaluvarayaswamy) ಎಂಬ ಪ್ರಶ್ನೆ ಎದ್ದಿದೆ. ಈ ಬಗ್ಗೆ ಮಂಡ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾದ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ತಮ್ಮ ರಾಜೀನಾಮೆ ಕುರಿತು ಸಚಿವ ಎನ್​.ಚಲುವರಾಯಸ್ವಾಮಿ ಪ್ರಸ್ತಾಪಿಸಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಸ್ಟಾರ್ ಚಂದ್ರು ಸೋತರೆ ಸಚಿವ ಸ್ಥಾನಕ್ಕೆ‌ ರಾಜೀನಾಮೆ ಕೊಡಬೇಕಾಗುತ್ತೆ. ಚುನಾವಣೆ ಸೋತರೇ ನನಗೆ ಕೆಲಸ ಮಾಡುವುದಕ್ಕೆ ಮನಸು ಬರಲ್ಲ. ಟೇಬಲ್ ಕುಟ್ಟಲು ಆಗಲ್ಲ, ಸಂಪುಟದಲ್ಲಿ ತಲೆ ಎತ್ತಿ ಮಾತಾಡಲು ಆಗಲ್ಲ. ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಶಾಸಕನಾಗಿ ಕೆಲಸ ಮಾಡಬೇಕು. ಈ ಚುಣಾವಣೆಯಲ್ಲಿ ಸೋತರೆ ಅಳಲ್ಲ, ಯಾರ ಕೈಗೂ ಸಿಗುವುದಿಲ್ಲ. ಎರಡು ತಿಂಗಳು ಎಲ್ಲಾದರೂ ಹೊರಗಡೆ ಪ್ರವಾಸಕ್ಕೆ ಹೋಗುತ್ತೇನೆ. ಮೊಬೈಲ್​ನ ಹಳೇ ಸಿಮ್ ಕಿತ್ತೆಸೆದು ಹೊಸ ಸಿಮ್ ಹಾಕಿಕೊಳ್ತೇನೆ. ರಾಜಕೀಯ ನಿವೃತ್ತಿ ಘೋಷಣೆ ಮಾಡಿ, ನೆಮ್ಮದಿಯಾಗಿ ಇರ್ತೀನಿ ಎಂದು ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಚಲುವರಾಯಸ್ವಾಮಿ ಭಾಷಣ ಮಾಡಿದ್ದರು. ಸದ್ಯ ಈಗ ಮಂಡ್ಯದಲ್ಲಿ ಹೆಚ್​ಡಿ ಕುಮಾರಸ್ವಾಮಿ ಗೆಲುವು ಸಾಧಿಸಿದ್ದು ಜೆಡಿಎಸ್ ಕಾರ್ಯಕರ್ತರು ಸಚಿವ ಚಲುವರಾಯಸ್ವಾಮಿ ಅವರ ಭಾಷಣದ ವಿಡಿಯೋ ವೈರಲ್ ಮಾಡ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಚಲುವರಾಯಸ್ವಾಮಿ ರಾಜೀನಾಮೆ ಬಗ್ಗೆ ಚರ್ಚೆ ಜೋರಾಗಿದೆ.

ಇದನ್ನೂ ಓದಿ: ಬೋವಿ ನಿಗಮದಲ್ಲಿ ₹100 ಕೋಟಿ ಅವ್ಯವಹಾರ; ಕೋಟ ಶ್ರೀನಿವಾಸ್ ಪೂಜಾರಿ ವಿರುದ್ಧ ಗೂಳಿಹಟ್ಟಿ ಶೇಖರ್ ಆರೋಪ

ಈ ಬಗ್ಗೆ ಮಾತನಾಡಿದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ನಿರೀಕ್ಷೆ ಹುಸಿಯಾಗಿದೆ. ಹೆಚ್​ಡಿಕೆ ಮೇಲೆ ಬಹಳ ನಿರೀಕ್ಷೆ ಇಟ್ಟು ಮತ ಹಾಕಿರಬಹುದು. ಜನರು ನಮ್ಮಲ್ಲಿ‌ ಏನು ತಪ್ಪು‌ ಕಂಡು ಹಿಡಿದಿದ್ದಾರೋ ಗೊತ್ತಿಲ್ಲ. ಮಂಡ್ಯದಲ್ಲಿ ಒನ್ ಸೈಡ್ ಚುನಾವಣೆ ಆಗಿದೆ. ವಿಧಾನಸಭೆ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆ ಕೊಟ್ಟಿದ್ದು, ಗ್ಯಾರಂಟಿ ಯೋಜನೆ ಮುಂದುರಿಯುತ್ತೆ. ಸಚಿವ ಸ್ಥಾನಕ್ಕೆ ರಾಜೀನಾಮೆ ತೆಗೆದುಕೊಳ್ಳುವುದು ಪಕ್ಷಕ್ಕೆ ಬಿಟ್ಟಿದ್ದು. ನಮ್ಮ ಪಕ್ಷ ರಾಜೀನಾಮೆ ಕೇಳಿದ್ರೆ ಕೊಡ್ತೀನಿ. ಖಂಡಿತಾ ಮಂಡ್ಯ ಕ್ಷೇತ್ರದ ಸೋಲಿನಿಂದ ನನಗೆ ಮುಜುಗರ ಆಗಿದೆ. ನಾನು ಸದಾ ಇಲ್ಲೇ ಇರುತ್ತಿದ್ದೆ, ಹೀಗಿರುವಾಗ ಮುಜುಗರ ಆಗುತ್ತದೆ. ಜೆಡಿಎಸ್ ಕಾರ್ಯಕರ್ತರು ನನ್ನ ಹೇಳಿಕೆ ವೈರಲ್ ಮಾಡುತ್ತಿದ್ದಾರೆ. ಜೆಡಿಎಸ್ ಕಾರ್ಯಕರ್ತರಿಗೆ ಒಳ್ಳೆಯದಾಗಲಿ ಎಂದರು.

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ರಾಜೀನಾಮೆ ಪತ್ರ ವೈರಲ್‌

ಲೋಕಸಭಾ ಚುನಾವಣೆಯಲ್ಲಿ ನನ್ನ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ಗೆ ಕಾಂಗ್ರೆಸ್‌ಗಿಂತ 1 ಮತ ಹೆಚ್ಚು ಪಡೆದರೆ ನಾನು ರಾಜೀನಾಮೆ ಕೊಡುತ್ತೇನೆ ಎಂದು ಶಾಸಕ ಪ್ರದೀಪ್‌ ಈಶ್ವರ್‌ ಅವರು ಪ್ರಚಾರದ ವೇಳೆ ಹೇಳಿಕೆ ನೀಡಿದ್ದರು. ಸದ್ಯ ಫಲಿತಾಂಶ ಹೊರಬಿದ್ದಿದ್ದು ಸುಧಾಕರ್ ಗೆಲುವು ಸಾಧಿಸಿದ್ದಾರೆ. ಈ ಬೆನ್ನಲ್ಲೆ ಈಗ ಶಾಸಕರ ಹೆಸರಿನ ರಾಜೀನಾಮೆ ಪತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಪತ್ರದಲ್ಲಿ ವಿಧಾನಸಭಾಧ್ಯಕ್ಷ ಯುಟಿ ಖಾದರ್‌ ಅವರ ಹೆಸರು ಉಲ್ಲೇಖಿಸಲಾಗಿದೆ. ” ಕೊಟ್ಟ ಮಾತನ್ನು ಇಟ್ಟು ಹೆಜ್ಜೆ ತಪ್ಪಬಾರದು ಎಂಬ ನಿಯಮವನ್ನು ಜೀವನ ಉದ್ದಕ್ಕೂ ಪಾಲಿಸಿಕೊಂಡು ಬಂದವನು ನಾನು. ಸುಧಾಕರ್‌ ಅವರಿಗೆ ಸವಾಲು ಹಾಕಿದ್ದೆ. ಈ ಹಿಂದೆ ಆಡಿದ ಮಾತಿಗೆ ಬದ್ಧನಾಗಿ ರಾಜೀನಾಮೆ ನೀಡುತ್ತೇನೆ ” ಎಂದು ಪ್ರದೀಪ್‌ ಈಶ್ವರ್‌ ಅವರ ಸಹಿ ಇದೆ. ಸದ್ಯ ಈ ಪತ್ರ ನಕಲಿ ಎಂದು ಶಾಸಕ ಪ್ರದೀಪ್‌ ಈಶ್ವರ್‌ ಅವರು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:49 am, Thu, 6 June 24