ಕರಾವಳಿಯ ಜನಪದ ಕ್ರೀಡೆ ಕಂಬಳದ (Mangalore Kambala) ಮೇಲೆ ಮತ್ತೆ ನಿಷೇಧದ (Kambala Ban) ತೂಗುಗತ್ತಿ ನೇತಾಡುತ್ತಿದೆ. ಪ್ರಾಣಿ ದಯಾ ಸಂಘದವರು ಕಂಬಳ ಕೂಟ ನಿಷೇಧಿಸುವಂತೆ ಮತ್ತೆ ಸುಪ್ರಿಂ ಕೋರ್ಟ್ (Supreme Court) ಮೊರೆ ಹೋಗಿದ್ದು, ತೀರ್ಪು ಬರೋದಕ್ಕಷ್ಟೆ ಬಾಕಿಯಿದೆ. ಈ ಬಾರಿಯ ಕಂಬಳ ಋತು ಆರಂಭವಾಗಿದ್ದು ಮತ್ತೆ ಸಂಕಷ್ಟ ಎದುರಾಗುತ್ತಾ ಎಂಬ ಆತಂಕ ಕಂಬಳ ಅಭಿಮಾನಿಗಳಲ್ಲಿದೆ. ಹೌದು..ಕಂಬಳ ಕರಾವಳಿಯ ಪ್ರಸಿದ್ದ ಜನಪದ ಕ್ರೀಡೆ. ಇತ್ತೀಚೆಗಷ್ಟೆ ತೆರೆಕಂಡ ಕಾಂತಾರ ಸಿನಿಮಾದಲ್ಲಿಯು ಕಂಬಳದ ದೃಶ್ಯ ಚಿತ್ರೀಕರಿಸಲಾಗಿದ್ದು ವಿಶ್ವದಾದ್ಯಂತ ಕಂಬಳ ಕ್ರೀಡೆ ಪ್ರಚಾರ ಪಡೆದಿದೆ. ಆದ್ರೆ ಈ ಕಂಬಳದಲ್ಲಿ ಪ್ರಾಣಿ ಹಿಂಸೆ ಮಾಡಲಾಗುತ್ತಿದೆ ಎಂಬುದು ಪ್ರಾಣಿ ದಯಾ ಸಂಘದವರ ಹಲವು ಸಮಯದ ಆರೋಪ. ಈ ಹಿಂದೆ ಕಂಬಳಕ್ಕೆ ನಿಷೇಧದ ಆತಂಕ ಎದುರಾದಾಗ ರಾಜ್ಯ ಸರ್ಕಾರ ಕಾನೂನು ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಿತ್ತು. ರಾಜ್ಯ ಸರ್ಕಾರ ಮಂಡಿಸಿದ್ದ ಈ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ ಹಾಕುವ ಮೂಲಕ ಕಂಬಳ ಕ್ರೀಡೆಗೆ ಅವಕಾಶ ಮಾಡಿಕೊಟ್ಟಿದ್ದರು. ಆ ಬಳಿಕ ಕರಾವಳಿಯಲ್ಲಿ ನಿರಾತಂಕವಾಗಿ ಕಂಬಳ ಕ್ರೀಡೆ ನಡೆಯುತಿತ್ತು. ಆದ್ರೆ ಇದೀಗ ಮತ್ತೆ ಪ್ರಾಣಿ ದಯಾ ಸಂಘ ಪೇಟಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಕಂಬಳವನ್ನು ನಿಷೇಧಿಸುವಂತೆ ಮೇಲ್ಮನವಿ ಸಲ್ಲಿಸಿದ್ದಾರೆ.
ಕಂಬಳದ ಕೋಣಗಳು ಓಟಕ್ಕೆ ಯೋಗ್ಯವಾದ ಪ್ರಾಣಿಗಳಲ್ಲ, ಹೀಗಿದ್ದರೂ ರಾತ್ರಿ ಹಗಲೆನ್ನದೆ 48 ಗಂಟೆಗಳ ಕಾಲ ಕಂಬಳದ ಕೂಟದಲ್ಲಿ ಕೋಣಗಳನ್ನು ಓಡಿಸಲಾಗುತ್ತದೆ. ಬೆತ್ತದಿಂದ ಕೋಣಗಳಿಗೆ ಹೊಡೆದು ಹಿಂಸೆ ನೀಡಲಾಗುತ್ತಿದೆ ಎಂಬುದು ಪೇಟಾದವರ ಆರೋಪ.
ಹೀಗಾಗಿ ಕಂಬಳ, ಜಲ್ಲಿಕಟ್ಟು, ಎತ್ತಿನಗಾಡಿ ಕ್ರೀಡೆಯ ಸಂದರ್ಭದಲ್ಲಿ ಕಾನೂನು ಉಲ್ಲಂಘನೆಯಾಗುತ್ತಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಗುತ್ತಿಲ್ಲ ಎಂದೂ ಪೇಟಾ ಸಂಸ್ಥೆಯವರು ತಕರಾರು ತೆಗೆದು, ಕಾನೂನು ತಿದ್ದುಪಡಿಯ ಸಾಂವಿಧಾನಿಕತೆಯನ್ನು ಸಹ ಪ್ರಶ್ನಿಸಿ ದಾವೆ ಹೂಡಿದ್ದಾರೆ.
ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹ ತಕರಾರು ಅರ್ಜಿ ಸಲ್ಲಿಸಿದ್ದು, ಕಂಬಳ ಸಮಿತಿಗಳ ಪರವಾಗಿ ಉಪ್ಪಿನಂಗಡಿಯ ವಿಜಯ ವಿಕ್ರಮ ಜೋಡುಕೆರೆ ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಸಹ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿರುವ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ತೀರ್ಪು ಕಾಯ್ದಿರಿಸಿದೆ.
ಕಂಬಳ ಕೂಟಕ್ಕೆ ಪ್ರಾಚೀನ ಇತಿಹಾಸವಿದ್ದು, ಮಕ್ಕಳಂತೆ ಕೋಣಗಳನ್ನು ಪ್ರೀತಿಯಿಂದ ಸಾಕಿ ಸಲಹಲಾಗುತ್ತದೆ. ಕಂಬಳ ನಿಷೇಧವಾಗಬಾರದು ಎಂಬುದು ಕಂಬಳ ಪ್ರೇಮಿಗಳ ಒತ್ತಾಯವಾಗಿದೆ. ಒಟ್ಟಿನಲ್ಲಿ ಸುಪ್ರೀಂ ಕೋರ್ಟ್‌ನ ಈ ತೀರ್ಪು ಕಂಬಳ, ಜಲ್ಲಿಕಟ್ಟು, ಎತ್ತಿನಗಾಡಿ ಕ್ರೀಡೆಯ ಭವಿಷ್ಯವನ್ನು ನಿರ್ಧರಿಸಲಿದೆ.
ವರದಿ: ಅಶೋಕ್, ಟಿವಿ 9, ಮಂಗಳೂರು
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:51 pm, Thu, 22 December 22