ದಕ್ಷಿಣ ಕನ್ನಡದಲ್ಲಿ ಸರಣಿ ಕೊಲೆ: ಐಪಿಎಸ್ ಅಧಿಕಾರಿಗಳ ಎತ್ತಂಗಡಿ, ಹೊಸಬರ ನೇಮಕ

ಮಂಗಳೂರಿನಲ್ಲಿ ನಡೆಯುತ್ತಿರುವ ಸಾಲು ಸಾಲು ಕೊಲೆಗಳು ತಲ್ಲಣ ಮೂಡಿಸಿವೆ. ಮೊನ್ನೇ ಅಷ್ಟೇ ಹಿಂದೂ ಕಾರ್ಯಕರ್ತ, ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಬಂಟ್ವಾಳದಲ್ಲಿ ಮುಸ್ಲಿಂ ಸಮುದಾಯದ ಅಬ್ದುಲ್ ರಹಿಮ್​ ಬರ್ಬರ ಹತ್ಯೆಯಾಗಿದೆ. ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಕರಾವಳಿ ಜಿಲ್ಲೆಗಳ ಐಪಿಎಸ್ ಅಧಿಕಾರಿಗಳನ್ನ ಎತ್ತಂಗಡಿ ಮಾಡಲಾಗಿದ್ದು, ಖಡಕ್ ಅಧಿಕಾರಿಗಳನ್ನ ನೇಮಕ ಮಾಡಲಾಗಿದೆ.

ದಕ್ಷಿಣ ಕನ್ನಡದಲ್ಲಿ ಸರಣಿ ಕೊಲೆ: ಐಪಿಎಸ್ ಅಧಿಕಾರಿಗಳ ಎತ್ತಂಗಡಿ, ಹೊಸಬರ ನೇಮಕ
ಅನುಪಮ್ ಅಗ್ರವಾಲ್, ಯತೀಶ್ ಎನ್.

Updated on: May 29, 2025 | 9:28 PM

ಬೆಂಗಳೂರು, (ಮೇ 29): ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಸರಣಿ ಕೊಲೆ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಒಂದಾದ ಮೇಲೊಂದು ಎನ್ನುವಂತೆ ಹಿಂದೂ-,ಮುಸ್ಲಿಮರು ಹತ್ಯೆಗಳು ಆಗುತ್ತಿದ್ದು, ಕಾನೂನು ವ್ಯವಸ್ಥೆ ಕಾಪಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೀಗ ಬಂಟ್ವಾಳದಲ್ಲಿ ಅಬ್ದುಲ್ ರಹಿಮ್ ಹತ್ಯೆ ಬೆನ್ನಲ್ಲೇ  ದಕ್ಷಿಣ ಕನ್ನಡ ಜಿಲ್ಲೆಯ ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ಎತ್ತಂಗಡಿ ಮಾಡಿದೆ. ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್‌ ಹಾಗೂ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಯತೀಶ್.ಎನ್ ಅವರನ್ನು ವರ್ಗಾವಣೆ ಇಂದು(ಮೇ 29) ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮಂಗಳೂರು ಪೊಲೀಸ್ ಆಯುಕ್ತ ಅನುಪಮ ಅಗರವಾಲ ಅವರನ್ನು ಕ್ರಿಮಿನಲ್ ಇನ್ವೆ,ಸ್ಟಿಗೇಶನ್ ಡಿಪಾರ್ಟ್ ಮೆಂಟ್ ಗೆ ವರ್ಗಾಯಿಸಲಾಗಿದೆ. ಇನ್ನು ಮಂಗಳೂರು ಪೊಲೀಸ್ ನೂತನ ಆಯುಕ್ತರಾಗಿ ಸುಧೀರ್ ಕುಮಾರ್ ರೆಡ್ಡಿ ಅವರನ್ನ ನೇಮಕ ಮಾಡಲಾಗಿದೆ. ಇನ್ನು ಉಡುಪಿ ಎಸ್ಪಿಯಾಗಿದ್ದ ಅರುಣ್.ಕೆ ಅವರನ್ನು ದಕ್ಷಿಣ ಕನ್ನಡ ಪೊಲಿಸ್ ವರಿಷ್ಠಾಧಿಕಾರಿಯಾಗಿ ನೇಮಿಸಲಾಗಿದೆ. ಇನ್ನೊಂದೆಡೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹರಿರಾಮ್ ಶಂಕರ್ ಅವರನ್ನ ನೇಮಕ ಮಾಡಲಾಗಿದೆ.

ಇದನ್ನೂ ಓದಿ: Bantwal Rahiman Murder: ಬಂಟ್ವಾಳ ರಹಿಮಾನ್ ಹಂತಕರ ಬಂಧನ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ

ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ವರ್ಗಾವಣೆ ಮಾಡಲಾಗಿದ್ದು, ಬೆಳಗಾವಿ ನಗರ ಪೊಲೀಸ್ ಆಯುಕ್ತರಾಗಿ ಬೊರಸೆ ಭೂಷಣ್ ನೇಮಿಸಲಾಗಿದೆ. ಇನ್ನು ಇಡಾ ಮಾರ್ಟಿನ್ ಅವರಿಗೆ ಸ್ಥಳ ತೋರಿಸಲಾಗಿಲ್ಲ.

ಈ ವರ್ಗಾವಣೆಗೂ ಮುನ್ನ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದ್ದು, ಈ ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು, ಗೃಹ ಸಚಿವ ಪರಮೇಶ್ವರ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭಾಗಿಯಾಗಿದ್ದರು. ಈ ಸಭೆಯಲ್ಲಿ ಮಂಗಳೂರಿನಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳ ಬಗ್ಗೆ ಸುದೀರ್ಘಟವಾಗಿ ಚರ್ಚೆ ಮಾಡಿದ್ದು, ಜಿಲ್ಲೆಯಲ್ಲಿ ಕಾನುನು ಸುವ್ಯವಸ್ಥೆ ಬಿಗಿಗೊಳಿಸುವ ಸಂಬಂಧ ಮಹತ್ವದ ಮಾತುಕತೆಯಾಗಿದೆ.

ಎಷ್ಟೇ ಕಠಿಣ ಕ್ರಮಕೈಗೊಂಡರೂ ಜಿಲ್ಲೆಯಲ್ಲಿ ಪದೇ ಪದೇ ಪರಿಸ್ಥಿತಿ ಹದಗೆಡುತ್ತಿದೆ. ಹೀಗಾಗಿ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಇದಕ್ಕೆ ಕಡಿವಾಣ ಹಾಕಲೇಬೇಕೆಂದು ತೀರ್ಮಾನಿಸಿದ್ದು, ಅದರಂತೆ ಇದೀಗ ದಕ್ಷಿಣ ಕನ್ನಡ ಜಿಲ್ಲೆಗೆ ಖಡಕ್ ಅಧಿಕಾರಿಗಳನ್ನ ನೇಮಕ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ನಾಡಿದ್ದು ಅಂದರೆ ಮೇ 31ಕ್ಕೆ ಮಂಗಳೂರಿಗೆ ಭೇಟಿ ನೀಡಲಿದ್ದು, ಸರಣಿ ಸಭೆ ಮಾಡಲಿದ್ದಾರೆ. ಇನ್ಮುಂದೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಬಿಗಿಗೊಳಿಸುವ ಸಂಬಂಧ ಮಹತ್ವದ ಸಭೆ ಮಾಡಲಿದ್ದಾರೆ. ಈ ಸಭೆಯಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಮಂಗಳೂರು ಪೊಲೀಸ್ ಆಯುಕ್ತರು ಭಾಗಿಯಾಗಲಿದ್ದಾರೆ.