ಬಳ್ಳಾರಿಯಲ್ಲಿ ಪತ್ತೆಯಾದ ಹಣದ ಮೂಲದ ಬಗ್ಗೆ ಹಲವು ಅನುಮಾನ: ಪ್ರಭಾವಿ ರಾಜಕಾರಣಿಯದ್ದೆಂಬ ಶಂಕೆ

|

Updated on: Apr 09, 2024 | 6:49 AM

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು ಭರ್ಜರಿ ಬೇಟೆಯಾಡುತ್ತಿದ್ದಾರೆ. ಈ ಮಧ್ಯೆ ಬಳ್ಳಾರಿಯಲ್ಲಿ ಸಿಕ್ಕಿರುವ ಅಪಾರ ಪ್ರಮಾಣದ ನಗದು ಮತ್ತು ಚಿನ್ನಾಭರಣ ಪ್ರಭಾವಿ ರಾಜಕಾರಣಿಯೊಬ್ಬರಿಗೆ ಸೇರಿದ್ದು ಎಂಬ ಅನುಮಾನ ಪೊಲೀಸರಿಗೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.

ಬಳ್ಳಾರಿಯಲ್ಲಿ ಪತ್ತೆಯಾದ ಹಣದ ಮೂಲದ ಬಗ್ಗೆ ಹಲವು ಅನುಮಾನ: ಪ್ರಭಾವಿ ರಾಜಕಾರಣಿಯದ್ದೆಂಬ ಶಂಕೆ
ಬಳ್ಳಾರಿಯಲ್ಲಿ ವಶಪಡಿಸಿಕೊಳ್ಳಲಾದ ನಗದು
Follow us on

ಬೆಂಗಳೂರು, ಏಪ್ರಿಲ್ 9: ಲೋಕಸಭೆ ಚುನಾವಣೆ (Lok Sabha Elections) ಸಮೀಪಿಸುತ್ತಿರುವಂತೆಯೇ ಹಣ, ಹೆಂಡ, ಸೀರೆ ಹಂಚಿಕೆ ಜೋರಾಗಿದೆ. ಈ ಮಧ್ಯೆ, ಬಳ್ಳಾರಿಯ (Ballari) ಬ್ರೂಸ್​ಪೇಟೆ ಠಾಣೆ ಪೊಲೀಸರು ಭಾನುವಾರ ಭರ್ಜರಿ ಬೇಟೆ ಆಡಿದ್ದು, ಚಿನ್ನದ ವ್ಯಾಪಾರಿ ನರೇಶ್​ ಸೋನಿ ಮನೆಯಲ್ಲಿ ದಾಖಲೆ ಇಲ್ಲದೆ ಇಟ್ಟಿದ್ದ 5 ಕೋಟಿ 60 ಲಕ್ಷ ರೂ. ನಗದು, 3 ಕೆಜಿ ಚಿನ್ನ, 68 ಕೆಜಿ ಬೆಳ್ಳಿ ಗಟ್ಟಿ, 103 ಕೆಜಿ ಬೆಳ್ಳಿ ಆಭರಣವನ್ನ ವಶಕ್ಕೆ ಪಡೆದಿದ್ದಾರೆ. ಈ ಸಂಪತ್ತಿನ, ಚಿನ್ನಾಭರಣದ ಮೂಲ ಕೆದಕಿದ ಪೊಲೀಸರಿಗೆ, ಇದೆಲ್ಲ ಪ್ರಭಾವಿ ರಾಜಕಾರಣಿಗೆ ಸೇರಿದ್ದು ಎಂಬ ಅನುಮಾನ ಬಲವಾಗಿದೆ. ಚುನಾವಣೆ ಬಳಕೆಗಾಗಿ ರಾಜಕಾರಣಿಯು ಹಣ ಕೊಟ್ಟಿರುವ ಶಂಕೆ ಎದ್ದಿದೆ. ಮತದಾರರಿಗೆ ಹಂಚಲು, ಹವಾಲಾ ದಂಧೆಯಲ್ಲಿ ಬಳಸಲು ಹಣವನ್ನ ಸಂಗ್ರಹಿಸಿದ್ದ ಸಂಶಯ ಮೂಡಿದ್ದು ತನಿಖೆ ಮುಂದುವರೆಸಿದ್ದಾರೆ.

ದಾಖಲೆ ಇಲ್ಲದ 40 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಸೀರೆ ಜಪ್ತಿ

ಈ ಮಧ್ಯೆ, ಬೀದರ್ ಜಿಲ್ಲೆಯ ಬಸವಕಲ್ಯಾಣದ ಮನ್ನಳ್ಳಿ‌ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸ್ತಿದ್ದ 40 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಸೀರೆ ಜಪ್ತಿ ಮಾಡಲಾಗಿದೆ. ಗುಜರಾತ್‌ನಿಂದ ಬೀದರ್‌ಗೆ ಅಕ್ರಮವಾಗಿ ಸೀರೆ ಸಾಗಿಸುತ್ತಿದ್ದರೆಂಬ ಮಾಹಿತಿ ಲಭ್ಯವಾಗಿದೆ.

ಲಾರಿಯಲ್ಲಿ ಸಾಗಿಸುತ್ತಿದ್ದ 14.88 ಲಕ್ಷ ರೂ. ಹಣ ಜಪ್ತಿ

ಇನ್ನು, ಬಾಗಲಕೋಟೆಯ ನಾಯನೇಗಲಿ ಚೆಕ್​​​ಪೋಸ್ಟ್​​ ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 14.88 ಲಕ್ಷ ರೂ. ಹಣವನ್ನ ಜಪ್ತಿ ಮಾಡಲಾಗಿದೆ. ತಮಿಳುನಾಡು ಮೂಲದ ಲಾರಿಯಲ್ಲಿದ್ದ ಹಣವನ್ನು, ಬಾಗಲಕೋಟೆ ಗ್ರಾಮಾಂತರ ಪೊಲೀಸರು ಮತ್ತು ಫ್ಲೈಯಿಂಗ್ ಸ್ಕ್ವಾಡ್​ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದೆ.

ಬಸ್​ನಲ್ಲಿ ಸಾಗಿಸುತ್ತಿದ್ದ 30 ಲಕ್ಷ ಹಣ ವಶಕ್ಕೆ

ಕರ್ನಾಟಕ ಗಡಿಗೆ ಹೊಂದಿರುವ ತಮಿಳುನಾಡಿನ ಜೂಜುವಾಡಿ ಚೆಕ್​​ಪೋಸ್ಟ್​ನಲ್ಲಿ 30.5 ಲಕ್ಷ ಹಣವನ್ನ ಸೀಜ್​ ಮಾಡಿದ್ದಾರೆ. ಖಾಸಗಿ ಬಸ್​​​ನಲ್ಲಿ 30.5 ಲಕ್ಷ ಹಣ, 500 ಗ್ರಾಮ್​ ಚಿನ್ನಾಭರಣವನ್ನ ರಾಜ್​​​ಕುಮಾರ್ ಎಂಬಾತ ಸಾಗಿಸ್ತಿದ್ದ. ಆದ್ರೆ, ಸೂಕ್ತ ದಾಖಲೆ ಇಲ್ಲದೆ ಇದಿದ್ರಿಂದ ಹಣವನ್ನ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ 2024: ಬಳ್ಳಾರಿಯಲ್ಲಿ 5 ಕೋಟಿ ಹಣ, ಕೆಜಿಗಟ್ಟಲೆ ಚಿನ್ನ, ಮೂಟೆಗಟ್ಟಲೆ ಬೆಳ್ಳಿ ಜಪ್ತಿ

ಲೋಕಸಭಾ ಚುನಾವಣೆ ವೇಳೆ ಅಧಿಕಾರಿಗಳು ಭರ್ಜರಿ ಬೇಟೆ ಆಡ್ತಿದ್ದಾರೆ. ದಾಖಲೆ ಇಲ್ಲದೆ ಸಾಗಿಸ್ತಿದ್ದ ಹಣ, ಚಿನ್ನ, ಬೆಲೆಬಾಳುವ ವಸ್ತುಗಳನ್ನು ಸೀಜ್ ಮಾಡ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ