ಹಣ ಒಯ್ಯಲು ಕರ್ನಾಟಕಕ್ಕೆ ಆಗಮಿಸಿದ ಕೆಸಿ ವೇಣುಗೋಪಾಲ್: ವಿಪಕ್ಷಗಳ ಆರೋಪಕ್ಕೆ ಎಂಬಿ ಪಾಟೀಲ್ ತಿರುಗೇಟು

ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ಐಟಿ ದಾಳಿ ನಡೆದ ಬೆನ್ನಲ್ಲೇ ಎಐಸಿಸಿ ಪ್ರಧಾನ‌ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ದಿಢೀರ್ ಕರ್ನಾಟಕ ಪ್ರವಾಸ ಕೈಗೊಂಡಿದ್ದು, ಹಣ ಒಯ್ಯಲು ಬರುತ್ತಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿವೆ. ಇದಕ್ಕೆ ತಿರುಗೇಟು ನೀಡಿದ ಸಚಿವ ಎಂಬಿ ಪಾಟೀಲ್, ಸುಮ್ಮಸುಮ್ಮನೆ ಅವರ ಮೇಲೆ ಈ ರೀತಿ ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಹಣ ಒಯ್ಯಲು ಕರ್ನಾಟಕಕ್ಕೆ ಆಗಮಿಸಿದ ಕೆಸಿ ವೇಣುಗೋಪಾಲ್: ವಿಪಕ್ಷಗಳ ಆರೋಪಕ್ಕೆ ಎಂಬಿ ಪಾಟೀಲ್ ತಿರುಗೇಟು
ಎಂಬಿ ಪಾಟೀಲ್ ಮತ್ತು ಕೆಸಿ ವೇಣುಗೋಪಾಲ್
Edited By: Rakesh Nayak Manchi

Updated on: Oct 17, 2023 | 2:56 PM

ವಿಜಯಪುರ, ಅ.17: ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ಐಟಿ ದಾಳಿ ನಡೆದ ಬೆನ್ನಲ್ಲೇ ಎಐಸಿಸಿ ಪ್ರಧಾನ‌ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ (K.C.Venugopal) ಅವರು ದಿಢೀರ್ ಕರ್ನಾಟಕ ಪ್ರವಾಸ ಕೈಗೊಂಡಿದ್ದು, ಹಣ ಒಯ್ಯಲು ಬರುತ್ತಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿವೆ. ಇದಕ್ಕೆ ತಿರುಗೇಟು ನೀಡಿದ ಸಚಿವ ಎಂಬಿ ಪಾಟೀಲ್ (M.B.Patil), ಸುಮ್ಮಸುಮ್ಮನೆ ಅವರ ಮೇಲೆ ಈ ರೀತಿ ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಬೆಳವಣಿಗೆ ಬಗ್ಗೆ ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ವೇಣುಗೋಪಾಲರನ್ನ ನಾನು ಬಾಳ ಹತ್ತಿರದಿಂದ ನೋಡಿದ್ದೇನೆ. ಅವರು ಬಹಳ ಪ್ರಮಾಣಿಕ ವ್ಯಕ್ತಿ, ಭದ್ದತೆ ಇದ್ದಂತ ವ್ಯಕ್ತಿ. ಸುಖಾಸುಮ್ಮನೆ ಅವರ ಮೇಲೆ ಈ ರೀತಿ ಆರೋಪ ಮಾಡುವುದು ಸರಿಯಲ್ಲ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಎದ್ದಿರುವ ಬಂಡಾಯವನ್ನು ಶಮನ ಮಾಡಲು ವೇಣುಗೋಪಾಲ್ ಆಗಮಿಸಿದ್ದಾರೆ ಎಂದು ವಿರೋಧಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಪಾಟೀಲ್, ನಮ್ಮ ಪಕ್ಷದಲ್ಲಿ ಬಂಡಾಯ ಎಲ್ಲಿದೆ ಎಂದು ಪ್ರಶ್ನಿಸಿದರು.

ಸಚಿವ ಸತೀಶ್ ಜಾರಕಿಹೊಳಿ 20 ಶಾಸಕರನ್ನು ಸೇರಿಸಿ ಸಭೆ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, ಸತೀಶ ಜಾರಕಿಹೊಳಿ ಮೊನ್ನೆ ನನ್ನನ್ನು ಭೇಟಿಯಾಗಿದ್ದಾರೆ. ಆ ವೇಳೆ ವಿವಿಧ ವಿಚಾರಗಳ ಕುರಿತು ಅರ್ಧ ಗಂಟೆಗೂ ಹೆಚ್ಚು ಕಾಲ ಅವರೊಂದಿಗೆ ಮಾತನಾಡಿದ್ದೇನೆ ಎಂದು ಹೇಳುವ ಮೂಲಕ ಪಕ್ಷದಲ್ಲಿ ಬಂಡಾಯವಿಲ್ಲ ಎಂದರು.

ಬಂಡಾಯ ಶಮನ ಮುಗಿದಿಲ್ಲ, ಮುಂದಿನ ದಿನಗಳಲ್ಲಿ ಶಾಸಕರ ಸಭೆ ಮಾಡುವುದಾಗಿ ಹೈಕಮಾಂಡ್​ಗೆ ಜಾರಕಿಹೋಳಿ ಹೇಳಿದ್ದಾರೆಂಬ ಸುದ್ದಿ ವಿಚಾರವಾಗಿ ಮಾತನಾಡಿದ ಅವರು, ಮಾಧ್ಯಮದವರು ಈ ರೀತಿ ಕ್ರಿಯೇಟ್ ಮಾಡಿದ್ದಕ್ಕೆ ಜಾರಕಿಹೊಳಿ ಹಾಗೆ ಹೇಳಿರಬಹುದು. ಸ್ನೇಹಿತರೆಲ್ಲ ಸೇರಿ ಎಲ್ಲೂ ಹೋಗಬಾರದಾ? ಮಾಧ್ಯಮದವರೂ ಸೇರಿ ಎಲ್ಲಿಗೂ ಹೋಗಲ್ವಾ? ಅದೇ ರೀತಿ ಶಾಸಕರು ಕೂಡಿಕೊಂಡು ಊಟಕ್ಕೆ ಕುಳಿತರೆ ಎಲ್ಲಿಗಾದರೂ ಹೋದರೆ ಅದಕ್ಕೇನು ಸಂಬಂಧವಿದೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಅಸಮಾಧಾನಕ್ಕೆ ಕಾರಣವೇನು? ಮುನಿಸು ತಣಿಸಿದ್ರಾ ಕೆಸಿ ವೇಣುಗೋಪಾಲ್?

ಯಾವುದೇ ಬಂಡಾಯ ನಮ್ಮಲ್ಲಿ ಇಲ್ಲ. ಒಂದು ವೇಳೆ ಬಂಡಾಯ ಇದ್ದಿದ್ದೇ ಆದರೆ ಮೊದಲು ನನಗೆ ಗೊತ್ತಾಗುತ್ತದೆ. ಕಾರಣ ಸತೀಶ್ ಜಾರಕಿಹೊಳಿ ನನಗೆ ತುಂಬಾ ಆತ್ಮೀಯರು. ಅಸಮಾಧಾನ ಏನಿದ್ದರೂ ನನ್ನ ಮುಂದೆ ಅವರು ಹೇಳುತ್ತಾರೆ ಎಂದರು.

ಶಾಸಕರಿಗೆ ಸರಿಯಾಗಿ ಅನುದಾನ ಸಿಗುತ್ತಿಲ್ಲ ಎಂದು ಜಾರಕಿಹೋಳಿ ಹೇಳಿದ್ದಾರೆಂಬ ವಿಚಾರವಾಗಿ ಮಾತನಾಡಿದ ಎಂಬಿ ಪಾಟೀಲ್, ಸತೀಶ ಜಾರಕಿಹೋಳಿ ಹಾಗೇ ಹೇಳಿದ್ದಾರಾ? ಎಂದು ಪ್ರಶ್ನೆ ಮಾಡಿದರು. ಅಲ್ಲದೆ, ನಮ್ಮಲ್ಲಿ ಎಲ್ಲಾ ಗಟ್ಟಿಮುಟ್ಟಾಗಿದೆ ನಾವು ಒಗ್ಗಟ್ಟಾಗಿದ್ದೇವೆ. ಬಿಜೆಪಿಯಲ್ಲಿ ಏನಾಗುತ್ತದೆ ಎಂದು ಬರೆಯಿರಿ. ಸದಾನಂದಗೌಡ ಏನು ಹೇಳುತ್ತಿದ್ದಾರೆ? ಬಿಜೆಪಿಯಲ್ಲಿ ವಿರೋಧ ಪಕ್ಷ ನಾಯಕನ ನೇಮಕವಾಗಿಲ್ಲ ಎಂದರು.

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಉನ್ನತ ಸ್ಥಾನಮಾನ ಇಲ್ಲ ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಇದು ಮುಗಿದ ಅಧ್ಯಾಯ. ಈ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ಶಾಮನೂರು ಅವರು ಪರಸ್ಪರ ಚರ್ಚೆ ಮಾಡಿ ಮಾಹಿತಿ ವಿನಿಮಯ ಮಾಡಿಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳುತ್ತಾರೆ ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಮಾವೇಶ ಶಕ್ತಿ ಪ್ರದರ್ಶನವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಮಾವೇಶ ಮಾಡುವುದರಲ್ಲಿ ತಪ್ಪೇನಿದೆ ಎಂದು ಕೇಳಿದರು. ಕೆಲ ದಿನಗಳ ಹಿಂದೆ ಬೆಳಗಾವಿಯಲ್ಲಿ ಶಫರ್ಡ್ ಸಮ್ಮೇಳನ ನಡೆಯಿತು. ದೇಶದಲ್ಲಿರುವ ಎಲ್ಲಾ ಕುರಿಗಾಹಿಗಳು ಸಮ್ಮೇಳದಲ್ಲಿ ಭಾಗಿಯಾಗಿದ್ದರು. ಹಾಗಂತ ಅದು ಶಕ್ತಿಪ್ರದರ್ಶನವಾ ಎಂದು ಪ್ರಶ್ನಿಸಿದರು.

ಎಲ್ಲಾ ಸಮಾಜದ ಜನರು ಸಮ್ಮೇಳನ ಮಾಡುತ್ತಾರೆ. ಅದರಂತೆ ವೀರಶೈವ ಲಿಂಗಾಯತ ಮಹಾಸಭಾ ಸಮ್ಮೇಳನ ಮಾಡುತ್ತದೆ ಅದರಲ್ಲಿ ಏನಿದೆ? ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜಕೀಯೇತರ ಸಂಘಟನೆಯಾಗಿದೆ. ಮಹಾಸಭಾದಲ್ಲಿ ಶಿವಶಂಕರಪ್ಪ, ಈಶ್ವರ ಖಂಡ್ರೆ, ವಿನಯ ಕುಲಕರ್ಣಿ, ಪ್ರಭಾಕರ ಕೋರೆ, ಚರಂತಿಮಠ ಸೇರಿದಂತೆ ಎಲ್ಲ ಪಕ್ಷದ ನಾಯಕರಿದ್ದಾರೆ ಎಂದರು.

ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಜೆಡಿಎಸ್ ಮತ್ತೆ ಮೈತ್ರಿ ಆಗಿದ್ದು ಕಾಂಗ್ರೆಸ್​ಗೆ ಬಹಳ ಲಾಭವಾಗಲಿದೆ. ಜಾತ್ಯಾತೀತ ಮತದಾರರಾದ ಹಿಂದುಳಿದವರು ಅಲ್ಪಸಂಖ್ಯಾತರು ದಲಿತರು ಹಾಗೂ ಇತರರು ಕಾಂಗ್ರೆಸ್ ಕಡೆ ವಾಲುತ್ತಾರೆ ಎಂದರು.

ವಿಜಯಪುರ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ನಿಶ್ಚಿತವಾಗಿಯೂ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಹಿಡಿಯುತ್ತದೆ. ಜಿಲ್ಲಾ ಪಂಚಾಯತಿ ಹಾಗೂ ಮಹಾನಗರ ಪಾಲಿಕೆಗಳಲ್ಲಿ ಯಾವಾಗಲೂ ಕಾಂಗ್ರೆಸ್ ಅಧಿಕಾರದಲ್ಲಿದೆ. ಈ ಮೂಲಕ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:44 pm, Tue, 17 October 23

Ashok Yadalli

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
Follow Us