ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಾಗದಂತೆ ಕ್ರಮ, ಕೊವಿಡ್ 3ನೇ ಅಲೆ ಎದುರಿಸಲು ಸಿದ್ಧತೆ: ಡಾ.ಕೆ.ಸುಧಾಕರ್
ಸಂಭವನೀಯ ಕೋವಿಡ್ 3ನೇ ಅಲೆ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ 153 ಮಕ್ಕಳ ತಜ್ಞರನ್ನು ನೇಮಿಸಲಾಗಿದೆ. ತಾಲೂಕು ಆಸ್ಪತ್ರೆಗಳಿಗೆ ಕಳುಹಿಸಿರುವ ವೈದ್ಯರಿಗೆ ಮಕ್ಕಳ ಚಿಕಿತ್ಸೆ ಕುರಿತು ತರಬೇತಿ ನೀಡಲಾಗುವುದು.
ಮಂಗಳೂರು: ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿ ವೈದ್ಯರ ಖಾಲಿ ಹುದ್ದೆ ತುಂಬಿ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಚಾರ್ಮಾಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹೊಸ ಕಟ್ಟಡ ಹಾಗೂ ಕೊಕ್ಕಡದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವು ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಿದೆ. ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪ್ರಾಯೋಗಿಕವಾಗಿ ಮೇಲ್ದರ್ಜೆಗೇರಿಸಿ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರಿಗೂ ಆರೋಗ್ಯ ಸವಲತ್ತು ನೀಡುವ ಉದ್ದೇಶವಿದೆ. ಆಸ್ಪತ್ರೆಗಳ ಖಾಲಿ ಹುದ್ದೆ ತುಂಬಲು 1,763 ವೈದ್ಯರು ಹಾಗೂ ವೈದ್ಯಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನಂತರ ಗುತ್ತಿಗೆ ಆಧಾರದಲ್ಲಿ ಒಂದು ವರ್ಷ ಕಡ್ಡಾಯ ಸೇವೆಯಡಿ 2,050 ವೈದ್ಯರ ನೇಮಕವಾಗಿದೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಗೆ 26 ವೈದ್ಯರನ್ನು ನೀಡಲಾಗಿದೆ. ಹೊಸ ನೇಮಕಾತಿಯಲ್ಲಿ, 18 ತಜ್ಞರು, 40 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ದಕ್ಷಿಣ ಕನ್ನಡದ ಆಸ್ಪತ್ರೆಗಳಲ್ಲಿ ನೇಮಿಸಲಾಗಿದೆ. ಈ ಮೂಲಕ ರಾಜ್ಯದ ಪ್ರತಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ ಎಂದರು.
ಕೊಕ್ಕಡದಲ್ಲಿ 30 ಹಾಸಿಗೆಗಳ 4.8 ಕೋಟಿ ರೂ. ವೆಚ್ಚದ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟಿಸಲಾಗಿದೆ. ಇಲ್ಲಿಗೆ ಬೇಕಾದ ಸಲಕರಣೆಗಳನ್ನು ಒದಗಿಸಲಾಗುವುದು. ಕೆಐಒಸಿಎಲ್ ಸಂಸ್ಥೆಯಿಂದ ಹಾಸಿಗೆಗಳನ್ನು ಇಲ್ಲಿಗೆ ನೀಡಲಾಗಿದೆ. ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಬಡವರು ಇಲ್ಲಿ ಪಡೆಯಬಹುದು ಎಂದು ತಿಳಿಸಿದರು.
ಸಂಭವನೀಯ ಕೋವಿಡ್ 3ನೇ ಅಲೆ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ 153 ಮಕ್ಕಳ ತಜ್ಞರನ್ನು ನೇಮಿಸಲಾಗಿದೆ. ತಾಲೂಕು ಆಸ್ಪತ್ರೆಗಳಿಗೆ ಕಳುಹಿಸಿರುವ ವೈದ್ಯರಿಗೆ ಮಕ್ಕಳ ಚಿಕಿತ್ಸೆ ಕುರಿತು ತರಬೇತಿ ನೀಡಲಾಗುವುದು. ನರ್ಸ್ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಲಾಗುತ್ತಿದೆ. ಜೊತೆಗೆ ಲಸಿಕಾಕರಣವೂ ಉತ್ತಮವಾಗಿ ನಡೆಯುತ್ತಿದೆ. ಕೆಲ ದಿನಗಳಿಂದ ಲಸಿಕಾ ಅಭಿಯಾನ ಮಂದಗತಿಯಲ್ಲಿ ಸಾಗಿದೆ. ಮುಂದಿನ ತಿಂಗಳಿಂದ ಹೆಚ್ಚು ಲಸಿಕೆ ಕಳುಹಿಸಿಕೊಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವರು ತಿಳಿಸಿದ್ದಾರೆ ಎಂದರು.
ಶಾಲೆ, ಆರೋಗ್ಯ ಕೇಂದ್ರಗಳು ಗ್ರಾಮೀಣ ಪ್ರದೇಶಗಳಿಗೆ ಅಗತ್ಯವಾಗಿದೆ. ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ 32 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಾಂಪೌಂಡ್ ನಿರ್ಮಾಣ ನಡೆಯುತ್ತಿದೆ. ಮುಂದಿನ ವರ್ಷವೂ ಉಳಿದ ಕಾಮಗಾರಿ ನಡೆಯಲಿದೆ ಎಂದರು.
(Measures Taken to Fill all the vacancies in govt hospitals of Karnataka says Health Minister Dr K Sudhakar)
ಇದನ್ನೂ ಓದಿ: Covid Vaccine: ರಾಜ್ಯದಲ್ಲಿ ಕೊವಿಡ್ ಲಸಿಕೆಯ ಕೊರತೆ ಇಲ್ಲ: ಆರೋಗ್ಯ ಸಚಿವ ಡಾ.ಸುಧಾಕರ್ ಸ್ಪಷ್ಟನೆ
ಇದನ್ನೂ ಓದಿ: Covaxin Vaccine: ಮಾಲೂರಿನಲ್ಲಿ ಕೊವ್ಯಾಕ್ಸಿನ್ ತಯಾರಿ ಆರಂಭ: ತಿಂಗಳಿಗೆ 1 ಕೋಟಿಗೂ ಹೆಚ್ಚು ಡೋಸ್ ಲಸಿಕೆ ಉತ್ಪಾದನೆಗೆ ಯೋಜನೆ