ನವದೆಹಲಿ ನ.08: ಮೇಕೆದಾಟು (Mekedatu) ವಿಚಾರವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಸುಪ್ರಿಂಕೋರ್ಟ್ (Supreme Court) ಆದೇಶದಂತೆ ಬೆಂಗಳೂರಿಗೆ 24 ಟಿಎಂಸಿ ಕಾವೇರಿ (Cauvery) ನೀರು ಮೀಸಲು ಇಡಬೇಕು. ನೀರು ಮೀಸಲಿಡುವ ಬಗ್ಗೆ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಪ್ರತಿವರ್ಷ 24 ಟಿಎಂಸಿ ನೀರು ಮೀಸಲಿಟ್ಟು ಆದೇಶ ಹೊರಡಿಸಿದ್ದೇವೆ. ಸುಪ್ರೀಂ ಕೋರ್ಟ್ ಅನುಮತಿ ಪಡೆದು 24 ಟಿಎಂಸಿ ನೀರು ಮೀಸಲಿಟ್ಟಿದ್ದೇವೆ. ಮುಂದಿನವಾರ ಮೇಕೆದಾಟು ಯೋಜನೆ ವಿಚಾರ ಚರ್ಚೆಗೆ ಬರಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ನವದೆಹಲಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಆಪರೇಷನ್ ಕಮಲ ವಿಚಾರದ ಕುರಿತಾದ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು ಆಪರೇಷನ್ ಕಮಲದ ಬಗ್ಗೆ ಮಾತನಾಡಲ್ಲ. ಬಿಜೆಪಿಯವರು ನಮ್ಮ ಶಾಸಕರನ್ನೂ ಕರೆದುಕೊಳ್ಳಲು ಆಗಲ್ಲ. ಬಿಜೆಪಿಯಲ್ಲಿ ನಾಯಕತ್ವದ ಬಗ್ಗೆಯೇ ತೀರ್ಮಾನ ಮಾಡಲು ಆಗಿಲ್ಲ. ಬಿಜೆಪಿಯವರು ಗೊಂದಲ ಸೃಷ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿಯಲ್ಲೇ ಸಾಕಷ್ಟು ಸಮಸ್ಯೆ ಇದೆ. ಮಾರ್ಕೆಟ್ನಲ್ಲಿ ಇರುವುದಕ್ಕೆ ಇಂತಹ ಪ್ರಯತ್ನ ಮಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಸಭೆ ಆಗಿರುವ ಬಗ್ಗೆ ನಾನು ಮಾತನಾಡಲ್ಲ. ಎಲ್ಲಾ ಮೂಮೆಂಟ್ ಗೊತ್ತಿದೆ, ನಿರುದ್ಯೋಗಿಗಳು ಚಪಲಕ್ಕೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ರಾಜ್ಯ ಸರ್ಕಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಟೀಕೆ ವಿಚಾರವಾಗಿ ಮಾತನಾಡಿದ ಅವರು ಪ್ರಧಾನಿಗಳು ನಮ್ಮನ್ನು ನೆನಪಿಸಿಕೊಳ್ಳುತ್ತಾರೆ ಅದೇ ಸಂತೋಷ. ನಮ್ಮ ಗ್ಯಾರಂಟಿ, ನಮ್ಮ ಒಗ್ಗಟ್ಟು, ಜನರ ತಿರ್ಮಾನ ಅವರ ನಿದ್ದೆ ಕೆಡಿಸಿದೆ. ಅದಕ್ಕೆ ನೆನಪಿಸಿಕೊಳ್ಳುತ್ತಾರೆ ಎಂದು ಕಾಲೆಳೆದರು.
ಇದನ್ನೂ ಓದಿ: ನಾನು ಯಾವುದಕ್ಕೂ ಅರ್ಜೆಂಟ್ನಲ್ಲಿ ಇಲ್ಲ: ಸಿಎಂ ಸ್ಥಾನದ ಬಗ್ಗೆ ಮಾರ್ಮಿಕವಾಗಿ ಉತ್ತರಿಸಿದ ಡಿಸಿಎಂ ಡಿಕೆ ಶಿವಕುಮಾರ್
ಸಂಪುಟ ಪುನಾರಚನೆ ವಿಚಾರವಾಗಿ ಮಾತನಾಡಿದ ಅವರು ಅದೇಲ್ಲ ಸುಳ್ಳು ಯಾರನ್ನು ಬಿಡುವ ಪ್ರಶ್ನೆ ಇಲ್ಲ. ಸದ್ಯ ಆ ಥರದ ಯಾವ ಆಲೋಚನೆಗಳಿಲ್ಲಿ ಎಂದು ಹೇಳಿದರು. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ. ನವೆಂಬರ್ 15ರಂದು ಮತ್ತಷ್ಟು ನಾಯಕರು ನಮ್ಮ ಪಕ್ಷಕ್ಕೆ ಸೇರುತ್ತಾರೆ ಎಂದು ಅಚ್ಚರಿ ಹೇಳಿಕೆ ನೀಡಿದರು.
ಸಚಿವ ಸತೀಶ್ ಜಾರಕಿಹೊಳಿ ಭೇಟಿ ವಿಚಾರವಾಗಿ ಮಾತನಾಡಿದ ಅವರು ಪಕ್ಷದ ಅಧ್ಯಕ್ಷನಾಗಿ ನಾನು ಸತೀಶ್ ಜೊತೆಗೆ ಮಾತನಾಡಿದ್ದೇನೆ. ಸತೀಶ್ ಮಾತ್ರ ಅಲ್ಲ ಬಹಳಷ್ಟು ನಾಯಕರ ಮನೆಗೆ ಹೋಗಿದ್ದೇನೆ. ಸಚಿವ ಸತೀಶ್ ಜಾರಕಿಹೊಳಿ ಭೇಟಿಯಲ್ಲಿ ಯಾವ ವಿಶೇಷ ಇಲ್ಲ. ನಮ್ಮ ನಿವಾಸದಲ್ಲಿ ಸಭೆ ನಡೆಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸತೀಶ್ ಜಾರಕಿಹೊಳಿ ಮನೆಯಲ್ಲಿ ಸಭೆ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ