ಕೋವಿಡ್ ನಿಯಮ ಉಲ್ಲಂಘನೆ ಕೇಸ್: ಸಿಎಂ, ಡಿಸಿಎಂ ಸೇರಿ ಕಾಂಗ್ರೆಸ್ ನಾಯಕರ ವಿರುದ್ಧದ ಪ್ರಕರಣ ವಾಪಸ್
2022ರ ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆ ವೇಳೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರು ಕೋವಿಡ್ -19 ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂಪಡೆಯಲು ಸಚಿವ ಸಂಪುಟ ನಿರ್ಧರಿಸಿದೆ.
ಬೆಂಗಳೂರು, (ಆಗಸ್ಟ್11): ರಾಮನಗರದ ಮೇಕೆದಾಟು (Mekedatu padayatra) ಬಳಿಯಿಂದ ಬೆಂಗಳೂರಿನವರೆಗೆ ಆಯೋಜಿಸಿದ್ದ ‘ನಮ್ಮ ನೀರು, ನಮ್ಮ ಹಕ್ಕು’ ಪಾದಯಾತ್ರೆ ವೇಳೆ, ಕೋವಿಡ್(Covid) ಮಾರ್ಗಸೂಚಿಗಳು ಹಾಗೂ ಸೆಕ್ಷನ್ 144 ಉಲ್ಲಂಘನೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ(Siddaramaiah), ಡಿ.ಕೆ.ಶಿವಕುಮಾರ್ (DK Shivakumar) ಸೇರಿದಂತೆ ಇನ್ನಿತರ ಕಾಂಗ್ರೆಸ್ (Congress) ನಾಯಕರ ವಿರುದ್ಧ ದಾಖಲಾಗಿದ್ದ 9 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಸಚಿವ ಸಂಪುಟ(Cabinet Meeting) ತೀರ್ಮಾನಿಸಿದೆ. ಅಂದು 2022ರಲ್ಲಿ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಕೋವಿಡ್ ನಿರ್ಬಂಧಗಳ ಹೊರತಾಗಿಯೂ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಅನುಷ್ಠಾನಕ್ಕೆ ಒತ್ತಾಯಿಸಿ ಪಾದಯಾತ್ರೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 9 ಕ್ರಿಮಿನಲ್ ಪ್ರಕರಣಗಳು ದಾಖಲಾಗಿತ್ತು. ಇದೀಗ ಆ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಲು ನಿನ್ನೆಯ (ಆಗಸ್ಟ್ 10) ಸಚಿವ ಸಂಪುಟದದಲ್ಲಿ ನಿರ್ಧರಿಸಲಾಗಿದೆ.
ಇದನ್ನೂ ಓದಿ: ಆಗಸ್ಟ್ 27 ರಂದು ರಾಜ್ಯದ 11 ಸಾವಿರ ಕಡೆ ಗೃಹಲಕ್ಷ್ಮೀ ಯೋಜನೆಗೆ ಚಾಲನೆ: ಡಿಕೆ ಶಿವಕುಮಾರ್
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿಗಳು ಹಾಗೂ ಸೆಕ್ಷನ್ 144 ಉಲ್ಲಂಘನೆಗೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 9 ಕ್ರಿಮಿನಲ್ ಪ್ರಕರಣಗಳನ್ನು ಅಭಿಯೋಜನೆಯಿಂದ ಕೈ ಬಿಡಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಸಂಸದ ಡಿಕೆ ಸುರೇಶ್ ಅವರು ಪಕ್ಷದ ಸಮಾವೇಶವನ್ನು ಆಯೋಜಿಸುವ ಮೂಲಕ ಕೋವಿಡ್ -19 ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಪ್ರಕರಣಗಳಿಗೆ ಸಂಬಂಧಿಸಿವೆ. ತಹಶೀಲ್ದಾರ್ ರಾಮನಗರ ಮತ್ತು ಇತರ ಒಂಬತ್ತು ಪ್ರಕರಣಗಳು ಈ ಅಪರಾಧಗಳಿಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಿವೆ. ಇದೀಗ ಕಾಂಗ್ರೆಸ್ ಶಾಸಕ ಅಶೋಕ್ ಪಟ್ಟಣ್ ನೀಡಿರುವ ಅರ್ಜಿಯನ್ನು ಆಧರಿಸಿ ಸಚಿವ ಸಂಪುಟ ಈ ನಿರ್ಣಯ ಕೈಗೊಂಡಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ