ಮೇಕೆದಾಟು ಯೋಜನೆ (Mekedatu Water Project) ಆಗ್ರಹಿಸಿ ಕರ್ನಾಟಕದ ಕಾಂಗ್ರೆಸ್ (Karnataka Congress) ನಾಯಕರು ಪಾದಯಾತ್ರೆ ನಡೆಸುತ್ತಿದ್ದಾರೆ. ಕೊರೊನಾದಿಂದ ಪಾದಯಾತ್ರೆ ಅರ್ಧಕ್ಕೆ ನಿಂತಿತ್ತು. ಫೆ.27ರಿಂದ ಮತ್ತೆ ಆರಂಭವಾಗಿದೆ. ನಿನ್ನೆ ಬೆಂಗಳೂರಿನ ಬಿಟಿಎಂ ಲೇಔಟ್ನ ಜೆಡಿ ಗಾರ್ಡನ್ ಬಳಿಯಿಂದ ಆರಂಭಗೊಂಡಿದ್ದ ಪಾದಯಾತ್ರೆ ಅರಮನೆ ಮೈದಾನದ ವರೆಗೆ ತಲುಪಿದೆ. ಅರಮನೆ ಮೈದಾನ ತಲುಪುವ ಮೂಲಕ 3ನೇ ದಿನದ ಮೇಕೆದಾಟು ಪಾದಯಾತ್ರೆ ಅಂತ್ಯಗೊಂಡಿದೆ. ಇಂದು ಬೆಳಿಗ್ಗೆ 11 ಗಂಟೆಗೆ ಪಾದಯಾತ್ರೆ ಆರಂಭವಾಗಿದೆ. ಇಂದು ಪಾದಯಾತ್ರೆಯ ಕೊನೆ ದಿನವಾಗಿದ್ದು, ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಂತಿಮ ಸಮಾರಂಭ ನಡೆಯಲಿದೆ.
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ನಡೆಸಿದ ಪಾದಯಾತ್ರೆಗೆ ತೆರೆಬಿದ್ದಿದೆ. ಇವತ್ತು ಕೊನೆದಿನ ಅರಮನೆ ಮೈದಾನದಿಂದ ಶುರುವಾದ ಪಾದಯಾತ್ರೆ, ಕಾವೇರಿ ಜಂಕ್ಷನ್, ಮಲ್ಲೇಶ್ವರಂ, ಮೆಜೆಸ್ಟಿಕ್, ಕಾಟನ್ ಪೇಟೆ, ಚಾಮರಾಜ ಪೇಟೆ ಮಾರ್ಗವಾಗಿ ಬಂದು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅದ್ದೂರಿ ಸಮಾರಂಭದೊಂದಿಗೆ ತೆರೆಬಿತ್ತು. ಇವತ್ತು ಕೊನೆದಿನವಾಗಿದ್ದ ಹಿನ್ನಲೆ ಜನಸಾಗರವೇ ಹರಿದುಬಂದಿತ್ತು. ಪಾದಯಾತ್ರೆಯಿಂದಾಗಿ ಬೆಂಗಳೂರು ಜನತೆಗೆ ಟ್ರಾಫಿಕ್ ಸಮಸ್ಯೆ ಎದುರಾಯ್ತು. ಮಲ್ಲೇಶ್ವರಂ ಬಳಿ ತುಂಬು ಗರ್ಭಿಣಿಯೊಬ್ಬರು ಟ್ರಾಫಿಕ್ ನಲ್ಲಿ ಸಿಲುಕಿ ನರಳಾಡುತ್ತಿದ್ದರು, ಕೂಡಲೇ ಟಿವಿ ನೈನ್ ತಂಡದೊಂದಿಗೆ ಕೈ ಜೋಡಿಸಿದ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ, ಅವರ ವಾಹನ ಮುಂದೆ ಹೋಗಲು ಅವಕಾಶ ಮಾಡಿಕೊಟ್ಟರು.
ಕಾಂಗ್ರೆಸ್ ಪಾದಯಾತ್ರೆಯನ್ನು ಜನ ಒಪ್ಪಿದ್ದಾರೆ. ರಾಜಕೀಯಕ್ಕಾಗಿ ಹೋರಾಟವೆಂದು ಬಿಜೆಪಿಯವ್ರು ಟೀಕಿಸಿದರು. ಬಿಬಿಎಂಪಿ ಚುನಾವಣೆ ಹಿನ್ನೆಲೆ ಪಾದಯಾತ್ರೆ ಎಂದು ಟೀಕಿಸಿದರು. ಅಧಿಕಾರದಲ್ಲಿದ್ದಾಗ ಏನೂ ಮಾಡಲಿಲ್ಲ ಎಂದು ಆರೋಪಿಸಿದರು. ಬಿಜೆಪಿಯವರು ಸುಳ್ಳಿನ ಫ್ಯಾಕ್ಟರಿ ಇದ್ದಂತೆ. ಬಿಜೆಪಿ, ಜೆಡಿಎಸ್‌ವರಿಗೆ ಮಾನ ಮರ್ಯಾದೆ ಇದೆಯಾ? ರಾಜ್ಯದ ಜನರ ಬಗ್ಗೆ ಇವರಿಗೆನಾದರೂ ಕಾಳಜಿ ಇದೆಯಾ? ಎಂದು ಬಿಜೆಪಿ, ಜೆಡಿಎಸ್ ನಾಯಕರ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಶಿವಮೊಗ್ಗದಲ್ಲಿ 144 ಸೆಕ್ಷನ್ ಉಲ್ಲಂಘಿಸಿ ಮೆರವಣಿಗೆ ಮಾಡಲಾಯಿತು. ನಿಯಮ ಉಲ್ಲಂಘಿಸಿದ ಈಶ್ವರಪ್ಪ ವಿರುದ್ಧ ಕೇಸ್ ಹಾಕಿಲ್ಲ. ಆದ್ರೆ ನಮ್ಮ ವಿರುದ್ಧ ರಾಜ್ಯ ಸರ್ಕಾರ ಪ್ರಕರಣ ಹಾಕಿಸಿದೆ. ಜನಪರ ಹೋರಾಟ ಮಾಡಿದ್ರೂ ಕೇಸ್ ದಾಖಲಿಸಲಾಗಿದೆ. ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನಮ್ಮನ್ನು ಟೀಕಿಸಲು ನಿಮಗೆ ನಾಚಿಕೆಯಾಗುವುದಿಲ್ಲವಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮೇಕೆದಾಟು ಯೋಜನೆ ಜಾರಿ ಮಾಡ್ತೀವಿ ಅಂತ ಬೊಮ್ಮಾಯಿ ಹೇಳಿದ್ದಾರೆ. ಬೊಮ್ಮಾಯಿಗೆ ಬದ್ಧತೆ ಇದ್ರೆ, ಆತ್ಮಸಾಕ್ಷಿ ಇದ್ರೆ, ನಾಳೆಯ ಬಜೆಟ್ನಲ್ಲಿ ಯೋಜನೆಗೆ 5 ಸಾವಿರ ಕೋಟಿ ಅನುದಾನ ಕೊಡಲಿ. ಪರಿಸರ ಇಲಾಖೆ ಅನುಮತಿ ಸಿಕ್ಕ ಬಳಿಕ ಯೋಜನೆ ಜಾರಿ ಮಾಡ್ತೀವಿ ಅಂತ ಬಜೆಟ್ನಲ್ಲಿ ಸಿಎಂ ಘೋಷಿಸಲಿ ಎಂದು ಪರಮೇಶ್ವರ್ ಸವಾಲ್ ಹಾಕಿದ್ದಾರೆ.
ಪಾದಯಾತ್ರೆ ಯಶಸ್ಸಿಗೆ ಕಾಂಗ್ರೆಸ್ ಕಾರ್ಯಕರ್ತರೇ ಕಾರಣ ಎಂದು ಸಮಾರೋಪ ಸಮಾರಂಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಪಾದಯಾತ್ರೆಗೆ ಪಕ್ಷಾತೀತವಾಗಿ ಜನರು ಬೆಂಬಲ ಕೊಟ್ಟಿದ್ದಾರೆ. ಮೇಕೆದಾಟು ಯೋಜನೆ ಸಿದ್ದರಾಮಯ್ಯ ಪ್ರಾರಂಭ ಮಾಡಿದ್ರು. ಮೇಕೆದಾಟು ಯೋಜನೆಗೆ ಎಲ್ಲ ಸಚಿವರು ಕೈಜೋಡಿಸಿದ್ದರು. ಡಬಲ್ ಇಂಜಿನ್ ಸರ್ಕಾರದವರಿಗೆ ಕೇಂದ್ರದಿಂದ ಕ್ಲಿಯರೆನ್ಸ್ ತರುವುದಕ್ಕೆ ಆಗಲ್ವಾ ಉದ್ಯಮಿಗಳು ಎರಡು ದಿನಗಳಲ್ಲಿ ಕ್ಲಿಯರೆನ್ಸ್ ತರಿಸುತ್ತಾರೆ. ಮೋದಿ ಗೆಳೆಯರಂತೂ 15 ದಿನಗಳಲ್ಲಿ ಕ್ಲಿಯರೆನ್ಸ್ ತರಿಸ್ತಾರೆ. ತಮ್ಮ ಇಂಡಸ್ಟ್ರಿಗೆ 15 ದಿನಗಳಲ್ಲಿ ಕ್ಲಿಯರೆನ್ಸ್ ತಗೋತಾರೆ. 1.20 ಕೋಟಿ ಜನರ ಸಮಸ್ಯೆ ಬಗೆಹರಿಸಲು ಏಕೆ ಸಾಧ್ಯವಿಲ್ಲ? ಎಂದು ಕೇಂದ್ರ ಸರ್ಕಾರದ ವಿರುದ್ಧ ಮಲ್ಲಿಕಾರ್ಜು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ನಾನು ಯಮುನೆಯ ಸಂದೇಶವನ್ನು ಕಾವೇರಿ ತನಕ ತಂದಿದ್ದೇನೆ. ಮೇಕೆದಾಟು ಪಾದಯಾತ್ರೆ ಕೇವಲ ರಾಜಕೀಯ ಹೋರಾಟ ಮಾತ್ರವಲ್ಲ. ಬೆಂಗಳೂರಿನ ಭೂಮಿಯ ಬಾಯಾರಿಕೆಯನ್ನು ನೀಗಿಸುವ ಮಿಷನ್. ಇತಿಹಾಸ ಬದಲಾಯಿಸುವ ಸಮಯ ಇದು. ಡಬಲ್ ಇಂಜಿನ್ ಸರ್ಕಾರ್ ಡಬಲ್ ದ್ರೋಹ ಮಾಡಿದೆ. ಡಬಲ್ ಇಂಜಿನ್ ಸರ್ಕಾರ 26 ಸಂಸದರನ್ನು ಕರೆದುಕೊಂಡು ಹೋಗಿ ದ್ರೋಹ ಎಸಗಿದೆ. ಅವರನ್ನೆಲ್ಲ ಪ್ರಶ್ನೆ ಮಾಡೋ ಸಮಯ ಈಗ ಬಂದಿದೆ. ರಾಜಕೀಯ ಯುದ್ದ ಇದಲ್ಲ, ಇದೊಂದು ಸಂಕಲ್ಪ ಎಂದು ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ರು.
ಮೇಕೆದಾಟು ಯೋಜನೆ ಜಾರಿ ನಮ್ಮ ರಾಜ್ಯದ ಹಕ್ಕು. ಯೋಜನೆ ಜಾರಿಗಾಗಿ ಹೋರಾಟ ಮುಂದುವರಿಯಬೇಕಿದೆ. ಯೋಜನೆ ಜಾರಿಯಾಗುವವರೆಗೂ ಹೋರಾಟ ನಿಲ್ಲಿಸಬಾರದು. ಇದು ಆರಂಭವಷ್ಟೇ ಯೋಜನೆ ಜಾರಿ ಆಗುವವರೆಗೂ ನಿಲ್ಲಲ್ಲ. ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲೂ ಹೋರಾಟ ನಡೆಯುತ್ತೆ. ಜೈಲಿಗೆ ಕಳಿಸಬೇಕೆಂದು ಬಿಜೆಪಿಯವರು ಪಣ ತೊಟ್ಟಿದ್ದಾರೆ. ನಮ್ಮ ವಿರುದ್ಧ ಬೇರೆ ಬೇರೆ ಕೇಸ್ ಹಾಕಿಸಿದ್ದಾರೆ. ಯಾವುದೇ ಕೇಸ್ ದಾಖಲಿಸಿದರೂ ನಾವು ಹೆದರುವುದಿಲ್ಲ. ಸರ್ಕಾರ ಏನೇ ತೊಂದರೆ ಕೊಟ್ಟರೂ ಹೆದರಲಿಲ್ಲ. ಈಗಾಗಲೇ ನಮಗೆಲ್ಲಾ ವಾರಂಟ್ ಬರುವುದಕ್ಕೆ ಶುರುವಾಗಿದೆ. ಜೈಲಿಗೆ ಹೋಗೋದಕ್ಕೂ ನಾವು ಸಿದ್ಧ. ಸಿಎಂರವರೇ ನಾವು ಯಾವುದೇ ಕೇಸ್‌ಗೂ ಸಿದ್ಧರಿದ್ದೇವೆ ಎಂದು ಡಿಕೆ ಶಿವಕುಮಾರ್ ಗುಡುಗಿದರು.
ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮೇಕೆದಾಟು ಯೋಜನೆ ಪಾದಯಾತ್ರೆ ಸಮಾರೋಪ ಸಮಾರಂಭ ನಡೆಯುತ್ತಿದೆ. ನಾವು ಅಧಿಕಾರದಲ್ಲಿ ಇದ್ದಿದ್ರೆ ನೀರು ಕೊಡಿ ಅಂತ ಕೇಳ್ತಿರಲಿಲ್ಲ ಎಂದು ‘ಕೈ’ ಸಮಾರಂಭದಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ. ನೂರಕ್ಕೆ ನೂರರಷ್ಟು ಮೇಕೆದಾಟು ಯೋಜನೆ ಜಾರಿ ಮಾಡ್ತೀವಿ. ಬೆಂಗಳೂರು ನಗರಕ್ಕೆ ಬಿಜೆಪಿ ಕೊಡುಗೆ ಶೂನ್ಯ. ರಾಜ್ಯ ಹಾಗೂ ಕೇಂದ್ರದಲ್ಲಿರೋದು ಡಬ್ಬಾ ಇಂಜಿನ್ ಸರ್ಕಾರ ಎಂದು ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಮೇಕೆದಾಟು ಯೋಜನೆ ಜಾರಿಗಾಗಿ ಕಾಂಗ್ರೆಸ್ ಪಾದಯಾತ್ರೆ ಅಂತ್ಯವಾಗಿದ್ದು ಕಾಂಗ್ರೆಸ್ ಪಾದಯಾತ್ರೆ ಸಮಾರೋಪ ಸಮಾರಂಭ ಆರಂಭವಾಗಿದೆ. ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾವೇಶ ಆರಂಭವಾಗಿದ್ದು ಸಮಾವೇಶದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಕಾಂಗ್ರೆಸ್ ಹಿರಿಯ ನಾಯಕ ಖರ್ಗೆ ಸೇರಿ ಹಲವರು ಭಾಗಿಯಾಗಿದ್ದಾರೆ.
ಬಸವನಗುಡಿ ನ್ಯಾಷನಲ್ ಮೈದಾನದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು ವೇದಿಕೆಗೆ ರೇಷ್ಮೆ ಶಾಲಿನಲ್ಲಿ ಡಿಕೆ ಶಿವಕುಮಾರ್ ಆಗಮಿಸಿದ್ದಾರೆ. ಡಿಕೆಶಿ ಬಂದ ಕೂಡಲೇ ಜೈಕಾರ ಮುಗಿಲುಮುಟ್ಟಿದೆ. ಇನ್ನು ವೇದಿಕೆಗೆ ಡಿಕೆ ಸುರೇಶ್, ಈಶ್ವರ್ ಖಂಡ್ರೆ, ರಾಮಲಿಂಗ ರೆಡ್ಡಿ, ಎಚ್ ಎಂ ರೇವಣ್ಣ, ಧೃವನಾರಾಯಣ, ಸಿದ್ದರಾಮಯ್ಯ, ರಣದೀಪ್ ಸಿಂಗ್ ಸುರ್ಜೆವಾಲಾ, ಮಲ್ಲಿಕಾರ್ಜುನ ಖರ್ಗೆ, ವಚನಾನಂದ ಸ್ವಾಮೀಜಿ
ವೇದಿಕೆಗೆ ಆಗಮಿಸಿದ್ದಾರೆ.
ಬಸವನಗುಡಿ ನ್ಯಾಷನಲ್ ಮೈದಾನದತ್ತ ಪಾದಯಾತ್ರೆ ಸಾಗುತ್ತಿದ್ದು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಾ ಸಾಗಿದ ಸುರ್ಜೇವಾಲಾ.
ಪಾದಯಾತ್ರೆ, ರ್ಯಾಲಿಗಳನ್ನ ನಿಗದಿತ ಸ್ಥಳದಲ್ಲಿ ಮಾಡಬೇಕು ಅಂತಾ ಹೈಕೋರ್ಟ್ ಆದೇಶ ಹಿನ್ನಲೆಯಲ್ಲಿ ಟಿವಿ9ಗೆ ವಿಎಸ್ ಉಗ್ರಪ್ಪ ಹೇಳಿಕೆ ನೀಡಿದ್ದಾರೆ. ನಾವು ಪ್ರತಿಭಟನೆ ಮಾಡ್ತಿಲ್ಲ. ನಾವು ಸಾರ್ವಜನಿಕರ ಧ್ವನಿಯಾಗಿದ್ದೇವೆ. ಯುದ್ಧ ಕಾಲದಲ್ಲಿ ಶಸ್ತ್ರಾಸ್ತ್ರ ಅನ್ನೋರೀತಿ ತೀರ್ಪುಗಳು ಇರಬಾರದು. ಒಂದು ವರ್ಷದ ಹಿಂದಿನ ಅರ್ಜಿಗೆ ಈಗ ಆದೇಶಿಸಲಾಗಿದೆ. ನೋಡೋಣ ಸರ್ಕಾರ ಏನ್ ಮಾಡುತ್ತೆ ಅಂತಾ
ನಮಗಿನ್ನೂ ಯಾವುದೇ ನೋಟಿಸ್ ಬಂದಿಲ್ಲ. ಸರ್ಕಾರದ ತೀರ್ಮಾನದ ನಂತರ ನಾವೂ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆಯಲ್ಲಿ ರಣದೀಪ್ ಸಿಂಗ್ ಸುರ್ಜೇವಾಲ ಹೆಜ್ಜೆ ಹಾಕಿದ್ದಾರೆ.
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿದ್ದು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಇಂದು ಸಮಾವೇಶ ನಡೆಯಲಿದೆ. ಹೀಗಾಗಿ ಬೃಹತ್ ವೇದಿಕೆಯಲ್ಲಿ ಸುಮಾರು 150 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕಾಂಗ್ರೆಸ್ನ ಹಿರಿಯ, ಕಿರಿಯ ನಾಯಕರಿಗೆ ವೇದಿಕೆಯಲ್ಲಿ ಆಸನ ಮಾಡಲಾಗಿದೆ. ಕಾಲೇಜು ಮೈದಾನದಲ್ಲಿ ಸುಮಾರು 5 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದ್ದು ಮೈದಾನದ ಸುತ್ತಮುತ್ತ ಫೆಕ್ಸ್ಗಳು, ಬ್ಯಾನರ್ಗಳ ಅಳವಡಿಸಲಾಗಿದೆ. ಮೇಕೆದಾಟು ಅಣೆಕಟ್ಟು ಮಾದರಿಯ ಬೃಹತ್ ಫ್ಲೆಕ್ಸ್ ಅಳವಡಿಸಲಾಗಿದೆ. ಸಂಸದ ಡಿ.ಕೆ.ಸುರೇಶ್ ಕೊನೆ ಕ್ಷಣದ ಸಿದ್ಧತೆ ವೀಕ್ಷಿಸುತ್ತಿದ್ದಾರೆ.
ಬೆಂಗಳೂರಿನ ಜನತೆಗೆ ಕುಡಿಯುವ ನೀರು ಮುಖ್ಯ. ಯೋಜನೆ ಜಾರಿ ಮಾಡದೇ ಸರ್ಕಾರ ಸುಳ್ಳು ಹೇಳ್ತಿದೆ ಎಂದು ಟಿವಿ9ಗೆ ಕಾಂಗ್ರೆಸ್ ಹಿರಿಯ ನಾಯಕ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಮೇಕೆದಾಟು ಯೋಜನೆ ಅನುಷ್ಠಾನ ವಿಚಾರದಲ್ಲಿ ಸರ್ಕಾರ ವಿಳಂಬ ಧೋರಣೆ ಮಾಡ್ತಿದೆ. ಇದು ಸರಿಯಲ್ಲ ಕೂಡಲೇ ಯೋಜನೆ ಜಾರಿಮಾಡಬೇಕು ಎಂದರು.
ಒಬ್ಬ ಮಹಿಳೆಯಾಗಿ ನೀರಿನ ಸಮಸ್ಯೆ ಏನೂ ಅನ್ನೋದು ಗೊತ್ತಿದೆ. ನೀರಿಗಾಗಿ ನಾವೂ ಮಾಡುತ್ತಿರುವ ಹೋರಾಟ ಇದು. ನನ್ನ ಜೊತೆ ಫೋಟೋ ತೆಗೆಸಿಕೊಳ್ಳೋಕೆ ಬರ್ತಾರೆ ಖುಷಿ ಇದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಮಲ್ಲೇಶ್ವರಂನಲ್ಲೂ ಮುಂದಿನ ಬಾರಿ ನಮ್ಮದೇ ಗೆಲುವು ಆಗಲಿದೆ. ಸಧ್ಯ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತರುವವರೆಗೂ ಹೋರಾಟ ಮಾಡ್ತೀವಿ ಎಂದರು.
ಮೇಕೆದಾಟು ಪಾದಯಾತ್ರೆಯಿಂದಾಗಿ ಅನೇಕ ಕಡೆ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗಿದೆ. ನ್ಯಾಯಮೂರ್ತಿಗಳಿಗೂ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ. ಪಿಐಎಲ್ ವಿಚಾರಣೆ ವೇಳೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಪ್ರತಿಭಟನೆ, ಮೆರವಣಿಗೆ ನಿಲ್ಲಿಸಲು ಸರ್ಕಾರಕ್ಕೆ ಸಾಧ್ಯವಿಲ್ಲವೇ? ಮೇಖ್ರಿ ಸರ್ಕಲ್, ಅರಮನೆ ಮೈದಾನದ ಬಳಿ ಜಾಮ್ ಆಗಿದೆ. ನ್ಯಾಯಗ್ರಾಮದಿಂದ ಹೈಕೋರ್ಟ್ಗೆ ಬರಲು 1 ಗಂಟೆಯಾಗಿದೆ. ಹೀಗಾದರೆ ಬೆಂಗಳೂರಿನ ಜನರು ಕೆಲಸ ಮಾಡುವುದು ಹೇಗೆ. ಇದೇ ಮೊದಲು ಹೀಗೆ ಪ್ರತಿಭಟನೆ ನಡೆಯುತ್ತಿಲ್ಲ. ಹಿಂದಿನಿಂದಲೂ ಪ್ರತಿಭಟನೆಗಳಿಂದ ಟ್ರಾಫಿಕ್ ಜಾಮ್ ಆಗ್ತಿದೆ. ಈಗ ಆಗದಿದ್ದರೆ ಇನ್ಯಾವಾಗ ಕ್ರಮ ಕೈಗೊಳ್ತೀರಿ ಎಂದು ಸಿಜೆ ರಿತುರಾಜ್ ಅವಸ್ತಿ, ನ್ಯಾ.ಕೃಷ್ಣಕುಮಾರ್ರವರಿದ್ದ ಪೀಠ ತರಾಟೆಗೆ ತೆಗೆದುಕೊಂಡಿದೆ. ನಿಗದಿತ ಸ್ಥಳ ಬಿಟ್ಟು ಬೇರೆಡೆ ಪ್ರತಿಭಟನೆಗೆ ಅವಕಾಶ ನೀಡಬಾರದು. ಯಾವುದೇ ಸಂಘಟನೆ, ಪಕ್ಷಗಳಿಗೆ ಅವಕಾಶ ನೀಡಬಾರದು ಎಂದು ಹೈಕೋರ್ಟ್ ವಿಭಾಗೀಯ ಪೀಠದಿಂದ ಮಹತ್ವದ ಆದೇಶ ಹೊರಡಿಸಲಾಗಿದೆ. ಕಳೆದ ವರ್ಷ ಸ್ವಯಂ ಪ್ರೇರಿತ ಪಿಐಎಲ್ ದಾಖಲಾಗಿತ್ತು.
ಕಾಂಗ್ರೆಸ್ ಪಾದಯಾತ್ರೆಯಿಂದಾಗಿ ಟ್ರಾಫಿಕ್ ಜಾಮ್ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಪ್ರತಿಭಟನೆ, ಮೆರವಣಿಗೆಗೆ ಹೈಕೋರ್ಟ್ ನಿರ್ಬಂಧ ಹೇರಿದೆ. ಫ್ರೀಡಂಪಾರ್ಕ್ನ ನಿಗದಿತ ಜಾಗದಲ್ಲಿ ಮಾತ್ರ ಅವಕಾಶ ನೀಡಲಾಗಿದೆ ಎಂದು ಹೈಕೋರ್ಟ್ ವಿಭಾಗೀಯ ಪೀಠದಿಂದ ಮಹತ್ವದ ಆದೇಶ ಹೊರಡಿಸಲಾಗಿದೆ. ಪ್ರತಿಭಟನೆಗಳಿಂದಾಗಿ ದೈನಂದಿನ ಜೀವನದ ಮೇಲೆ ಪರಿಣಾಮವಾಗ್ತಿದೆ. ಟ್ರಾಫಿಕ್ ಜಾಮ್ನಿಂದ ಬೆಂಗಳೂರಿನ ಜನರಿಗೆ ಸಮಸ್ಯೆಯಾಗುತ್ತಿದೆ. ಇಂತಹ ಮೆರವಣಿಗೆಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಕ್ರಮಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಪಾದಯಾತ್ರೆ ಹಿನ್ನೆಲೆಯಲ್ಲಿ ಮಲ್ಲೇಶ್ವರಂನಲ್ಲಿ ಟ್ರಾಫಿಕ್ಜಾಮ್ ಆಗಿದೆ. ಶೇಷಾದ್ರಿಪುರಂ-ಮಲ್ಲೇಶ್ವರಂ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿದೆ. ಬ್ಯಾರಿಕೇಡ್ಗಳನ್ನು ಅಳವಡಿಸಿ ಪೊಲೀಸರು ರಸ್ತೆ ಮುಚ್ಚಿದ್ದಾರೆ.
ಮೇಕೆದಾಟಿಗಾಗಿ ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆ ನಗರದ ಹಲವೆಡೆ ಟ್ರಾಫಿಕ್ ಜಾಮ್ ಆಗಿದೆ. ಆನಂದ್ ರಾವ್ ಸರ್ಕಲ್, ರೇಸ್ ಕೋರ್ಸ್ ರಸ್ತೆ, ಚಾಲುಕ್ಯ ಸರ್ಕಲ್, ರೈಲ್ವೆ ಪ್ಯಾರಲ್ ರೋಡ್ ಸೇರಿದಂತೆ ಹಲವೆಡೆ ಟ್ರಾಫಿಕ್ ಜಾಮ್ನಲ್ಲಿ ವಾಹನ ಸವಾರರ ಪರದಾಡುತ್ತಿದ್ದಾರೆ.
ಪಾದಯಾತ್ರೆ ಸದಾಶಿವನಗರದ ಶಿವಾಜಿ ಸರ್ಕಲ್ ತಲುಪಿದೆ. ಪಾದಯಾತ್ರೆ ಹಿನ್ನೆಲೆ ಫುಲ್ ಟ್ರಾಫಿಕ್ ಜಾಮ್ ಆಗಿದೆ.
ಕಾಂಗ್ರೆಸ್ ಪಾದಯಾತ್ರೆ ಮಾಡ್ತಿರೋದು ಜನರ ನೀರಿಗಾಗಿ ಅಂತ ಟಿವಿ9ಗೆ ರಾಜ್ಯಸಭಾ ಸದಸ್ಯ ಜೆ.ಸಿ.ಚಂದ್ರಶೇಖರ್ ಹೇಳಿಕೆ ನೀಡಿದರು. ಬಿಜೆಪಿ ಟೀಕೆ ಬಿಟ್ಟು ಯೋಜನೆಯನ್ನ ಅನುಷ್ಠಾನಕ್ಕೆ ತನ್ನಿ. ನಾವು ಮೇಕೆದಾಟು ಯೋಜನೆ ಮಾಡಲು ಅನುಮತಿಸಿಲ್ಲ. ಕೇಂದ್ರ ಸರ್ಕಾರ ನಮಗೆ ಅನುಮತಿ ನೀಡಲಿಲ್ಲ. ಇವತ್ತು ಬಿಜೆಪಿಯ ಡಬಲ್ ಎಂಜಿನ್ ಸರ್ಕಾರವಿದೆ. ಬಿಜೆಪಿ ಸರ್ಕಾರ ಯೋಜನೆ ಜಾರಿಗೆ ಇಚ್ಛೆ ತೋರುತ್ತಿಲ್ಲ. ತಮಿಳುನಾಡಿಗೆ 3 ಯೋಜನೆಗಳಿಗೆ ಅನುಮತಿ ಕೊಡ್ತಾರೆ. ನಮಗ್ಯಾಕೆ ಯೋಜನೆಗಳಿಗೆ ಅನುಮತಿ ಕೊಡೋದಿಲ್ಲ ಎಂದರು.
ಕಾಂಗ್ರೆಸ್ ನಾಯಕರ ಪಾದಯಾತ್ರೆ ಕಾವೇರಿ ಜಂಕ್ಷನ್ ತಲುಪಿದೆ.
ಇಂದು ನಮ್ಮ ಹೋರಾಟ ಕೇವಲ ಸಾಂಕೇತಿಕ ಅಂತ್ಯ ಮಾತ್ರ. ಯಾರು ಎಷ್ಟೇ ತಡೆದರೂ ಮುಂದಿಟ್ಟ ಹೆಜ್ಜೆ ಹಿಂದಿಡುವುದಿಲ್ಲ ಅಂತ ಟಿವಿ9ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಮೇಕೆದಾಟು ಯೋಜನೆ ಜಾರಿಗೆ ಹೋರಾಟ ಮುಂದುವರಿಯುತ್ತೆ. ಕಾಂಗ್ರೆಸ್ ಪಾದಯಾತ್ರೆ ಕಂಡು ಬಿಜೆಪಿ ನಾಯಕರಿಗೆ ಹೊಟ್ಟೆ ಕಿಚ್ಚು. ಹೊಟ್ಟೆ ಕಿಚ್ಚಿಗೆ ಮದ್ದಿಲ್ಲ, ನಾವು ಏನು ಮಾಡಲು ಆಗುವುದಿಲ್ಲ ಎಂದರು.
ಕಾಂಗ್ರೆಸ್ ನಾಯಕರ ಪಾದಯಾತ್ರೆ ಹಿನ್ನೆಲೆ ಪ್ಯಾಲೇಸ್ ಗ್ರೌಂಡ್ ಮುಂಭಾಗದಲ್ಲಿ ಮಂದಗತಿಯಲ್ಲಿ ವಾಹನಗಳು ಸಂಚಾರ ನಡೆಸಿವೆ.
ಕೊನೆ ದಿನದ ಪಾದಯಾತ್ರೆ ಆರಂಭವಾಗಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪಾದಯಾತ್ರೆ ಆರಂಭ ಮಾಡಿದ್ದಾರೆ.
ಕಾಂಗ್ರೆಸ್ನ ಐತಿಹಾಸಿಕ ಪಾದಯಾತ್ರೆ ಇಂದು ಅಂತ್ಯವಾಗುತ್ತಿದೆ ಅಂತ ಟಿವಿ9ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಬೆಂಗಳೂರು ಜನರಿಗೆ ಕುಡಿವ ನೀರಿಗಾಗಿ ಹೋರಾಟ ಮಾಡ್ತಿದ್ದೇವೆ. ಮುಂದಿನ 50 ವರ್ಷಗಳಿಗಾಗಿ ಈ ಯೋಜನೆ ಜಾರಿಯಾಗಬೇಕು. ನಮ್ಮ ಸರ್ಕಾರ ಇದ್ದಾಗಲೇ ಯೋಜನೆಗೆ ಡಿಪಿಆರ್ ಮಾಡಿದ್ದೆವು. ಸಚಿವ ಗೋವಿಂದ ಕಾರಜೋಳ ಸುಳ್ಳು ಹೇಳಿ ದಿಕ್ಕು ತಪ್ಪಿಸ್ತಿದ್ದಾರೆ. ಮೇಕೆದಾಟು ಹೋರಾಟವನ್ನು ನಾವು ಇಲ್ಲಿಗೆ ಅಂತ್ಯಮಾಡುವುದಿಲ್ಲ. ಜನರ ಬಳಿಗೆ ಹೋಗುತ್ತೇವೆ, ಜನರ ಮಧ್ಯೆ ಹೋರಾಟ ಮಾಡುತ್ತೇವೆ ಎಂದರು.
ಬಿಜೆಪಿ ಸರ್ಕಾರ ಲಜ್ಜೆಗೆಟ್ಟ ಸರ್ಕಾರ ಅಂತ ಟಿವಿ9ಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ. ಈ ಪಾದಯಾತ್ರೆಯಿಂದ ಬೆಂಗಳೂರು ಜನತೆಗೆ ನೀರಿನ ಬವಣಿ ತೀರಲಿದೆ. ಬಿಜೆಪಿ ಟೀಕೆಗಳನ್ನ ಮಾಡೋದುಬಿಟ್ಟು ಯೋಜನೆ ಅನುಷ್ಠಾನಕ್ಕೆ ತನ್ನಿ
ನಾವೂ ಯಾವುದೇ ರಾಜಕೀಯ ಉದ್ದೇಶದಿಂದ ಮಾಡುತ್ತಿಲ್ಲ. ಸಾರ್ವಜನಿಕರಿಗಾಗಿ ನೀರಿಗಾಗಿ ಮಾಡುತ್ತಿರುವ ಹೋರಾಟ ಅಂತ ಅವರು ಹೇಳಿದರು.
ಇದು ಡಿಕೆ ಬ್ರದರ್ಸ್ ಪಾದಯಾತ್ರೆ ಅಲ್ಲ ಇದು ಕಾಂಗ್ರೆಸ್ ನ ಪಾದಯಾತ್ರೆ ಅಂತ ಟಿವಿ9ಗೆ ಕಾಂಗ್ರೆಸ್ನ ಮಾಜಿ ಸಚಿವ ಎಂಬಿ ಪಾಟೀಲ್ ಹೇಳಿಕೆ ನಿಡಿದ್ದಾರೆ. ಕಾಂಗ್ರೆಸ್ ಮೇಕೆದಾಟು ಯೋಜನೆಗಾಗಿ ಡಿಪಿಆರ್ ಸಿದ್ದಪಡಿಸಿ ಫೈನಲ್ ಹಂತಕ್ಕೆ ತಂದಿತ್ತು. ಆದರೆ ಇವತ್ತು ಸಚಿವ ಗೋವಿಂದ್ ಕಾರಜೋಳ ಅನುಷ್ಠಾನ ಜಾರಿ ಮಾಡದೇ ಖಾಲಿ ಜಾಹೀರಾತು ಮಾಡುತ್ತಾ ಕಾಲಹರಣ ಮಾಡ್ತಿದ್ದಾರೆ. ನಾವೂ ಕಲಾಪ ಹಾಳು ಮಾಡಿಲ್ಲ.
ಈಶ್ವರಪ್ಪ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ್ದಕ್ಕೆ ಹೋರಾಟ ಮಾಡಿದ್ದು. ರಾಜಕೀಯ ಬಿಜೆಪಿ ಮಾಡೋದು ಬಿಟ್ಟು ಯೋಜನೆ ಜಾರಿ ಮಾಡಲಿ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅರಮನೆ ಮೈದಾನಕ್ಕೆ ಆಗಮಿಸಿದರು.
ಹನ್ನೊಂದು ಗಂಟೆಯಿಂದ ಪಾದಯಾತ್ರೆ ಮಾರ್ಗದಲ್ಲಿ ಟ್ರಾಫಿಕ್ ಅಗುವ ಸಾಧ್ಯತೆಯಿದೆ ಅಂತ ಟಿವಿ9 ಗೆ ಸಂಚಾರಿ ಆಯುಕ್ತ ರವಿಕಾಂತೇಗೌಡ ಹೇಳಿಕೆ ನೀಡಿದ್ದಾರೆ. ಪಾದಯಾತ್ರೆ ರೆಸ್ತೆ ಬಿಟ್ಟು ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಆದಷ್ಟೂ ಬದಲಿ ಮಾರ್ಗ ಬಳಸಿ, ಪಾದಯಾತ್ರೆ ಸಾಗಿದಂತೆ ಹಿಂಬದಿಯಿಂದ ವಾಹನಗಳ ಸಂಚಾರಕ್ಕೆ ಅನುಮತಿ ನೀಡುತ್ತೇವೆ. ನಾಯಕರ ಹೆಚ್ಚಿನ ವಾಹನಗಳು ರಸ್ತೆಗೆ ತರದಂತೆ ತಿಳಿಸಿದ್ದೆವೆ. ಸಂಚಾರ ಪೊಲೀಸರ ಮುಖ್ಯ ರಸ್ತೆ ಬದಲಿಗೆ ಸಣ್ಣ ಸಣ್ಣ ರಸ್ತೆಯಲ್ಲಿ ಸಹ ನಿಯೋಜನೆ ಮಾಡುತ್ತವೆ. ಗೂಗಲ್ ಮ್ಯಾಪ್ನಲ್ಲಿ ರೋಡ್ ಮೂನೆಂಟ್ ಬಗ್ಗೆ ನಾವು ಅಪ್ಡೇಟ್ ಮಾಡಿರುತ್ತೇವೆ. ಸಾರ್ವಜನಿಕರಿಗೆ ಅನುಕೂಲ ಅಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಕೊನೆ ದಿನ ಪಾದಯಾತ್ರೆ ಹಿನ್ನೆಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅರಮನೆ ಮೈದಾನಕ್ಕೆ ಆಗಮಿಸಿದರು.
ನಗರದ ಹೃದಯ ಭಾಗದಲ್ಲಿ ಇಂದು ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿರವ ಹಿನ್ನೆಲೆ ನಗರದ ಮಲ್ಲೇಶ್ವರ, ಮೇಕ್ರಿ ಸರ್ಕಲ್, ಮೆಜೆಸ್ಟಿಕ್ ಸುತ್ತಲೂ ಟ್ರಾಫಿಕ್ ಅಗುವ ಸಾಧ್ಯತೆಯಿದೆ. ಏರ್ಪೋರ್ಟ್ ಕಡೆಯಿಂದ ಬರುವ ವಾಹನಗಳು ಹೆಬ್ಬಾಳ ಔಟರ್ ರಿಂಗ್ ರಸ್ತೆ ಹಾಗು ಜೆಸಿ ನಗರ ರಸ್ತೆಯಲ್ಲಿ ಸಾಗಲು ವ್ಯವಸ್ಥೆ ಮಾಡಲಾಗಿದೆ. ಸದ್ಯ ಈ ಸಮಯದಲ್ಲಿ ಟ್ರಾಫಿಕ್ ಸಾಮಾನ್ಯ ಸ್ಥಿತಿಯಲ್ಲಿ ಇದೆ. ಮುಂದಿನ ಕೆಲವು ಗಂಟೆಗಳು ಪಾದಯಾತ್ರೆ ಸಾಗುವ ಸುತ್ತಮುತ್ತಲಿನ ರಸ್ತೆಯಲ್ಲಿ ಟ್ರಾಫಿಕ್ ಅಗುವ ಸಾಧ್ಯತೆಯಿದೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಬಂದ ಬಳಿಕ ಪಾದಯಾತ್ರೆ ಆರಂಭವಾಗಲಿದೆ.
ಕೊನೆ ದಿನದ ಪಾದಯಾತ್ರೆಗೆ ಕ್ಷಣಗಣನೆ ಶುರುವಾಗಿದೆ. 10ಗಂಟೆ ಸುಮಾರಿಗೆ ಪಾದಯಾತ್ರೆ ಶುರುವಾಗಲಿದೆ. ಕಾರ್ಯಕರ್ತೆಯರು ತಿಂಡಿ ತಿಂದು ಹೆಜ್ಜೆ ಹಾಕಲು ಸಜ್ಜಾಗುತ್ತಿದ್ದಾರೆ.
ಬೆಳಗ್ಗೆ 10 ಗಂಟೆಗೆ ಗಾಯತ್ರಿ ಗ್ರಾಂಡ್, ಅರಮನೆ ಮೈದಾನದಿಂದ ಪಾದಯಾತ್ರೆ ಹೊರಡುತ್ತದೆ. ಕಾವೇರಿ ಥಿಯೇಟರ್, ಸ್ಯಾಂಕಿ ಟ್ಯಾಂಕ್, 18ನೇ ಕ್ರಾಸ್ ಮಲ್ಲೇಶ್ವರಂ, ಮಾರ್ಗೋಸಾ ರಸ್ತೆ, ಕೆ.ಸಿ. ಜನರಲ್ ಆಸ್ಪತ್ರೆ, ಲಿಂಕ್ ರಸ್ತೆ, ಶೇಷಾದ್ರಿಪುರಂ, ರಾಜೀವ್ ಗಾಂಧಿ ಪ್ರತಿಮೆ, ಫ್ಲಾಟ್‌ಫಾರಂ ರಸ್ತೆಯಿಂದ ಸಂಗೊಳ್ಳಿ ರಾಯಣ್ಣ ಪ್ರತಿಮೆ, ಕಾಟನ್‌ಪೇಟೆ ಮುಖ್ಯರಸ್ತೆ, ಬ್ರಿಯಾಂಡ್ ಸರ್ಕಲ್, ರಾಯನ್ ಸರ್ಕಲ್, ಈದ್ಗಾ ಮೈದಾನದಿಂದ ನ್ಯಾಷನಲ್ ಕಾಲೇಜ್ ತಲುಪುತ್ತದೆ. ನ್ಯಾಷನಲ್ ಕಾಲೇಜು ಆಟದ ಮೈದಾನದಲ್ಲಿ ಪಾದಯಾತ್ರೆಯ ಕೊನೆ ಭಾಷಣ ನಡೆಯುತ್ತದೆ.
ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಂತಿಮ ಸಮಾರಂಭ ನಡೆಯಲಿದೆ. ಕಾರ್ಯಕ್ರಮಕ್ಕೆಂದು ಕಾಂಗ್ರೆಸ್ ವತಿಯಿಂದ ಅದ್ದೂರಿ ವೇದಿಕೆ ಸಿದ್ಧವಾಗಿದೆ.
ಕೊನೆ ದಿನ ಪಾದಯಾತ್ರೆ ಇಂದು 10 ಗಂಟೆಗೆ ಆರಂಭವಾಗುತ್ತದೆ.
ಕೊನೆ ದಿನ ಕಾಂಗ್ರೆಸ್ ಪಾದಯಾತ್ರೆ ಇಂದು ಅರಮನೆ ಮೈದಾನದಿಂದ ಆರಂಭವಾಗಲಿದೆ.
ಇಂದು ಕಾಂಗ್ರೆಸ್ ನಾಯಕರು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಂತಿಮ ಸಮಾರಂಭ ನಡೆಯಲಿದೆ.
Published On - 8:32 am, Thu, 3 March 22