ಶಿವರಾತ್ರಿ ನಂತರದ ಅಮಾವಾಸ್ಯೆಯಂದು ಕೋಲಾರದಲ್ಲಿ ಮೈ ಜುಂ ಎನಿಸುವ ಆಚರಣೆ; ಕಾಳಿವೇಷ ಧರಿಸಿ ಸ್ಮಶಾನದಲ್ಲಿ ನೃತ್ಯ, ಪ್ರಾಣಿ ಬಲಿ
ಮಹಾಶಿವರಾತ್ರಿಯ ನಂತರ ಬರುವ ಮೊದಲ ಅಮಾವಾಸ್ಯೆಯಂದು ಕಾಳಿ ಆರಾಧಕರು ದುಷ್ಟ ಶಕ್ತಿಗಳ ನಿವಾರಣೆಗೆ, ಕಾಳಿ ದೇವಿಯನ್ನು ಒಲಿಸಿಕೊಳ್ಳುವ ಸಲುವಾಗಿ ನರಕಾಸುರ ಸಂಹಾರ ಮತ್ತು ಸ್ಮಶಾನ ಉತ್ಸವ ಎಂಬ ವಿಶೇಷ ಆಚರಣೆ ಮಾಡುತ್ತಾರೆ.
ಕೋಲಾರ: ಜಿಲ್ಲೆಯಲ್ಲಿ ವರ್ಷಕ್ಕೊಮ್ಮೆ ಮಹಾಶಿವರಾತ್ರಿ ನಂತರ ಬರುವ ಅಮಾವಾಸ್ಯೆಯಂದು, ಕಾಳಿ ಆರಾಧಕರು ತಮ್ಮ ಶಕ್ತಿಯನ್ನು ತಮ್ಮ ಮಂತ್ರ ತಂತ್ರ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನರಕಾಸುರ ಸಂಹಾರ ಅನ್ನೋ ಆಚರಣೆ ಮಾಡ್ತಾರೆ. ಅಲ್ಲಿ ಕಾಳಿ ಮಾತೆಯೇ ಅವರಲ್ಲಿ ಆವಾಹನೆಯಾಗಿರ್ತಾಳೆ ಅನ್ನೋ ನಂಬಿಕೆ ಅವರದ್ದು, ಆ ಆಚರಣೆಯಲ್ಲಿ ಏನೆಲ್ಲಾ ಮಾಡ್ತಾರೆ ಎಂಬ ವಿವರಣೆ ಇಲ್ಲಿದೆ.
ಕೋಲಾರದಲ್ಲಿ ತಮಿಳುನಾಡಿನ ಸಂಸ್ಕೃತಿಯ ವಿಭಿನ್ನ ಆಚರಣೆ ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದ ಕುಂಬಾರಪಾಳ್ಯದಲ್ಲಿ ತಮಿಳು ಸಂಸ್ಕೃತಿಯ ವಿಭಿನ್ನ ಆಚರಣೆ ನೆರವೇರಿದೆ. ಬಂಗಾರಪೇಟೆ ಮತ್ತು ಕೆಜಿಎಫ್ ನಗರದಲ್ಲಿ ಇಂದಿಗೂ ಬಹುತೇಕ ತಮಿಳು ಸಂಸ್ಕೃತಿ ಆಚರಣೆಯಲ್ಲಿದೆ. ಅದರಂತೆ ಮಹಾಶಿವರಾತ್ರಿಯ ನಂತರ ಬರುವ ಮೊದಲ ಅಮಾವಾಸ್ಯೆಯಂದು ಕಾಳಿ ಆರಾಧಕರು ದುಷ್ಟ ಶಕ್ತಿಗಳ ನಿವಾರಣೆಗೆ, ಕಾಳಿ ದೇವಿಯನ್ನು ಒಲಿಸಿಕೊಳ್ಳುವ ಸಲುವಾಗಿ ನರಕಾಸುರ ಸಂಹಾರ ಮತ್ತು ಸ್ಮಶಾನ ಉತ್ಸವ ಎಂಬ ವಿಶೇಷ ಆಚರಣೆ ಮಾಡುತ್ತಾರೆ. ಈ ದಿನದಂದು ಕಾಳಿ ಆರಾಧಕ ಕಮಲ್ ಎಂಬ ಪೂಜಾರಿ ಕಾಳಿವೇಷದಾರಿಯಾಗಿ ತಲೆಯಮೇಲೆ ಕಿರೀಟವಿಟ್ಟುಕೊಂಡು ಕಾಳಿ ದೇವಾಲಯದಿಂದ ನೃತ್ಯಮಾಡುತ್ತಾ ಸ್ಮಶಾನಕ್ಕೆ ಬರ್ತಾರೆ ಅಲ್ಲಿ ನಿರ್ಮಾಣ ಮಾಡಿರುವ ನರಕಾಸುರ ಮೂರ್ತಿಯ ಮುಂದೆ ನೃತ್ಯ ಮಾಡುತ್ತಾ ಆ ಕಾಳಿ ಮಾತೆಯೇ ಆವಾಹನೆಯಾದಂತೆ ಕೊನೆಗೆ ತ್ರಿಶೂಲದಿಂದ ನರಕಾಸುರನ ಹೊಟ್ಟೆ ಬಗೆಯುವ ಮೂಲಕ ಈ ನರಕಾಸುರ ಸಂಹಾರ ಮಾಡುತ್ತಾನೆ.
ಆವಾಹನೆ ವೇಳೆ ವಿಶಿಷ್ಟ ಬಲಿ ಪೂಜೆ ನಡೆಯುತ್ತದೆ ಈ ವೇಳೆ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಿ ಸ್ಮಶಾನದ ಬಳಿ ಬಂದು ನಂತರ ಕಪ್ಪು ಮೇಕೆ ಹಾಗೂ ಕೋಳಿಯನ್ನು ವಿಶಿಷ್ಟರೀತಿಯಲ್ಲಿ ಬಲಿಕೊಡುತ್ತಾರೆ. ಕುತ್ತಿಗೆ ಕತ್ತರಿಸಿದ ಮೇಕೆಯ ಬಿಸಿರಕ್ತವನ್ನೇ ಸೇವಿಸುತ್ತಾರೆ, ಅಷ್ಟೇ ಅಲ್ಲ ಕೋಳಿಯ ಕತ್ತನ್ನು ಬಾಯಿಯಿಂದ ಕಚ್ಚಿ ಎಸೆದು ಕೋಳಿಯ ರಕ್ತ ಹೀರುತ್ತಾನೆ, ಈ ದೃಷ್ಯವಂತೂ ನೆರೆದಿದ್ದವರ ಮೈ ಜುಂ ಎನ್ನಿಸುತ್ತದೆ.
ಮಂಗಳ ಮುಖಿಯರಿಂದ ಅರ್ಧನಾರೀಶ್ವರ ಪೂಜೆ ಶಿವರಾತ್ರಿಯಂದು ನಾಡಿನಲ್ಲಿ ಶಿವನ ಆಚರಣೆ ಮಾಡಿದ್ರೆ, ಮಂಗಳ ಮುಖಿಯರು ಸ್ಮಶಾನದಲ್ಲಿ ಅರ್ಧನಾರೀಶ್ವರನಂತೆ ಶಿವನನ್ನು ಪೂಜೆ ಮಾಡುತ್ತಾರೆ. ಅನ್ನೋದು ಮಂಗಳಮುಖಿ ಚಂದ್ರಮ್ಮ ಅವರ ಮಾತು.
ತಮಿಳುನಾಡಿನಲ್ಲಿ ಪ್ರಚಲಿತವಿರುವ ಆಚರಣೆ ಕೋಲಾರದಲ್ಲೂ ಇದೆ ತಮಿಳುನಾಡಿನಲ್ಲೇ ಪ್ರಚಲಿತವಿರುವ ಇಂಥಾದೊಂದು ಆಚರಣೆ ನಮ್ಮ ರಾಜ್ಯದ ಗಡಿಯಭಾಗವಾದ ಕೆಜಿಎಫ್ನಲ್ಲೂ ಹಲವಾರು ವರ್ಷಗಳಿಂದ ಆಚರಣೆಯಲ್ಲಿದೆ. ಈ ವಿಶೇಷವಾದ ದಿನದಂದು ಈ ನರಕಾಸುರ ಸಂಹಾರವನ್ನು ನೋಡಲು ದೂರದ ಊರುಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಬರ್ತಾರೆ. ತಮಿಳುನಾಡು, ಬೆಂಗಳೂರಿನಿಂದಲೂ ಜನಬರ್ತಾರೆ. ಈ ವಿಶೇಷ ದಿನದಂದು ಪೂಜೆಯಲ್ಲಿ ಭಾಗವಹಿಸಿದ್ರೆ ದುಷ್ಟಶಕ್ತಿಗಳು ಸಂಹಾರವಾಗುತ್ತವೆ ಅನ್ನೋದು ನಂಬಿಕೆ. ಹಾಗಾಗಿ ನರಕಾಸುರ ಸಂಹಾರದ ನಂತರ ಅಲ್ಲಿನ ಮಣ್ಣನ್ನು ಜನರು ತೆಗೆದುಕೊಂಡು ಹೋಗಿ ತಮ್ಮ ಮನೆಯಲ್ಲಿಟ್ಟರೆ ಮನೆಗೆ ದುಷ್ಟಶಕ್ತಿಗಳು ಪ್ರವೇಶವಿರಲ್ಲ ಜೊತೆಗೆ ಕಾಳಿ ಆರಾಧಕ ಆ ಪೂಜಾರಿಯ ಶಕ್ತಿ ಸಹಹೆಚ್ಚಾಗುತ್ತದೆ ಅನ್ನೋದು ನಂಬಿಕೆ. ಹಾಗಾಗೆ ಇಲ್ಲಿಗೆ ಬರುವ ಭಕ್ತರು ತಮ್ಮ ಹರಕೆಗಳನ್ನು ಈಡೇರಿಸುವಂತೆ ಬೇಡಿಕೊಂಡು ತಮ್ಮ ಇಷ್ಟಾರ್ಥಗಳು ಈಡೇರಿದ ನಂತರ ಇಲ್ಲಿ ಬಂದು ಹರಕೆ ತೀರಿಸುತ್ತಾರೆ.
ಒಟ್ಟಾರೆ ದುಷ್ಟಶಕ್ತಿಗಳ ನಿವಾರಣೆಗೆ ಕರಾವಳಿ ಭಾಗದಲ್ಲಿ ಭೂತಾರಾಧನೆ ಮಾಡಿದ್ರೆ, ಬಯಲು ಸೀಮೆ ಪ್ರದೇಶದಲ್ಲಿ ಹೀಗೆ ಕಾಳಿ ಆರಾಧಕರು ನರಕಾಸುರ ಸಂಹಾರ ಮಾಡೋ ಮೂಲಕ ಸಮಾಜದಲ್ಲಿ ಹಾಗೂ ಮನುಷ್ಯನಲ್ಲಿರುವ ದುಷ್ಟಶಕ್ತಿಗಳನ್ನು ಸಂಹಾರವಾಗುತ್ತದೆ ಅನ್ನೋ ನಂಬಿಕೆ ಹಲವು ವರ್ಷಗಳಿಂದಲೂ ಜೀವಂತವಾಗಿರೋದಂತು ಸುಳ್ಳಲ್ಲ, ಕೆಲವರಿಗೆ ಇದು ಮೂಡನಂಭಿಕೆ ಅನಿಸಿದ್ರು ಆಚರಣೆ ಮಾತ್ರ ನಡೆಯುತ್ತಿದೆ.
ವರದಿ: ರಾಜೇಂದ್ರಸಿಂಹ ಬಿ.ಎಲ್, ಟಿವಿ9 ಕೋಲಾರ
ಇದನ್ನೂ ಓದಿ: MG Motor ZS EV 2022: ಶೀಘ್ರದಲ್ಲೇ 480 ಕಿ.ಮೀ ಮೈಲೇಜ್ ನೀಡುವ MG ಕಾರು ಬಿಡುಗಡೆ