ಟೊಮೆಟೊ ಬೆಲೆ ಕುಸಿತ; ಕೆಜಿಗೆ 2 ರೂಪಾಯಿಯಂತೆ ಮಾರಾಟ, ಕಂಗಾಲಾದ ರೈತರು

ಒಂದೇ ತಿಂಗಳ ಅಂತರದಲ್ಲಿ ಈಗ ಅದರ ಬೆಲೆ ಪಾತಾಳಕ್ಕೆ ಕುಸಿದಿದೆ. ಇದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದ್ದು, 15 ಕೆಜಿಯ ಒಂದು ಬಾಕ್ಸ್​ ಟೊಮ್ಯಾಟೊ 10 ರೂಪಾಯಿಗೆ ಕುಸಿದು ಬಿದ್ದಿದೆ. ಅಂದರೆ ಒಂದು ಕೆಜಿ ಟೊಮ್ಯಾಟೊ ಬೆಲೆ ಕೇವಲ ಎರಡು ರೂಪಾಯಿಯಿಂದ ಆರಂಭವಾಗುತ್ತಿದೆ.

ಟೊಮೆಟೊ ಬೆಲೆ ಕುಸಿತ; ಕೆಜಿಗೆ 2 ರೂಪಾಯಿಯಂತೆ ಮಾರಾಟ, ಕಂಗಾಲಾದ ರೈತರು
ಪ್ರಾತಿನಿಧಿಕ ಚಿತ್ರ
Follow us
| Updated By: preethi shettigar

Updated on: Feb 27, 2022 | 11:24 AM

ಕೋಲಾರ: ನಾಡಿನ ರೈತರ ಪಾಲಿಗೆ ಕೈತುಂಬ ಹಣ ಕೊಡುವ ಕೆಂಪು ಚಿನ್ನ ಎಂದರೆ ಅದು ಟೊಮೆಟೊ. ಒಮ್ಮೊಮ್ಮೆ ಇದು ಪ್ರಕಾಶಮಾನವಾಗಿ ಹೊಳೆದರೆ ಕೆಲವು ಬಾರಿ ತುಕ್ಕು ಹಿಡಿದ ಕಬ್ಬಿಣದಂತಾಗಿ ಬೀದಿಗೆ ಬೀಳುತ್ತದೆ. ಸದ್ಯ ಈ ಬಾರಿ ಉತ್ತಮ ಮಳೆಯಾದ ಪರಿಣಾಮವೋ ಏನೋ ಮತ್ತೆ ಕೆಂಪು ಚಿನ್ನಕ್ಕೆ ತುಕ್ಕು ಹಿಡಿದಂತಾಗಿ ಬಿಟ್ಟಿದೆ. ಹೌದು ಕೋಲಾರದಲ್ಲಿ ಕೆಜಿಎಫ್(KGF) ಚಿನ್ನದ ಗಣಿ ಬಿಟ್ರೆ ಕೆಂಪು ಚಿನ್ನ ಎಂದು ಕರೆಯಲ್ಪಡುವ ಟೊಮ್ಯಾಟೊ(Tomato) ಬೆಳೆ ಕೂಡ ಇಲ್ಲಿಯ ರೈತರಿಗೆ(Farmers) ಒಂದು ಚಿನ್ನದ ಗಣಿಯಂತೆ. ಕೋಲಾರ ಜಿಲ್ಲೆಯೊಂದರಲ್ಲಿಯೇ ಅಂದಾಜು 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಟೊಮ್ಯಾಟೊವನ್ನು ಬೆಳೆಯುತ್ತಾರೆ. ಬೇರೆ ಯಾವ ಜಿಲ್ಲೆಯಲ್ಲೂ ಬೆಳೆಯದಷ್ಟು ಟೊಮ್ಯಾಟೊ ಇಲ್ಲಿಯ ರೈತರು ಬೆಳೆಯುತ್ತಾರೆ.

ಸಾವಿರಾರು ಸಂಖ್ಯೆಯಲ್ಲಿ ರೈತರು ತಾವು ಬೆಳೆದ ಟೊಮ್ಯಾಟೋವನ್ನು ಕೊಲಾರದ ಎಪಿಎಂಸಿ ಮಾರುಕಟ್ಟೆಗೆ ತರುತ್ತಾರೆ. ಆದರೆ ಕಳೆದ ತಿಂಗಳಲ್ಲಿ 15 ಕೆಜಿಯ ಒಂದು ಬಾಕ್ಸ್​ ಟೊಮ್ಯಾಟೋ ಬೆಲೆ ಒಂದು ಸಾವಿರ ದಾಟಿತ್ತು. ಕೊರೊನಾ ಮತ್ತು ಜೋರು ಮಳೆ ಬಳಿಕ ಕೆಲವೇ ಕೆಲವು ರೈತರು ಟೊಮ್ಯಾಟೋ ಬೆಳೆಯಲ್ಲಿ ಕೈತುಂಬಾ ಹಣ ನೋಡಿದ್ದರು. ಆದರೆ ಒಂದೇ ತಿಂಗಳ ಅಂತರದಲ್ಲಿ ಈಗ ಅದರ ಬೆಲೆ ಪಾತಾಳಕ್ಕೆ ಕುಸಿದಿದೆ. ಇದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದ್ದು, 15 ಕೆಜಿಯ ಒಂದು ಬಾಕ್ಸ್​ ಟೊಮ್ಯಾಟೊ 10 ರೂಪಾಯಿಗೆ ಕುಸಿದು ಬಿದ್ದಿದೆ. ಅಂದರೆ ಒಂದು ಕೆಜಿ ಟೊಮ್ಯಾಟೊ ಬೆಲೆ ಕೇವಲ ಎರಡು ರೂಪಾಯಿಯಿಂದ ಆರಂಭವಾಗುತ್ತಿದೆ. ಇದರಿಂದ ಟೊಮ್ಯಾಟೋ ಬೆಳೆದ ರೈತರು ಕಂಗಾಲಾಗಿದ್ದಾರೆ.

ಇನ್ನು ಹೀಗೆ ಏಕಾಏಕಿ ಟೊಮ್ಯಾಟೊ ಸುಗ್ಗಿ ಕಾಲದಲ್ಲೇ ಬೆಲೆ ಕುಸಿತ ಕಾಣೋದಕ್ಕೆ ಕಾರಣಗಳನ್ನು ನೋಡೋದಾದರೆ ಹಿಂದಿನ ದಿನಗಳಲ್ಲಿ ಕೃಷಿಯಲ್ಲಿ ತೊಡಗಿದ್ದವರು ಹಲವು ಕಾರಣಗಳಿಂದ ಉದ್ಯೋಗ ಅರಸಿಕೊಂಡು ಜಿಲ್ಲೆ ತೊರೆದು ಬೆಂಗಳೂರು ಸೇರಿದ್ರು. ಕೊರೊನಾದಿಂದ ಸಾವಿರಾರು ಜನ ಜಿಲ್ಲೆಗೆ ವಾಪಾಸ್ಸಾಗಿದ್ದಾರೆ. ಅದಕ್ಕೆ ಪೂರಕ ಎಂಬಂತೆ ಉತ್ತಮ ಮಳೆ ಜೊತೆಗೆ ಕೆ.ಸಿ.ವ್ಯಾಲಿ ಯೋಜನೆಯ ನೀರು ಕೆರೆಗಳಲ್ಲಿ ತುಂಬಿ ಬೋರ್​ವೆಲ್​ಗಳಲ್ಲಿ ನೀರು ಬರಲು ಆರಂಭವಾಗಿದೆ.

ಹೆಚ್ಚಿನ ರೈತರು ತಮ್ಮ ಜಮೀನಿನಲ್ಲಿ ಕೃಷಿಯಲ್ಲಿ ತೊಡಗಿದ್ದಾರೆ. ಅದರಲ್ಲೂ ಟೊಮ್ಯಾಟೊ ಬೆಳೆಯುವ ರೈತರ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಹಿನ್ನಲೆ ಜಿಲ್ಲೆಯಲ್ಲಿ ಟೊಮ್ಯಾಟೊ ಬೆಳೆ ಹಿಂದೆಂದಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಪರಿಣಾಮ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ಟೊಮ್ಯಾಟೊ ಆವಕ ಬರುತ್ತಿದೆ. ದುರಾದೃಷ್ಟ ಅಂದರೆ ಕೋಲಾರದಲ್ಲಿ ಹೆಚ್ಚಿನ ಟೊಮ್ಯಾಟೊ ಆವಕ ಆಗುತ್ತಿರುವ ಬೆನ್ನಲ್ಲೇ ಹೊರ ರಾಜ್ಯಗಳಲ್ಲೂ ಸ್ಥಳೀಯವಾಗಿ ಟೊಮ್ಯಾಟೊ ಬೆಳೆ ಬಂದಿರುವುದರಿಂದ, ಹೊರ ರಾಜ್ಯಗಳಿಂದ ಬೇಡಿಕೆ ಕಡಿಮೆಯಾಗಿ ಟೊಮ್ಯಾಟೊ ಬೆಲೆ ತೀವ್ರ ಕುಸಿತ ಕಂಡಿದೆ.

ಒಟ್ಟಾರೆ ಕೊರೊನಾ ಸಂಕಷ್ಟದಿಂದ ಹೊರ ಬರುವ ಮೊದಲೇ ಟೊಮ್ಯಾಟೊ ಬೆಲೆ ಕುಸಿತವಾಗಿ ರೈತರಿಗೆ ಸಂಕಷ್ಟ ಎದುರಾಗಿದೆ. ಪರಿಣಾಮ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದ ಬೆಳೆಗೆ ರೂಪಾಯಿ ಬೆಲೆಯೂ ಸಿಗದಂತಾಗಿದ್ದು, ಸರ್ಕಾರ ಈಗಲಾದರೂ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು ಎನ್ನುವುದು ರೈತರ ಆಗ್ರಹವಾಗಿದೆ.

ವರದಿ: ರಾಜೇಂದ್ರಸಿಂಹ

ಇದನ್ನೂ ಓದಿ:

Onion Diseases: ಬೆಲೆ ಕುಸಿತದ ನಡುವೆ ಈರುಳ್ಳಿ ಬೆಳೆಗೆ ಕೊಳೆ ರೋಗ ಕಾಟ, ರೈತರು ಕಂಗಾಲು

ಬೆಲೆ ಕುಸಿತದಿಂದಾಗಿ ಕಂಗಾಲಾದ ರೈತರು; ತೆಂಗು ಬೆಳೆಗಾರರು ಮತ್ತು ವ್ಯಾಪಾರಸ್ಥರಲ್ಲಿ ಹೆಚ್ಚಿದ ಆತಂಕ