ಟೊಮ್ಯಾಟೊ ಬೆಲೆಯಲ್ಲಿ ಏರಿಕೆ; ಏಷ್ಯಾದಲ್ಲೇ ಅತಿದೊಡ್ಡ ಟೊಮ್ಯಾಟೊ ಮಾರುಕಟ್ಟೆ ಕೋಲಾರದಲ್ಲಿ ಹೇಗಿದೆ ಸ್ಥಿತಿಗತಿ?

Kolar News: ಕೋಲಾರ ಎಪಿಎಂಸಿ ಮಾರುಕಟ್ಟೆ ಅಂದರೆ ಏಷ್ಯಾದಲ್ಲೇ ಅತಿದೊಡ್ಡ ಟೊಮ್ಯಾಟೋ ಮಾರುಕಟ್ಟೆ. ಸದ್ಯ ಈ ಮಾರುಕಟ್ಟೆಯಲ್ಲಿ ಟೊಮ್ಯಾಟೋಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​ ಬಂದಿದೆ.

ಟೊಮ್ಯಾಟೊ ಬೆಲೆಯಲ್ಲಿ ಏರಿಕೆ; ಏಷ್ಯಾದಲ್ಲೇ ಅತಿದೊಡ್ಡ ಟೊಮ್ಯಾಟೊ ಮಾರುಕಟ್ಟೆ ಕೋಲಾರದಲ್ಲಿ ಹೇಗಿದೆ ಸ್ಥಿತಿಗತಿ?
ಟೊಮ್ಯಾಟೊ

ಕೋಲಾರ: ಕಿಚನ್ ಕ್ವೀನ್ ಅಂದ್ರೆ ಅದು ಟೊಮ್ಯಾಟೊ. ಟೊಮ್ಯಾಟೊ ಇಲ್ಲದೆ ಅಡುಗೆ ಮನೆಯನ್ನು ಊಹೆ ಮಾಡಿಕೊಳ್ಳೋದು ಕಷ್ಟ. ತಿಳಿಸಾರಿಂದ ಹಿಡಿದು ಭರ್ಜರಿ ಬಿರಿಯಾನಿ ಮಾಡೋದಕ್ಕೂ, ಸಿಂಪಲ್ಲಾಗಿ ಚಿತ್ರಾನ್ನ ಮಾಡ್ತೀವಿ ಅಂದ್ರು ಈ ಟೊಮ್ಯಾಟೊ ಇರಲೇ ಬೇಕು. ಇಂಥ ಕ್ವೀನ್​ಗೆ ಕೋಲಾರದಲ್ಲಿ ಊಟಿ ಮಲೆನಾಡಿನ ವಾತಾವರಣ ಸೃಷ್ಟಿಯಾಗಿದ್ದೇ ನೋಡಿ ಸಿಕ್ಕಾಪಟ್ಟೆ ಡಿಮ್ಯಾಂಡ್​ ಬಂದಿದೆ.

ಏಷ್ಯಾದ ಎರಡನೇ ಅತಿದೊಡ್ಡ ಮಾರುಟಕ್ಟೆಯಲ್ಲಿ ಟೊಮ್ಯಾಟೋಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​
ಕೋಲಾರ ಎಪಿಎಂಸಿ ಮಾರುಕಟ್ಟೆ ಅಂದರೆ ಏಷ್ಯಾದಲ್ಲೇ ಅತಿದೊಡ್ಡ ಟೊಮ್ಯಾಟೋ ಮಾರುಕಟ್ಟೆ ಹಾಗೂ ಇಡೀ ದೇಶಕ್ಕೆ ಹಾಗೂ ಹೊರದೇಶಗಳಿಗೆ ಟೊಮ್ಯಾಟೊ ಸರಬರಾಜು ಮಾಡುವ ದೊಡ್ಡ ಮಾರುಕಟ್ಟೆ ಎಂಬ ಹೆಗ್ಗಳಿಕೆ ಹೊಂದಿದೆ. ಸದ್ಯ ಈ ಮಾರುಕಟ್ಟೆಯಲ್ಲಿ ಈಗ ಕಿಚನ್​ ಕ್ವೀನ್​ ಅಂದರೆ ಟೊಮ್ಯಾಟೋಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​ ಬಂದಿದೆ. 15 ಕೆಜಿ ತೂಕದ ಒಂದು ಟೊಮ್ಯಾಟೊ ಕ್ರೇಟ್‌ನ ಬೆಲೆ ಈಗ 800 ರಿಂದ 1000 ರೂಪಾಯಿ ಬೆಲೆ ಇದೆ. ಮೊನ್ನೆ ಮೊನ್ನೆವರೆಗೂ ಬೆಲೆ ಇಲ್ಲದೆ ಬೇಸರದಲ್ಲಿದ್ದ ಟೊಮ್ಯಾಟೋಗೆ ಇದ್ದಕ್ಕಿಂದಂತೆ ಬೆಲೆ ಏರಿಕೆ ಕಂಡಿದೆ.

ಬಯಲು ಸೀಮೆಯಲ್ಲಿ ಮಲೆನಾಡ ವಾತಾವರಣ ಕಿಚನ್​ ಕ್ವೀನ್​ಗೆ ಹೆಚ್ಚಾದ ಬೆಲೆ
ಕಳೆದ ಎರಡು ತಿಂಗಳಿಂದ ಕೋಲಾರ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ ಅಷ್ಟೇ ಅಲ್ಲದೆ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದೆ ಜೊತೆಗೆ ವಾತಾವರಣದಲ್ಲಿ ಶೀತ ವಾತಾವರಣ ಇರುವ ಪರಿಣಾಮ ಹೊರರಾಜ್ಯ ಹೊರ ದೇಶಕ್ಕೆ ರಪ್ತು ಮಾಡಲು ಗುಣಮಟ್ಟದ ಟೊಮ್ಯಾಟೋ ಬೆಳೆಯಲಾಗುತ್ತಿಲ್ಲ. ಬದಲಾದ ವಾತಾವಣದಿಂದ ಟೊಮ್ಯಾಟೋಗೆ ಅಂಗಮಾರಿ ಸೇರಿದಂತೆ ಊಜಿ ಹುಳುಗಳ ಕಾಟದಿಂದ ಟೊಮ್ಯಾಟೋ ಗುಣಮಟ್ಟ ಹಾಳಾಗಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಒಂದು ಬಾಕ್ಸ್​ ಟೊಮ್ಯಾಟೋ ಬೆಲೆ 800 ರಿಂದ 1000 ರೂ ತಲುಪಿದೆ. ಕೆಜಿ ಟೊಮ್ಯಾಟೋಗೆ 50 ರಿಂದ 60 ರೂಪಾಯಿ ಬೆಲೆ ಏರಿಕೆ ಕಂಡಿದೆ.

ದೇಶದ ವಿವಿದ ರಾಜ್ಯಗಳಿಗಷ್ಟೇ ಅಲ್ಲಾ ಹೊರ ದೇಶಕ್ಕೂ ಸರಬರಾಜಾಗುತ್ತದೆ
ಕೋಲಾರ ಎಪಿಎಂಸಿ ಮಾರುಕಟ್ಟೆಯಿಂದ ತಮಿಳುನಾಡು, ಪಶ್ಚಿಮ ಬಂಗಾಳ, ಗುಜರಾತ್​, ದೆಹಲಿ, ನಾಸಿಕ್​, ಆಂದ್ರ ಸೇರಿದಂತೆ ಬಾಂಗ್ಲಾ, ಅಂಡಮಾನ್​ ನಿಕೋಬಾರ್​ ಮತ್ತು ಪಾಕಿಸ್ತಾನಕ್ಕೂ ಟೊಮ್ಯಾಟೊವನ್ನು ಹೆಚ್ಚಿನ ಪ್ರಮಾಣದಲ್ಲಿ ರಪ್ತು ಮಾಡಲಾಗುತ್ತದೆ. ಆದರೆ ಈಗ ಮಾರುಕಟ್ಟೆಗೆ ಬರುತ್ತಿರುವ ಟೊಮ್ಯಾಟೋವನ್ನು ರಪ್ತು ಮಾಡೋದು ವ್ಯಾಪಾರಸ್ಥರಿಗೆ ಕಷ್ಟಕರವಾಗಿದೆ. ವಾತಾವರಣ ಹಾಗೂ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿರುವ ಕಾರಣ ಟೊಮ್ಯಾಟೋದಲ್ಲಿ ನೀರಿನ ಅಂಶ ಹೆಚ್ಚಾಗುತ್ತಿದೆ. ಹಾಗಾಗಿ ಟೊಮ್ಯಾಟೋ ಹೊರ ರಾಜ್ಯ ಹಾಗೂ ಹೊರ ದೇಶಕ್ಕೆ ರಪ್ತು ಮಾಡುವ ಗುಣಮಟ್ಟ ಹೊಂದಿಲ್ಲ ಅನ್ನೋದು ಒಂದು ಅಂಶವಾದರೆ, ಸುರಕ್ಷಿತವಾಗಿ ಹೊರ ರಾಜ್ಯಗಳಿಗೆ ಟೊಮ್ಯಾಟೋವನ್ನು ಸರಬರಾಜು ಮಾಡೋದು ಸವಾಲಿನ ಕೆಲಸ. ಕಾರಣ ಉತ್ತರ ಭಾರದಲ್ಲೂ ಮಳೆ ಹೆಚ್ಚಾಗಿದೆ, ಟೊಮ್ಯಾಟೋ ಬೆಳೆಯುವ ಪ್ರದೇಶ ಹಾಗೂ ಟೊಮ್ಯಾಟೋ ರಪ್ತು ಮಾಡುವ ಪ್ರದೇಶ ಎರಡೂ ಕಡೆ ಮಳೆ ಪ್ರಮಾಣ ಹೆಚ್ಚಾಗಿ ವಾತಾವರಣವೇ ಶೀತವಾಗಿರುವ ಕಾರಣ ರೈತರು ಬೆಳೆಯುತ್ತಿರುವ ಟೊಮ್ಯಾಟೋ ಹೆಚ್ಚುದಿನ ಬಾಳಿಕೆ ಬರುತ್ತಿಲ್ಲ ಗುಣಮಟ್ಟದ ಬೆಳೆ ಇಲ್ಲದೆ ಬೆಲೆ ಹೆಚ್ಚಾಗಿದೆ.

ಟೊಮ್ಯಾಟೋ ಬೆಳೆಯನ್ನು ಬಾದಿಸುತ್ತಿವೆ ರೋಗ ಹಾಗೂ ಕೀಟ ಬಾದೆ
ವಾತಾವರಣದಲ್ಲಿನ ಶೀತ ವಾತಾವರಣ ಟೊಮ್ಯಾಟೋ ಗುಣಮಟ್ಟ ಕಳೆದುಕೊಳ್ಳಲು ಒಂದು ಕಾರಣವಾದರೆ, ಶೀತವಾತಾವರಣದಿಂದ ರೋಗರುಜಿನಗಳು ಹೆಚ್ಚಾಗುತ್ತಿದೆ. ಟೊಮ್ಯಾಟೋ ಬೆಳೆಗೆ ಅಂಗಮಾರಿ ರೋಗ, ಊಜಿ ರೋಗ, ಚುಕ್ಕೆ ರೋಗಗಳು ಬಾದಿಸುತ್ತಿದೆ. ಇದರಿಂದಾಗಿ ರೈತ ತಾನು ಬೆಳೆದ ಬಹುತೇಕ ಬೆಳೆ ಬೆಳೆ ಗಿಡದಲ್ಲೇ ಕೀಟಗಳಿಗೆ ಆಹಾರವಾಗುತ್ತಿದೆ. ಇರುವ ಅಷ್ಟೋ ಇಷ್ಟೋ ಟೊಮ್ಯಾಟೋವನ್ನು ಮಾರುಕಟ್ಟೆಗೆ ಹಾಕಿದರೂ ಗುಣಮಟ್ಟದ ಕೊರತೆಯಿಂದ ಒಳ್ಳೆಯ ಬೆಲೆ ಸಿಗದಂತಾಗಿ, ರೋಗವಿಲ್ಲದ ಟೊಮ್ಯಾಟೋಗೆ ಮಾತ್ರ ಭರ್ಜರಿ ಬೆಲೆ ಸಿಗುತ್ತಿದೆ.ಅನ್ನೋದು ಮಂಡಿ ಮಾಲೀಕ ಶ್ರೀನಾಥ್​ ಅವರ ಮಾತು.

ಟೊಮ್ಯಾಟೋ ಬೆಳೆ ರೈತರಿಗೆ ಜೂಜಾಟದಂತಾಗಿದೆ
ಕೋಲಾರ ಜಿಲ್ಲೆಯ ರೈತರಿಗೆ ಟೊಮ್ಯಾಟೋ ಬೆಳೆ ಬೆಳೆದು ಉತ್ತಮ ಬೆಲೆ ಪಡೆಯೋದೆ ಒಂದು ಸವಾಲಾಗಿದೆ ಕಾರಣ ಇಷ್ಟು ದಿನ ಮಳೆ ಇಲ್ಲದೆ ಬೆಳೆದ ಬೆಳೆಗೆ ಬೆಲೆ ಸಿಗದೆ ಪರದಾಡುತ್ತಿದ್ದ ಕೋಲಾರದ ರೈತರಿಗೆ ಈ ವರ್ಷ ನಿರೀಕ್ಷೆಗೂ ಮೀರಿದ ಮಳೆಯಾಗಿದೆ ಪರಿಣಾಮ ಗುಣಮಟ್ಟದ ಟೊಮ್ಯಾಟೋ ಬೆಳೆಯಲಾಗದೆ ಬೆಳೆದ ಬೆಳೆಗೆ ಬೆಲೆ ಇಲ್ಲದೆ ಪರದಾಡುವ ಸ್ಥಿತಿ ಬಂದೊದಗಿದ ಪರಿಣಾಮ ಕೋಲಾರದ ರೈತರಿಗೆ ಟೊಮ್ಯಾಟೋ ಬೆಳೆ ಬೆಳೆದು ಲಾಭ ಪಡೆಯೋದು ಒಂದು ರೀತಿಯ ಜೂಜಾಟದಂತಾಗಿರೋದು ಮಾತ್ರ ಸುಳ್ಳಲ್ಲ.

ವರದಿ : ರಾಜೇಂದ್ರ ಸಿಂಹ

ಇದನ್ನೂ ಓದಿ: Tomato Rate: ಟೊಮೆಟೊ ದರದಲ್ಲಿ ಮತ್ತೆ ಏರಿಕೆ! ರೇಟ್ ಹೀಗಿದೆ

ಇದನ್ನೂ ಓದಿ: Tomato Price: ಟೊಮೆಟೊ ದರ 100 ರೂ. ಸಮೀಪ; ಬೆಲೆ ಏರಿಕೆಗೆ ಕಾರಣಗಳು ಏನೆಲ್ಲಾ ಗೊತ್ತಾ?

Click on your DTH Provider to Add TV9 Kannada