ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲೂ ಬಾಣಂತಿ ಸಾವು, ಜಿಲ್ಲೆಯಲ್ಲಿ ಹೆಚ್ಚಿದ ಆತಂಕ
ಉತ್ತರ ಕರ್ನಾಟಕದಲ್ಲಿ ಸಂಭವಿಸುತ್ತಿರುವ ಬಾಣಂತಿಯರ ಸರಣಿ ಸಾವಿನ ಆತಂಕ ಇದೀಗ ಶಿವಮೊಗ್ಗ ಜಿಲ್ಲೆಗೂ ವ್ಯಾಪಿಸಿದೆ. ಜಿಲ್ಲೆಯಲ್ಲಿ ದಾವಣಗೆರೆ ಜಿಲ್ಲೆಯ ಹರಿಹರದ ಬಾಣಂತಿಯೊಬ್ಬರು ಮೃತಪಟ್ಟಿದ್ದಾರೆ. ಸದ್ಯ, ಶಿಶು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮತ್ತೊಂದೆಡೆ, ಬಾಣಂತಿಯರ ಸಾವಿನ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸಿದೆ.
ಶಿವಮೊಗ್ಗ, ಜನವರಿ 4: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲೂ ಬಾಣಂತಿ ಸಾವಾಗಿದೆ. ಮೆಗ್ಗಾನ್ ಆಸ್ಪತ್ರೆಯ ಹೆರಿಗೆ ವಾರ್ಡ್ನಲ್ಲಿ ದಾವಣಗೆರೆ ಜಿಲ್ಲೆಯ ಹರಿಹರ ಮೂಲದ ಕವಿತಾ ಶುಕ್ರವಾರ ಮೃತಪಟ್ಟಿದ್ದಾರೆ. ಕವಿತಾ 2 ದಿನದ ಹಿಂದೆ ಹೆರಿಗೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಶುಕ್ರವಾರ ಬೆಳಗ್ಗೆ 8ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ಬಳಿಕ ಬಾಣಂತಿ ಕವಿತಾಗೆ ದಿಢೀರ್ ರಕ್ತ ಹೆಪ್ಪುಗಟ್ಟಿತ್ತು. ರಕ್ತ ಹೆಪ್ಪುಗಟ್ಟಿದ್ದರಿಂದ ಬಾಣಂತಿ ಸಾವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದರೊಂದಿಗೆ ರಾಜ್ಯದಲ್ಲಿ ಬಾಣಂತಿಯರ ಮರಣ ಮತ್ತಷ್ಟು ಹೆಚ್ಚಾದಂತಾಗಿದೆ. ಬಾಣಂತಿ ಸಾವಿನ ಕುರಿತು ಕುಟುಂಬಸ್ಥರು ಈವರೆಗೆ ದೂರು ನೀಡಿಲ್ಲ ಎನ್ನಲಾಗಿದೆ. ಸದ್ಯ ಕವಿತಾ ಮಗು ಆರೋಗ್ಯವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಏತನ್ಮಧ್ಯೆ, ರಾಜ್ಯಾದ್ಯಂತ ಬಾಣಂತಿಯರ ಸರಣಿ ಸಾವುಗಳು ಸಂಭವಿಸುತ್ತಿದ್ದರೂ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಬಿಜೆಪಿ ಶನಿವಾರ ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.
ಬಡ ಕುಟುಂಬಗಳ ಬಾಣಂತಿಯರು ಮತ್ತು ನವಜಾತ ಶಿಶುಗಳ ಸಾವು ನಿರಂತರ ಸಂಭವಿಸುತ್ತಿದ್ದರೂ ಕಾಂಗ್ರೆಸ್ ಸರ್ಕಾರವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಸರ್ಕಾರದ ಅಸಡ್ಡೆಯಿಂದಾಗಿ ಜನಸಾಮಾನ್ಯರು ಮತ್ತು ಬಡವರ ಶಾಪ ಸರ್ಕಾರಕ್ಕೆ ತಟ್ಟಲಿದೆ ಎಂದು ಬಿಜೆಪಿ ಎಚ್ಚರಿಸಿದೆ.
4 ತಿಂಗಳಲ್ಲಿ 217 ಬಾಣಂತಿಯರ ಸಾವು
ರಾಜ್ಯದಲ್ಲಿ ಈ ವರ್ಷದ ನವೆಂಬರ್‌ವರೆಗೆ 348 ಬಾಣಂತಿಯರ ಸಾವು ಸಂಭವಿಸಿದೆ. ಆಗಸ್ಟ್‌ನಿಂದ ನವೆಂಬರ್‌ವರೆಗೆ ಕೇವಲ ನಾಲ್ಕು ತಿಂಗಳಲ್ಲಿ 217 ಬಾಣಂತಿಯರು ಮೃತಪಟ್ಟಿದ್ದಾರೆ. ಇದರಲ್ಲಿ 179 ಮರಣ ಪ್ರಕರಣಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು 38 ಖಾಸಗಿ ಆಸ್ಪತ್ರೆಗಳಲ್ಲಿ ಸಂಭವಿಸಿವೆ.
ಇದನ್ನೂ ಓದಿ: 2000 ರೂ. ಬದಲು ಬಾಣಂತಿಯರ ಸಾವು ನಿಲ್ಲಿಸಿ, ಅವರಿಗೆ ಬದುಕುವ ಗ್ಯಾರಂಟಿ ಕೊಡಿ: ಆರ್ ಅಶೋಕ್ ವಾಗ್ದಾಳಿ
ಏತನ್ಮಧ್ಯೆ ಬಾಣಂತಿಯರ ಸಾವು ವಿಚಾರವಾಗಿ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಪ್ರತಿಪಕ್ಷ ನಾಯಕ ಆರ್ ಅಶೋಕ್, ಆಡಳಿತವು ಔಷಧ ಮಾಫಿಯಾ ಪ್ರಭಾವಕ್ಕೆ ಸಿಲುಕಿದೆ ಎಂದು ಆರೋಪಿಸಿದ್ದಾರೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ