ಮೇಕೆದಾಟು ಯೋಜನೆ (Mekedatu Water Project) ಆಗ್ರಹಿಸಿ ಕರ್ನಾಟಕದ ಕಾಂಗ್ರೆಸ್ (Karnataka Congress) ನಾಯಕರು ಪಾದಯಾತ್ರೆ ನಡೆಸುತ್ತಿದ್ದಾರೆ. ಕೊರೊನಾದಿಂದ ಪಾದಯಾತ್ರೆ ಅರ್ಧಕ್ಕೆ ನಿಂತಿತ್ತು. ಫೆ.27ರಿಂದ ಮತ್ತೆ ಆರಂಭವಾಗಿದೆ. ಇಂದು ಕೆಂಗೇರಿಯಿಂದ ಬಿಟಿಎಮ್ ಲೇಔಟ್‌ವರೆಗೆ ಪಾದಯಾತ್ರೆ ನಡೆಸುತ್ತಾರೆ. ಕಾಂಗ್ರೆಸ್ ಪಾದಯಾತ್ರೆಯಿಂದ ನಗರದಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಬೆಳಗ್ಗೆ 9.30 ಕ್ಕೆ ಪೂರ್ಣಿಮ ಕನ್ವೆಂಷನ್ ಹಾಲ್‌ನಿಂದ ಪಾದಯಾತ್ರೆ ಆರಂಭವಾಗಿದೆ.
ಬೆಂಗಳೂರಿನ ಬಿಟಿಎಂ ಲೇಔಟ್ನ ಜೆಡಿ ಗಾರ್ಡನ್ ಬಳಿ ಕಾಂಗ್ರೆಸ್ನ 3ನೇ ದಿನದ ಮೇಕೆದಾಟು ಪಾದಯಾತ್ರೆ ಅಂತ್ಯಗೊಂಡಿದೆ. ನಾಳೆ ಜೆಡಿ ಗಾರ್ಡನ್ ಬಳಿಯಿಂದಲೇ ಪಾದಯಾತ್ರೆ ಆರಂಭವಾಗಲಿದೆ.
ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಸಚಿವ ಮುನಿರತ್ನ ವ್ಯಂಗ್ಯ ಮಾಡಿದ್ದಾರೆ. ಕಲಾಪದಲ್ಲಿ ಚರ್ಚೆ ಮಾಡಲು ಕಾಂಗ್ರೆಸ್‌ಗೆ ಅವಕಾಶವಿತ್ತು. ಚರ್ಚೆ ಮಾಡೋದು ಬಿಟ್ಟು ಕಲಾಪ ಹಾಳು ಮಾಡಿದರು. ಇದೀಗ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಮುನಿರತ್ನ ವ್ಯಂಗ್ಯ ಮಾಡಿದ್ದಾರೆ. ಧರಣಿ ಹೆಸರಲ್ಲಿ ಕಲಾಪದಲ್ಲಿ ಹಾಡು ಹಾಡಿ ಕಾಲಕಳೆದರು. ಜನರು ಬುದ್ಧಿವಂತರಿದ್ದಾರೆ, ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಸಚಿವ ಮುನಿರತ್ನ ಪ್ರತಿಕ್ರಿಯೆ ನೀಡಿದ್ದಾರೆ.
ಬನಶಂಕರಿ ದೇವಿಯ ದರ್ಶನ ಪಡೆದ ಡಿಕೆ ಶಿವಕುಮಾರ್, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು.
ಮಧ್ಯಾಹ್ನದ ನಂತರ ವಿಪಕ್ಷ ನಾಯಕ ಸಿದ್ದರಾಮಯ್ಯ ಪಾದಯಾತ್ರೆಗೆ ಗೈರಾಗಿದ್ದಾರೆ.
ವಿಶ್ರಾಂತಿ ಬಳಿಕ ಕಾಂಗ್ರೆಸ್ ಮತ್ತೆ ಪಾದಯಾತ್ರೆ ಆರಂಭ ಮಾಡಿದೆ. ಪಾದಯಾತ್ರೆ ನೋಡಲು ರಸ್ತೆಗಳ ಮಗ್ಗುಲಲ್ಲಿ ಸಾರ್ವಜನಿಕರು ನಿಂತಿದ್ದಾರೆ.
ಬಿಜೆಪಿಯವರು ಬೆಂಕಿ ಇಡೋರು. ನಾವೂ ನೀರಿಗಾಗಿ ಹೋರಾಟ ಮಾಡ್ತಿದ್ದೀವಿ. ಬಿಜೆಪಿಯವರು ಬೆಂಕಿ ಇಡೋ ಕೆಲಸ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಕೃಷ್ಣ ಬೈರೇಗೌಡ ಹೇಳಿಕೆ ನೀಡಿದ್ದಾರೆ. ನಾವು ನಮ್ಮ ಮನೆಗಳಿಗೆ ನೀರಿಗಾಗಿ ಹೋರಾಟ ಮಾಡುತ್ತಿಲ್ಲ. ಬೆಂಗಳೂರು ಜನರ ನೀರಿಗಾಗಿ ಹೋರಾಟ ಮಾಡುತ್ತಿದ್ದೇವೆ. ಸ್ವಲ್ಪ ಟ್ರಾಫಿಕ್ ಸಮಸ್ಯೆಗೆ ಅನುಸರಿಸಿಕೊಳ್ಳಿ. ಎಲ್ಲರೂ ಈ ಪಾದಯಾತ್ರೆಯಲ್ಲಿ ಭಾಗವಹಿಸಿ. ಸಿಟಿ ರವಿ ನಮ್ಮನ್ನ ಮತೀಯ ಪಾರ್ಟಿ ಅಂತಾರೆ. ಬಿಜೆಪಿಯವರದ್ದು 40 ಪರ್ಸೆಂಟ್ ಸರ್ಕಾರ ಅಂತಾ ಕೃಷ್ಣ ಬೈರೇಗೌಡ ಆಕ್ರೋಶ ಹೊರ ಹಾಕಿದ್ದಾರೆ.
ಶಿವರಾತ್ರಿ ಹಬ್ಬ ಹಿನ್ನೆಲೆ ಡಿಕೆ ಶಿವಕುಮಾರ್ಗೆ ಮಹಿಳೆ ಬಿಲ್ವಪತ್ರೆ ಪ್ರಸಾದ ನೀಡಿದರು. ಹೊಸಕೆರೆಹಳ್ಳಿ ಬಳಿ ಡಿಕೆಶಿಗೆ ಆರತಿ ಬೆಳಗುವ ಮೂಲಕ ಮಹಿಳೆಯರು ಸ್ವಾಗತಿಸಿದರು.
ಕಾಂಗ್ರೆಸ್ ಪಾದಯಾತ್ರೆಯಲ್ಲಿ ಭಾಷಣ ಮಾಡಿದ ಸಿದ್ದರಾಮಯ್ಯ, ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷವಾಗಿದೆ. ಮೇಕೆದಾಟು ಯೋಜನೆಗೆ ನಿರಾಕ್ಷೇಪಣ ಪತ್ರ ಪಡೆದಿಲ್ಲ. ಪರಿಸರ ಇಲಾಖೆಯಿಂದ ನಿರಾಕ್ಷೇಪಣ ಪತ್ರ ಪಡೆದಿಲ್ಲ. ಬಿಜೆಪಿಯವ್ರು ಬೆಂಗಳೂರು ಜನರಿಗೆ ದ್ರೋಹ ಮಾಡಿದ್ದಾರೆ.ಹಬ್ಬ ಬಿಟ್ಟು ಬಂದಿದ್ದಕ್ಕೆ ಕಾರ್ಯಕರ್ತರಿಗೆ ನಮೋ ನಮೋ. ದಿನೇ ದಿನೇ ಕಾರ್ಯಕರ್ತರಿಗೆ ಉತ್ಸಾಹ ಜಾಸ್ತಿಯಾಗುತ್ತಿದೆ. ಕಾರ್ಯಕರ್ತರಿಂದ ಆಗಮನದಿಂದ ನಮಗೆ ಉತ್ತೇಜನ ಸಿಗುತ್ತಿದೆ ಎಂದರು.
ಮೇಕೆದಾಟು ಯೋಜನೆಗೆ ಸ್ಟಾಲಿನ್ ಅಡ್ಡಿ ಆಗಿದ್ದಾರೆ ಅಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿಕೆ ನೀಡಿದ್ದಾರೆ.
ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತ ಕಾರ್ಯಕರ್ತರು ಜೈಕಾರ ಹಾಕುತ್ತಿದ್ದಾರೆ.
ಬೆಂಗಳೂರಿಗೆ ನೀರು ಬೇಕು, ನೀರಿಗಾಗಿ ಹೆಜ್ಜೆ ಹಾಕುತ್ತಿದ್ದೀರ ಅಂತ ನಾಯಂಡಹಳ್ಳಿ ಜಂಕ್ಷನ್ ಬಳಿ ಡಿಕೆ ಶಿವಕುಮಾರ್ ಭಾಷಣ ಮಾಡಿದರು. ಬಿಬಿಎಂಪಿ ನಮ್ಮ ಫ್ಲೆಕ್ಸ್ ತೆಗೆದು ಬಿಜೆಪಿ ಅಂತ ಹಾಕಿಕೊಳ್ಳಲಿ. ಅವರು ಏನೇ ಮಾಡಲಿ ನಮ್ಮ ಹೋರಾಟ ನಿಲ್ಲಲ್ಲ ಅಂತ ಹೇಳಿದರು.
ನಾಯಂಡಹಳ್ಳಿ ಸರ್ಕಲ್ ಬಳಿ ಕೈ ನಾಯಕರಿಗೆ ಹೂವಿನ ಸುರಿಮಳೆ ಸುರಿಸಿದ್ದಾರೆ.
ಇನ್ನೊಂದು ವರ್ಷದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ವಿಜಯಪುರದಲ್ಲಿ ಹೇಳಿಕೆ ನೀಡಿದ ಶಾಸಕ ಬಸನಗೌಡ ಯತ್ನಾಳ್, ಕಾಂಗ್ರೆಸ್ ಮಾಡುತ್ತಿರುವ ಪಾದಯಾತ್ರೆ ಚುನಾವಣಾ ಗಿಮಿಕ್. ಕಾಂಗ್ರೆಸ್ ಐವತ್ತು ವರ್ಷ ಕೇಂದ್ರದಲ್ಲಿ ಆಡಳಿತ ಮಾಡಿದೆ. ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿ ಕೆಲಸ ಮಾಡಿದ್ದಾರೆ. ಅಧಿಕಾರದಲ್ಲಿ ಇದ್ದಾಗ ನೆನಪಾಗದೆ ಈಗ ನೆನಪಾಗಿದೆ. ಮೋಜು ಮಸ್ತಿ ಮಾಡಲು ಪಾದಯಾತ್ರೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಾದಯಾತ್ರೆಯಲ್ಲಿ ಗಂಭೀರತೆ ಇಲ್ಲ. ಕಾಂಗ್ರೆಸ್ ರಾಜ್ಯ, ದೇಶದ ಆರೋಗ್ಯಕ್ಕೆ ಕೆಲಸ ಮಾಡಿಲ್ಲ. ಮುಂದಿನ ವರ್ಷದ ಚುನಾವಣೆ ದಿಡೀರ್ ಎಂದು ಬಂದರೆ, ಕಾಂಗ್ರೆಸ್ಸಿಗರಿಗೆ ನಡೆಯಲೂ ಕೂಡಲ್ಲಾ ಆಗಲ್ಲ ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯೋಜನೆ ಮಾಡಲಿಲ್ಲ. ಈಗ ಪಾದಯಾತ್ರೆ ಮಾಡುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ ಅಂತ ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ. ಕಾಂಗ್ರೆಸ್ ರಾಜಕೀಯ ಹಿತಾಸಕ್ತಿಗಾಗಿ ಜನರಿಗೆ ಸಂಕಷ್ಟ ಎದುರಾಗಿದೆ. ಕಾಂಗ್ರೆಸ್ ಪಾದಯಾತ್ರೆಯಿಂದ ಬೆಂಗಳೂರಿಗರಿಗೆ ಸಂಕಷ್ಟ ಎದುರಾಗಿದೆ. ಅದು ಬಿಟ್ಟು ಬೇರೆ ಯಾವುದೇ ಉಪಯೋಗವಿಲ್ಲ. ಬೆಂಗಳೂರಿನ ಜನ ಟ್ರಾಫಿಕ್‌ನಿಂದ ಕಷ್ಟ ಅನುಭವಿಸುತ್ತಿದ್ದಾರೆ ಅಂತ ಹೇಳಿದರು.
ಐಸ್ ಕ್ರೀಮ್ ಗಾಗಿ ಜನ ಮುಗಿಬಿದ್ದರು. ನಾಯಂಡನಹಳ್ಳಿ ಬಳಿ ಐಸ್ ಕ್ರೀಮ್ ಗಾಗಿ ಜನ ಮುಗಿಬಿದ್ದಿದ್ದಾರೆ.
ರಾಜರಾಜೇಶ್ವರಿ ನಗರ ಗೇಟ್ ಬಳಿ ಕಾಂಗ್ರೆಸ್ ನಾಯಕರಿಗೆ ಕಾರ್ಯಕರ್ತರು ಬೃಹತ್ ಸೇಬಿನ ಹಾರ ಹಾಕಿದ್ದಾರೆ.
ಪಾದಯಾತ್ರೆಯಲ್ಲಿ ಎಳೆನೀರಿಗಾಗಿ ಜನ ಮುಗಿಬಿದ್ದಿದ್ದಾರೆ. ಗೋಪಾಲನ್ ಮಾಲ್ ಬಳಿ ಎಳೆನೀರಿಗೆ ಭಾರಿ ಡಿಮ್ಯಾಂಡ್ ಇದೆ. ನಡಿಗೆಯಲ್ಲಿ ಪಾಲ್ಗೊಂಡವರಿಗೆ ಉಚಿತ ಎಳೆನೀರು ವ್ಯವಸ್ಥೆ ಮಾಡಲಾಗಿದೆ.
ಕೇಸ್ ದಾಖಲಿಸಿದರೆ ಹೆದರಲ್ಲ ಜಗ್ಗಲ್ಲ ಅಂತ ಟಿವಿ9ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ನೀರಿಗಾಗಿ ಹೋರಾಟ ಮಾಡ್ತಿರೋದು. ಯಾರ ಹೆದರಿಕೆಗೋ ಜಗ್ಗಲ್ಲ. ಹೋರಾಟ ಮಾಡೋದಕ್ಕೆ ಪರ್ಮಿಷನ್ ಯಾಕೆ ಬೇಕು. ಇವರದ್ದು ಯೋಜನೆ ಜಾರಿ ಮಾಡಲು ವಿಳಂಬನೆ ದೋರಣೆ ಮಾಡುತ್ತಿದೆ. ಟ್ರಾಫಿಕ್ ಜಾಮ್ ಸ್ವಲ್ಪ ಅನುಸರಿಸಕೊಳ್ಳಬೇಕು. ನೀರಿನ ಪರಿಹಾರ ಮುಖ್ಯ ಅಂತ ಸಿದ್ದರಾಮಯ್ಯ ತಿಳಿಸಿದರು.
ಕಾಂಗ್ರೆಸ್ ನಾಯಕರ ಮೇಲೆ ಹೂ ಸುರಿಮಳೆ ಸುರಿಸಿ, ಪಟಾಕಿ ಸಿಡಿಸಿ ಅದ್ದೂರಿ ಸ್ವಾಗತ ಕೋರಿದ್ದಾರೆ.
ಪಾದಯಾತ್ರೆ ವೇಳೆ ಜನರು ಮಜ್ಜಿಗೆ ಕುಡಿಯಲು ಮುಗಿಬಿದ್ದಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆ ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ವಿವಿ ಗೇಟ್, ಆರ್.ಆರ್.ನಗರ ಗೇಟ್, ನಾಯಂಡಹಳ್ಳಿ ಬಳಿ ರಿಂಗ್ ರೋಡ್‌ನಲ್ಲಿ ಟ್ರಾಫಿಕ್ ಜಾಮ್ ಆಗಿದೆ.
ಕೆಲಸವಿಲ್ಲದೆ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದೆ ಅಂತ ಬಳ್ಳಾರಿಯಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ. ಅಧಿಕಾರ ಇದ್ದಾಗ ಮೇಕೆದಾಟು ಯೋಜನೆ ಮಾಡಿಲ್ಲ. ನಾಯಕರಾಗಲು ಕಾಂಗ್ರೆಸ್‌ನಲ್ಲಿ ಪೈಪೋಟಿ ಶುರುವಾಗಿದೆ. ಕಾಂಗ್ರೆಸ್ ನಾಯಕರಿಗೆ ಕುರ್ಚಿಯ ಮೇಲೆ ಕಣ್ಣು ಬಿದ್ದಿದೆ. ಬಿಜೆಪಿ ಅಭಿವೃದ್ಧಿ ಮೇಲೆ ಕಣ್ಣಿಟ್ಟಿದೆ ಅಂತ ಸಚಿವರು ಹೇಳಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಪಾದಯಾತ್ರೆ ಸೇರಿಕೊಂಡರು.
ಕುಡಿಯುವ ನೀರಿನ ಯೋಜನೆಗೆ ಯಾರ ಅನುಮತಿಯೂ ಬೇಡ. ಹೀಗೆಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಪಾದಯಾತ್ರೆ ಮಾಡುವುದರಿಂದ ನಮಗೆ ಅಡ್ಡಿಯಿಲ್ಲ ಎಂದಿದ್ದಾರೆ. ಗೋವಿಂದ ಕಾರಜೋಳಗೆ ಇದು ಗೊತ್ತಿಲ್ವಾ ಡಿ.ಕೆ.ಶಿವಕುಮಾರ್ ಹೇಳಿದರು.
ಜ್ಞಾನಭಾರತಿ ಜಂಕ್ಷನ್ನಿಂದ ಪೂರ್ಣಿಮಾ ಕಲ್ಯಾಣ ಮಂಟಪದವರೆಗೆ ಏಕ ಮುಖ ಸಂಚಾರ ಮಾಡುತ್ತಿದ್ದಾರೆ. ಪಾದಯಾತ್ರೆ ಬರುವ ರಸ್ತೆಯಲ್ಲಿ ಪೊಲೀಸರು ವಾಹನ ಸಂಚಾರ ಕಡಿಮೆ ಮಾಡಿದರು.
ಪೂರ್ಣಿಮಾ ಪ್ಯಾಲೇಸ್ನಿಂದ ಮೂರನೇ ದಿನದ ಮೇಕೆದಾಟು ಪಾದಯಾತ್ರೆ ಆರಂಭವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬಿ.ಕೆ ಹರಿಪ್ರಸಾದ್, ರಾಮಲಿಂಗಾರೆಡ್ಡಿ ಸೇರಿದಂತೆ ಕಾಂಗ್ರೆಸ್ ನಾಯಕರು ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಪಾದಯಾತ್ರೆಗೆ ಇನ್ನೂ ಆಗಮಿಸಿಲ್ಲ.
ಕೇಂದ್ರ ಸರ್ಕಾರ ಕೊವಿಡ್ ನಿಯಮಗಳನ್ನ ಹಿಂಪಡೆಯಲು ಸೂಚನೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ಅವರು ಎಲ್ಲಾ ಕಡೆ ಕಾರ್ಯಕ್ರಮಗಳನ್ನ ಮಾಡ್ತಿದ್ದಾರೆ. 144ಸಕ್ಷನ್ ಜಾರಿಯಾದ್ರು ಅವರು ಕಾರ್ಯಕ್ರಮ ಮಾಡ್ತಿದ್ದಾರೆ. ಆದ್ರೆ ನಮ್ಮ ಮೇಲೆ ಕೇಸ್ ದಾಖಲಿಸ್ತಾರೆ. ಪೊಲೀಸರು ಸಹ ಹೇಳಿದ್ದೇಲ್ಲ ಕೇಳ್ಕೊಂಡಿದ್ದಾರೆ. ಅವರ ಮಾತು ಕೇಳ್ಕೊಂಡು ಕೆಲ ಪೊಲೀಸರು ನಮಗೆ ತೊಂದರೆ ಕೊಡ್ತಿದ್ದಾರೆ. ಅವರ ಹೆಸರೆಲ್ಲ ನೆನಪಿದೆ. ಅಧಿಕಾರ ಶಾಶ್ವತವಲ್ಲ. ಸೂರ್ಯ ಹುಟ್ಟುತ್ತೆ ಸೂರ್ಯ ಮಳುಗುತ್ತೆ. ಕಾನೂನು ಎಲ್ಲರಿಗೂ ಒಂದೇ ಅಲ್ವಾ. ಕಮ್ಯೂನಲ್ ಗಲಾಟೆಯಲ್ಲಿ ಈಶ್ವರಪ್ಪ ಹೋದಾಗ ಏನ್ ಕ್ರಮ ಜರುಗಿಸಿದ್ರು. ಆರಗ ಜ್ಞಾನೇಂದ್ರ ಒಬ್ಬ ನಾಲಾಯಕ್ ಅಂತ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಇನ್ನು 3 ದಿನ ಟ್ರಾಫಿಕ್ ಜಾಮ್ ಆಗಬಹುದು. ಹೀಗಾಗಿ ಬೆಂಗಳೂರು ಜನತೆಯ ಕ್ಷಮೆಯಾಚಿಸುತ್ತೇನೆ. ಪಾದಯಾತ್ರೆಗೆ ಪಕ್ಷಭೇದ ಮರೆತು ಸಹಕಾರ ಕೊಟ್ಟಿದ್ದಾರೆ. ಟೀಕೆಗಳನ್ನು ಉಪದೇಶವೆಂದು ಸಂತೋಷದಿಂದ ಸ್ವೀಕಾರ ಮಾಡುತ್ತೇವೆ. ಮುರುಘಾಶ್ರೀ ಸೇರಿ ಕೆಲವು ಶ್ರೀಗಳು ಸಹಕಾರ ಕೊಟ್ಟಿದ್ದಾರೆ ಅಂತ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನ ಜನರು, ರೈತರ ಬದುಕಿಗಾಗಿ ಹೋರಾಡ್ತಿದ್ದೇವೆ ಅಂತ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನಿಡಿದ್ದಾರೆ. ನಮ್ಮ ಪಾದಯಾತ್ರೆ ಬೆಂಗಳೂರು ನಗರಕ್ಕೆ ಕಾಲಿಟ್ಟಿದೆ. ಬಿಬಿಎಂಪಿ ಕಮಿಷನರ್ ನಮ್ಮ ಬ್ಯಾನರ್‌ಗಳನ್ನು ತೆಗೆಸ್ತಿದ್ದಾರೆ. ನಮ್ಮ ಬ್ಯಾನರ್ ತೆಗೆಸಿದ್ರೆ ಬಿಎಸ್‌ವೈ ಜನ್ಮದಿನದ ಬ್ಯಾನರ್. ಕೆಲ ಶಾಸಕರು ಕಟ್ಟಿರುವ ಬ್ಯಾನರ್ ನಮ್ಮವರು ತೆಗೆಯುತ್ತಾರೆ. ನಮ್ಮ ವಿರುದ್ಧ ದುರುದ್ದೇಶದಿಂದ ಪ್ರಕರಣ ದಾಖಲಿಸಿದ್ದಾರೆ ಅಂತ ಹೇಳಿದರು.
ಪಾದಯಾತ್ರ ಇಂದು ಕೆಂಗೇರಿಯಿಂದ ಆರಂಭವಾಗುತ್ತದೆ. ನಂತರ ನಾಯಕರು ಬಿಟಿಎಂ ಲೇಔಟ್‌ನಲ್ಲಿ ವಾಸ್ತವ್ಯ ಹೂಡುತ್ತಾರೆ.
ಅನಧಿಕೃತ ಪ್ಲೆಕ್ಸ್, ಬ್ಯಾನರ್ ತೆರವು ಮಾಡಲು ಬಿಬಿಎಂಪಿ ಹಿಂದೇಟು ಹಾಕಿದೆ. ಆರ್ ಆರ್ ನಗರ ಹಾಗೂ ಕೆಂಗೇರಿ ಭಾಗದಲ್ಲಿ ರಸ್ತೆ ಉದ್ದಕ್ಕೂ ಫ್ಲೆಕ್ಸ್, ಬ್ಯಾನರ್ ಅಳವಡಿಕೆ ಮಾಡಲಾಗಿದೆ. ತೆರವು ಮಾಡ್ತಿದ್ದೇವೆ ಎಂದು ಬಿಬಿಎಂಪಿ ಹೇಳುತ್ತಿದೆ. ಆದರೆ, ಎಲ್ಲಿಯೂ ತೆರವು ಮಾಡಿಲ್ಲ.
ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆ ನಗರದಲ್ಲಿ ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್‌ಗಳನ್ನ ತೆರವು ಮಾಡಲು ಬಿಬಿಎಂಪಿ ಸೂಚಿಸಿದೆ. ಬಿಬಿಎಂಪಿ ಮುಖ್ಯ ಆಯುಕ್ತರು ಫ್ಲೆಕ್ಸ್ಗಳನ್ನ ತೆರವು ಮಾಡಲು ಸೂಚನೆ ನೀಡಿದ್ದು, ಪೊಲೀಸ್ ಅಧಿಕಾರಿಗಳ ಜೊತೆಗೂಡಿ ತೆರವು ಮಾಡಲು ತಿಳಿಸಿದ್ದಾರೆ. ಬೆಂಗಳೂರಿನ ಆರ್ ಆರ್ ನಗರ, ಕೆಂಗೇರಿ, ಮೈಸೂರು ರಸ್ತೆ, ನಾಯಂಡಹಳ್ಳಿ ಸೇರಿದಂತೆ ಪಾದಯಾತ್ರೆ ಸಾಗುವ ಮಾರ್ಗದಲ್ಲಿ ಬ್ಯಾನರ್‌ಗಳನ್ನ ಅಳವಡಿಕೆ ಮಾಡಲಾಗಿದೆ.
ಇನ್ನು ಕೆಲವೇ ಕ್ಷಣಗಳಲ್ಲಿ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಬಳಿಕ ಪಾದಯಾತ್ರೆ ಆರಂಭವಾಗಲಿದೆ.
ಕಾಂಗ್ರೆಸ್ ಪಾದಯಾತ್ರೆಗೆ ಕ್ಷಣಗಣನೆ ಶುರುವಾಗಿದೆ. ಕೆಂಗೇರಿಯ ಪೂರ್ಣಿಮಾ ಪ್ಯಾಲೇಸ್ನಿಂದ ಹೊರಡಲಿರುವ ಮೆರವಣಿಗೆ, ಪೂರ್ಣಿಮ ಕನ್ವೆಂಷನ್ ಹಾಲ್‌ನಿಂದ, ಜ್ಞಾನಭಾರತಿ ಮೆಟ್ರೋ ಸ್ಟೇಷನ್, ನಾಯಂಡನಹಳ್ಳಿ, ನಾಯಂಡನಹಳ್ಳಿ ಜಂಕ್ಷನ್, ಪೆಸೆಟ್ ಕಾಲೇಜ್ ಜಂಕ್ಷನ್, ಕತ್ರಿಗುಪ್ಪೆ ಮುಖ್ಯರಸ್ತೆ ಜಂಕ್ಷನ್ ತಲುಪುತ್ತದೆ. ನಂತರ ವೆಂಕಟಾದ್ರಿ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನದ ಊಟಕ್ಕೆ ಹಾಗೂ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 4 ಗಂಟೆಗೆ ಮತ್ತೆ ಪಾದಯಾತ್ರೆ ಆರಂಭವಾಗುತ್ತದೆ. ಕದಿರೇನಹಳ್ಳಿ ಜಂಕ್ಷನ್, ಬನಶಂಕರಿ ದೇವಾಲಯ, ಜಯದೇವ ಆಸ್ಪತ್ರೆ, ಅದೈತ್ ಪೆಟ್ರೋಲ್ ಬಂಕ್ ಮೂಲಕ ಬಿಟಿಎಂ ಲೇಔಟ್‌ನಲ್ಲಿ ಮೂರನೇ ದಿನದ ಪಾದಯಾತ್ರೆ ಅಂತ್ಯವಾಗುತ್ತದೆ.
ಇಂದು ಕೆಂಗೇರಿಯಿಂದ ಬಿಟಿಎಂ ಲೇಔಟ್‌ವರೆಗೆ ಪಾದಯಾತ್ರೆ ನಡೆಯುತ್ತದೆ.
ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸುತ್ತಿದ್ದಾರೆ. ಇಂದು ಬೆಂಗಳೂರಿನಿಂದ ಪಾದಯಾತ್ರೆ ಆರಂಭವಾಗಲಿದೆ.
Published On - 8:31 am, Tue, 1 March 22