ಮಂಗಳೂರು: ಬಿಸಿ ರೋಡ್ ಪುಂಜಾಲಕಟ್ಟೆ ದ್ವಿಪಥ ರಸ್ತೆ ಲೋಕಾರ್ಪಣೆ, ಸಾವಿರಾರು ಕೋಟಿ ಮೊತ್ತದ ಯೋಜನೆಗಳಿಗೆ ನಿತಿನ್ ಗಡ್ಕರಿ ಚಾಲನೆ
ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರವು ವಿವಿಧ ಯೋಜನೆಗಳಿಗೆ ₹ 19 ಸಾವಿರ ಕೋಟಿ ಅನುವಾದವನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಕೊಟ್ಟಿದೆ.
ಮಂಗಳೂರು: ಸಾವಿರಾರು ಕೋಟಿ ರೂಪಾಯಿ ಮೊತ್ತದ ವಿವಿಧ ಹೆದ್ದಾರಿ ಯೋಜನೆಗಳಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಸೋಮವಾರ ಚಾಲನೆ ನೀಡಿದರು. ರಾಷ್ಟ್ರೀಯ ಹೆದ್ದಾರಿ (National Highway) 234ರ ಬಿ.ಸಿ.ರೋಡ್-ಪುಂಜಾಲಕಟ್ಟೆ ದ್ವಿಪಥ ರಸ್ತೆಯನ್ನೂ ಸಚಿವರು ಲೋಕಾರ್ಪಣೆಗೊಳಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಸಂಸದ ನಳಿನ್ ಕುಮಾರ್ ಕಟೀಲು, ಸಚಿವ ಸುನಿಲ್ ಕುಮಾರ್ ಭಾಗವಹಿಸಿದ್ದರು. ಮಂಗಳೂರು ವಿಮಾನ ನಿಲ್ದಾಣದಿಂದ ಕುಲಶೇಖರ ಚರ್ಚ್ ಮೈದಾನಕ್ಕೆ ಆಗಮಿಸಿದ ಸಚಿವರು ಅಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾದರು.
ಸಮಾರಂಭದಲ್ಲಿ ಮಾತನಾಡಿದ ಸಂಸದ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, 13 ವರ್ಷ ಸಂಸದನಾಗಿ ನಾನು ಮಾಡಿದ್ದೇನು ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಿರುವ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಯೇ ಇದಕ್ಕೆ ಉತ್ತರ ಹೇಳುತ್ತಿದೆ ಎಂದು ತಿಳಿಸಿದರು. ರಾಷ್ಟ್ರೀಯ ಹೆದ್ದಾರಿಗಳಿಗೆ ಮಾಂತ್ರಿಕ ರೂಪ ಕೊಟ್ಟವರು ನಿತಿನ್ ಗಡ್ಕರಿ. ನಮ್ಮ ಹೆದ್ದಾರಿಗಳು ಈಗ ಅಮೆರಿಕದ ಹೆದ್ದಾರಿಗಳಿಗೆ ಸರಿಸಮನಾಗಿ ಅಭಿವೃದ್ಧಿಯಾಗುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರವು ವಿವಿಧ ಯೋಜನೆಗಳಿಗೆ ₹ 19 ಸಾವಿರ ಕೋಟಿ ಅನುವಾದವನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಕೊಟ್ಟಿದೆ. ಯಡಿಯೂರಪ್ಪ ನಂತರ ದಕ್ಷಿಣ ಕನ್ನಡ ಜಿಲ್ಲೆಗೆ ಕೇಳಿದ್ದನ್ನು ಕೊಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದು ಶ್ಲಾಘಿಸಿದರು.
ಕರ್ನಾಟಕಕ್ಕೆ ವಿಶೇಷ ಯೋಜನೆಗಳನ್ನು ಘೋಷಿಸಿದ ನಿತಿನ್ ಗಡ್ಕರಿ
ಬೆಳಗಾವಿ: 238ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ನಿತಿನ್ ಗಡ್ಕರಿ ಚಾಲನೆ ನೀಡಿದರು. ಸಂಕೇಶ್ವರ -ಮಹಾರಾಷ್ಟ್ರ ಷಟ್ಪಥ ಮಾರ್ಗಕ್ಕೆ ಹಲವು ದಿನಗಳ ಬೇಡಿಕೆ ಇತ್ತು. ಬೆಳಗಾವಿ ಸಂಕೇಶ್ವರ ಬೈಪಾಸ್ ರಸ್ತೆ ಕಾಮಗಾರಿಗೆ 1500 ಕೋಟಿ ರೂಪಾಯಿ, ಸಂಕೇಶ್ಚರ ಮಹಾರಾಷ್ಟ್ರ ಗಡಿವರೆಗಿನ ರಸ್ತೆಗೆ 1400 ಕೋಟಿ ರೂಪಾಯಿ, ಮುಂಬೈ ಗೋವಾ ಮಧ್ಯೆ ರಸ್ತೆಗೆ 18 ಸಾವಿರ ಕೋಟಿ ವೆಚ್ಚ ಮಾಡಿ ಕಾಮಗಾರಿ ನಡೆಸಲಾಗುವುದು. ಇದೇ ವರ್ಷ ಈ ಕಾಮಗಾರಿ ಪೂರ್ಣಗೊಳ್ಳುತ್ತೆ ಎಂದು ಬೆಳಗಾವಿಯಲ್ಲಿ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಬಂಪರ್ ಯೋಜನೆಗಳ ಘೋಷಣೆ ಮಾಡಿದ್ದಾರೆ. ಬೆಳಗಾವಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಲಾಗಿದೆ. ಕಾರ್ಯಕ್ರಮ ಉದ್ದೇಶಿಸಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಭಾಷಣ ಮಾಡಿದರು.
ಚೋರ್ಲಾ ಜಾಂಬೋಟಿ ಬೆಳಗಾವಿ ನಡುವೆ ದ್ವಿಪಥ ಕಾಮಗಾರಿ ಆರಂಭವಾಗಲಿದೆ. ವಿಜಯಪುರ ಮುರಗುಂಡಿ, ಸಿದ್ದಾಪುರ ವಿಜಯಪುರ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಹಲವು ಎಂಎಲ್ಎಗಳು ಸಂಸದರು ಸಾಕಷ್ಟು ಮನವಿ ಸಲ್ಲಿಸಿದ್ದಾರೆ. ಈ ವರ್ಷ ಇದಕ್ಕಿಂತ ಹೆಚ್ಚು ಕಾಮಗಾರಿ ನೀಡಲು ಕಷ್ಟಸಾಧ್ಯ. ಮುಂದಿನ ವರ್ಷ ಮತ್ತಷ್ಟು ಕಾಮಗಾರಿಗಳ ಮಂಜೂರು ಮಾಡಲಾಗುತ್ತದೆ. ಶೀಘ್ರವೇ ಭಾರತ್ ಮಾಲಾ 2 ಯೋಜನೆ ಘೋಷಣೆ ಮಾಡಲಾಗುತ್ತದೆ. ಬೆಳಗಾವಿ ರಿಂಗ್ ರಸ್ತೆಗೆ ಮಂಗಲಾ ಅಂಗಡಿ ಮನವಿ ಮಾಡಿದ್ರು ಅದನ್ನ ಮಂಜೂರು ಮಾಡಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಭಾರತದ ರಸ್ತೆಗಳನ್ನು ಅಮೆರಿಕ ರಸ್ತೆಗಳ ರೀತಿಯಲ್ಲಿ ಮಾಡುತ್ತೇವೆ: ಹುಬ್ಬಳ್ಳಿಯಲ್ಲಿ ನಿತಿನ್ ಗಡ್ಕರಿ ಹೇಳಿಕೆ
ಇದನ್ನೂ ಓದಿ: ಬೆಳಗಾವಿ: ಐದು ರಾಷ್ಟ್ರೀಯ ಹೆದ್ದಾರಿಗಳ ಲೋಕಾರ್ಪಣೆ; ಕರ್ನಾಟಕಕ್ಕೆ ವಿಶೇಷ ಯೋಜನೆಗಳನ್ನು ಘೋಷಿಸಿದ ನಿತಿನ್ ಗಡ್ಕರಿ
Published On - 9:42 pm, Mon, 28 February 22