ನವದೆಹಲಿ: ಮೇಕೆದಾಟು ಬಳಿ ಕಾವೇರಿ ನದಿಗೆ ಅಡ್ಡಲಾಗಿ ಕರ್ನಾಟಕ ಸರ್ಕಾರವು ಡ್ಯಾಂ ನಿರ್ಮಾಣ ಮಾಡಲು ನಿರ್ಧರಿಸಿದ್ದು, ಇದಕ್ಕೆ ತಮಿಳುನಾಡು ಸರ್ಕಾರದಿಂದ ವಿರೋದ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಈಗ ಪುದುಚೇರಿ ಸರ್ಕಾರದಿಂದಲೂ ವಿರೋಧ ವ್ಯಕ್ತವಾಗಿದೆ. ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಬಳಿ ವಿದ್ಯುತ್ ಉತ್ಪಾದನೆ ಹಾಗೂ ಕುಡಿಯುವ ನೀರಿನ ಉದ್ದೇಶಕ್ಕಾಗಿ ಡ್ಯಾಂ ನಿರ್ಮಾಣ ಮಾಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.
ಮೇಕೆದಾಟು ಡ್ಯಾಂ ನಿರ್ಮಾಣಕ್ಕೆ (Mekedatu project) ಈ ಬಾರಿ ಪುದುಚೇರಿ ಅಡ್ಡಗಾಲು ಹಾಕಿದ್ದು, ಮೇಕೆದಾಟು ಡ್ಯಾಂ ನಿರ್ಮಾಣಕ್ಕೆ ತಡೆ ನೀಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಜಲಸಂಪನ್ಮೂಲ ಸಚಿವರಿಗೆ ಪತ್ರ ಬರೆಯಲು ಮುಂದಾಗಿದೆ. ಇಂದು ಪುದುಚೇರಿ ಸಿಎಂ ರಂಗಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕರ್ನಾಟಕದ ಮೇಕೆದಾಟಿನಲ್ಲಿ ಕಾವೇರಿ ನೀರಿಗೆ ಜಲಾಶಯ ನಿರ್ಮಿಸಿದರೆ ಪುದುಚೇರಿಯ ಕೆಲ ಪ್ರದೇಶಗಳಲ್ಲಿ ನೀರಿನ ಅಭಾವ ಉಂಟಾಗುತ್ತದೆ. ಹೀಗಾಗಿ ಕರ್ನಾಟಕ ಮೇಕೆದಾಟು ಅಣೆಕಟ್ಟು ನಿರ್ಮಾಣ ಮಾಡಬಾರದು ಎಂಬುದು ಪುದುಚೇರಿ ಸರ್ಕಾರದ ವಾದವಾಗಿದೆ. ಈ ಮಧ್ಯೆ, ಶುಕ್ರವಾರ ತಮಿಳುನಾಡು ಸರ್ವಪಕ್ಷ ನಿಯೋಗವು ಪ್ರಧಾನಿಯನ್ನ ಭೇಟಿ ಮಾಡಲಿದೆ.
ಮೇಕೆದಾಟು ಜಲಾಶಯ ನಿರ್ಮಾಣ ಯೋಜನೆಯಿಂದ ಕರ್ನಾಟಕ ಸರ್ಕಾರ 440 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ಉದ್ದೇಶಿಸಿದೆ. ಕಾವೇರಿ ನ್ಯಾಯಾಧಿಕರಣದ ತೀರ್ಪಿನ ಅನ್ವಯ ಕುಡಿಯುವ ನೀರಿನ ಬಳಕೆಗೂ ಯೋಜನೆ ಸಹಕಾರಿಯಾಗಲಿದೆ. ಆದರೆ, ಕುಡಿಯುವ ಉದ್ದೇಶಕ್ಕೆ ಈ ಯೋಜನೆಯ ಅಗತ್ಯವಿಲ್ಲ. ಇದೇ ವೇಳೆ ಯೋಜನೆಯನ್ನು ನೀರಾವರಿಗೆ ಬಳಕೆ ಮಾಡುವುದಕ್ಕೆ ಅವಕಾಶವಿಲ್ಲ.
(Mekedatu project in the Cauvery basin Now puducherry government opposes Karnataka government)
Published On - 6:00 pm, Wed, 14 July 21