ಫೇಸ್ಬುಕ್ನಲ್ಲಿ ಕನ್ನಡ ಅನುವಾದ ಲೋಪ: ಸಿಎಂ ಸಿದ್ದರಾಮಯ್ಯಗೆ ಕ್ಷಮೆಯಾಚಿಸಿದ ಮೆಟಾ ಸಂಸ್ಥೆ
ಸಿಎಂ ಸಿದ್ದರಾಮಯ್ಯನವರು ಮೆಟಾ ಸೇವೆಯಲ್ಲಿ ಕನ್ನಡ ಅನುವಾದದಲ್ಲಿನ ದೋಷಗಳ ಬಗ್ಗೆ ಆಕ್ಷೇಪಣೆ ಸಲ್ಲಿಸಿದ ನಂತರ, ಮೆಟಾ ಸಂಸ್ಥೆ ಕ್ಷಮೆ ಕೋರಿದೆ. ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ನಿನ್ನೆ ಮೆಟಾಗೆ ಪತ್ರ ಬರೆದಿದ್ದರು. ಸದ್ಯ ಮೆಟಾದಲ್ಲಿನ ಈ ಲೋಪವನ್ನು ಸರಿಪಡಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಬೆಂಗಳೂರು, ಜುಲೈ 18: ಮೆಟಾ ಸೇವೆಯಲ್ಲಿ (Facebook) ಕನ್ನಡ ಅನುವಾದ ಲೋಪ ಬಗ್ಗೆ ಗುರುವಾರ ಸಿಎಂ ಕಚೇರಿಯಿಂದ ಮೆಟಾಗೆ ಆಕ್ಷೇಪಣೆ ಸಲ್ಲಿಸಲಾಗಿತ್ತು. ಇದೀಗ ಈ ವಿಚಾರವಾಗಿ ಮೆಟಾ ಸಂಸ್ಥೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ (Siddaramaiah) ಕ್ಷಮೆ ಕೋರಿದೆ. ಜೊತೆಗೆ ತಪ್ಪು ಅನುವಾದ ಸಮಸ್ಯೆಯನ್ನು ಸದ್ಯ ಪರಿಹರಿಸಲಾಗಿದೆ ಎಂದು ಮೆಟಾ ವಕ್ತಾರರು ತಿಳಿಸಿರುವುದಾಗಿ ವರದಿ ಆಗಿದೆ.
ಸಿಎಂಗೆ ಕ್ಷಮೆಯಾಚಿಸಿದ ಮೆಟಾ
ಸಿಎಂ ಸಿದ್ದರಾಮಯ್ಯ ಆಕ್ಷೇಪಣೆ ಬಗ್ಗೆ ಇದೀಗ ಸ್ಪಂದಿಸಿರುವ ಮೆಟಾ ಸಂಸ್ಥೆ, ತನ್ನ ಅನುವಾದ ವ್ಯವಸ್ಥೆಯಲ್ಲಿನ ಲೋಪವನ್ನು ಒಪ್ಪಿಕೊಂಡಿದೆ. ‘ತಪ್ಪು ಕನ್ನಡ ಅನುವಾದಕ್ಕೆ ಕಾರಣವಾದ ಸಮಸ್ಯೆಯನ್ನು ನಾವು ಸರಿಪಡಿಸಿದ್ದೇವೆ. ಈ ವಿಚಾರವಾಗಿ ನಾವು ಕ್ಷಮೆಯಾಚಿಸುತ್ತೇವೆ’ ಎಂದು ಮೆಟಾ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: ಫೇಸ್ಬುಕ್ನಲ್ಲಿ ತಪ್ಪು ತಪ್ಪು ಅನುವಾದ: ಮೆಟಾಗೆ ಪತ್ರ ಬರೆದ ಕರ್ನಾಟಕ ಸಿಎಂ ಕಚೇರಿ
ಮೆಟಾ ಸೇವೆಯಲ್ಲಿ ಕನ್ನಡ ಅನುವಾದದ ಬಗ್ಗೆ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ನಿನ್ನೆ ಮೆಟಾಗೆ ಪತ್ರ ಬರೆಯುವ ಮೂಲಕ ಎಡವಟ್ಟಿನ ಬಗ್ಗೆ ಮಾಹಿತಿ ನೀಡಿದ್ದರು. ಕನ್ನಡ ವಿಷಯವನ್ನು ಸ್ವಯಂ ಅನುವಾದದ ಮೂಲಕ ದೋಷಪೂರಿತ ಭಾಷಾಂತರವನ್ನು ಒದಗಿಸುತ್ತಿದೆ. ಇದು ಮೂಲ ಅರ್ಥವನ್ನು ವಿರೂಪಗೊಳಿಸುತ್ತಿದೆ. ಜೊತೆಗೆ ಇದು ಮೆಟಾ ಬಳಕೆದಾರರನ್ನು ದಾರಿ ತಪ್ಪಿಸುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.
ಇಂತಹ ಲೋಪಗಳಿಂದಾಗಿ ಪ್ರಮುಖ ತಂತ್ರಜ್ಞಾನ ಕಂಪನಿಗಳ ಮೇಲೆ ಸಾರ್ವಜನಿಕರು ತಮ್ಮ ನಂಬಿಕೆಯನ್ನು ಕಳೆದುಕೊಳ್ಳಬಹುದು. ಸಾಮಾಜಿಕ ಮಾಧ್ಯಮ ವೇದಿಕೆಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು. ಇಂತಹ ನಿರ್ಲಕ್ಷ್ಯವು ಸಾರ್ವಜನಿಕ ತಿಳುವಳಿಕೆ ಮತ್ತು ನಂಬಿಕೆಗೆ ಹಾನಿ ಉಂಟು ಮಾಡುತ್ತದೆ. ಈ ನಿಟ್ಟಿನಲ್ಲಿ ಕನ್ನಡ ವಿಷಯಕ್ಕಾಗಿ ಸ್ವಯಂ-ಅನುವಾದ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಒತ್ತಾಯಿಸಲಾಗಿತ್ತು.
ಇದನ್ನೂ ಓದಿ: WhatsApp Tricks: ವಾಟ್ಸ್ಆ್ಯಪ್ ಮೆಸೇಜ್ ಅನ್ನು ಅಪ್ಲಿಕೇಶನ್ ತೆರೆಯದೆ ಓದುವ ಟ್ರಿಕ್ ನಿಮಗೆ ಗೊತ್ತೇ?
ಅಷ್ಟೇ ಅಲ್ಲದೆ ಕನ್ನಡ ಅನುವಾದದ ಗುಣಮಟ್ಟವನ್ನು ಹೆಚ್ಚಿಸಲು ಅರ್ಹ ಕನ್ನಡ ಭಾಷಾ ತಜ್ಞರು ಮತ್ತು ಭಾಷಾ ವೃತ್ತಿಪರರಿಂದ ಮಾಹಿತಿ ಪಡೆದುಕೊಳ್ಳುವಂತೆ ರಾಜ್ಯ ಸಿಎಂ ಕಚೇರಿಯಿಂದ ಸಲಹೆ ನೀಡಿಲಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:23 pm, Fri, 18 July 25



