ಕರ್ನಾಟಕದಲ್ಲಿ ಮಿತಿ ಮೀರಿದ ಮೈಕ್ರೋ ಫೈನಾನ್ಸ್ ಕಿರುಕುಳ: ಊರು ಬಿಟ್ಟ ಜನ, ಮಹಿಳೆಯರ ಕಣ್ಣೀರು, ಮೂವರು ಬಲಿ

|

Updated on: Jan 24, 2025 | 3:12 PM

ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ಹೆಚ್ಚಾಗಿದ್ದು, ಸಾಲ ವಾಪಸು ಮಾಡಲು ವಿಳಂಬವಾದರೆ ಅವುಗಳು ನೀಡುವ ಕಿರುಕುಳದಿಂದ ಜನರು ಆತ್ಮಹತ್ಯೆ ಮಾಡಿಕೊಳ್ಳುವುದು, ಮನೆ ಬಿಟ್ಟು ಪರಾರಿಯಾಗುವಂಥ ಘಟನೆಗಳು ನಡೆಯುತ್ತಿವೆ. ಕುಟುಂಬಗಳನ್ನು ಬೀದಿಗೆ ತಳ್ಳುವಂಥ ಘಟನೆಗಳು ವ್ಯಾಪಕವಾಗಿವೆ. ಬೆಳಗಾವಿ, ರಾಮನಗರ, ರಾಯಚೂರು ಸೇರಿ ಹಲವು ಜಿಲ್ಲೆಗಳಲ್ಲಿ ಈ ರೀತಿಯ ಘಟನೆಗಳು ನಡೆದಿವೆ. ಸಮಗ್ರ ವಿವರ ಇಲ್ಲಿದೆ.

ಕರ್ನಾಟಕದಲ್ಲಿ ಮಿತಿ ಮೀರಿದ ಮೈಕ್ರೋ ಫೈನಾನ್ಸ್ ಕಿರುಕುಳ: ಊರು ಬಿಟ್ಟ ಜನ, ಮಹಿಳೆಯರ ಕಣ್ಣೀರು, ಮೂವರು ಬಲಿ
ಕರ್ನಾಟಕದಲ್ಲಿ ಮಿತಿ ಮೀರಿದ ಮೈಕ್ರೋ ಫೈನಾನ್ಸ್ ಕಿರುಕುಳ
Follow us on

ಬೆಂಗಳೂರು, ಜನವರಿ 24: ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ಹೆಚ್ಚಾಗಿದೆ. ಒಂದು ತಿಂಗಳು ಕಂತು ಕಟ್ಟುವುದು ತಪ್ಪಿದರೂ ಮನೆ ಬಳಿ ಬಂದು ಟಾರ್ಚರ್ ಕೊಡುತ್ತಿದ್ದಾರೆ. ಹೀಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಟಾರ್ಚರ್ ತಾಳಲಾರದೇ ರಾಜ್ಯದಲ್ಲಿ ಈವರೆಗೂ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಮನಗರ, ರಾಯಚೂರು, ಬೆಳಗಾವಿಯಲ್ಲಿ ಒಬ್ಬೊಬ್ಬರು ಸಾವಿಗೆ ಶರಣಾಗಿದ್ದಾರೆ. ಕೆಲವೆಡೆ ಸಾಲ ಕೊಟ್ಟವರ ಕಾಟ ತಡೆಯಲಾಗದೇ ಮನೆಗೆ ಬೀಗ ಹಾಕಿಕೊಂಡು ಊರು ತೊರೆದಿದ್ದಾರೆ.

ಸಾಲ ಕಟ್ಟದ್ದಕ್ಕೆ ಬಾಣಂತಿಯನ್ನು ಹೊರಹಾಕಿ ಮನೆ ಸೀಜ್

ಸಾಲ ತೆಗೆದುಕೊಂಡಿದ್ದಾರೆ, ಸಾಲ ವಾಪಸ್ ಮರುಪಾವತಿ ಮಾಡಬೇಕು ನಿಜ. ಹಾಗಂತ ಯಾವುದೇ ಫೈನಾನ್ಸ್ ಕಂಪನಿ ಟಾರ್ಚರ್ ಕೊಡುವಂತಿಲ್ಲ. ಹೀಗಿದ್ದರೂ ಬೆಳಗಾವಿಯಲ್ಲಿ, ಅದರಲ್ಲೂ ಸುವರ್ಣಸೌಧದ ಪಕ್ಕದ ಗ್ರಾಮ ತಾರಿಹಾಳದಲ್ಲಿ, ಬಾಣಂತಿ ಇದ್ದರೂ ಕರುಣೆ ತೋರದ ಕಟುಕರು ಮನೆ ಸೀಜ್ ಮಾಡಿದ್ದಾರೆ. ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಕುಟುಂಬ ಬಿಕ್ಕಿ ಬಿಕ್ಕಿಕಣ್ಣೀರಿಟ್ಟಿದೆ. ಪಾತ್ರೆ ಪಗಡೆಯಲ್ಲ ಮನೆಯಿಂದಾಚೆ ಎಸೆದಿದ್ದಾರೆ.

ಸಾಲ ತೆಗೆದುಕೊಂಡರೂ ಆರು ತಿಂಗಳು ಸಬ್ಸಿಡಿ ಕೊಡುತ್ತೇವೆ ಎಂದು ಮೋಸ ಮಾಡಿದ್ದಾರೆ. ಸಾಲ ಮರುಪಾವತಿ ಮಾಡಲೇಬೇಕು ಎಂದು ಮನೆ ಸೀಜ್ ಮಾಡಿದ್ದಾರೆ ಎಂದು ಸಾಲ ತೆಗೆದುಕೊಂಡುವರು ಆರೋಪಿಸಿದ್ದಾರೆ.

ಮಧ್ಯವರ್ತಿಗಳ ಹಾವಳಿ ಎಂದ ಬೆಳಗಾವಿ ಡಿಸಿ

ಬಾಣಂತಿಯನ್ನೂ ಮನೆಯಿಂದ ಹೊರಹಾಕಿ ಮನೆ ಸೀಜ್ ಮಾಡಿರುವ ಘಟನೆ ತಿಳಿದ ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಮಾತನಾಡಿದ ಡಿಸಿ ಮೊಹಮ್ಮದ್ ರೋಷನ್, ‘ಮಧ್ಯವರ್ತಿಗಳ ಹಾವಳಿಯಿಂದ ಈ ರೀತಿ ಆಗ್ತಾ ಇದೆ’ ಎಂದಿದ್ದಾರೆ. ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.

ಸಿಎಂಗೆ ತಾಳಿ ಪೋಸ್ಟ್ ಮಾಡಿ ಅರಿಶಿನಕೊಂಬು ಕಟ್ಟಿಕೊಂಡು ಜೀವನ!

ಬೆಳಗಾವಿಯ ಕಥೆ ಒಂದೆಡೆಯಾದರೆ, ಹಾವೇರಿಯಲ್ಲಿ ಮೈಕ್ರೋ ಕಿರುಕುಳಕ್ಕೆ ಬೇಸತ್ತ ಮಹಿಳೆ, ತನ್ನ ತಾಳಿಯನ್ನೇ ಸಿಎಂ ಸಿದ್ದರಾಮಯ್ಯಗೆ ಪೋಸ್ಟ್ ಮಾಡಿದ್ದಾರೆ. ತಾಳಿ ಬದಲು ಅರಿಶಿನ ಕೊಂಬು ಕಟ್ಟಿಕೊಂಡು ಜೀವನ ಮಾಡುತ್ತಿದ್ದಾರೆ. ಅಂಗವಿಕಲ ಪುತ್ರನ ಜೊತೆ ಕಣ್ಣೀರು ಹಾಕುತ್ತಿದ್ದಾರೆ. ಸಾಲ ಕಟ್ಟಲು ಸಮಯಾವಕಾಶ ಕೇಳಿದರೂ ಫೈನಾನ್ಸ್‌ನವರು ಒಪ್ಪುತ್ತಿಲ್ಲ. ಮಾಂಗಲ್ಯ ಭಾಗ್ಯ ಉಳಿಸಿಕೊಡಲು ಸಿಎಂಗೆ ಮಹಿಳೆ ಮನವಿ ಮಾಡಿದ್ದಾರೆ.

ಹಾವೇರಿಯ ರಾಣೇಬೆನ್ನೂರಲ್ಲಿ ಅಪಘಾತದಲ್ಲಿ ಗಾಯಗೊಂಡ ಮಗ ಕೋಮಾಕ್ಕೆ ಹೋಗಿದ್ದು ಮಗನ ಉಳಿವಿಗಾಗಿ ಮಹಿಳೆ ಲಕ್ಷ ಲಕ್ಷ ಸಾಲ ಮಾಡಿದ್ದರು. ಸಾಲ ಕೊಟ್ಟಿದ್ದ ಮೈಕ್ರೋ ಫೈನಾನ್ಸ್ ಕಂಪನಿಯವರು ಈಗ ಮಹಿಳೆಗೆ ಟಾರ್ಚರ್ ಕೊಡುತ್ತಿದ್ದಾರೆ.

ಚಿಕ್ಕಮಗಳೂರಿನಲ್ಲಿ ಕೂಲಿ ಕಾರ್ಮಿಕರ ಬದುಕಿಗೆ ಕೊಳ್ಳಿಯಿಟ್ಟ ಮೈಕ್ರೋ ಫೈನಾನ್ಸ್

ಚಿಕ್ಕಮಗಳೂರಿನ ಹಾಂದಿ ಗ್ರಾಮದ ಭೀಮನಗರದಲ್ಲಿ ಘಟನೆ 15ಕ್ಕೂ ಹೆಚ್ಚು ಮಹಿಳೆಯರು ಊರು ತೊರೆದಿದ್ದಾರೆ. ಗ್ರಾಮದ ಮಹಿಳೆಯರನ್ನೇ ಒಗ್ಗೂಡಿಸಿ ಸಂಘ ಸ್ಥಾಪಿಸಿದ್ದ ಮೈಕ್ರೋ ಫೈನಾನ್ಸ್ ಕಂಪನಿ ಸಾಲ ನೀಡಿತ್ತು. ಸಂಘದಲ್ಲಿದ್ದ ಕೂಲಿ ಕಾರ್ಮಿಕರು ಸಾಲ ತೆಗೆದುಕೊಂಡಿದ್ದರು. ಇದೀಗ ಮೈಕ್ರೋ ಪೈನಾನ್ಸ್ ಕಿರುಕುಳ ತಾಳಲಾರದೇ ಊರು ಬಿಟ್ಟಿದ್ದಾರೆ. ಊರಿನ ಅರ್ಧದಷ್ಟು ಮಹಿಳೆಯರು ಊರು ತೊರೆದಿದ್ದಾರೆ.

ನಕಲಿ ದಾಖಲೆ ಸೃಷ್ಟಿ: ಒತ್ತಾಯ ಮಾಡಿ ಸಾಲ ಕೊಟ್ಟು ಕಿರುಕುಳ

ರಾಯಚೂರಿನಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಯ ಮತ್ತೊಂದು ವಂಚನೆ ಬೆಳಕಿಗೆ ಬಂದಿದೆ. ಸಾಲ ಕೊಡುತ್ತೇವೆ ಎಂದು ಕಂಪನಿಗಳೇ ಬೆನ್ನುಬಿದ್ದು, 250 ರೂಪಾಯಿಗೆ ನಕಲಿ ದಾಖಲೆ ಸೃಷ್ಟಿಸಿ ಸಾಲ ಕೊಡುತ್ತಾರಂತೆ. ಸಾಲ ಮರುಪಾವತಿಯಲು ಸ್ವಲ್ಪ ವಿಳಂಬವಾದರೂ, ಕಿರುಕುಳ ನೀಡುತ್ತಾರೆ ಎಂದು ಸಂತ್ರಸ್ತೆ ಬಸಮ್ಮ ಆರೋಪಿಸಿದ್ದಾರೆ.

ಫೈನಾನ್ಸ್ ಕಂಪನಿಗಳ ಕಿರುಕುಳದ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಜಿ ಪರಮೇಶ್ವರ್, ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಒಂದು ತಿಂಗಳಿನಿಂದ ಹೇಳ್ತಿದ್ದರೂ ನಾಳೆ ಸಭೆ ಮಾಡ್ತಾರಂತೆ: ಹೆಚ್‌ಡಿಕೆ ಕಿಡಿ

ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ಹೇಳುತ್ತಿದ್ದಾರೆ ಹೊರತು ಈವರೆಗೂ ಯಾವುದೇ ಕ್ರಮ ಆಗಿಲ್ಲ. ನಾಳೆ ಸಂಬಂಧ ಸಿಎಂ ಸಿದ್ದರಾಮಯ್ಯ ಸಭೆ ಕರೆದಿದ್ದಾರೆ. ಒಂದು ತಿಂಗಳಂದ ಹೇಳುತ್ತಿದ್ದರೂ ನಾಳೆ ಸಭೆ ಮಾಡುತ್ತಾರಂತೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಗುಡುಗಿದ್ದಾರೆ.

ಇದನ್ನೂ ಓದಿ: ಮೈಕ್ರೋ ಫೈನಾನ್ಸ್​ ಕಿರುಕುಳಕ್ಕೆ ಪತಿ ಆತ್ಮಹತ್ಯೆ: ಗೃಹ ಸಚಿವರಿಗೆ ಮಾಂಗಲ್ಯ ಸರ ಕಳುಹಿಸಿದ ಪತ್ನಿ

ಸಾಲ ಪಡೆದುಕೊಂಡುವರು ಸಾಲ ವಾಪಸ್ ಕಟ್ಟಬೇಕು ನಿಜ. ಆದರೆ, ಅದಕ್ಕೂ ನಿಯಮಗಳಿವೆ. 90 ದಿನಗಳ ನಂತರವೂ ಮರುಪಾವತಿ ಮಾಡದಿದ್ದರೆ, ನೋಟಿಸ್ ಜಾರಿ ಮಾಡಬೇಕು. ನೋಟಿಸ್ ಜಾರಿಯಾದ ಬಳಿಕವೂ ಮರುಪಾವತಿ ಮಾಡದಿದ್ದರೆ, ಫೈನಾನ್ಸ್ ಕಂಪನಿಗಳು ಮುಂದಿನ ಹೆಜ್ಜೆ ಇಡಬೇಕು. ಅದಿರಲಿ, ಒಂದೇ ತಿಂಗಳು ಕಂತು ಕಟ್ಟುವುದು ತಪ್ಪಿದರಊ, ಜನರ ಮೇಲೆ ದರ್ಪ ತೋರುತ್ತಿರುವುದು ನಿಜಕ್ಕೂ ದುರಂತ. ಈ ಬಗ್ಗೆ ಸರ್ಕಾರ ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಬಿಸಿಮುಟ್ಟಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:52 pm, Fri, 24 January 25