ಸಿಎಂಗೆ ನೀಡಿದ ಶೋಕಾಸ್​ ನೋಟಿಸ್​ ಹಿಂಪಡೆಯುವಂತೆ ರಾಜ್ಯಪಾಲರಿಗೆ ಸಲಹೆ ನೀಡದ ಸಚಿವರು

| Updated By: ಗಂಗಾಧರ​ ಬ. ಸಾಬೋಜಿ

Updated on: Aug 01, 2024 | 7:35 PM

ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ದ ವಿಚಾರಣೆಗೆ ಅನುಮತಿ ನೀಡುವ ಕುರಿತು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ನಿನ್ನೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವರದಿ ಕೇಳಿದ್ದರು. ಇಂದು ಡಿಕೆ ಶಿವಕುಮಾರ್​ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರ ನೋಟಿಸ್​ ಹಿಂಪಡೆಯುವಂತೆ ಒತ್ತಾಯಿಸಲಾಗಿದೆ. ಇದೀಗ ಸಿಎಂಗೆ ನೀಡಿದ ಶೋಕಾಸ್​ ನೋಟಿಸ್​ ಹಿಂಪಡೆಯುವಂತೆ ರಾಜ್ಯಪಾಲರಿಗೆ ಸಚಿವರು ಸಲಹೆ ನೀಡಿದ್ದಾರೆ.

ಸಿಎಂಗೆ ನೀಡಿದ ಶೋಕಾಸ್​ ನೋಟಿಸ್​ ಹಿಂಪಡೆಯುವಂತೆ ರಾಜ್ಯಪಾಲರಿಗೆ ಸಲಹೆ ನೀಡದ ಸಚಿವರು
ಸಿಎಂಗೆ ನೀಡಿದ ಶೋಕಾಸ್​ ನೋಟಿಸ್​ ಹಿಂಪಡೆಯುವಂತೆ ರಾಜ್ಯಪಾಲರಿಗೆ ಸಲಹೆ ನೀಡದ ಸಚಿವರು
Follow us on

ಬೆಂಗಳೂರು, ಆಗಸ್ಟ್​ 1: ಮುಡಾ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ನೋಟಿಸ್​ ಹಿಂಪಡೆಯುವಂತೆ ಒತ್ತಾಯಿಸಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಇದರ ಬೆನ್ನಲ್ಲೇ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯಗೆ (Siddaramaiah) ನೀಡಿದ ಶೋಕಾಸ್​ ನೋಟಿಸ್​ ಹಿಂಪಡೆಯುವಂತೆ ರಾಜ್ಯಪಾಲರಿಗೆ ಸಲಹೆ ನೀಡಿದ್ದಾರೆ.

ರಾಜ್ಯಪಾಲರು ನೀಡಿರುವ ಶೋಕಾಸ್​ ನೋಟಿಸ್​ ಬಗ್ಗೆ ಸಂಪುಟ ಸಭೆಯಲ್ಲಿ ನಾವು ಚರ್ಚಿಸಿದ್ದೇವೆ. ರಾಜ್ಯಪಾಲರಿಗೆ ಸಲಹೆ ನೀಡಬೇಕೆಂದು ನಾವು ನಿರ್ಧರಿಸಿದ್ದೇವೆ. ಸಿಎಂ ಸಿದ್ದರಾಮಯ್ಯ ನೀಡಿದ್ದ ನೋಟಿಸ್​ ಹಿಂಪಡೆಯುವಂತೆ ಮನವಿ ಮಾಡುತ್ತೇವೆ. ಟಿ.ಜೆ.ಅಬ್ರಹಾಂ ದೂರು ರಾಜ್ಯಪಾಲರು ತಿರಸ್ಕರಿಸಬೇಕು. ಇದು ನಮ್ಮ ಸಚಿವ ಸಂಪುಟ ಸಭೆಯ ಸಲಹೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಇದು ಪ್ರಜಾಪ್ರಭುತ್ವದ ಕಗ್ಗೊಲೆ ಅಲ್ವಾ?

ಇಷ್ಟು ತರಾತುರಿಯಲ್ಲಿ ಏಕೆ ಇಂತ ತೀರ್ಮಾನ ಮಾಡುತ್ತಾರೆ? ತನಿಖೆಯಲ್ಲಿ ಆರೋಪ ಸಾಬೀತಾದರೆ ತೀರ್ಮಾನ ಮಾಡಲಿ. ನ್ಯಾಯಾಂಗ ತನಿಖೆ ಇನ್ನು ನಡೆಯುತ್ತಿದೆ. ತನಿಖೆ ಆಗುವ ಮೊದಲೇ ತರಾತುರಿಯಲ್ಲಿ ಯಾಕೆ ಹೀಗೆ. ರಾಜ್ಯದ ಸಿಎಂಗೆ ಶೋಕಾಸ್​ ನೋಟಿಸ್ ಕೊಡ್ತಾರಂದರೆ ಇದು ಪ್ರಜಾಪ್ರಭುತ್ವದ ಕಗ್ಗೊಲೆ ಅಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮುಡಾ ಹಗರಣ: ರಾಜ್ಯಪಾಲರ ನೋಟಿಸ್ ವಿರುದ್ಧ ಸಚಿವರಿಂದ ಮಹತ್ವದ ಜಂಟಿ ಸುದ್ದಿಗೋಷ್ಠಿ ನೇರಪ್ರಸಾರ

ಮುಡಾದವರೇ 50:50 ನಿಯಮದಡಿ ಸೈಟ್​ ಹಂಚಿದ್ದಾರೆ. ಸಿಎಂ ಪತ್ನಿ ಈ ಜಾಗದಲ್ಲೇ ಸೈಟ್​ ಬೇಕು ಅಂದಿದ್ರಾ? ಬಿಜೆಪಿಯ ಸರ್ಕಾರದ ಅವಧಿಯಲ್ಲಿ ಇದೆಲ್ಲಾ ನಡೆದಿದ್ದು, ಇದೆಲ್ಲಾ ನಡೆದಾಗ ಸಿದ್ದರಾಮಯ್ಯನವರು ಇಲ್ಲವೇ ಇಲ್ಲ. ಮುಡಾ ಅಭಿವೃದ್ಧಿ ಪ್ರಾಧಿಕಾರದಲ್ಲಿ ಎಲ್ಲ ಪಕ್ಷದವರಿದ್ದರು. ಎಲ್ಲ ಪಕ್ಷದವರ ನಿರ್ಧಾರದಂತೆ ನಿವೇಶನ​ ಹಂಚಿದ್ದಾರೆ. ಏನು ದೊಡ್ಡ ಅಪರಾಧ ಆಗಿದೆ. ಏನು ಲೂಟಿಯಾಗಿದೆ ಎಂದು ಬಿಜೆಪಿಗರಿಗೆ ಪ್ರಶ್ನೆ ಮಾಡಿದ್ದಾರೆ.

ಈ ಸೈಟ್​ ಹಂಚಿಕೆ ಬಗ್ಗೆ 2 ವರ್ಷದ ಹಿಂದೆ ಬಂದಿತ್ತು. ಆಗ ಯಾಕೆ ಬಿಜೆಪಿ ನಾಯಕರು ಮಾತನಾಡಲಿಲ್ಲ. ಜನ ಆಶೀರ್ವದಿಸಿದ ಸರ್ಕಾರ ತೆಗೆಯಲು ಹುನ್ನಾರ ನಡೆಸಿದ್ದಾರೆ. ಇದು ಯಾವ ಕಾರಣಕ್ಕೂ ಸಾಧ್ಯವಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಬಿಎಸ್​​ವೈ ವಿರುದ್ಧ ಪ್ರಾಸಿಕ್ಯೂಷನ್​ ಕೊಡಿಸಿದ್ದು ಯಾರು? ಈಗ ಸಿದ್ದರಾಮಯ್ಯ ಭಯಗೊಂಡಿದ್ದಾರೆ: ಶೋಭಾ ಕಿಡಿ

ಮುಡಾ ಸೈಟ್​ ವಿಚಾರ ಇಟ್ಕೊಂಡು ರಾಜಕೀಯ ಮಾಡುತ್ತಿದೆ. ಇದನ್ನು ಪ್ರಚಾರ ಮಾಡುವುದಕ್ಕೆ ಹೊರಟಿದ್ದೇ ರಾಜಕೀಯ. ಈ ಕುರಿತು ರಾಜ್ಯಪಾಲರಿಗೆ ವಿವರವಾಗಿ ವರದಿ ನೀಡಿದ್ದೇವೆ. ರಾಜ್ಯಪಾಲರು ಅಷ್ಟು ಆತುರವಾಗಿ ನಿರ್ಧರಿಸಲು ಸಾಧ್ಯವಿಲ್ಲ. ಕಾನೂನಿನ ಹಲವು ಅಂಶಗಳು ಇದರಲ್ಲಿ ಅಡಗಿವೆ. ರಾಜ್ಯಪಾಲರ ಘನತೆ ಹಾಳಾಗುವುದಿಲ್ಲ. ಘನತೆ ಹಾಳು ಮಾಡಲು ಅವರು ಒಪ್ಪುವುದಿಲ್ಲ. ಅಬ್ರಹಾಂ ದೂರನ್ನು ಗವರ್ನರ್ ತಿರಸ್ಕರಿಸ್ತಾರೆಂದು ಭಾವಿಸಿದ್ದೇವೆ ಎಂದು ಹೇಳಿದ್ದಾರೆ.

ಟಿ.ಜೆ.ಅಬ್ರಹಾಂ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ: ಪೊನ್ನಣ್ಣ 

ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಮಾತನಾಡಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಾಸಿಕ್ಯೂಷನ್‌ಗೆ ಕೇಳಿದ್ದಾರೆ. ಟಿ.ಜೆ.ಅಬ್ರಹಾಂ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಜುಲೈ 18ರಂದು ಟಿ.ಜೆ.ಅಬ್ರಹಾಂ ಮೈಸೂರಿನಲ್ಲಿ ದೂರು ನೀಡಿದ್ದಾರೆ. ಬೇಸಿಕ್ ಫಂಡಾಮೆಂಟಲ್ ಅಂಶವೇ ಅಲ್ಲದ ಅರ್ಜಿಯನ್ನು ರಾಜ್ಯಪಾಲರು ಪರಿಗಣಿಸಿದ್ದು ಸರಿಯಲ್ಲ ಎಂದಿದ್ದಾರೆ.

ರಾಜ್ಯಪಾಲರಿಗೆ ದೂರು ನೀಡಿದ್ದು ಕಾನೂನು ಬಾಹಿರ: ಕೃಷ್ಣ ಬೈರೇಗೌಡ

ಸಚಿವ ಕೃಷ್ಣ ಬೈರೇಗೌಡ ಪ್ರತಿಕ್ರಿಯಿಸಿದ್ದು, ಟಿಜೆ ಅಬ್ರಹಾಂ ಮೊದಲು ಮ್ಯಾಜಿಸ್ಟ್ರೇಟ್​​​ಗೆ ಹೋಗಬೇಕಿತ್ತು. ನೇರವಾಗಿ ರಾಜ್ಯಪಾಲರಿಗೆ ಹೋಗಿ ದೂರು ನೀಡಿದ್ದು ಕಾನೂನು ಬಾಹಿರ. ಹಿಂದಿನ ಸರ್ಕಾರದ ಮಂತ್ರಿ ಶಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿ, ಮುರುಗೇಶ್ ನಿರಾಣಿ ಮೇಲೆ ಕೂಡ ರಾಜ್ಯಪಾಲರಿಗೆ ಮನವಿ ಹೋಗಿತ್ತು. ಇವರೆಲ್ಲರ ಮೇಲೆ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರು ಅನುಮತಿ ನೀಡಿಲ್ಲ. ಒಂದೂವರೆ ವರ್ಷದಿಂದ ಹಾಗೇ ಇಟ್ಟುಕೊಂಡು ಕೂತಿದ್ದಾರೆ. ರಾಜಕೀಯ ಪಿತೂರಿ ಎಂಬುದು ಇದರಿಂದ ಅರ್ಥವಾಗುತ್ತದೆ. ಸಂವಿಧಾನ ಹಾಗೂ ಕಾನೂನಿಗೆ ಅಪಚಾರ ಎಂದು ವಾಗ್ದಾಳಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:58 pm, Thu, 1 August 24