ಚಿಕ್ಕಮಗಳೂರು: ಹೆಣ ಯಾವತ್ತಿಗೂ ಉಗಿಯೋಕು ಸಾಧ್ಯವಿಲ್ಲ, ಸೀನೋಕೂ ಸಾಧ್ಯವಿಲ್ಲ. ಆದರೆ, ಮೃತದೇಹಗಳಿಗೆ ಗೌರವಯುತವಾದ ಅಂತ್ಯಸಂಸ್ಕಾರವನ್ನು ಮಾಡದಂತಹ ಭೀತಿ ಸೃಷ್ಟಿಸಿದ್ದೇವೆ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಕೊರೊನಾ ಪಾಸಿಟಿವ್ ದೃಢಪಟ್ಟ ಮೇಲೆ 14 ದಿನಗಳ ಕಾಲ ತಮ್ಮ ಫಾರಂ ಹೌಸ್‍ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದ ಸಚಿವ ಸಿ.ಟಿ. ರವಿ, ಕೊರೊನಾಗೆ ಯಾರೂ ಭಯ ಪಡಬೇಡಿ, ಕೊರೊನಾ ಬಂದಾಗ ಪ್ರೀತಿ ಇರಲಿ, ಭೀತಿ ಬೇಡ ಎಂದಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು, ಹೆಣ ಯಾವತ್ತಿಗೂ ಉಗಿಯೋಕು ಸಾಧ್ಯವಿಲ್ಲ, ಸೀನೋಕೂ ಸಾಧ್ಯವಿಲ್ಲ. ಆದರೆ, ಮೃತದೇಹಗಳಿಗೆ ಗೌರವಯುತವಾದ ಅಂತ್ಯ ಸಂಸ್ಕಾರ ಮಾಡದಂತಹ ಭೀತಿ ಸೃಷ್ಟಿಸಿದ್ದೇವೆ, ಹೆಣ ನೇರವಾಗಿ ಯಾರಿಗೂ ತೊಂದರೆ ಮಾಡಲ್ಲ. ಹೆಣ ಮುಟ್ಟಿದವರು ಮೂಗು, ಕಣ್ಣು, ಬಾಯಿ ಮುಟ್ಟಿಕೊಂಡರೆ ಸೋಂಕು ತಗುಲಬಹುದು. ಹೆಣವೇ ಎದ್ದು ಬಂದು ಅವರ ಕೈ-ಬಾಯಿ-ಮೂಗು ಮುಟ್ಟುವುದಿಲ್ಲ ಎಂದರು.
ಸತ್ತವರಿಗೆ ಗೌರವಯುತವಾದ ಅಂತ್ಯ ಸಂಸ್ಕಾರ ಮಾಡಲು ಭೀತಿಯ ಅವಶ್ಯಕತೆ ಇಲ್ಲ. ಅದಕ್ಕಾಗಿ ತಂಡ ರಚನೆ ಮಾಡ್ತೀವಿ, ಅದರ ನೇತೃತ್ವ ನನ್ನದೇ ಎಂದಿದ್ದಾರೆ. ಅದಕ್ಕೆ ಬೇಕಿರುವ ತಂಡವನ್ನ ನಮ್ಮ ಜಿಲ್ಲೆಯಲ್ಲಿ ರಚನೆ ಮಾಡಿ, ತೊಂದರೆಯಾದರೆ ನಾವೇ ಮುಂದೆ ನಿಂತು ಅವರವರ ನಂಬಿಕೆ ಪ್ರಕಾರ ಅಂತ್ಯಸಂಸ್ಕಾರ ಮಾಡ್ತೀವಿ ಎಂದಿದ್ದಾರೆ.
ಇನ್ನು ಇದೇ ವೇಳೆ, ಸೀಲ್ ಡೌನ್, ಲಾಕ್‍ಡೌನ್ ಬಗ್ಗೆ ಮಾತನಾಡಿದ ಸಚಿವ ಸಿ.ಟಿರವಿ, ವೈರಸ್ ಒಂದೆರಡು ಮೀಟರ್ ಕ್ರಮಿಸಬಹುದು, ನೂರಾರು ಮೀಟರ್ ಅಲ್ಲ. ಆದ್ದರಿಂದ ನೂರು ಮೀಟರ್ ಸೀಲ್ ಡೌನ್ ಬಗ್ಗೆ ಪರಿಶೀಲನೆ ಮಾಡಿ ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದೇನೆ ಎಂದರು.
ವೈರಸ್ ನಿರ್ಜೀವ ವಸ್ತುವಿನ ಮೇಲೆ ಏಳರಿಂದ ಎಂಟು ಗಂಟೆ ಮಾತ್ರ ಇರುತ್ತೆ. ಹಾಗಾಗಿ, ವಾರಗಟ್ಟಲೇ ಸೀಲ್‍ಡೌನ್ ಬಗ್ಗೆ ಪರಿಶೀಲಿಸಬೇಕಾಗಿದೆ. ಮೊದಲು 500 ಮೀಟರ್ ಸೀಲ್‍ಡೌನ್ ಮಾಡುತ್ತಿದ್ದರು, ಈಗ 100 ಮೀಟರ್ ಮಾಡುತ್ತಿದ್ದಾರೆ. ಅದನ್ನ ಪರಿಶೀಲಿಸಿ ಎಂದು ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದೇನೆ ಎಂದರು.