ಆಮ್ಲಜನಕ ಸರಿಯಾಗಿ ಪೂರೈಸಿ ಎಂದು ಆಕ್ಸಿಜನ್​ ಘಟಕಕ್ಕೇ ಹೋಗಿ ಮನವಿ ಮಾಡಿದ ಸಚಿವ ನಾರಾಯಣ ಗೌಡ; ಕಂಪನಿಯಿಂದ ಸ್ಪಂದನೆ

ಜಿಲ್ಲೆಗೆ ಆಕ್ಸಿಜನ್ ಪೂರೈಸುವ ಮೈಸೂರಿನ ಪದಕಿ ಏರ್ ಪ್ರಾಡಕ್ಟ್ ಹಾಗೂ ಮಹತಿ ಸಂಸ್ಥೆಗೆ ಭೇಟಿ ನೀಡಿದ ಅವರು ಅದರ ಮುಖ್ಯಸ್ಥರೊಟ್ಟಿಗೆ ಮಾತುಕತೆ ನಡೆಸಿ, ಮನವಿ ಮಾಡಿದರು.

  • TV9 Web Team
  • Published On - 21:53 PM, 3 May 2021
ಆಮ್ಲಜನಕ ಸರಿಯಾಗಿ ಪೂರೈಸಿ ಎಂದು ಆಕ್ಸಿಜನ್​ ಘಟಕಕ್ಕೇ ಹೋಗಿ ಮನವಿ ಮಾಡಿದ ಸಚಿವ ನಾರಾಯಣ ಗೌಡ; ಕಂಪನಿಯಿಂದ ಸ್ಪಂದನೆ
ಆಕ್ಸಿಜನ್​ ಘಟಕಕ್ಕೆ ಭೇಟಿ ನೀಡಿದ ಸಚಿವ ನಾರಾಯಣ ಗೌಡ

ಮಂಡ್ಯ: ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇದ್ದು, ಸರಬರಾಜಿಗೆ ಮನವಿ ಮಾಡಿದರೂ ಸಾಕಷ್ಟು ಪ್ರಮಾಣದಲ್ಲಿ ಪೂರೈಕೆ ಆಗದೆ ಇರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣ ಗೌಡ ಅವರು ಆಕ್ಸಿಜನ್ ಸರಬರಾಜು ಕಂಪನಿಗೆ ಭೇಟಿ ನೀಡಿದರು. ಸರ್ಕಾರದ ಆದೇಶದಂತೆ ಆಮ್ಲಜನಕ ಸರಬರಾಜು ಮಾಡುವಂತೆ ಕಂಪನಿ ಮುಖ್ಯಸ್ಥರ ಬಳಿ ಮನವಿ ಮಾಡಿದರು.

ಜಿಲ್ಲೆಗೆ ಆಕ್ಸಿಜನ್ ಪೂರೈಸುವ ಮೈಸೂರಿನ ಪದಕಿ ಏರ್ ಪ್ರಾಡಕ್ಟ್ ಹಾಗೂ ಮಹತಿ ಸಂಸ್ಥೆಗೆ ಭೇಟಿ ನೀಡಿದ ಅವರು ಅದರ ಮುಖ್ಯಸ್ಥರೊಟ್ಟಿಗೆ ಮಾತುಕತೆ ನಡೆಸಿ, ಮನವಿ ಮಾಡಿದರು. ಮಂಡ್ಯದಲ್ಲಿ ಕೊವಿಡ್ ಸೋಂಕಿತರ ಚಿಕಿತ್ಸೆಗಾಗಿ 350 ಆಕ್ಸಿಜನ್​ ಬೆಡ್​ ಮೀಸಲಿಡಲಾಗಿದೆ. ಹೀಗಾಗಿ ದಿನಕ್ಕೆ ಕನಿಷ್ಠ 350 ಜಂಬೂ ಆಕ್ಸಿಜನ್​ ಸಿಲಿಂಡರ್​ ಜಿಲ್ಲೆಗೆ ಪೂರೈಕೆಯಾಗಲೇಬೇಕು. ಆದರೆ ಸದ್ಯ ಕೇವಲ 100 ಸಿಲಿಂಡರ್ ಬರುತ್ತಿದೆ. ನಾಲ್ಕು ದಿನಗಳ ಹಿಂದೆಯೇ ಆರೋಗ್ಯ ಇಲಾಖೆಗೆ ಮನವಿ ಮಾಡಲಾಗಿದ್ದರೂ ಸಂಸ್ಥೆಯಿಂದ ಅಗತ್ಯ ಪ್ರಮಾಣದ ಆಕ್ಸಿಜನ್ ಪೂರೈಕೆ ಆಗುತ್ತಿಲ್ಲ.
ಈ ಕಂಪನಿಗೆ ಆಮ್ಲಜನಕ ತಯಾರಿಸಲು ಅಗತ್ಯವಿರುವ ಕಚ್ಚಾವಸ್ತುಗಳನ್ನು ಬಳ್ಳಾರಿ ಮತ್ತು ಬೆಂಗಳೂರಿನಿಂದ ಸರಬರಾಜಾಗುತ್ತದೆ. ಇದೀಗ ಈ ಕಂಪನಿಗೆ ಹೆಚ್ಚುವರಿಯಾಗಿ ಪ್ರತಿನಿತ್ಯ 17KL ಕಚ್ಚಾವಸ್ತು ಪೂರೈಸಲು ಸರ್ಕಾರದ ವತಿಯಿಂದ ಕ್ರಮ ವಹಿಸಲಾಗಿದೆ ಎಂದು ಕೂಟ ಕಂಪನಿ ಮುಖ್ಯಸ್ಥರಿಗೆ ಸಚಿವರು ತಿಳಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಕಂಪನಿಯ ಮುಖ್ಯಸ್ಥರೂ ಸಹ ತಾವು ಅಗತ್ಯ ಪ್ರಮಾಣದ ಆಕ್ಸಿಜನ್ ಸಿಲಿಂಡರ್​ ಪೂರೈಸುವ ಭರವಸೆ ನೀಡಿದ್ದಾರೆ.

ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ತೇವೆ
ರಾಜ್ಯದಲ್ಲಿ ವೈದ್ಯಕೀಯ ಆಕ್ಸಿಜನ್​​ ಕೊರತೆ ಉಂಟಾಗುತ್ತಿದೆ. ಆದರೆ ಮಂಡ್ಯದಲ್ಲಿ ಸರಿಯಾದ ಸಮಯದಲ್ಲಿ ಪೂರೈಕೆ ಆಗುವಂತೆ ವ್ಯವಸ್ಥೆ ಮಾಡುತ್ತೇವೆ. ಈ ಬಗ್ಗೆ ದಿನದ 24 ಗಂಟೆಯೂ ಕೆಲಸ ಮಾಡಲು ಸರ್ಕಾರ ಸಿದ್ಧವಿದೆ. ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಪರಿಶೀಲನೆ ಮಾಡಲಾಗುವುದು. ಹಾಗೇ ಆಮ್ಲಜನಕ ಉತ್ಪಾದನಾ ಘಟಕಗಳಿಗೂ ಭೇಟಿ ನೀಡಲಾಗುವುದು ಎಂದು ಸಚಿವ ನಾರಾಯಣ ಗೌಡ ತಿಳಿಸಿದ್ದಾರೆ.

ಇದನ್ನೂ ಓದಿ: ಮನೆಯಲ್ಲೇ ಐಸಿಯು ಈಗ ದೇಶವ್ಯಾಪಿ ಕಂಡು ಬರುತ್ತಿರುವ ಹೊಸ ಟ್ರೆಂಡ್: ಇದು ಕೊರೊನಾ 2ನೇ ಅಲೆ ಹೊಡೆತದ ಪರಿಣಾಮ

ಮನೆಯಲ್ಲೇ ಐಸಿಯು ಈಗ ದೇಶವ್ಯಾಪಿ ಕಂಡು ಬರುತ್ತಿರುವ ಹೊಸ ಟ್ರೆಂಡ್: ಇದು ಕೊರೊನಾ 2ನೇ ಅಲೆ ಹೊಡೆತದ ಪರಿಣಾಮ