AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲೇ ಐಸಿಯು ಈಗ ದೇಶವ್ಯಾಪಿ ಕಂಡು ಬರುತ್ತಿರುವ ಹೊಸ ಟ್ರೆಂಡ್: ಇದು ಕೊರೊನಾ 2ನೇ ಅಲೆ ಹೊಡೆತದ ಪರಿಣಾಮ

ಕೊರೊನಾದ 2ನೇ ಅಲೆ ಬಂದಾಗ ಶ್ರೀಮಂತರು ರಾತ್ರೋರಾತ್ರಿ ದುಬೈ, ಸಿಂಗಾಪೂರ್, ಲಂಡನ್​ನಂಥ ನಗರಗಳಿಗೆ ಹಾರಿ ಹೋಗಿದ್ದರು. ವಿದೇಶಕ್ಕೆ ಹೋಗಲಾಗದೇ ಭಾರತದಲ್ಲೇ ಇರುವ ಶ್ರೀಮಂತರು ಕೊರೊನಾ ವೈರಸ್​ ಸೋಂಕಿನಿಂದ ಜೀವ ಉಳಿಸಿಕೊಳ್ಳಲು ಹೋಮ್ ಆಸ್ಪತ್ರೆ, ಹೋಮ್ ಐಸಿಯು ಮೊರೆ ಹೋಗಿದ್ದಾರೆ.

ಮನೆಯಲ್ಲೇ ಐಸಿಯು ಈಗ ದೇಶವ್ಯಾಪಿ ಕಂಡು ಬರುತ್ತಿರುವ ಹೊಸ ಟ್ರೆಂಡ್: ಇದು ಕೊರೊನಾ 2ನೇ ಅಲೆ ಹೊಡೆತದ ಪರಿಣಾಮ
ಮನೆಯಲ್ಲಿಯೇ ICU ಸ್ಥಾಪಿಸಿಕೊಳ್ಳಲು ಹಲವರು ಪ್ರಯತ್ನಿಸುತ್ತಿದ್ದಾರೆ.
Ghanashyam D M | ಡಿ.ಎಂ.ಘನಶ್ಯಾಮ
|

Updated on:May 03, 2021 | 8:45 PM

Share

ಕೊರೊನಾ ಪಾಸಿಟಿವ್ ಬಂದರೆ, ಚಿಕಿತ್ಸೆ ಪಡೆಯಲು ದೇಶದ ಶ್ರೀಮಂತರು ಹೊಸ ಮಾರ್ಗ ಹುಡುಕಿಕೊಂಡಿದ್ದಾರೆ. ಕೊರೊನಾದಿಂದ ಜೀವ ಉಳಿಸಿಕೊಳ್ಳಲು ಶ್ರೀಮಂತರು ಈಗ ಎಷ್ಟು ಹಣ ಬೇಕಾದರೂ ಖರ್ಚು ಮಾಡಲು ಸಿದ್ದವಾಗಿದ್ದಾರೆ. ಕೊರೊನಾ ಹುಟ್ಟುಹಾಕಿರುವ ಜೀವಭಯದಿಂದ ಬಚಾವಾಗಲು ಶ್ರೀಮಂತರು ಮಾಡುತ್ತಿರುವುದಾರೂ ಏನು? ಇಲ್ಲಿದೆ ನೋಡಿ ಡೀಟೈಲ್ಸ್​.

ಆಸ್ಪತ್ರೆಯಲ್ಲಿ ಐಸಿಯು ಬೆಡ್ ಸಿಗಲಿಲ್ಲವೇ? ಹಾಗಾದರೆ ಮನೆಯಲ್ಲೇ ಒಂದು ಐಸಿಯು ಬೆಡ್‌ ವ್ಯವಸ್ಥೆ ನಿರ್ಮಾಣ ಮಾಡಿ. ಈ ಮಾತು ಈಗ ದೇಶದ ಶ್ರೀಮಂತ ವರ್ಗದ ಜನರಲ್ಲಿ ಕೇಳಿ ಬರುತ್ತಿದೆ. ಶ್ರೀಮಂತರ ಮನೆಯ ರೂಮುಗಳಲ್ಲೇ ಐಸಿಯು ಬೆಡ್ ವ್ಯವಸ್ಥೆ ಸಿದ್ದವಾಗುತ್ತಿದೆ. ಎಲ್ಲವೂ ಕೊರೊನಾ ಮಹಾಮಾರಿಯ ಮಹಿಮೆ. ದುಡ್ಡಿರುವ ಶ್ರೀಮಂತರನ್ನು ಕೂಡ ಕೊರೊನಾ ವೈರಸ್ ಬಿಡಲ್ಲ. ವೈರಸ್​ಗೆ ಬಡವ, ಶ್ರೀಮಂತ ಎಂಬ ಭೇದಭಾವ ಇಲ್ಲ. ಹೀಗಾಗಿ ಕೊರೊನಾ ವೈರಸ್​ನಿಂದ ತಮ್ಮ ಆರೋಗ್ಯ ರಕ್ಷಣೆಗಾಗಿ ಶ್ರೀಮಂತರು ಮನೆಯಲ್ಲೇ ಐಸಿಯು ಬೆಡ್ ಸೌಲಭ್ಯವನ್ನು ಮಾಡಿಕೊಳ್ಳುತ್ತಿದ್ದಾರೆ.

ಭಾರತದಲ್ಲಿ ಈಗ ಹೆಲ್ತ್ ಎಮರ್ಜೆನ್ಸಿ ಸ್ಥಿತಿ ನಿರ್ಮಾಣವಾಗಿದೆ. ಭಾರತದಲ್ಲಿ ಈಗ ಎಲ್ಲೆಡೆ ಎಲ್ಲವೂ ಕೊರತೆಯೇ ಆಗಿದೆ. ದೇಶದಲ್ಲಿ ಈಗ ಆಸ್ಪತ್ರೆಗಳ ಬೆಡ್ ಕೊರತೆ, ಐಸಿಯು ಬೆಡ್ ಕೊರತೆ, ಮೆಡಿಕಲ್ ಆಕ್ಸಿಜನ್ ಕೊರತೆ, ವೆಂಟಿಲೇಟರ್​ಗಳ ಕೊರತೆ ಎದುರಾಗಿದೆ. ಯಾರು ಎಷ್ಟೇ ಶ್ರೀಮಂತರಾಗಿದ್ದರೂ, ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತದಲ್ಲಿ ಮೊದಲ ಅಲೆಯಲ್ಲಿ ನಿತ್ಯದ ಕೊರೊನಾ ಕೇಸ್​ಗಳು 2 ಲಕ್ಷದ ಗಡಿಯನ್ನೇ ದಾಟಿರಲಿಲ್ಲ. ಆದರೆ, ಈಗ ಎರಡನೇ ಅಲೆಯಲ್ಲಿ ನಿತ್ಯ 3 ರಿಂದ ಮೂರೂವರೆ ಲಕ್ಷ ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ಇವರ ಪೈಕಿ ಶೇ 10ರಷ್ಟು ಮಂದಿ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಆಸ್ಪತ್ರೆಯಲ್ಲಿ ಎಲ್ಲವೂ ಕೊರತೆಯೇ ಆಗಿರುವುದರಿಂದ ಆಸ್ಪತ್ರೆಗಳಿಗೆ ಹೋದರೇ ಬೆಡ್, ಐಸಿಯು, ಆಕ್ಸಿಜನ್, ವೆಂಟಿಲೇಟರ್ ಸಿಗುವ ಭರವಸೆಯಂತೂ ಇಲ್ಲವೇ ಇಲ್ಲ.

ಹೀಗಾಗಿ ಭಾರತದ ಶ್ರೀಮಂತರು ಕೊರೊನಾದಿಂದ ತಮ್ಮ ಜೀವ ಉಳಿಸಿಕೊಳ್ಳಲು ತಮ್ಮ ಮನೆಗಳಲ್ಲೇ ಆಸ್ಪತ್ರೆ ಕೊಠಡಿಗಳನ್ನು ಎಲ್ಲ ವೈದ್ಯಕೀಯ ಉಪಕರಣಗಳೊಂದಿಗೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಶ್ರೀಮಂತರ ಮನೆಗಳಂತೂ ವಿಶಾಲವಾಗಿರುತ್ತವೆ. ಜಾಗಕ್ಕೇನೂ ಸಮಸ್ಯೆ ಇಲ್ಲ. ಇರುವ ರೂಮುಗಳ ಪೈಕಿ ಒಂದನ್ನು ಈಗ ಆಸ್ಪತ್ರೆಯ ರೂಮ್​ಗೆ ಮೀಸಲಿಡುತ್ತಿದ್ದಾರೆ. ಮನೆಯಲ್ಲೇ ಒಂದು ಕೊಠಡಿಯಲ್ಲಿ ಆಸ್ಪತ್ರೆಯ ಬೆಡ್, ಐಸಿಯು ಬೆಡ್, ಮೆಡಿಕಲ್ ಆಕ್ಸಿಜನ್ ಕಾನ್​ಸಂಟ್ರೇಟರ್ ಸೇರಿದಂತೆ ಎಲ್ಲ ವೈದ್ಯಕೀಯ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಶ್ರೀಮಂತರು ತಮಗೆ ಕೊರೊನಾ ಪಾಸಿಟಿವ್ ಬಂದಿರಲಿ, ಬಾರದೇ ಇರಲಿ ಎಲ್ಲ ಆಸ್ಪತ್ರೆ ವ್ಯವಸ್ಥೆಯನ್ನು ಮನೆಯಲ್ಲೇ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ನಿಮ್ಮ ಮನೆಯಲ್ಲಿಯೇ ತುರ್ತು ನಿಗಾ ಘಟಕ ಅಂದ್ರೆ ICU ಸ್ಥಾಪಿಸಿಕೊಳ್ಳುವುದು ಹೇಗೆ? ಅದರ ಪಾಲನೆ ಹೇಗೆ?

Oxygen stills

ಆಕ್ಸಿಜನ್ ಸಿಲಿಂಡರ್

ಮನೆಗೆ ಆಕ್ಸಿಜನ್ ಕಾನಸಂಟ್ರೇಟರ್, ವೆಂಟಿಲೇಟರ್​ಗಳನ್ನು ತಂದು ಆಸ್ಪತ್ರೆ ಮಾದರಿಯಲ್ಲಿ ವಿನ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಈಗ ಅತ್ಯಾಧುನಿಕ ತಂತ್ರಜ್ಞಾನದ ಆಕ್ಸಿಜನ್ ಕಾನಸಂಟ್ರೇಟರ್​ಗಳ ಬೇಡಿಕೆ ಹೆಚ್ಚಾಗಿದೆ. ಆಕ್ಸಿಜನ್ ಕಾನಸಂಟ್ರೇಟರ್​ಗಳನ್ನು ಪೂರೈಸುವ ಕಂಪನಿಗಳಿಗೆ ದಿಢೀರ್ ಹೆಚ್ಚಾದ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ವೆಂಟಿಲೇಟರ್​ಗಳ ಬ್ರಾಂಡ್ ಆಧಾರದ ಮೇಲೆ ಕಡಿಮೆ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ವೆಂಟಿಲೇಟರ್​ಗಳು ಸಿಗುತ್ತವೆ. ನಾನ್​ ಇನ್​ವಾಸಿವ್ ವೆಂಟಿಲೇಟರ್​ಗಳ ಬೆಲೆ ₹ 50 ಸಾವಿರದಿಂದ ₹ 2.5 ಲಕ್ಷದವರೆಗೂ ಇವೆ. ಮನೆಯಲ್ಲೇ ಐಸಿಯು ರೂಮ್ ನಿರ್ಮಾಣಕ್ಕೆ ₹ 15ರಿಂದ ₹ 25 ಸಾವಿರ ಖರ್ಚಾಗುತ್ತೆ.

ಹೋಮ್ ಹೆಲ್ತ್ ಕೇರ್ ಕಂಪನಿಗಳ ಸಿಇಓಗಳ ಪ್ರಕಾರ, ಮನೆಯಲ್ಲೇ ಆಳವಡಿಸಿಕೊಳ್ಳುವ ವೈದ್ಯಕೀಯ ಉಪಕರಣಗಳ ಬೇಡಿಕೆ ಕಳೆದೊಂದು ವಾರದಿಂದ ದುಪ್ಪಟ್ಟಾಗಿದೆ. ನಾನ್​ ಇನ್​ವಾಸಿವ್ ವೆಂಟಿಲೇಟರ್ ಉಪಕರಣಗಳಾದ Bi PAP ಮತ್ತು CPAP ಮೆಷಿನ್​ಗಳಿಗೆ ದಿಢೀರನೆ ಬೇಡಿಕೆ ಹೆಚ್ಚಾಗಿದೆ. ಮನೆಯಲ್ಲೇ ಜನರು ಈಗ ಕೊರೊನಾದ ಪ್ರಾಥಮಿಕ ಚಿಕಿತ್ಸೆಗಳಿಂದ ಐಸಿಯು ಚಿಕಿತ್ಸೆಯನ್ನು ಪಡೆಯಲು ಬೇಕಾದ ಎಲ್ಲ ವ್ಯವಸ್ಥೆಯನ್ನ ಮಾಡಿಕೊಳ್ಳುತ್ತಿದ್ದಾರೆ.

ಆಕ್ಸಿಜನ್, ಶ್ವಾಸಕೋಶ ಚಿಕಿತ್ಸೆಗೆ ಸಂಬಂಧಿಸಿದ ಹಲವು ಉಪಕರಣಗಳಿಗೆ ಈಗ ಭಾರಿ ಬೇಡಿಕೆ ಬಂದಿದೆ ಎಂದು ನೈಂಟಿಗೇಲ್ಸ್ ಎನ್ನುವ ಹೋಮ್ ಹೆಲ್ತ್ ಕೇರ್ ಕಂಪನಿಯ ಸಹ ಸ್ಥಾಪಕ ವಿಶಾಲ್ ಬಾಲಿ ಹೇಳ್ತಾರೆ. ಈ ಕಂಪನಿಗೆ ನಿತ್ಯ 80 ಆರ್ಡರ್​ಗಳು ಬರುತ್ತಿವೆ. ಮನೆಯಲ್ಲಿ ಐಸಿಯು ಮಾಡಿಕೊಳ್ಳುತ್ತಿರುವವರ ಪೈಕಿ ಅರ್ಧದಷ್ಟು ಜನರು ಈಗಾಗಲೇ ಕೊರೊನಾದಿಂದ ಬಳಲುತ್ತಿದ್ದಾರೆ. ಉಳಿದ ಅರ್ಧದಷ್ಟು ಜನರು ಮುಂದೆ ಕೊರೊನಾ ಬಂದರೇ, ಇರಲಿ ಎಂದು ಈಗಲೇ ಸಿದ್ಧತೆ ಮಾಡಿಕೊಳ್ಳುತ್ತಿರುವವರು.

ಕೆಲ ಕಂಪನಿಗಳು ಹೇಳುವ ಪ್ರಕಾರ, ಹೋಂ ಐಸಿಯು ನಿರ್ಮಾಣದ ಬೇಡಿಕೆ 20 ಪಟ್ಟು ಹೆಚ್ಚಾಗಿದೆಯಂತೆ. ಹೋಮ್ ಐಸಿಯು ನಿರ್ಮಾಣಕ್ಕೆ ಜನರು ಎಷ್ಟು ಹಣ ಬೇಕಾದರೂ ನೀಡಲು ಸಿದ್ದವಾಗಿದ್ದಾರೆ. ಆದರೇ, ಆಸ್ಪತ್ರೆಯ ಐಸಿಯುಗಳಿಗೆ ಹೋಮ್ ಐಸಿಯು ಪರ್ಯಾಯ ಆಗಲ್ಲ ಎಂದು ಕಂಪನಿಯೊಂದರ ಚೀಫ್ ಅಪರೇಟಿಂಗ್ ಆಫೀಸರ್ ಗೌರವ್ ತುಕ್ರಾಲ್ ಹೇಳ್ತಾರೆ. ವೆಂಟಿಲೇಟರ್ ಉಪಕರಣಗಳಾದ Bi PAP ಮತ್ತು CPAP ಮೆಷಿನ್​ಗಳಿಗೆ ಈಗ ಬೇಡಿಕೆ ಬಂದಿದೆ. ದೆಹಲಿ-ಎನ್‌ಸಿಆರ್​ನಲ್ಲಿ ಈ ಉಪಕರಣಗಳು ಸಂಪೂರ್ಣ ಮಾರಾಟವಾಗಿವೆ. ಕೆಲ ಕಂಪನಿಗಳು ಇವತ್ತಿನ ಪತ್ರಿಕೆಗಳಲ್ಲಿ ಆಕ್ಸಿಜನ್ ಕಾನಸಂಟ್ರೇಟರ್​ ಪೂರೈಸುತ್ತೇವೆ ಎಂದು ಜಾಹೀರಾತು ನೀಡಿವೆ. ಮನೆಯಲ್ಲೇ ಬಳಸುವ 5 ಲೀಟರ್ ಮತ್ತು 10 ಲೀಟರ್ ಆಕ್ಸಿಜನ್ ಕಾನಸಂಟ್ರೇಟರ್ ಪೂರೈಸಲು ಕೆಲ ಕಂಪನಿಗಳು ಸಿದ್ಧವಾಗಿವೆ.

ಕೊರೊನಾ ಪಾಸಿಟಿವ್ ಬಂದ ಎಲ್ಲ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಅಗತ್ಯ ಇಲ್ಲ. ಶೇ 90 ರಷ್ಟು ರೋಗಿಗಳು ಮನೆಯಲ್ಲೇ ಐಸೋಲೇಟ್ ಆಗಿ ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ಶೇ 10 ರಷ್ಟು ಮಂದಿ ಆಸ್ಪತ್ರೆಗೆ ದಾಖಲಾಗಬೇಕಾಗುತ್ತೆ. ಆಸ್ಪತ್ರೆಗೆ ದಾಖಲಾದವರ ಪೈಕಿ ಶೇ 3ರಿಂದ 8ರಷ್ಟು ಜನರಿಗೆ ಮಾತ್ರ ಮೆಡಿಕಲ್ ಆಕ್ಸಿಜನ್ ಬೇಕಾಗುತ್ತೆ ಎಂದು ಬೆಂಗಳೂರಿನ ಮೆಡಿಸಿನ್ ತಜ್ಞ ವೈದ್ಯ ಡಾ.ಚಂದ್ರಶೇಖರ್ ಟಿವಿ9ಗೆ ತಿಳಿಸಿದ್ದಾರೆ. ಕೋ-ಮಾರ್ಬಿಲಿಟಿ ಇಲ್ಲದೇ ಇರುವ ಯುವಕರಲ್ಲೂ ಕೊರೊನಾ ತಗುಲಿದ ಬಳಿಕ ರಕ್ತದಲ್ಲಿ ಆಕ್ಸಿಜನ್ ಮಟ್ಟ ಕುಸಿಯುತ್ತಿದೆ ಎಂದು ಡಾ.ಚಂದ್ರಶೇಖರ್ ಹೇಳ್ತಾರೆ.

ಹೀಗಾಗಿ ದುಡ್ಡು ಇರುವ ಶ್ರೀಮಂತರು ಮೂರ್ನಾಲ್ಕು ಲಕ್ಷ ಖರ್ಚು ಮಾಡಿಯಾದರೂ ಸರಿ. ಮನೆಯಲ್ಲೇ ಐಸಿಯು ರೂಮ್ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಆದರೆ ಹಣ ಇಲ್ಲದೆ ಒಪ್ಪತ್ತಿನ ಊಟಕ್ಕೂ ಪರದಾಡುವ ಜನರಿಗೆ ಈ ಎಲ್ಲ ವ್ಯವಸ್ಥೆಯನ್ನು ಮನೆಯಲ್ಲಿ ಮಾಡಿಕೊಳ್ಳಲು ಸಾಧ್ಯವಾಗಲ್ಲ. ಬಡವರು ಸರ್ಕಾರಿ ಆಸ್ಪತ್ರೆಯನ್ನೇ ಚಿಕಿತ್ಸೆಗಾಗಿ ಅವಲಂಬಿಸಬೇಕು. ಮೇಲ್ಮಧ್ಯಮ ವರ್ಗ ಕೂಡ ತಕ್ಕಮಟ್ಟಿಗೆ ಆಕ್ಸಿಜನ್ ಕಾನಸಂಟ್ರೇಟರ್, ನಾವ್ ಇನ್​ವಾಸೀವ್ ವೆಂಟಿಲೇಟರ್ ವ್ಯವಸ್ಥೆಯನ್ನು ತಮ್ಮ ಬಜೆಟ್​ಗೆ ತಕ್ಕಂತೆ ಮನೆಯಲ್ಲೇ ಮಾಡಿಕೊಳ್ಳಬಹುದು.

ಕೊರೊನಾದ 2ನೇ ಅಲೆ ಬಂದಾಗ ಏಪ್ರಿಲ್ ತಿಂಗಳಲ್ಲಿ ಭಾರತದ ಶ್ರೀಮಂತರು ಚಾರ್ಟೆಡ್ ವಿಮಾನಗಳಲ್ಲಿ ರಾತ್ರೋರಾತ್ರಿ ದುಬೈ, ಸಿಂಗಾಪೂರ್, ಲಂಡನ್​ನಂಥ ನಗರಗಳಿಗೆ ಹಾರಿ ಹೋಗಿದ್ದರು. ಇದರಿಂದ ಚಾರ್ಟೆಡ್ ವಿಮಾನಗಳ ಬಾಡಿಗೆ ದರ ಗಗನಕ್ಕೇರಿತ್ತು. ಆದರೇ, ವಿದೇಶಕ್ಕೆ ಹೋಗಲಾಗದೇ ಭಾರತದಲ್ಲೇ ಇರುವ ಶ್ರೀಮಂತರು ಕೊರೊನಾ ವೈರಸ್​ ಸೋಂಕಿನಿಂದ ಜೀವ ಉಳಿಸಿಕೊಳ್ಳಲು ಹೋಮ್ ಆಸ್ಪತ್ರೆ, ಹೋಮ್ ಐಸಿಯು ಮೊರೆ ಹೋಗಿದ್ದಾರೆ.

ಬಿಹಾರದ ಸಿಎಂ ನೀತೀಶ್ ಕುಮಾರ್ ಅವರ ಪಾಟ್ನಾದ ಮನೆಯಲ್ಲಿ ಕೊರೊನಾದ ಮೊದಲ ಅಲೆ ಬಂದಾಗಲೇ ಬೆಡ್, ವೆಂಟಿಲೇಟರ್ ಆಳವಡಿಸಿ ಐಸಿಯು ವಾರ್ಡ್ ನಿರ್ಮಾಣ ಮಾಡಲಾಗಿತ್ತು. ನೀತೀಶ್ ಕುಮಾರ್​ಗೆ ಒಂದು ವೇಳೆ ಕೊರೊನಾ ಪಾಸಿಟಿವ್ ಬಂದರೇ, ಮನೆಯಲ್ಲೇ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಮನೆಯೇ ಮಕ್ಕಳಿಗೆ ಮೊದಲ ಪಾಠಶಾಲೆ. ಆದರೆ, ಈಗ ಕಾಲಕ್ಕೆ ತಕ್ಕಂತೆ ಮನೆಯೇ ಈಗ ಮೊದಲ ಐಸಿಯು ವಾರ್ಡ್, ಹೋಮ್ ಹಾಸ್ಪಿಟಲ್ ಕೂಡ ಆಗುತ್ತಿದೆ. ಎಲ್ಲವೂ ಕಾಲಾಯ ತಸ್ಮೈಯೇ ನಮಃ.

(Coronavirus treatment for COVID-19 at home is the Reason for Creating Home ICU New Trend Across India)

ಇದನ್ನೂ ಓದಿ: Explainer: ಏನಿದು ವೈದ್ಯಕೀಯ ಆಮ್ಲಜನಕ? ಇದನ್ನು ಉತ್ಪಾದಿಸುವುದು ಹೇಗೆ?

ಇದನ್ನೂ ಓದಿ: Explainer: ಭಾರತದ ಸಂಕಷ್ಟ ಕಾಲದಲ್ಲಿ ಕೈಹಿಡಿದ ದೇಶಗಳಿವು: ಯಾವ ದೇಶದಿಂದ ಏನು ನೆರವು? ಇಲ್ಲಿದೆ ಮಾಹಿತಿ

Published On - 8:44 pm, Mon, 3 May 21