ಲಂಚ ಆರೋಪ; ಮಾತೃ ಇಲಾಖೆಗೆ ಪಿಎ ಗಂಗಾಧರ್, ಸಚಿವ ಆರ್.ಅಶೋಕ್ ನಿರ್ಧಾರ
ಆಪ್ತ ಕಾರ್ಯದರ್ಶಿ ಗಂಗಾಧರ್ ವಿರುದ್ಧ ಲಂಚಕ್ಕಾಗಿ ಬೇಡಿಕೆಯಿಟ್ಟ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಮಾತೃ ಇಲಾಖೆಗೆ ಕಳಿಸಲು ಸಚಿವ ಆರ್.ಅಶೋಕ್ ನಿರ್ಧರಿಸಿದ್ದಾರೆ.
ಬೆಂಗಳೂರು: ಕಂದಾಯ ಸಚಿವ ಆರ್.ಅಶೋಕ್ ಆಪ್ತ ಕಾರ್ಯದರ್ಶಿ ಗಂಗಾಧರ್ ವಿರುದ್ಧ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಕೇಳಿ ಬಂದಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಆರ್.ಅಶೋಕ್ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು ಗಂಗಾಧರ್ನನ್ನು ಮಾತೃ ಇಲಾಖೆಗೆ ಕಳುಹಿಸಲು ನಿರ್ಧಾರ ಮಾಡಿದ್ದಾರಂತೆ.
ಶೃಂಗೇರಿ ರಿಜಿಸ್ಟ್ರಾರ್ ಎಚ್.ಎಸ್.ಚೆಲುವರಾಜು, ಸಚಿವ ಆರ್.ಅಶೋಕ್ ಪಿಎ ಗಂಗಾಧರ್ ತಮ್ಮ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಶೃಂಗೇರಿ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದೇ ಬೆನ್ನಲ್ಲೇ ಸಚಿವ ಆರ್.ಅಶೋಕ್ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪಿಎ ಗಂಗಾಧರ್ ಮಾತೃ ಇಲಾಖೆಗೆ ಶಿಫ್ಟ್? ಗಂಗಾಧರ್ ವಿರುದ್ಧ ಲಂಚದ ಬೇಡಿಕೆ ಆರೋಪ ಹಿನ್ನೆಲೆಯಲ್ಲಿ ಸಚಿವ ಅಶೋಕ್ ಗಂಗಾಧರ್‌ರನ್ನು ಮಾತೃ ಇಲಾಖೆಗೆ ಕಳುಹಿಸಲು ನಿರ್ಧಾರ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈ ಹಿಂದೆ ಗಂಗಾಧರ್ ವಿಧಾನಸಭೆ ಸಚಿವಾಲಯದ ಉದ್ಯೋಗಿಯಾಗಿದ್ದರು. ಸದ್ಯ ಆರೋಪ ಹಿನ್ನೆಲೆಯಲ್ಲಿ ಮತ್ತೆ ತಮ್ಮ ಮಾತೃ ಇಲಾಖೆಗೆ ಹಿಂತಿರುಗುವ ಸಾಧ್ಯತೆ ಇದೆ.
ನನ್ನ ಬಳಿ ಸಚಿವರ ಪಿಎ ಹಣ ಕೇಳಿದ್ದು ನಿಜ ಇನ್ನು ಗಂಗಾಧರ್ ಮೇಲೆ ಆರೋಪ ಮಾಡಿದ ಶೃಂಗೇರಿ ಸಬ್ ರಿಜಿಸ್ಟ್ರಾರ್ ಚಲುವರಾಜ್ ಟಿವಿ9 ಜೊತೆ ಮಾತನಾಡಿದ್ದು ನನ್ನ ಬಳಿ ಸಚಿವರ ಪಿಎ ಹಣ ಕೇಳಿದ್ದು ನಿಜ ಎಂದು ಹೇಳಿದ್ದಾರೆ. ಮೊನ್ನೆ ಸಚಿವರ ಪಿಎ ಗಂಗಾಧರ್ ಕರೆ ಮಾಡಿ ಸಚಿವರು ಶೃಂಗೇರಿಗೆ ಬರ್ತಾರೆ ಅಂತ ತಿಳಿಸಿದ್ರು. ಈ ವೇಳೆ ತರ್ತೀರಾ ಅಂತ ನನ್ನನ್ನು ಕೇಳಿದ್ರು. ಆ ದಿನ ರೂಮ್ಗೆ ಕರೆದು ಕೊಡಿ. ಏನು ತಂದಿದ್ದೀರಾ ಅದನ್ನು ಕೊಡಿ ಅಂತ ಗಂಗಾಧರ್ ನನಗೆ ಕೇಳಿದ್ರು. ಆಗ ನಾನು ನನಗೆ ತೆಗೆದುಕೊಳ್ಳುವ, ಕೊಡುವ ಅಭ್ಯಾಸವಿಲ್ಲ ಎಂದು ಹೇಳಿದೆ. ಈ ಬಗ್ಗೆ ಶೃಂಗೇರಿ ಪೊಲೀಸ್ ಠಾಣೆಗೆ ದೂರು ಕೂಡ ನೀಡಿದ್ದೇನೆ. ಯಾವ ಬೆದರಿಕೆಗೂ ಹೆದರಲ್ಲ, ಹೋರಾಟ ಮುಂದುವರಿಸುವೆ ಎಂದು ಚಲುವರಾಜ್ ಪ್ರತಿಕ್ರಿಯಿಸಿದ್ದಾರೆ.
ಲಂಚ ಆರೋಪ: ಶೃಂಗೇರಿ ಸಬ್ ರಿಜಿಸ್ಟ್ರಾರ್ನಿಂದ ಸಚಿವ ಆರ್.ಅಶೋಕ್ ಪಿಎ ವಿರುದ್ಧ ದೂರು ದಾಖಲು
Published On - 4:19 pm, Tue, 26 January 21