ಗಲಭೆ ಹತ್ತಿಕ್ಕಲು ಬುಲ್ಡೋಜರ್ ಪ್ರಯೋಗ ಅನಿವಾರ್ಯವಾಗಬಹುದು, ಈ ಬಗ್ಗೆ ಚರ್ಚೆ ನಡೆಸುತ್ತೇವೆ: ಸಚಿವ ಆರ್.ಅಶೋಕ್
ದಂಗೆಕೋರರಿಗೆ ಮನೆಯೂ ಸಿಗಬಾರದು, ಹಾಗೇ ಶಿಕ್ಷೆ ಕೊಡಬೇಕು. ಉತ್ತರ ಪ್ರದೇಶ, ಮಧ್ಯಪ್ರದೇಶಗಳಲ್ಲಿ ದಂಗೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಅದೇ ಬುಲ್ಡೋಜರ್ ಪ್ರಯೋಗ ಜಾರಿಯ ಬಗ್ಗೆ ನಾವೂ ಯೋಚನೆ ಮಾಡುತ್ತಿದ್ದೇವೆ ಎಂದು ಆರ್.ಅಶೋಕ್
ಬೆಂಗಳೂರು: ಹುಬ್ಬಳ್ಳಿ ಗಲಭೆಕೋರರಿಗೆ ವಿದೇಶಿಯರ ಜತೆ ನಂಟಿರಬಹುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆ.ಜೆ.ಹಳ್ಳಿ, ಡಿಜೆ ಹಳ್ಳಿ ಗಲಭೆಯ ಸೃಷ್ಟಿಕರ್ತರು ಕಾಂಗ್ರೆಸ್ನವರು. ಅದರಲ್ಲಿ ಹೊಡೆದವರು, ಏಟುತಿಂದವರೆಲ್ಲ ಕಾಂಗ್ರೆಸ್ಸಿಗರೇ ಆಗಿದ್ದಾರೆ. ಈಗ ಹುಬ್ಬಳ್ಳಿಯಲ್ಲಿ ಗಲಭೆ ಆಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೊದಮೊದಲು ಕಾಂಗ್ರೆಸ್ ಕಿಡಿಕಾರಿದ್ದೇ ಬಂತು. ಅಮಾಯಕ ಬಂಧನವಾಗುತ್ತಿದೆ ಎಂದು ರೋಷಾವೇಷ ತೋರಿಸಿದರು. ಆದರೆ ನಂತರ ಕಾಂಗ್ರೆಸ್ನವರೇ ಅರೆಸ್ಟ್ ಆಗಲು ತೊಡಗಿದ್ದಾರೆ. ಪಿಎಸ್ಐ ಅಕ್ರಮ ನೇಮಕಾತಿಯೂ ಕೂಡ ಕಾಂಗ್ರೆಸ್ನ್ನೇ ಸುತ್ತಿಕೊಳ್ಳುತ್ತಿದೆ. ಹೀಗಾಗಿ ಈಗ ಆ ರೋಷವೆಲ್ಲ ಇಳಿದಿದೆ ಎಂದು ಟೀಕಿಸಿದರು.
ಹಿಜಾಬ್ ವಿಚಾರಕ್ಕೆ ವಿದೇಶಿಗರ ಪ್ರತಿಕ್ರಿಯೆ ಬಂತು. ವಿದೇಶಿ ಚಾನಲ್ಗಳಲ್ಲೂ ಪ್ರಸಾರವಾಯ್ತು. ಹಾಗೇ, ಹುಬ್ಬಳ್ಳಿ ಗಲಭೆಗೂ ವಿದೇಶಿಗರ ನಂಟಿರಬಹುದು. ಪಾಕಿಸ್ತಾನಕ್ಕೆ ಜೈ ಎನ್ನುವವರು ಇದ್ದಾರೆ, ಐಎಸ್ಐ ಜತೆ ಸಂಪರ್ಕ ಹೊಂದಿರುವವರೂ ಇದ್ದಾರೆ. ಹಾಗಾಗಿ ಎಲ್ಲ ರೀತಿಯಿಂದಲೂ ತನಿಖೆ ಅಗತ್ಯವಿದೆ. ದಂಗೆಕೋರರಿಗೆ ಮನೆಯೂ ಸಿಗಬಾರದು, ಹಾಗೇ ಶಿಕ್ಷೆ ಕೊಡಬೇಕು. ಉತ್ತರ ಪ್ರದೇಶ, ಮಧ್ಯಪ್ರದೇಶಗಳಲ್ಲಿ ದಂಗೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಅದೇ ಬುಲ್ಡೋಜರ್ ಪ್ರಯೋಗ ಜಾರಿಯ ಬಗ್ಗೆ ನಾವೂ ಯೋಚನೆ ಮಾಡುತ್ತಿದ್ದೇವೆ. ಈ ಸಿಎಂ ಜತೆ ಚರ್ಚಿಸಲಾಗುವುದು ಎಂದೂ ಹೇಳಿದರು. ಇಂದು ಬೆಳಗ್ಗೆ ಸಿಟಿ ರವಿ ಕೂಡ ಹುಬ್ಬಳ್ಳಿ ಗಲಭೆ ಬಗ್ಗೆ ಪ್ರತಿಕ್ರಿಯೆ ನೀಡಿ, ಅದನ್ನು ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಾಟೆಗೆ ಹೋಲಿಸಿದ್ದರು. ಜಿನ್ನಾ ಮನಸ್ಥಿತಿಯವರು ನಡೆಸುವ ಗಲಭೆಗಳಿಗೆ ಸಾವರ್ಕರ್ ಮನಸ್ಥಿತಿಯಿಂದ ಉತ್ತರ ನೀಡಬೇಕು. ಗಾಂಧಿ ಮನಸ್ಥಿತಿಯಿಂದ ಹೋರಾಡಿದರೆ ಏನೂ ಪ್ರಯೋಜನ ಆಗುವುದಿಲ್ಲ ಎಂದು ಹೇಳಿದ್ದರು.
ಹಾಗೇ, ಏಪ್ರಿಲ್ 8ರಂದು ನಗರದ ಆರು ಶಾಲೆಗಳಿಗೆ ಬಂದಿದ್ದ ಬಾಂಬ್ ಬೆದರಿಕೆ ಕರೆ ಮಾಡಿದವರಿಗೆ ಪಾಕಿಸ್ತಾನ, ಸಿರಿಯಾ ನಂಟಿದೆ ಎಂಬ ಸ್ಫೋಟಕ ಮಾಹಿತಿ ಇಂದು ಹೊರಬಿದ್ದಿದೆ. ಬೆದರಿಕೆಗೆ ಸಂಬಂಧಪಟ್ಟ ಇ-ಮೇಲ್ ಪಾಕಿಸ್ತಾನ, ಸಿರಿಯಾದಿಂದ ಬಂದಿದ್ದು ಎಂಬ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಗೃಹ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕ ಬಗ್ಗೆ ವರದಿಯಾಗಿದೆ.
ಇದನ್ನೂ ಓದಿ: ವಿಧಾನಸೌಧ, ವಿಕಾಸಸೌಧದಲ್ಲಿ ಇಫ್ತಾರ್ ಕೂಟ ನಡೆಸದಂತೆ ರಾಷ್ಟ್ರ ರಕ್ಷಣಾ ಪಡೆ ಕಾರ್ಯಕರ್ತರಿಂದ ಪ್ರತಿಭಟನೆ
Published On - 4:42 pm, Sat, 23 April 22