ವಿಜಯಪುರ, (ಆಗಸ್ಟ್ 28): ರಾಜ್ಯ ಕಾಂಗ್ರೆಸ್ ಸರ್ಕಾರ (Karnataka Congress Governmnet) ಒಂದಲ್ಲ ಒಂದು ವಿವಾದಕ್ಕೀಡಾಗಿ ಮುಜುಗರ ಅನುಭವಿಸುತ್ತಿದೆ. ಚಾಮುಂಡಿ ಬೆಟ್ಟ, ಧರ್ಮಸ್ಥಳ ಪ್ರಕರಣ, ಗ್ಯಾರಂಟಿಗಳ ಬಗ್ಗೆ ಸ್ವಪಕ್ಷದ ಶಾಸಕ ಅಸಮಾಧಾನ, ಅನುದಾನ ವಿಚಾರವಾಗಿ ಶಾಸಕರ ಬಹಿರಂಗ ಬೇಸರ ಹೊರಹಾಕಿರುವುದರಿಂದ ಸಿದ್ದರಾಮಯ್ಯ (Siddaramaiah) ಸರ್ಕಾರ ಮುಜುಗರಕ್ಕೀಡಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಸರ್ಕಾರದ ಒಂದು ಭಾಗವಾಗಿರುವ ಸಚಿವರೇ ಸಿಡಿದೆದ್ದಿದ್ದಾರೆ. ಹೌದು…ಸಚಿವ ಶಿವಾನಂದ ಪಾಟೀಲ್ ಅವರು ತಮ್ಮದೇ ಸರ್ಕಾರದ ವಿರುದ್ಧ ಬಹಿರಂಗವಾಗಿ ಅಸಮಾಧನ ವ್ಯಕ್ತಪಡಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ್ (Shivanand Patil), ಕುಮಾರಸ್ವಾಮಿ ಅವರನ್ನು ಹಾಡಿ ಹೊಗಳಿ ಸರ್ಕಾರಿ ವೈದ್ಯಕೀಯ ಕಾಲೇಜು ವಿಚಾರವಾಗಿ ತಮ್ಮದೇ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇಂದು (ಆಗಸ್ಟ್ 28) ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ್, ಪಿಪಿಪಿ ಮಾದರಿಯ ಮೆಡಿಕಲ್ ಕಾಲೇಜು ಸ್ಥಾಪನೆ ಪ್ರಸ್ತಾವನೆ ಕೈಬಿಡಿ. ರಾಜ್ಯ ಸರ್ಕಾರ ಕೂಡಲೇ ಪಿಪಿಪಿ ಮಾದರಿಯ ಮೆಡಿಕಲ್ ಕಾಲೇಜು ಸ್ಥಾಪನೆ ಪ್ರಸ್ತಾವನೆ ಕೈಬಿಡಬೇಕು. ಯಾವ ಉದ್ದೇಶಕ್ಕಾಗಿ ಪಿಪಿಪಿ ಮಾದರಿ ಪ್ರಸ್ತಾವನೆ ತರಲಾಗಿದೆ ಗೊತ್ತಿಲ್ಲ. ಸರ್ಕಾರದ ಈ ನಿರ್ಧಾರ ನನಗೆ ನೋವು ತರಿಸಿದೆ. ಯಾರಿಗಾಗಿ ಪಿಪಿಪಿ ಮಾದರಿ ಮೆಡಿಕಲ್ ಕಾಲೇಜು ಎಂದು ನೇರವಾಗಿ ಪ್ರಶ್ನಿಸಿದರು.
ಚುನಾವಣಾ ಪ್ರಣಾಳಿಕೆಯಲ್ಲಿ ವೈದ್ಯಕೀಯ ಕಾಲೇಜು ಭರವಸೆ ನೀಡಿದ್ದೆವು. ಆದರೆ ಈಗ ಏಕೆ ಪಿಪಿಪಿ ಮೆಡಿಕಲ್ ಕಾಲೇಜು ಎಂದು ಪ್ರಶ್ನಿಸಿದ ಸಚಿವ ಶಿವಾನಂದ ಪಾಟೀಲ್, ಈ ಹಿಂದೆ ನಾನು ಆರೋಗ್ಯ ಸಚಿವನಾಗಿದ್ದಾಗ ಜಿಲ್ಲಾಸ್ಪತ್ರೆ ಅಭಿವೃದ್ಧಿ ಮಾಡಿದ್ದೆ. ಎಂಸಿಹೆಚ್ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ದೇಶದಲ್ಲಿ ಅತ್ಯುತ್ತಮ ಸರ್ಕಾರಿ ಆಸ್ಪತ್ರೆ ವಿಜಯಪುರ ಜಿಲ್ಲಾಸ್ಪತ್ರೆಯಾಗಿತ್ತು. ನಾನು ಆರಂಭಿಸಿದ ಹಲವು ಕಟ್ಟಡಗಳನ್ನು ಇನ್ನೂ ಉದ್ಘಾಟನೆ ಮಾಡಿಲ್ಲ. ನನ್ನ ಹೆಸರಿಗೆ ಅನ್ನೋ ಕಾರಣಕ್ಕೆ ಉದ್ಘಾಟನೆ ಮಾಡದೆ ಇರಬಹುದು. ಈ ಹಿಂದೆಯೂ ಜಿಲ್ಲೆಯ ಸಚಿವರು, ಶಾಸಕರು ಸಾಥ್ ನೀಡಿರಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಇನ್ನು ಇದೇ ವೇಳೆ ಅಚ್ಚರಿ ಎಂಬಂತೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿಯವರನ್ನು ಹಾಡಿ ಹೊಗಳಿಸಿದ್ದಾರೆ. ಸಮಿಶ್ರ ಸರ್ಕಾರದ ವೇಳೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ ವಿಜಯಪುರ ಜಿಲ್ಲಾಸ್ಪತ್ರೆಗಾಗಿ ನನಗೆ ಸಹಾಯ ಮಾಡಿದ್ದರು. ಈ ಮೂಲಕ ಪರೋಕ್ಷವಾಗಿ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಹಾಗೂ ತಮ್ಮ ಸರ್ಕಾರದ ವಿರುದ್ಧ ಬೇಸರ ವ್ಯಕ್ತಡಿಸಿದರು.
ಈ ಹಿಂದೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಹಾಗೂ ಶಿವಾನಂದ ಪಾಟೀಲ್ ನಡುವೆ ಮುಸುಕಿನ ಗುದ್ದಾಟ ನಡೆದಿರುವುದನ್ನು ಇಲ್ಲಿ ಸ್ಮರಿಸಬಹುದು. ಇದಿಗ ಶಿವಾನಂದ ಪಾಟೀಲ್ ಪತ್ತೆ ಹೆಸರು ಹೇಳದೇ ಜಿಲ್ಲಾಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ವಿಚಾರವಾಗಿ ಎಂಬಿ ಪಾಟೀಲ್ ವಿರುದ್ಧ ಗರಂ ಆಗಿದ್ದಾರೆ.
Published On - 7:09 pm, Thu, 28 August 25