AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​ನಲ್ಲಿ ತಾರಕಕ್ಕೇರಿದ ಡಿಸಿಎಂ ಹುದ್ದೆ ಪೈಪೋಟಿ, ಬೀದಿಗೆ ಬಂದ ಡಿಸಿಎಂ ದಂಗಲ್

ಕರ್ನಾಟಕ ಕಾಂಗ್ರೆಸ್​ನಲ್ಲಿ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಗುದ್ದಾಟ ಜೋರಾಗಿದೆ. ಕೆಲ ಸಚಿವರು ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಡಿಕೆ ಶಿವಕುಮಾರ್ ಬಣದ ಶಾಸಕರೂ ಸಹ ಕೌಟರ್​ ಕೊಡುತ್ತಿದ್ದಾರೆ. ಸ್ವಪಕ್ಷದ ನಾಯಕರ ಮುಸುಕಿನ ಗುದ್ದಾಟದ ಮಧ್ಯ ವಿಪಕ್ಷ ಬಿಜೆಪಿ ಸಹ ಪ್ರವೇಶ ಮಾಡಿದೆ. ಇದರಿಂದ ಕಾಂಗ್ರೆಸ್ ನಾಯಕರ ಡಿಸಿಎಂ ಡಿಶುಂ ಡಿಶುಂ ಬೀದಿಗೆ ಬಂದಿದೆ.

ಕಾಂಗ್ರೆಸ್​ನಲ್ಲಿ ತಾರಕಕ್ಕೇರಿದ ಡಿಸಿಎಂ ಹುದ್ದೆ ಪೈಪೋಟಿ, ಬೀದಿಗೆ ಬಂದ ಡಿಸಿಎಂ ದಂಗಲ್
ಡಿಕೆ ಶಿವಕುಮಾರ್-ಸಿದ್ದರಾಮಯ್ಯ
ರಮೇಶ್ ಬಿ. ಜವಳಗೇರಾ
|

Updated on: Jun 26, 2024 | 10:12 PM

Share

ಬೆಂಗಳೂರು, (ಜೂನ್ 26): ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಕಾಂಗ್ರೆಸ್​ನಲ್ಲಿ ಡಿಸಿಎಂ ಪಟ್ಟದ ಫೈಟ್ ಜೋರಾಗೇ ನಡೀತಿದೆ. ಸದ್ಯಕ್ಕೆ ಡಿಕೆ ಶಿವಕುಮಾರ್ ಒಬ್ಬರೇ ಡಿಸಿಎಂ ಆಗಿದ್ದು, ಹೆಚ್ಚುವರಿ ಡಿಸಿಎಂ ಸ್ಥಾನ ನೀಡಬೇಕು ಅನ್ನೋ ಕೂಗು ಕೆಪಿಸಿಸಿ ಕಚೇರಿಯಿಂದ ಮುಂದಿನ ಬೀದಿಗೂ ಬಂದುಬಿಟ್ಟಿದೆ. ಕೆಲವರು ಮೂವರು ಡಿಸಿಎಂ ಇರಲಿ ಅಂದ್ರೆ ಇನ್ನು ಕೆಲವರು ಐವರು ಡಿಸಿಎಂ ಆಗಲಿ ಅಂತಿದ್ದಾರೆ. ಇಷ್ಟು ಸಾಲದೆಂಬಂತೆ 9 ಡಿಸಿಎಂ ಆದ್ರೂ ಆಗಲಿ, ಡಜನ್ ಡಿಸಿಎಂ ಆದ್ರೂ ಆಗಲಿ ಅಂತೆಲ್ಲಾ ಕಾಂಗ್ರೆಸ್ ನಾಯಕರು ಮಾತಾಡಿಕೊಳ್ಳುತ್ತಿದ್ದಾರೆ.

ಕೈ ಪಾಳೆಯದಲ್ಲಿ ಹೆಚ್ಚುವರಿ ಡಿಸಿಎಂ ಬೇಕು ಅನ್ನೋ ಕೂಗು ಇಂದು ನಿನ್ನೆಯದಲ್ಲ. ಈ ಕೂಗಿನ ಹಿಂದೆ ಡಿ.ಕೆ.ಶಿವಕುಮಾರ್ ಅವರನ್ನ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಬದಲಿಸೋ ಒಳ ತಂತ್ರವೂ ಇದೆ ಅನ್ನೋದು ಸುಳ್ಳಲ್ಲ. ಯಾಕಂದ್ರೆ, ಹೆಚ್ಚುವರಿ ಡಿಸಿಎಂ ಬೇಕೆಬೇಕು ಅಂತಾ ಖಡ್ಗ ಹಿಡಿದು ನಿಂತವರೆಲ್ಲ ಬಹುತೇಕ ಸಿಎಂ ಸಿದ್ದರಾಮಯ್ಯ ಆಪ್ತರೇ. ಹೀಗಾಗಿ ಈ ಯುದ್ಧಕ್ಕೆ ಈಗ ಡಿಕೆ ಆಪ್ತರೂ ಎಂಟ್ರಿ ಕೊಟ್ಟಿದ್ದಾರೆ. ಕಾಳಗ ಬೇರೆ ಮಗ್ಗಲಿಗೆ ಹೊರಳಿದೆ.

ಇದನ್ನೂ ಓದಿ: ಹೆಚ್ಚುವರಿ ಡಿಸಿಎಂ ಡಿಶುಂ ಡಿಶುಂ ಮಧ್ಯ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ಮುನ್ನೆಲೆಗೆ

ಈ ಬಗ್ಗೆ ನಿನ್ನೆಯಷ್ಟೇ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ಯಾರು ಏನು ಬೇಕಾದರೂ ಬೇಡಿಕೆ ಇಡಲಿ. ಪಾರ್ಟಿ ಯಾರಿಗೆ ಏನು ಉತ್ತರ ಕೊಡಬೇಕೋ ಕೊಡುತ್ತೆ ಎಂದು ಮಾರ್ಮಿಕವಾಗಿ ಹೇಳಿದ್ದರು. ಇನ್ನು ಕೈ ಪಾಳಯದಲ್ಲಿ ಎದ್ದಿರೋ ಹೆಚ್ಚುವರಿ ಡಿಸಿಎಂ ಡಿಶುಂ ಡಿಶುಂ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡಾ ಮಾತಾಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಕೇಳ್ತಿದ್ದಂತೆ ದೂರದಲ್ಲೇ ಸಿಎಂ ಉತ್ತರ ಕೊಟ್ಟಿದ್ದಾರೆ. ‘ಹೈಕಮಾಂಡ್ ಏನು ಹೇಳುತ್ತೋ ಅದೇ ಅಂತಿಮ ಅಂದಿದ್ದಾರೆ.

ಡಿಕೆಶಿಯನ್ನು ಸಿಎಂ ಮಾಡಿ ಎಂದ ಚನ್ನಗಿರಿ ಶಾಸಕ

ಡಿಸಿಎಂ ಬಹಿರಂಗ ಕದನ ಶುರುವಾಗ್ತಿದ್ದಂತೆ ಅತ್ತ ಡಿಕೆ ಆಪ್ತರೂ ಅಖಾಡಕ್ಕೆ ಇಳಿದಿದ್ದಾರೆ. ಶಾಸಕ ಬಸವರಾಜ್ ಶಿವಗಂಗಾ ಹೊಸ ಬಾಂಬ್ ಸಿಡಿಸಿದ್ದಾರೆ. ಇಂದು ಡಿಕೆ ನಿವಾಸಕ್ಕೆ ಭೇಟಿ ನೀಡಿದ ಚನ್ನಗಿರಿ ಶಾಸಕ, ಹೆಚ್ಚುವರಿ ಡಿಸಿಎಂ ಬೇಡಿಕೆ ಇಟ್ಟವರ ಮೂತಿಗೆ ತಿವಿದಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿದ್ದವರನ್ನ ಮುಖ್ಯಮಂತ್ರಿ ಮಾಡೋದು ಪದ್ಧತಿ. ಹೆಚ್ಚುವರಿ ಡಿಸಿಎಂ ಆಯ್ಕೆ ಮಾಡೋದೇ ಆದ್ರೆ ಡಿಕೆಶಿವಕುಮಾರ್​ನ ಸಿಎಂ ಮಾಡಿ, ಆಮೇಲೆ ಹತ್ತು ಡಿಸಿಎಂ ಬೇಕಾದರೂ ಮಾಡಿಕೊಳ್ಳಿ ಅಂದಿದ್ದಾರೆ. ಅಷ್ಟೇ ಅಲ್ಲ ಎಂಪಿ ಚುನಾವಣೆಯಲ್ಲಿ ಲೀಡ್ ತಂದುಕೊಡದ ಸಚಿವರನ್ನ ಕೈಬಿಡಲಿ ಎಂದು ಆಗ್ರಹಿಸಿ ಮತ್ತಷ್ಟು ಕಾವು ಹೆಚ್ಚಿಸಿದ್ದಾರೆ. ಇನ್ನು ಸಚಿವ ಪ್ರಿಯಾಂಕ್ ಖರ್ಗೆ ಕೂಡಾ ಹೆಚ್ಚುವರಿ ಡಿಸಿಎಂ ಬೇಡಿಕೆಗೆ ಖಾರವಾಗೇ ಪ್ರತಿಕ್ರಿಯಿಸಿದ್ದು, ಹೋಗಿ ಹೈಕಮಾಂಡ್ ಹತ್ರ ಕೇಳಲಿ ಎಂದಿದ್ದಾರೆ.

ಇತ್ತ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಒಬ್ಬರನ್ನು ಸಿಎಂ ಮಾಡಿ ಎಲ್ಲರನ್ನೂ ಡಿಸಿಎಂ ಮಾಡಿಬಿಡಿ ಅಂತ ವ್ಯಂಗ್ಯವಾಡಿದ್ದಾರೆ. ಮತ್ತೊಂದೆಡೆ ನನ್ನ ಅಭಿಪ್ರಾಯವನ್ನ ಸಮಯ ಬಂದಾಗ ಹೈಕಮಾಂಡ್ ಮುಂದೆ ಹೇಳ್ತೀನಿ ಅಂತಾ ಸಚಿವ ಹೆಚ್.ಕೆ ಪಾಟೀಲ್ ಹೇಳಿದ್ದಾರೆ. ಇನ್ನು ಡಿಸಿಎಂ ಸ್ಥಾನದ ವಿಚಾರವಾಗಿ ಕೆಲಸ ಶಾಸಕರು, ಸಚಿವರು ತಟಸ್ಥರಾಗುಳಿದಿದ್ದಾರೆ.

ಕಾಂಗ್ರೆಸ್​ನಲ್ಲಿ ಭುಗಿಲೆದ್ದಿರುವ ಡಿಸಿಎಂ ಕಿಚ್ಚಿಗೆ ಬಿಜೆಪಿ ನಾಯಕರು ತುಪ್ಪ ಸುರಿದಿದ್ದಾರೆ. ಡಿ.ಕೆ.ಶಿವಕುಮಾರ್​ ಸೊಕ್ಕು ಮುರಿಯಬೇಕು ಎಂಬ ಪ್ರಯತ್ನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿವಿದಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟವರಿಗೆ ಮೂಗುದಾರ ಎಂದು ಸಿಟಿ ರವಿ ವ್ಯಂಗ್ಯವಾಡಿದ್ದಾರೆ.

ಒಟ್ಟಿನಲ್ಲಿ ಚುನಾವಣೆಗೂ ಮೊದಲೇ ಹೊತ್ತಿಕೊಂಡಿದ್ದ ಕಿಚ್ಚು ಇದೀಗ ಧಗಧಗಿಸತೊಡಗಿದೆ. ಇಂಟ್ರೆಸ್ಟಿಂಗ್ ಅಂದ್ರೆ ಕೈ ಮನೆಯ ಈ ಬೆಂಕಿಗೆ ತುಪ್ಪ ಸುರಿದು ಬಿಜೆಪಿ ನಾಯಕರು ಮೈ ಬೆಚ್ಚಗೆ ಮಾಡಿಕೊಳ್ತಿದ್ದಾರೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ