
ಬೆಂಗಳೂರು: ರಾಜ್ಯದಲ್ಲಿ ಮತ್ತು ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಜಾಸ್ತಿಯಾಗ್ತಿದೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ತಿದೆ. ಹಾಗಿದ್ದರೂ ಜನರು ನಿಯಮಗಳನ್ನ ಪಾಲುಸುತ್ತಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ MP ರೇಣುಕಾಚಾರ್ಯ ಸುದ್ದಿಗೋಷ್ಠಿ ವೇಳೆ ಹೇಳಿದ್ದಾರೆ.
‘ಮಾಸ್ಕ್ ಧರಿಸಿ ಅಂದ್ರೆ ಏನೂ ಆಗಲ್ಲ ಬಿಡಣ್ಣ ಅಂತಾರೆ’
ಸೋಂಕು ಹೆಚ್ಚಳವಾಗೋದ್ದಕ್ಕೆ ಸರ್ಕಾರ ಕಾರಣವಲ್ಲ. ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ನನ್ನ ಮತ ಕ್ಷೇತ್ರದಲ್ಲಿ ಪ್ರತಿ ಬೂತ್ನ ಪ್ರತಿ ಮನೆಗೂ ಹೋಗಿ ಔಷಧಿ ಸೇರಿ ಇತರೆ ನೆರವು ನೀಡಿದ್ದೇನೆ. ವಿದ್ಯಾರ್ಥಿಗಳ ಪರೀಕ್ಷಾ ಸಮಯದಲ್ಲೂ ಹಾಗೂ ಮನೆ ಮನೆಗೆ ಭೇಟಿ ನೀಡಿದಾಗಲೂ ಮಾಸ್ಕ್ ನೀಡಿದ್ದೇವೆ. ಆದರೆ ಜನರು ಮಾಸ್ಕ್ ಧರಿಸುತ್ತಿಲ್ಲ. ಮಾಸ್ಕ್ ಧರಿಸಿ ಅಂದ್ರೆ ಏನೂ ಆಗಲ್ಲ ಬಿಡಣ್ಣ ಅಂತಾರೆ ಎಂದು ರೇಣುಕಾಚಾರ್ಯ ಬೇಸರ ವ್ಯಕ್ತಪಡಿಸಿದರು.
ನಾನು 9 ಸಾರಿ ಪರೀಕ್ಷೆ ಮಾಡಿಸಿಕೊಂಡೆ ನೆಗೆಟೀವ್ ಬಂತು. 10 ನೇ ಬಾರಿ ನನಗೆ ಪಾಸಿಟಿವ್ ಬಂತು. ಅಧಿವೇಶನದಲ್ಲಿ ಪಾಲ್ಗೊಂಡಾಗ ನನಗೆ ಪಾಸಿಟೀವ್ ಬಂದಿದೆ ಅನ್ನಿಸುತ್ತಿದೆ. ನನ್ನ ಕ್ಷೇತ್ರದಲ್ಲಿ ಇದ್ದಾಗ ನನಗೆ ಕೊರೊನಾ ಬಂದಿರಲಿಲ್ಲ. ಅದರೆ, ಕೊರೊನಾ ನನಗೆ ಪಾಠ ಕಲಿಸಿತು. ಸರಿಯಾಗಿ ಊಟ, ನಿದ್ರೆ ಮಾಡ್ತಿರಲಿಲ್ಲ. ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆದೆ. ನಾನು ಮನೆಯವರಿಂದ ದೂರ ಇದ್ದೆ. ಸಂಪೂರ್ಣವಾಗಿ ಪ್ರತ್ಯೇಕವಾಗಿ ಇದ್ದೆ. ನನ್ನ ರೂಂ ನಾನೇ ಕ್ಲೀನ್ ಮಾಡಿಕೊಳ್ಳುತ್ತಿದ್ದೆ. ಬಟ್ಟೆ ನಾನೆ ತೊಳೆದುಕೊಳ್ಳುತ್ತಿದ್ದೆ. ತಟ್ಟೆ, ಲೋಟ ಇಟ್ಟುಕೊಂಡು ಜೀವನ ಮಾಡಿದ್ದೇನೆ. ಇನ್ನೂ ಆಯಾಸ ಇದೆ. ಆದ್ರು ಜನರು ಜಾಗೃತವಾಗಿ ಇರಲಿ ಅಂತ ನಾನು ಸುದ್ದಿಗೋಷ್ಟಿ ಮಾಡ್ತಿದ್ದೇನೆ ಎಂದು ರೇಣುಕಾಚಾರ್ಯ ಹೇಳಿದರು.
ಪಾಸಿಟಿವ್ ಬರದೇ ಇದ್ದರೂ ಪಾಸಿಟಿವ್ ಇದೆ ಅಂತಾ ಹೇಳ್ಕೊಂಡು ಹಣ ಮಾಡ್ತಾರೆ ಅಂತಾ ಹೇಳ್ತಾರೆ. ಇದು ಅಪಪ್ರಚಾರ. ಯಾರು ಇದಕ್ಕೆ ಕಿವಿಗೊಡಬೇಡಿ. ಪ್ರತಿಯೊಬ್ಬರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ನನ್ನ ಹೆಂಡತಿ, ಸಹೋದರಿ, ಅತ್ತಿಗೆಗೆ ಬಂದಿದೆ. ಇದನ್ನ ಅವಮಾನ ಅಂತಾ ಯಾರೂ ಭಾವಿಸಬಾರದು. ಸ್ವಯಂ ಪ್ರೇರಿತರಾಗಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಜನರಿಗೆ ರೇಣುಕಾಚಾರ್ಯ ಮನವಿ ಮಾಡಿದ್ದಾರೆ.